IPL 2025: ಲಖನೌ ಎದುರು ಆರ್ಸಿಬಿ ಸೋತರೆ ಏನು ಕಥೆ? 4 ತಂಡಗಳ ಅಗ್ರ 2ರ ಲೆಕ್ಕಾಚಾರ!
IPL 2025 Top 2 Scenarios: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ನಿರ್ಣಾಯಕ ಹಂತವನ್ನು ತಲುಪಿದೆ. ಗುಜರಾತ್ ಟೈಟನ್ಸ್, ಪಂಜಾಬ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರ ನಾಲ್ಕು ಸ್ಥಾನಗಳನ್ನು ಅಲಂಕರಿಸಿವೆ. ಇದೀಗ ಅಗ್ರ ಎರಡು ಸ್ಥಾನಗಳ ಮೇಲೆ ಈ ಎರಡೂ ತಂಡಗಳು ಕಣ್ಣಿಟ್ಟಿವೆ. ಈ ನಾಲ್ಕೂ ತಂಡಗಳ ಪ್ಲೇಆಫ್ಸ್ ಲೆಕ್ಕಾಚಾರವನ್ನು ಇಲ್ಲಿ ವಿವರಿಸಲಾಗಿದೆ.



ನಿರ್ಣಾಯಕ ಹಂತ ತಲುಪಿರುವ 2025ರ ಐಪಿಎಲ್
ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ನಿರ್ಣಾಯಕ ಹಂತವನ್ನು ತಲುಪಿದೆ. ಲೀಗ್ ಹಂತದಲ್ಲಿ ಇನ್ನು ಕೇವಲ ಎರಡು ಪಂದ್ಯಗಳು ಮಾತ್ರ ಬಾಕಿ ಇವೆ. ಸೋಮವಾರ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ಕಾದಾಟ ನಡೆಸಿದರೆ, ಮಂಗಳವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಖನೌ ಸೂಪರ್ ಜಯಂಟ್ಸ್ ಸೆಣಸಲಿವೆ.

ಅಗ್ರ ಎರಡರ ಸ್ಥಾನಕ್ಕೆ 4 ತಂಡಗಳಿಂದ ಪೈಪೋಟಿ
2025ರ ಐಪಿಎಲ್ ಟೂರ್ನಿಯ ಅಗ್ರ ಎರಡರ ಸ್ಥಾನಗಳಲ್ಲಿ ಅರ್ಹತೆ ಪಡೆಯಲು ನಾಲ್ಕು ತಂಡಗಳ ನಡುವೆ ಪೈಪೋಟಿ ನಡೆಯುತ್ತಿದೆ. ಗುಜರಾತ್, ಪಂಜಾಬ್, ಬೆಂಗಳೂರು ಹಾಗೂ ಪಂಜಾಬ್ ನಡುವೆ ಮೊದಲನೇ ಕ್ವಾಲಿಫೈಯರ್ಗೆ ಅರ್ಹತೆ ಪಡೆಯಲು ಪ್ರಯತ್ನವನ್ನು ನಡೆಸುತ್ತಿವೆ.

ಮುಂಬೈ ಇಂಡಿಯನ್ಸ್ (16 ಅಂಕ, +1.292 NRR)
ಸೋಮವಾರ ಪಂಜಾಬ್ ಕಿಂಗ್ಸ್ ವಿರುದ್ಧ ಗೆಲುವು ಪಡೆದರೆ ಮುಂಬೈ ಇಂಡಿಯನ್ಸ್ ತಂಡ ಟೂರ್ನಿಯ ಅಗ್ರ ಎರಡರ ಸ್ಥಾನಗಳು ಖಚಿತವಾಗಲಿವೆ. ಈ ಪಂದ್ಯವನ್ನು ಗೆದ್ದರೆ 18 ಅಂಕವನ್ನು ಕಲೆ ಹಾಕಲಿರುವ ಮುಂಬೈನ ರನ್ರೇಟ್, ಗುಜರಾತ್ ಟೈಟನ್ಸ್ಗಿಂತ ಉತ್ತಮವಾಗಿದೆ. ಒಂದು ವೇಳೆ ಸೋತರೆ, ಮುಂಬೈ ಎಲಿಮಿನೇಟರ್ ಪಂದ್ಯವನ್ನು ಆಡಲಿದೆ.

ಪಂಜಾಬ್ ಕಿಂಗ್ಸ್ (17 ಅಂಕ, +0.327 NRR)
ಪಂಜಾಬ್ ಕಿಂಗ್ಸ್ ತಂಡ ಸೋಮವಾರ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಪಡೆದರೆ, ಟೂರ್ನಿಯ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರ ಎರಡರಲ್ಲಿ ಸ್ಥಾನ ಪಡೆಯಲಿದೆ ಹಾಗೂ ಮೊದಲನೇ ಕ್ವಾಲಿಫೈಯರ್ಗೆ ಆಡಲಿದೆ. ಆದರೆ. ಮಂಗಳವಾರ ಆರ್ಸಿಬಿ VS ಎಲ್ಎಸ್ಜಿ ಪಂದ್ಯದ ಫಲಿತಾಂಶ ಪಂಜಾಬ್ಗೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ, ಮುಂಬೈ ಎದುರು ಸೋತರೆ ಆಗ ಆರ್ಸಿಬಿ ತನ್ನ ಕೊನೆಯ ಪಂದ್ಯದಲ್ಲಿ ದೊಡ್ಡ ಅಂತರದಲ್ಲಿ ಗೆಲ್ಲಬಾರದು.

ರಾಯಲ್ ಚಾಲೆಂಜರ್ಸ್ ಬೆಂಗಳೂರು (17 pts, +0.255 NRR)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಗ್ರ ಎರಡರಲ್ಲಿ ಸ್ಥಾನ ಪಡೆಯುವ ಫೆವರಿಟ್ ತಂಡವಾಗಿದೆ. ಮಂಗಳವಾರ ಲಖನೌ ಸೂಪರ್ ಜಯಂಟ್ಸ್ ವಿರುದ್ಧ ಗೆದ್ದರೆ ಆರ್ಸಿಬಿ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರ ಎರಡಕ್ಕೆ ಲಗ್ಗೆ ಇಡಲಿದೆ. ಸೋಮವಾರ ಮುಂಬೈ-ಪಂಜಾಬ್ ಪಂದ್ಯದ ಫಲಿತಾಂಶ ಇದರ ಮೇಲೆ ಅವಲಂಬನೆಯಾಗುವುದಿಲ್ಲ. ಆದರೆ, ಸೋತರೆ ಆರ್ಸಿಬಿ ಎಲಿಮಿನೇಟರ್ ಆಡಬೇಕಾಗುತ್ತದೆ.

ಗುಜರಾತ್ ಟೈಟನ್ಸ್ (18 ಅಂಕಗಳು, +0.254 NRR)
ಗುಜರಾತ್ ಟೈಟನ್ಸ್ ತಂಡ ತನ್ನ ಲೀಗ್ ಪಂದ್ಯಗಳನ್ನು ಮುಗಿಸಿದೆ. ಆಡಿದ 14 ಪಂದ್ಯಗಳಲ್ಲಿ 9ರಲ್ಲಿ ಗೆಲುವು ಪಡೆದಿದ್ದು 18 ಅಂಕಗಳನ್ನು ಕಲೆ ಹಾಕಿದೆ. ಪ್ರಸ್ತುತ ಜಿಟಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಗುಜರಾತ್ ತಂಡ ಮೊದಲನೇ ಕ್ವಾಲಿಫೈಯರ್ ಆಡಬೇಕೆಂದರೆ, ಸೋಮವಾರ ಪಂಜಾಬ್ ಕಿಂಗ್ಸ್ ಎದುರು ಮುಂಬೈ ಇಂಡಿಯನ್ಸ್ ಗೆಲ್ಲಬೇಕು ಮತ್ತು ಲಖನೌ ಸೂಪರ್ ಜಯಂಟ್ಸ್ ವಿರುದ್ಧ ಆರ್ಸಿಬಿ ಸೋತರೆ ಆಗ ಗುಜರಾತ್ ಅಗ್ರ ಎರಡರಲ್ಲಿ ಸ್ಥಾನವನ್ನು ಪಡೆಯಲಿದೆ.