ರೋಮ್ನಲ್ಲಿ ಪ್ರಧಾನಿ ಮೋದಿಯೊಂದಿಗೆ ಜಾರ್ಜಿಯಾ ಮೆಲೋನಿ ಸೆಲ್ಫಿ ವೈರಲ್
ರೋಮ್ಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಇದರ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಚಿತ್ರಗಳಲ್ಲಿ ಪ್ರಧಾನಿ ಮೋದಿ ಮತ್ತು ಮೆಲೋನಿ ಅವರು ಆತ್ಮೀಯವಾಗಿ ಸ್ವಾಗತಿಸುತ್ತಿರುವುದು, ಮಾತುಕತೆ ನಡೆಸುತ್ತಿರುವುದು, ಭೋಜನ ಮಾಡುತ್ತಿರುವುದನ್ನು ಕಾಣಬಹುದಾಗಿದೆ.
ಸಂಗ್ರಹ ಚಿತ್ರ -
ಐದು ದಿನಗಳ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ರೋಮ್ಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ಮಾತುಕತೆ ಮತ್ತು ಭೋಜನ ನಡೆಸಿದರು. ಇದರ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇದಕ್ಕೆ ಮೆಲೋಡಿ ಎನ್ನುವ ಅಡ್ಡಹೆಸರನ್ನು ಕೂಡ ನೀಡಲಾಗಿದೆ.
ಭಾರತ ಮತ್ತು ಇಟಲಿ ನಡುವಿನ ಸಂಬಂಧಗಳ ಬೆಳವಣಿಗೆಯ ಮೇಲೆ ಬೆಳಕು ಚೆಲ್ಲುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಮಂಗಳವಾರ ಇಟಲಿಗೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರನ್ನು ಜಾರ್ಜಿಯಾ ಮೆಲೋನಿ ಅವರು ಆತ್ಮೀಯವಾಗಿ ಬರಮಾಡಿಕೊಂಡರು.
ಜಾರ್ಜಿಯಾ ಮೆಲೋನಿ ಅವರೊಂದಿಗೆ ಪ್ರಧಾನಿ ಮೋದಿ ಅವರು ಐಕಾನಿಕ್ ಕೊಲೋಸಿಯಂಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಹಲವಾರು ವಿಷಯಗಳ ಕುರಿತು ಚರ್ಚೆ ನಡೆಸಿದರು. ಪ್ರಧಾನಿ ಮೋದಿ ಅವರೊಂದಿಗೆ ರೋಮ್ ಪ್ರವಾಸದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಜಾರ್ಜಿಯಾ ಮೆಲೋನಿ, ಇದಕ್ಕೆ "ರೋಮ್ಗೆ ಸ್ವಾಗತ, ನನ್ನ ಸ್ನೇಹಿತ!" ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ.
ಜಾರ್ಜಿಯಾ ಮೆಲೋನಿ ಅವರು ಹಂಚಿಕೊಂಡ ಚಿತ್ರಗಳು ಆನ್ಲೈನ್ನಲ್ಲಿ ತಕ್ಷಣವೇ ಹೊಸ ಉತ್ಸಾಹ ಮತ್ತು ಪ್ರತಿಕ್ರಿಯೆಯನ್ನು ಉಂಟು ಮಾಡಿದೆ. ಮೋದಿ ಮತ್ತು ಮೆಲೋನಿಯವರ ಚಿತ್ರಗಳಿಗೆ ಸಾಮಾಜಿಕ ಮಾಧ್ಯಮ ಬಳಕೆದಾರರು "ಮೆಲೋಡಿ" ಎನ್ನುವ ಅಡ್ಡ ಹೆಸರನ್ನು ನೀಡಿದ್ದಾರೆ.
ದುಬೈನಲ್ಲಿ 2023ರಲ್ಲಿ ನಡೆದ ಕಾಪ್ 28 ಶೃಂಗಸಭೆಯ ಸಮಯದಲ್ಲಿ ಜಾರ್ಜಿಯಾ ಮೆಲೋನಿ ಅವರು ಮೋದಿ ಅವರೊಂದಿಗಿನ ಚಿತ್ರ ಹಂಚಿಕೊಂಡಿದ್ದಾಗ ಈ ಹೆಸರು ಮೊದಲು ಜನಪ್ರಿಯತೆಯನ್ನು ಗಳಿಸಿತ್ತು.
ರೋಮ್ ನಲ್ಲಿ ಜಾರ್ಜಿಯಾ ಮೆಲೋನಿ ಅವರನ್ನು ಭೇಟಿಯಾದ ಪ್ರಧಾನಿ ಮೋದಿ ಅವರು ಈ ಸಂದರ್ಭದಲ್ಲಿ ಮೆಲೋನಿ ಅವರಿಗೆ ಭಾರತದ ಜನಪ್ರಿಯ ಮೆಲೋಡಿ ಟಾಫಿಯನ್ನು ಉಡುಗೊರೆಯಾಗಿ ನೀಡಿದರು. ಜಾರ್ಜಿಯಾ ಮೆಲೋನಿ ಅವರು ಹಂಚಿಕೊಂಡಿರುವ ಈ ಚಿತ್ರಕ್ಕೆ ಬುಧವಾರ ಬೆಳಗ್ಗೆ 32 ಲಕ್ಷ ವೀಕ್ಷಣೆಗಳು ಮತ್ತು 1.6 ಲಕ್ಷಕ್ಕೂ ಹೆಚ್ಚು ಲೈಕ್ಗಳು ಬಂದಿದೆ.
ರೋಮ್ ನ ಐಕಾನಿಕ್ ಕೊಲೋಸಿಯಮ್ಗೆ ಭೇಟಿ ನೀಡಿದ ಬಳಿಕ ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ನಾವು ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ದೃಷ್ಟಿಕೋನಗಳನ್ನು ಹಂಚಿಕೊಂಡಿದ್ದೇವೆ. ಮುಂದಿನ ಮಾತುಕತೆಗಾಗಿ ಎದುರು ನೋಡುತ್ತಿದ್ದೇನೆ ಎಂದು ಹೇಳಿದರು.
ಭಾರತಕ್ಕೆ ತೆರಳುವ ಮೊದಲು ಪ್ರಧಾನಿ ಮೋದಿ ಅವರು ಇಟಲಿ ಅಧ್ಯಕ್ಷ ಸೆರ್ಗಿಯೊ ಮಟ್ಟರೆಲ್ಲಾ ಅವರನ್ನು ಭೇಟಿಯಾಗಲಿದ್ದು, ಇತರ ರಾಜತಾಂತ್ರಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಮೋದಿ ಕೊನೆಯದಾಗಿ 2024ರ ಜೂನ್ ತಿಂಗಳಲ್ಲಿ ಗ್ರೂಪ್ ಆಫ್ ಸೆವೆನ್ (ಜಿ 7) ಶೃಂಗಸಭೆಗಾಗಿ ಇಟಲಿಗೆ ಪ್ರಯಾಣ ಬೆಳೆಸಿದ್ದರು.