79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ ಕ್ರಿಕೆಟ್ ಸ್ಟಾರ್ಗಳು!
ಕ್ರಿಕೆಟ್ ದೇವರು ಹಾಗೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ, ಇರ್ಫಾನ್ ಪಠಾಣ್, ಗೌತಮ್ ಗಂಭೀರ್ ಮತ್ತು ವೀರೇಂದ್ರ ಸೆಹ್ವಾಗ್ ಸೇರಿದಂತೆ ಹಲವು ಹಾಲಿ ಹಾಗೂ ಮಾಜಿ ಕ್ರಿಕೆಟ್ ಸ್ಟಾರ್ಗಳು 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದರು ಹಾಗೂ ತಮ್ಮ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ವಿಶೇಷ ಸಂದೇಶಗಳನ್ನು ಬರೆದು ತಮ್ಮ ಅಭಿಮಾನಿಗಳಿಗೆ ಶುಭ ಹಾರೈಸಿದ್ದಾರೆ. ಭಾರತ ತನ್ನ 79ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯಿಂದ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಈ ವಿಶೇಷ ಸಂದರ್ಭದಲ್ಲಿ, ಭಾರತೀಯ ಕ್ರಿಕೆಟಿಗರು ಚಿತ್ರಗಳನ್ನು ಹಂಚಿಕೊಂಡು ಸ್ವಾತಂತ್ರ್ಯ ದಿನದಂದು ತಮ್ಮ ಅಭಿಮಾನಿಗಳಿಗೆ ಶುಭಾಶಯ ಕೋರಿದರು. ಭಾರತೀಯ ಕ್ರಿಕೆಟ್ ತಂಡದ ಹೆಡ್ಕೋಚ್ ಗೌತಮ್ ಗಂಭೀರ್ ಮತ್ತು ಅನುಭವಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ದೇಶಿ ಪ್ರಜೆಗಳಿಗೆ ಶುಭಾಶಯ ಕೋರಿದ್ದಾರೆ.

79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ ಹಾರ್ದಿಕ್ ಪಾಂಡ್ಯ.


ಇರ್ಫಾನ್ ಪಠಾಣ್
ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಕೂಡ ತ್ರಿವರ್ಣ ಧ್ವಜದೊಂದಿಗೆ ಇರುವ ತಮ್ಮ ಚಿತ್ರವನ್ನು ಪೋಸ್ಟ್ ಮಾಡಿ ದೇಶಕ್ಕೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಿದರು. ಶೀರ್ಷಿಕೆಯಲ್ಲಿ, ಪಠಾಣ್, "ಎಲ್ಲಾ ಭಾರತೀಯರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ನಮ್ಮ ಸ್ವಾತಂತ್ರ್ಯವು ಕಷ್ಟಪಟ್ಟು ಗಳಿಸಿದ್ದು; ಅದನ್ನು ಜೀವಂತವಾಗಿರಿಸುವುದು ನಮ್ಮ ಕರ್ತವ್ಯ - ಉತ್ಸಾಹದಿಂದ, ಕಾರ್ಯದಿಂದ ಮತ್ತು ಏಕತೆಯಿಂದ. ಜೈ ಹಿಂದ್," ಎಂದು ಬರೆದಿದ್ದಾರೆ.

ಹಾರ್ದಿಕ್ ಪಾಂಡ್ಯ
ಭಾರತ ತಂಡದ ಅನುಭವಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರು ತಮ್ಮ ಎಕ್ಸ್ ಖಾತೆಯಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದಿರುವ ತಮ್ಮ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಚಿತ್ರವು ಟಿ20 ವಿಶ್ವಕಪ್ 2024ರ ಫೈನಲ್ನದ್ದಾಗಿದೆ. ಆ ಟೂರ್ನಿಯ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ಭಾರತ, ವಿಶ್ವ ಚಾಂಪಿಯನ್ ಆಗಿತ್ತು. ಶೀರ್ಷಿಕೆಯಲ್ಲಿ ಹಾರ್ದಿಕ್, 'ಭಾರತಕ್ಕೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು' ಎಂದು ಬರೆದಿದ್ದಾರೆ.

ರೋಹಿತ್ ಶರ್ಮಾ
ಟಿ20 ವಿಶ್ವಕಪ್ ವಿಜೇತ ನಾಯಕ ರೋಹಿತ್ ಶರ್ಮಾ, ಕೆರಿಬಿಯನ್ ನೆಲದಲ್ಲಿ ಧ್ವಜ ನೆಟ್ಟಿರುವ ಚಿತ್ರ ಮತ್ತು ತ್ರಿವರ್ಣ ಧ್ವಜವಿರುವ ಎಮೋಜಿಯನ್ನು ಪೋಸ್ಟ್ ಮಾಡಿದ್ದಾರೆ.

ಸಚಿನ್ ತೆಂಡೂಲ್ಕರ್
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ತನ್ನ ಕೈಯಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. "ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಜೈ ಹಿಂದ್," ಎಂದು ಅವರು ಬರೆದಿದ್ದಾರೆ.

ವೀರೇಂದ್ರ ಸೆಹ್ವಾಗ್
ಭಾರತ ತಂಡದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಕೂಡ ಒಂದು ಫೋಟೋ ಮತ್ತು ಕವಿತೆಯ ಮೂಲಕ ದೇಶಕ್ಕೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಿದ್ದಾರೆ. ಸೆಹ್ವಾಗ್ ಒಂದು ಚಿತ್ರವನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ, ಹಳ್ಳಿಯ ಕೆಲವು ಮಕ್ಕಳು ಧ್ವಜದ ಸುತ್ತಲೂ ನಿಂತು ಅದಕ್ಕೆ ನಮಸ್ಕರಿಸುತ್ತಿದ್ದಾರೆ. ಶೀರ್ಷಿಕೆಯಲ್ಲಿ, ಸೆಹ್ವಾಗ್ "ತ್ರಿವರ್ಣ ಧ್ವಜದ ಹೆಮ್ಮೆಯ ನಶೆ ಇದೆ, ಮಾತೃಭೂಮಿಯ ಹೆಮ್ಮೆಯ ನಶೆ ಇದೆ, ನಾವು ಈ ತ್ರಿವರ್ಣ ಧ್ವಜವನ್ನು ಎಲ್ಲೆಡೆ ಬೀಸುತ್ತೇವೆ, ಈ ನಶೆ ಹಿಂದೂಸ್ತಾನದ ಗೌರವದ ನಶೆ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು," ಎಂದು ಬರೆದಿದ್ದಾರೆ.

ಗೌತಮ್ ಗಂಭೀರ್
ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ತಮ್ಮ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಈ ಚಿತ್ರ ಅವರು ಭಾರತಕ್ಕಾಗಿ ಆಡುತ್ತಿದ್ದ ದಿನಗಳದ್ದಾಗಿದೆ. ಭಾರತದ ಗೆಲುವಿನ ನಂತರ ಗಂಭೀರ್ ಉತ್ಸಾಹದಿಂದ ಕಾಣಿಸಿಕೊಂಡಿದ್ದಾರೆ ಮತ್ತು ಅವರ ಮುಂದೆ ತ್ರಿವರ್ಣ ಧ್ವಜ ಬೀಸುತ್ತಿದೆ. ಚಿತ್ರದ ಶೀರ್ಷಿಕೆಯಲ್ಲಿ ಗಂಭೀರ್, "ನನ್ನ ದೇಶ, ನನ್ನ ಗುರುತು, ನನ್ನ ಜೀವನ, ಜೈ ಹಿಂದ್" ಎಂದು ಬರೆದಿದ್ದಾರೆ.

ಜಯ ಶಾ
ಬಿಸಿಸಿಐನ ಮಾಜಿ ಕಾರ್ಯದರ್ಶಿ ಮತ್ತು ಐಸಿಸಿ ಮುಖ್ಯಸ್ಥ ಜಯ ಶಾ ಕೂಡ ಹಾರುತ್ತಿರುವ ತ್ರಿವರ್ಣ ಧ್ವಜದ ಚಿತ್ರವನ್ನು ಪೋಸ್ಟ್ ಮಾಡುವ ಮೂಲಕ ಅಭಿನಂದಿಸಿದ್ದಾರೆ.