ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಏಪ್ರಿಲ್‌ 15ರಂದು ಬಿಹಾರದ ನೂತನ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರ; ನಿತೀಶ್ ಕುಮಾರ್ ಪುತ್ರ ಅಧಿಕಾರದ ರೇಸ್‌ನಿಂದ ಹೊರಕ್ಕೆ

ಬಿಹಾರದಲ್ಲಿ ಏಪ್ರಿಲ್ 15 ರಂದು ನೂತನ ಮುಖ್ಯಮಂತ್ರಿಯ ಪ್ರಮಾಣವಚನ ನಡೆಯಲಿದ್ದು, ನಿತೀಶ್ ಕುಮಾರ್ ರಾಜೀನಾಮೆಯ ಬಳಿಕ ಹೊಸ ಸರ್ಕಾರ ರಚನೆಗೆ ಸಿದ್ಧತೆಗಳು ಜೋರಾಗಿದೆ. ಇದೀಗ ಅವರ ಪುತ್ರ ನಿಶಾಂತ್ ಕುಮಾರ್ ಅಧಿಕಾರದ ರೇಸ್‌ನಿಂದ ದೂರ ಉಳಿದಿದ್ದಾರೆ.

ಏಪ್ರಿಲ್‌15ರಂದು ಬಿಹಾರ ನೂತನ ಸಿಎಂ ಪ್ರಮಾಣವಚನ ಸ್ವೀಕಾರ

ನಿಶಾಂತ್ ಕುಮಾರ್ ಮತ್ತು ನಿತೀಶ್‌ ಕುಮಾರ್‌ (ಸಂಗ್ರಹ ಚಿತ್ರ) -

Profile
Sushmitha Jain Apr 13, 2026 10:35 PM

ಪಾಟ್ನಾ, ಏ. 13: ಬಿಹಾರ (Bihar) ರಾಜಕಾರಣದಲ್ಲಿ ಮಹತ್ವದ ಬದಲಾವಣೆಗಳು ನಡೆಯುತ್ತಿದ್ದು, ಮುಂಬರುವ ದಿನಗಳಲ್ಲಿ ರಚನೆಯಾಗಲಿರುವ ನೂತನ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರ ಪುತ್ರ ನಿಶಾಂತ್ ಕುಮಾರ್ (Nishant Kumar) ಸೇರ್ಪಡೆಯಾಗುವ ಸಾಧ್ಯತೆ ತೀರಾ ಕಡಿಮೆ ಎಂದು ತಿಳಿದುಬಂದಿದೆ. ನಿತೀಶ್ ಕುಮಾರ್ ರಾಜ್ಯಸಭಾ (Rajya Sabha) ಸಂಸದರಾಗಿ ಆಯ್ಕೆಯಾಗಿರುವುದರಿಂದ, ಸುಮಾರು 10 ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಅವರ ಸುದೀರ್ಘ ಆಡಳಿತ ಅಂತ್ಯಗೊಳ್ಳಲಿದೆ. ಅವರು ಏಪ್ರಿಲ್ 14ರಂದು ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡುವ ಸಾಧ್ಯತೆಯಿದೆ.

ದೀರ್ಘಕಾಲ ರಾಜಕೀಯದಿಂದ ದೂರವಿದ್ದ ನಿಶಾಂತ್ ಕುಮಾರ್ ಕೆಲವು ತಿಂಗಳ ಹಿಂದಷ್ಟೇ ಜನತಾದಳ ಯುನೈಟೆಡ್ (ಜೆಡಿಯು) ಪಕ್ಷವನ್ನು ಅಧಿಕೃತವಾಗಿ ಸೇರಿದ್ದರು. ಅವರು ಪಕ್ಷಕ್ಕೆ ಸೇರಿದ ಸಮಯದಲ್ಲಿ, ಹಿರಿಯ ನಾಯಕರು ಅವರ ಹೆಸರನ್ನು ಶಿಫಾರಸು ಮಾಡಿದ್ದರಿಂದ ಅವರು ಉಪಮುಖ್ಯಮಂತ್ರಿ ಸ್ಥಾನಕ್ಕೇರಬಹುದು ಎಂಬ ವದಂತಿಗಳು ಹರಡಿದ್ದವು. ಆದರೆ, ತಮಗೆ ಸಚಿವ ಸ್ಥಾನದ ಆಕಾಂಕ್ಷೆಯಿಲ್ಲ ಮತ್ತು ತಾವು ಕೇವಲ ಪಕ್ಷದ ಸಾಂಘಿಕ ಜವಾಬ್ದಾರಿಗಳ ಮೇಲೆ ಗಮನ ಹರಿಸಲು ಬಯಸುವುದಾಗಿ ನಿಶಾಂತ್ ಸ್ಪಷ್ಟಪಡಿಸಿದ್ದಾರೆ ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ. "ಪಕ್ಷದ ಸಕ್ರಿಯ ಸದಸ್ಯನಾಗಿ ಸಂಘಟನೆಯ ಏಳಿಗೆಗೆ ಶ್ರಮಿಸುತ್ತೇನೆ" ಎಂದು ಅವರು ತಿಳಿಸಿದ್ದಾರೆ.

ಉಪ ಚುನಾವಣೆ; ಎರಡೂ ಕಡೆ ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ ಎಂದ ವಿಜಯೇಂದ್ರ

ಮತ್ತೊಂದೆಡೆ, ರಾಜ್ಯದಲ್ಲಿ ಹೊಸ ಸಚಿವ ಸಂಪುಟ ರಚನೆಯ ಸಿದ್ಧತೆಗಳು ಬಿರುಸಿನಿಂದ ನಡೆಯುತ್ತಿವೆ. ನಿತೀಶ್ ಕುಮಾರ್ ಅವರ ಉತ್ತರಾಧಿಕಾರಿಯಾಗಿ ಬಿಹಾರದ ಮುಂದಿನ ಮುಖ್ಯಮಂತ್ರಿಯಾಗುವ ಸಾಧ್ಯತೆ ಇರುವ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಎಲ್ಲ ಸಿದ್ಧತೆಗಳ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಲೋಕಭವನದ ಮೂಲಗಳ ಪ್ರಕಾರ, ನೂತನ ಸಚಿವ ಸಂಪುಟವು ಏಪ್ರಿಲ್ 15ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಪ್ರಮಾಣವಚನ ಸ್ವೀಕರಿಸಲಿದೆ.

ಈ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ಸಾಮ್ರಾಟ್ ಚೌಧರಿ ಅವರ ನಿವಾಸದಲ್ಲಿ ನಿತೀಶ್ ಕುಮಾರ್ ಅವರ ಆಪ್ತ ಹಾಗೂ ಬಿಹಾರ ಸರ್ಕಾರದ ಸಚಿವ ಶ್ರವಣ್ ಕುಮಾರ್ ಸುಮಾರು 20 ನಿಮಿಷಗಳ ಕಾಲ ಮಹತ್ವದ ಚರ್ಚೆ ನಡೆಸಿದ್ದಾರೆ. ಈ ಬದಲಾವಣೆಯು ಬಿಹಾರದ ರಾಜಕೀಯ ಸಮೀಕರಣದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ನೂತನ ಸರ್ಕಾರದ ರಚನೆಯತ್ತ ಇಡೀ ದೇಶದ ಕಣ್ಣು ನೆಟ್ಟಿದೆ.