ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆಯತೊಲ್ಲ ಅಲಿ ಖಮೇನಿ ಅಂತ್ಯಕ್ರಿಯೆಯಲ್ಲಿ ಭಾರತದಿಂದ ಕೇಂದ್ರ ಸಚಿವ ಪಬಿತ್ರಾ ಮಾರ್ಗರಿಟಾ, ಬಿಹಾರ ರಾಜ್ಯಪಾಲ ಸೈಯದ್ ಅತಾ ಹಸ್ನೈನ್ ಭಾಗಿ

Khamenei's Funeral: ಇರಾನಿನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಭಾರತದಿಂದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಪಬಿತ್ರ ಮಾರ್ಗರಿಟಾ ಮತ್ತು ಬಿಹಾರ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತಾ ಹಸ್ನೈನ್ ತೆರಳಲಿದ್ದಾರೆ.

ಖಮೇನಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಭಾರತ ಪ್ರತಿನಿಧಿಗಳ ಪಟ್ಟಿ ಔಟ್‌

ಸಾಂದರ್ಭಿಕ ಚಿತ್ರ -

Priyanka P
Priyanka P Jun 29, 2026 5:38 PM

ಟೆಹರಾನ್, ಜೂ. 29: ಇರಾನಿನ ಮಾಜಿ ಸರ್ವೋಚ್ಚ ನಾಯಕ ಆಯತೊಲ್ಲ ಅಲಿ ಖಮೇನಿ (Ayatollah Ali Khamenei) ಅವರ ಅಂತ್ಯಕ್ರಿಯೆಯಲ್ಲಿ ಭಾರತದಿಂದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಪಬಿತ್ರ ಮಾರ್ಗರಿಟಾ (Pabitra Margherita) ಮತ್ತು ಬಿಹಾರ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತಾ ಹಸ್ನೈನ್ (Syed Ata Hasnain) ಪಾಲ್ಗೊಳ್ಳಲಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಕಳೆದ ವಾರ, ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಯತೊಲ್ಲ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಆಹ್ವಾನಿಸಿದ್ದರು. ಜುಲೈ 4ರಂದು ಅಂತ್ಯಕ್ರಿಯೆಯ ವಿಧಿಗಳು ಪ್ರಾರಂಭವಾಗಲಿದ್ದು, ಜುಲೈ 9ರಂದು ಈಶಾನ್ಯ ಇರಾನ್‌ನ ಪವಿತ್ರ ನಗರವಾದ ಮಶ್ಹದ್‌ನಲ್ಲಿ, ಖಮೇನಿ ಜನಿಸಿದ ಸ್ಥಳದಲ್ಲೇ ಅಂತ್ಯಸಂಸ್ಕಾರ ನೆರವೇರಿಸುವ ಮೂಲಕ ಮುಕ್ತಾಯಗೊಳ್ಳಲಿವೆ.

ಫೆಬ್ರವರಿ 28ರಂದು ಟೆಹರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ನಡೆಸಿದ್ದ ಜಂಟಿ ವೈಮಾನಿಕ ದಾಳಿಯಲ್ಲಿ 86 ವರ್ಷ ವಯಸ್ಸಿನ ಖಮೇನಿ ಹತ್ಯೆಯಾಗಿದ್ದರು. ಅವರು ಇಸ್ಲಾಮಿಕ್ ಗಣರಾಜ್ಯವನ್ನು 36 ವರ್ಷಗಳ ಕಾಲ ಸರ್ವೋಚ್ಚ ನಾಯಕರಾಗಿ ಮುನ್ನಡೆಸಿದ್ದರು. ಜುಲೈ 7ರಂದು ಟೆಹರಾನ್‌ನ ದಕ್ಷಿಣದಲ್ಲಿರುವ ಮತ್ತೊಂದು ಪವಿತ್ರ ನಗರವಾದ ಕೋಮ್‌ನಲ್ಲಿ ಅಂತ್ಯಕ್ರಿಯೆಯ ವ್ಯವಸ್ಥೆಗಳು ಸಹ ನಡೆಯಲಿವೆ ಎಂದು ರಾಜ್ಯ ಮಾಧ್ಯಮ ತಿಳಿಸಿದೆ.

ಅಯತೊಲ್ಲಾ ಅಲಿ ಖಮೇನಿ ಅಂತ್ಯಕ್ರಿಯೆಯಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ತಾರಾ ಮೊಜ್ತಬಾ ಖಮೇನಿ?

ಫೆಬ್ರವರಿಯಲ್ಲಿ ಖಮೇನಿ ಹತ್ಯೆಯಾದಾಗಿನಿಂದ ಅವರ ಅಂತ್ಯಕ್ರಿಯೆಯ ದಿನಾಂಕವು ಊಹಾಪೋಹಗಳಿಗೆ ಕಾರಣವಾಗಿತ್ತು. ಇಸ್ಲಾಮಿಕ್ ಕಾನೂನಿನ ಪ್ರಕಾರ, ಮೃತಪಟ್ಟವರನ್ನು ಸಾಧ್ಯವಾದಷ್ಟು ಬೇಗ, ಅಂದರೆ ಮರಣದ ಒಂದು ದಿನದೊಳಗೆ ಸಮಾಧಿ ಮಾಡಬೇಕು. ಆದರೆ ಇದಕ್ಕೆ ವಿನಾಯಿತಿಗಳಿವೆ, ವಿಶೇಷವಾಗಿ ಯುದ್ಧದ ಸಮಯದಲ್ಲಿ. ಜುಲೈಯಲ್ಲಿ ವಿಧಿವಿಧಾನಗಳು ನಡೆಯುತ್ತವೆ ಎಂದು ರಾಜ್ಯ ಮಾಧ್ಯಮಗಳು ದೃಢಪಡಿಸುವ ಮೊದಲು, ಜೂನ್ ಅಂತ್ಯದಲ್ಲಿ ಅವರನ್ನು ಸಮಾಧಿ ಮಾಡಬಹುದು ಎಂದು ಹೇಳಲಾಗಿತ್ತು.

ಪಾಕಿಸ್ತಾನ ಪ್ರಧಾನಿ ಭಾಗಿ?

ಟೆಹರಾನ್, ಮಶಾದ್ ಮತ್ತು ಕೋಮ್‌ನಾದ್ಯಂತ ಸುಮಾರು 20 ಮಿಲಿಯನ್ (2 ಕೋಟಿ) ಜನರು ಅಂತ್ಯಕ್ರಿಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಪ್ರಧಾನಿ ಶೆಹಬಾಜ್ ಷರೀಫ್ ಸೇರಿ ಪಾಕಿಸ್ತಾನ ಅಧಿಕಾರಿಗಳು ಸಹ ಭಾಗವಹಿಸುವ ನಿರೀಕ್ಷೆಯಿದೆ. ಈ ಅಂದಾಜಿನಷ್ಟು ಜನರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರೆ, 1989ರಲ್ಲಿ ಇರಾನ್ ಇಸ್ಲಾಮಿಕ್ ಗಣರಾಜ್ಯದ ಸ್ಥಾಪಕ ಅಯತೊಲ್ಲಾ ರುಹೊಲ್ಲಾ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಸುಮಾರು 1 ಕೋಟಿ (10 ಮಿಲಿಯನ್) ಜನರು ಭಾಗವಹಿಸಿದ್ದ ದಾಖಲೆಯನ್ನು ಇದು ಮೀರಬಹುದು.

ಇರಾನ್‌ನ ಪ್ರಸ್ತುತ ಸರ್ವೋಚ್ಚ ನಾಯಕ 56 ವರ್ಷದ ಮೊಜ್ತಬಾ ಖಮೇನಿ ಅಂತ್ಯಕ್ರಿಯೆಯಲ್ಲಿ ಸಾರ್ವಜನಿಕವಾಗಿ ಭಾಗವಹಿಸುತ್ತಾರೆಯೇ ಎಂಬ ವಿಚಾರ ಸದ್ಯ ಕುತೈಹಲ ಮೂಡಿಸಿದೆ. ಫೆಬ್ರವರಿ 28ರಂದು ಅವರ ತಂದೆ ಮೃತಪಟ್ಟ ವೈಮಾನಿಕ ದಾಳಿಯಲ್ಲಿ ಗಾಯಗೊಂಡ ನಂತರ ಅವರು ಸಾರ್ವಜನಿಕವಾಗಿ ಅಥವಾ ವಿಡಿಯೊದಲ್ಲಿ ಕಾಣಿಸಿಕೊಂಡಿಲ್ಲ.

ಮೊಜ್ತಬಾ ಖಮೇನಿ ಅವರ ಆರೋಗ್ಯದ ಬಗ್ಗೆ ಪ್ರಶ್ನೆಗಳು ಮುಂದುವರಿದಿವೆ. ಮಾರ್ಕೊ ರೂಬಿಯೊ ಮತ್ತು ಪೀಟ್ ಹೆಗ್ಸೆತ್ ಸೇರಿ ಹಲವು ಹಿರಿಯ ಅಮೆರಿಕನ್ ಅಧಿಕಾರಿಗಳು ಅವರು ಕೋಮಾದಲ್ಲಿದ್ದಾರೆ ಎಂದು ಹೇಳಿದ್ದಾರೆ. ಈ ಮಧ್ಯೆ, ಇರಾನ್ ರಾಜ್ಯ ಮಾಧ್ಯಮವು ಅವರ ಮುಖ ಮತ್ತು ಕಾಲಿಗೆ ತೀವ್ರ ಗಾಯಗಳಾಗಿವೆ ಎಂದು ವರದಿ ಮಾಡಿದೆ. ಆದರೆ ಅವರ ಪ್ರಸ್ತುತ ಆರೋಗ್ಯ ಸ್ಥಿತಿಯನ್ನು ದೃಢಪಡಿಸಿಲ್ಲ.