D.V. Sadananda Gowda: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿ.ವೈ ವಿಜಯೇಂದ್ರ ಕೆಳಗಿಳಿಸಲು ಪಿತೂರಿ; ಸದಾನಂದ ಗೌಡರದ್ದು ಎನ್ನಲಾದ ಆಡಿಯೊ ವೈರಲ್!
ದೆಹಲಿ ಮಟ್ಟದ ನಾಯಕರೊಬ್ಬರ ಜತೆಯಲ್ಲಿ ಮಾತನಾಡಿರುವ, ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಅವರದ್ದು ಎನ್ನಲಾದ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಕ್ಟೋಬರ್ ತಿಂಗಳವರೆಗೂ ವಿಜಯೇಂದ್ರ ಅವರನ್ನು ಮುಂದುವರಿಯಲು ಬಿಡಿ, ಬಳಿಕ ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದುಹಾಕಬೇಕೆಂದು ಆಡಿಯೊದಲ್ಲಿ ಒತ್ತಾಯಿಸಿರುವುದು ಕಂಡುಬಂದಿದೆ.
-
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿ.ವೈ ವಿಜಯೇಂದ್ರ (BY Vijayendra) ಅವರನ್ನು ಕೆಳಗಿಳಿಸುವ ಬಗ್ಗೆ ದೆಹಲಿ ಮಟ್ಟದ ನಾಯಕರೊಬ್ಬರಿಗೆ ರಾಜ್ಯದ ಹಿರಿಯ ಬಿಜೆಪಿ ನಾಯಕರೊಬ್ಬರು ಒತ್ತಾಯ ಮಾಡಿರುವ ಆಡಿಯೊ ವೈರಲ್ ಆಗಿದ್ದು, ಇದು ರಾಜ್ಯದ ಕೇಸರಿ ಪಾಳಯದಲ್ಲಿ ತಲ್ಲಣ ಸೃಷ್ಟಿಸಿದೆ. ಮಾಜಿ ಸಿಎಂ ಡಿ.ವಿ ಸದಾನಂದ ಗೌಡ (DV Sadananda Gowda) ಅವರದ್ದು ಎನ್ನಲಾದ ಆಡಿಯೊ (audio viral) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದೆಹಲಿ ಮಟ್ಟದ ನಾಯಕ ಪ್ರದೀಪ್ ಎಂಬುವರ ಜತೆಯಲ್ಲಿ ಸದಾನಂದ ಗೌಡ ವರು ಇಂಗ್ಲಿಷ್‌ನಲ್ಲಿ ಮಾತಾಡಿದ್ದಾರೆ ಎನ್ನಲಾದ ಫೋನ್ ಸಂಭಾಷಣೆಯ ಆಡಿಯೊ ವೈರಲ್ ಆಗುತ್ತಿದೆ. ಅಕ್ಟೋಬರ್ ತಿಂಗಳವರೆಗೂ ವಿಜಯೇಂದ್ರ ಅವರನ್ನು ಮುಂದುವರಿಯಲು ಬಿಡಿ, ಬಳಿಕ ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದುಹಾಕಬೇಕೆಂದು ಆಡಿಯೊದಲ್ಲಿ ಒತ್ತಾಯಿಸಿರುವುದು ಕಂಡುಬಂದಿದೆ.
🚨Audio Bomb 🚨
— 👑Che_ಕೃಷ್ಣ🇮🇳💛❤️ (@ChekrishnaCk) June 29, 2026
Sadananda Gowda wants to create a negative campaign to oust BV Vijayendra from the party head position.
In this audio he is talking to someone called Pradeep Ji.
Is this audio real or fake only investigation will reveal. pic.twitter.com/alFPNF8mmQ
ಆಡಿಯೋದಲ್ಲಿ ಏನಿದೆ?
ಸದಾನಂದ ಗೌಡರ ಧ್ವನಿಯನ್ನೇ ಹೋಲುವ ಈ ಆಡಿಯೋ ಇದೀಗ ಹರಿದಾಡುತ್ತಿದೆ. ʻನಾನು ಹೇಳೋದು ತಪ್ಪೋ ಸರಿನೋ ಗೊತ್ತಿಲ್ಲ, ನೀವೇ ಹೇಳಬೇಕು. ವಿಜಯೇಂದ್ರ ಅವರ ಅವಧಿ ನವೆಂಬರ್‌ಗೆ ಮುಗಿಯಲಿದೆ. ಈಗಲೇ ಅವರನ್ನು ತೆಗೆದು ಯಾಕೆ ಮತ್ತೊಂದು ಗೊಂದಲ ಸೃಷ್ಟಿ ಮಾಡೋದು?, ಅವರ ಅವಧಿ ನವೆಂಬರ್‌ಗೆ ಮುಗಿಯುತ್ತೆ, ಆಗಲೇ ಹುದ್ದೆಯಿಂದ ತೆಗೆದರೆ ಸೂಕ್ತ. ಆಗ ಅವರ ಅವಧಿಯೂ ಮುಗಿದಿರುತ್ತೆ, ಅವನ್ನು ಪದವಿಯಿಂದ ತೆಗೆದರು ಅನ್ನೋ ಆರೋಪವೂ ಬರೋದಿಲ್ಲ. ಪಕ್ಷದ ಒಳಗೂ ಯಾವುದೇ ಗೊಂದಲ ಇರಲ್ಲ.
ವಿಜಯೇಂದ್ರ ಅವರನ್ನು ವ್ಯವಸ್ಥಿತವಾಗಿ ಹುದ್ದೆಯಿಂದ ತೆಗೆಯಬೇಕು. ಇನ್ನುಳಿದಿರುವುದು ಜುಲೈ, ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್. ಅಕ್ಟೋಬರ್ ಹೊತ್ತಿಗೆ ವಿಜಯೇಂದ್ರ ಅವರನ್ನು ಕಿಕ್ ಔಟ್ ಮಾಡಿ. ಈಗ ಏನಾದರೂ ಅವರನ್ನು ತೆಗೆದರೆ ಗೊಂದಲ ಆಗುತ್ತೆ, ಅವರ ತಂಡ ಎಚ್ಚೆತ್ತುಕೊಳ್ಳುತ್ತೆ. ಅವರ ಅವಧಿ ಮುಗಿದ ಮೇಲೆ ತೆಗೆದರೆ ಸಮಸ್ಯೆ ಆಗಲ್ಲ ಅನ್ನೋದು ನನ್ನ ಅಭಿಪ್ರಾಯ. ಇದಕ್ಕಿಂತ ಬೇರೆ ಅವಕಾಶ ಇದ್ದರೆ ನೋಡಿ, ಹೈಕಮಾಂಡ್ ನಿರ್ಧಾರಕ್ಕೆ ಒಪ್ಪುತ್ತೇವೆ. ವಿಜಯೇಂದ್ರ ತೆಗೆದ ಬಳಿಕ ಯಾರಾದರೂ ಸೂಕ್ತ ವ್ಯಕ್ತಿಯನ್ನು ರಾಜ್ಯಾಧ್ಯಕ್ಷರಾಗಿ ಮಾಡಿʼ ಎಂದು ಆಡಿಯೋ ಸಂಭಾಷಣೆಯಲ್ಲಿದೆ.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ಅವರು ಇನ್ನೂ 3 ತಿಂಗಳಲ್ಲಿ 3 ವರ್ಷ ಪೂರೈಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರ ಅವಧಿ 3 ವರ್ಷ ಇರುವುದು ಹಿಂದಿನಿಂದಲೂ ನಡೆದುಕೊಂಡು ಬಂದ ನಿಯಮವಾಗಿದೆ. ಈ ಹೊತ್ತಿನಲ್ಲೇ ಸ್ಫೋಟಕ ಆಡಿಯೋ ಹೊರಬಂದಿದೆ.
ಆಡಿಯೊ ಬಗ್ಗೆ ಡಿ.ವಿ.ಸದಾನಂದ ಗೌಡ ಹೇಳಿದ್ದೇನು?
ಇನ್ನೂ ವೈರಲ್ ಆಡಿಯೊ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಸದಾನಂದ ಗೌಡ ಅವರು, ಇದರ ಬಗ್ಗೆ ʻನೋ ಕಾಮೆಂಟ್ಸ್ʼ. ನನ್ನದಲ್ಲದ ಆಡಿಯೊ, ನನ್ನದಲ್ಲದ ವಿಡಿಯೊ ಬಗ್ಗೆ ನಾನು ಮಾತಾಡಲ್ಲ. ನನಗೆ ಈ ಆಡಿಯೋ ಬಗ್ಗೆ ಗೊತ್ತಿಲ್ಲ. ಇದರ ಬಗ್ಗೆ ನೀವೇ ಕಂಡುಹಿಡಿಯಿರಿ ಎಂದು ಉತ್ತರ ನೀಡಿದ್ದಾರೆ.