ರಾಜ್ಯಸಭೆಯ ಎಎಪಿ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾ ಉಚ್ಚಾಟನೆ: ಪಕ್ಷದಲ್ಲಿ ಎಲ್ಲವೂ ಸರಿ ಇಲ್ವಾ?
ಆಮ್ ಆದ್ಮಿ ಪಾರ್ಟಿ ರಾಘವ್ ಚಡ್ಡಾ ಅವರನ್ನು ರಾಜ್ಯಸಭೆಯ ಉಪನಾಯಕನ ಸ್ಥಾನದಿಂದ ತೆಗೆದುಹಾಕಿ, ಅಶೋಕ್ ಮಿತ್ತಲ್ ಅವರನ್ನು ನೇಮಿಸಿದೆ. ಈ ಬದಲಾವಣೆಯ ಕುರಿತು ರಾಜ್ಯಸಭಾ ಸಚಿವಾಲಯಕ್ಕೆ ಅಧಿಕೃತ ಪತ್ರವನ್ನು ರವಾನಿಸಲಾಗಿದೆ. ವಿಶೇಷವೆಂದರೆ, ಈ ಪತ್ರದಲ್ಲಿ ಸಂಸತ್ತಿನಲ್ಲಿ ಮಾತನಾಡಲು ಚಡ್ಡಾ ಅವರಿಗೆ ಹೆಚ್ಚಿನ ಸಮಯವನ್ನು ನೀಡಬಾರದು ಎಂಬ ಅಂಶವನ್ನೂ ಉಲ್ಲೇಖಿಸಲಾಗಿದೆ. ಈ ಬದಲಾವಣೆ ಪಕ್ಷದ ಒಳಗಿನ ಭಿನ್ನಮತದ ಸೂಚನೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
ರಾಜ್ಯಸಭಾ ಸಂಸದ ರಾಘವ್ ಚಡ್ಡಾ (ಸಂಗ್ರಹ ಚಿತ್ರ) -
ನವದೆಹಲಿ, ಏ. 2: ಆಮ್ ಆದ್ಮಿ ಪಾರ್ಟಿಯು (Aam Aadmi Party) ತನ್ನ ಪ್ರಭಾವಿ ನಾಯಕ ಮತ್ತು ರಾಜ್ಯಸಭಾ (Rajya Sabha) ಸಂಸದ ರಾಘವ್ ಚಡ್ಡಾ (Raghav Chadha) ಅವರನ್ನು ರಾಜ್ಯಸಭೆಯ ಉಪನಾಯಕನ ಸ್ಥಾನದಿಂದ ಕೆಳಗಿಳಿಸಿದೆ. 2023ರಿಂದ ಈ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದ ಚಡ್ಡಾ ಅವರ ಬದಲಿಗೆ ಪಂಜಾಬ್ (Punjab) ಸಂಸದ ಅಶೋಕ್ ಮಿತ್ತಲ್ (Ashok Mittal) ಅವರನ್ನು ಈ ಸ್ಥಾನಕ್ಕೆ ನೇಮಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ಬದಲಾವಣೆಯ ಕುರಿತು ರಾಜ್ಯಸಭಾ ಸಚಿವಾಲಯಕ್ಕೆ ಅಧಿಕೃತ ಪತ್ರವನ್ನು ರವಾನಿಸಲಾಗಿದೆ. ವಿಶೇಷವೆಂದರೆ, ಈ ಪತ್ರದಲ್ಲಿ ಸಂಸತ್ತಿನಲ್ಲಿ ಮಾತನಾಡಲು ಚಡ್ಡಾ ಅವರಿಗೆ ಹೆಚ್ಚಿನ ಸಮಯವನ್ನು ನೀಡಬಾರದು ಎಂಬ ಅಂಶವನ್ನೂ ಉಲ್ಲೇಖಿಸಲಾಗಿದೆ ಎಂದು ಹೇಳಲಾಗುತ್ತಿದೆ.
ರಾಜ್ಯಸಭೆಯ ಎಎಪಿ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾ ಉಚ್ಚಾಟನೆ:
🚨 HUGE! Internal AAP civil war explodes in Rajya Sabha:
— The Analyzer (News Updates🗞️) (@Indian_Analyzer) April 2, 2026
🗣️ AAP officially informs Rajya Sabha Secretariat, Raghav Chadha should NOT be allotted time to speak in Parliament🤯
AAP also submits letter to replace Raghav Chadha with MP Ashok Mittal as Deputy Leader of the party in… pic.twitter.com/FFywGStbMV
ಈ ಹಠಾತ್ ಬದಲಾವಣೆಯು ಆಪ್ ಪಾಳಯದಲ್ಲಿ ಭಿನ್ನಮತ ಉಂಟಾಗಿದೆಯೇ ಎಂಬ ಚರ್ಚೆಗೆ ನಾಂದಿ ಹಾಡಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ನೂತನ ಉಪನಾಯಕ ಅಶೋಕ್ ಮಿತ್ತಲ್, "ಪಕ್ಷದಲ್ಲಿ ಎಲ್ಲವೂ ಸರಿಯಾಗಿದೆ. ಇದು ಕೇವಲ ವಾಡಿಕೆಯ ಬದಲಾವಣೆ. ಎಲ್ಲರಿಗೂ ಅವಕಾಶ ನೀಡಬೇಕು ಎಂಬುದು ಪಕ್ಷದ ಆಶಯ" ಎಂದು ಸ್ಪಷ್ಟಪಡಿಸಿದ್ದಾರೆ.
ಹೊರ್ಮುಜ್ ಮೂಲಕ ಸಾಗುವ ಹಡಗುಗಳಿಗೆ ಭಾರತೀಯ ನೌಕಾಪಡೆಯಿಂದ ಬೆಂಗಾವಲು ಎಂದ ರಾಜನಾಥ್ ಸಿಂಗ್
ಮೌನಕ್ಕೆ ಶರಣಾದ ಚಡ್ಡಾ
ಕಳೆದ ಕೆಲವು ಸಮಯದಿಂದ ಆಮ್ ಆದ್ಮಿ ಪಾರ್ಟಿಯ ಪ್ರಮುಖ ಬೆಳವಣಿಗೆಗಳ ಬಗ್ಗೆ ರಾಘವ್ ಚಡ್ಡಾ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಫೆಬ್ರವರಿಯಲ್ಲಿ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಎಲ್ಲ ಆರೋಪಗಳಿಂದ ಮುಕ್ತರಾದಾಗಲೂ ಚಡ್ಡಾ ಯಾವುದೇ ಸಾರ್ವಜನಿಕ ಪ್ರತಿಕ್ರಿಯೆ ನೀಡಿರಲಿಲ್ಲ. ಅಷ್ಟೇ ಅಲ್ಲದೆ, ಕೇಜ್ರಿವಾಲ್ ನಡೆಸಿದ ಮಹತ್ವದ ಪತ್ರಿಕಾಗೋಷ್ಠಿ ಮತ್ತು ಜಂತರ್ ಮಂತರ್‌ನಲ್ಲಿ ನಡೆದ 'ಜನಸಭಾ' ಕಾರ್ಯಕ್ರಮದಿಂದಲೂ ಅವರು ದೂರ ಉಳಿದಿದ್ದರು.
ಚಡ್ಡಾ ಅವರ ರಾಜಕೀಯ ಹಿನ್ನೆಲೆ
ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ 37 ವರ್ಷದ ರಾಘವ್ ಚಡ್ಡಾ, 2012ರಿಂದಲೂ ಆಪ್ ಜತೆಗಿದ್ದಾರೆ ಮತ್ತು ಕೇಜ್ರಿವಾಲ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ರಾಜ್ಯಸಭೆಯಲ್ಲಿ ಅವರು ಜನಸಾಮಾನ್ಯರ ಪರವಾಗಿ ಹಲವು ಧ್ವನಿ ಎತ್ತುವ ಮೂಲಕ ಗಮನ ಸೆಳೆದಿದ್ದಾರೆ. ವಿಮಾನ ನಿಲ್ದಾಣಗಳಲ್ಲಿ ಕಡಿಮೆ ದರದ ಆಹಾರ ಮಳಿಗೆಗಳ ಸ್ಥಾಪನೆ, ಗಿಗ್ ವರ್ಕರ್ಸ್ (ಡೆಲಿವರಿ ಬಾಯ್ಸ್) ಹಕ್ಕುಗಳ ರಕ್ಷಣೆ ಮತ್ತು 10 ನಿಮಿಷಗಳ ಡೆಲಿವರಿ ಪದ್ಧತಿಯ ವಿರುದ್ಧ ಅವರು ಹೋರಾಡಿದ್ದಾರೆ. ಪ್ರಸ್ತುತ ಬಜೆಟ್ ಅಧಿವೇಶನದಲ್ಲಿ ಅವರು ಪಿತೃತ್ವ ರಜೆ (Paternity Leave) ಮತ್ತು ಟೆಲಿಕಾಂ ಗ್ರಾಹಕರ ಹಕ್ಕುಗಳ ಬಗ್ಗೆಯೂ ಪ್ರಸ್ತಾವಿಸಿದ್ದರು. ಇಷ್ಟೆಲ್ಲ ಸಕ್ರಿಯರಾಗಿದ್ದರೂ, ಪಕ್ಷವು ಅವರನ್ನು ಉನ್ನತ ಸ್ಥಾನದಿಂದ ಕೆಳಗಿಳಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.