NICE Project: ನಾನು ನೈಸ್ ಭೂಮಿ ಖರೀದಿ ಮಾಡಿದ್ದರೆ ನೇಣು ಹಾಕಿಕೊಳ್ಳುತ್ತೇನೆ: ಸಿಎಂ ಡಿಕೆಶಿಗೆ ಎಚ್‌ಡಿಕೆ ಸವಾಲು
HD Kumaraswamy: ನೈಸ್ ಯೋಜನೆಗಾಗಿ ಭೂಮಿ ಕಳೆದುಕೊಂಡಿರುವ ಜನರನ್ನು ಭೇಟಿಯಾದ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದ್ದಾರೆ. ರಸ್ತೆಯ ಉದೇಶಕ್ಕೆ ಸ್ವಾಧೀನ ಮಾಡಿಕೊಳ್ಳಲಾದ ಭೂಮಿಯಲ್ಲಿ ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
-
ಬೆಂಗಳೂರು, ಅಕ್ಟೋಬರ್ 2: ಹೈದರಾಬಾದ್ ಮೂಲದ ಉದ್ಯಮಿ ಮಹೇಶ್ ರೆಡ್ಡಿ ಎಂಬ ವ್ಯಕ್ತಿಯ ಜತೆ ಸೇರಿ ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೈಸ್ ಯೋಜನೆಯನ್ನು (NICE Project) ಲಪಟಾಯಿಸಲು ಹೊರಟಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು ನೇರ ಆರೋಪ ಮಾಡಿದರು.
ಹೈದರಾಬಾದ್‌ನಲ್ಲಿ ನೆಲೆಸಿರುವ ಉದ್ಯಮಿ ರಿಯಲ್ ಎಸ್ಟೇಟ್ ಸೇರಿ ವಿವಿಧ ವ್ಯವಹಾರಗಳನ್ನು ನಡೆಸುತ್ತಿದ್ದಾರೆ. ಅಂತಹ ವ್ಯಕ್ತಿಯ ಜತೆ ಮುಖ್ಯಮಂತ್ರಿ ಶಾಮೀಲಾಗಿ ಇಡೀ ಯೋಜನೆಯನ್ನೇ ಲಪಟಾಯಿಸಲು ಸಂಚು ರೂಪಿಸಿದ್ದಾರೆ. ಇವರೊಂದಿಗೆ ಇನ್ನಷ್ಟು ಪ್ರಭಾವಿಗಳು ಕೈ ಜೋಡಿಸಿದ್ದಾರೆ. ಹಾಗೆಯೇ, ಯೋಜನೆಗೆ ಸ್ವಾಧೀನ ಮಾಡಿಕೊಂಡಿರುವ ಅಷ್ಟೂ ಭೂಮಿಯನ್ನು ಲೂಟಿ ಹೊಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಸಚಿವರು ದೂರಿದರು.
ಡಿಕೆಶಿ ಪಾಪದ ಕೊಡ ತುಂಬಿದೆ!
ನಾನು ನೋಡುತ್ತಾ ಬಂದಿದ್ದೇನೆ. ಈ ವ್ಯಕ್ತಿಗೆ ಹೇಳಲು ಬಯಸುತ್ತೇನೆ. ನಿಮ್ಮ ಪಾಪದ ಕೊಡ ತುಂಬಿದೆ. ನೀವು 10 ಸಾವಿರ ಎಕರೆ ಮಾಡಿ. ಆದರೆ ನ್ಯಾಯವಾಗಿ ಮಾಡಿ. ಒಳ್ಳೆಯ ಮಾರ್ಗದಲ್ಲಿ ಸಂಪಾದನೆ ಮಾಡಿ. ಬೇಡ ಎಂದವರು ಯಾರು? ಈಗಾಗಲೇ ಬೆಂಗಳೂರು ಮೈಸೂರು ನಡುವೆ ಎಕ್ಸ್ ಪ್ರೆಸ್ ಹೆದ್ದಾರಿ ಆಗಿದೆ. ಮತ್ತೊಂದು ರಸ್ತೆ ಯಾಕೆ ಬೇಕು? ಬೆಂಗಳೂರಿನಿಂದ ಮೈಸೂರಿನ ತನಕ 1.75 ಲಕ್ಷ ಎಕರೆ ಜಮೀನು ಗುರುತಿಸಿದ್ದಾರೆ. ಅದನ್ನು ಲೂಟಿ ಹೊಡೆಯಬೇಕು. ನೈಸ್, ನೈಸೆಲ್ ಎಲ್ಲಾ ಹೋಗಿ ಡಿವೈನಿಟಿ ಅಂತ ಬರುತ್ತಿದೆ. ತೆಲಂಗಾಣದ ವ್ಯಕ್ತಿಗೆ ಇವರು ರೆಡ್ ಕಾರ್ಪೆಟ್ ಹಾಸುತ್ತಿದ್ದಾರೆ. ಎಷ್ಟು ಕೋಟಿಗೆ ಡೀಲ್ ಆಗುತ್ತಿದೆ? ಮಹೇಶ್ ರೆಡ್ಡಿ ಎನ್ನುವ ವ್ಯಕ್ತಿ ಯಾರು ಎನ್ನುವ ಎಲ್ಲಾ ಮಾಹಿತಿಯೂ ನನ್ನ ಬಳಿ ಇದೆ. ಸಮಯ ಬರುತ್ತೆ ಎಲ್ಲಾ ವಿಚಾರ ನಿಮಗೆ ತಿಳಿಯುತ್ತದೆ ಎಂದು ಸಚಿವರು ಹೇಳಿದರು.
ನೈಸ್ ಯೋಜನೆಗಾಗಿ ಭೂಮಿ ಕಳೆದುಕೊಂಡಿರುವ ಜನರನ್ನು ಭೇಟಿಯಾದ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವರು; ರಸ್ತೆಯ ಉದೇಶಕ್ಕೆ ಸ್ವಾಧೀನ ಮಾಡಿಕೊಳ್ಳಲಾದ ಭೂಮಿಯಲ್ಲಿ ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಈಗಾಗಲೇ ರಾಜ್ಯ ಹೈಕೋರ್ಟ್ ನೈಸ್ ಯೋಜನೆಯ ಬಗ್ಗೆ ಕಟುವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ಅದನ್ನು ಪ್ರಶ್ನಿಸಿ ನೈಸ್ ಕಂಪನಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಹಾಕಿಕೊಂಡಿದೆ. ಈ ತಿಂಗಳ 5ರಂದು ಆ ಅರ್ಜಿ ವಿಚಾರಣೆಗೆ ಬರುತ್ತದೆ. ಆ ನಂತರ ಈ ಹೋರಾಟಕ್ಕೆ ಮತ್ತೊಂದು ಆಯಾಮ ಬರುತ್ತದೆ ಎಂದು ಸಚಿವರು ಹೇಳಿದರು.
ನೈಸ್ ಭೂಮಿ ಖರೀದಿ ಮಾಡಿದ್ದರೆ ನೇಣು ಹಾಕಿಕೊಳ್ಳುವೆ:
ಮುಖ್ಯಮಂತ್ರಿ ಡಿಕೆಶಿ ನನ್ನ ಮೇಲೆ ಆರೋಪ ಮಾಡಿದ್ದಾರೆ. ಕುಮಾರಸ್ವಾಮಿ ಕೂಡ ನೈಸ್ ಯೋಜನೆ ವ್ಯಾಪ್ತಿಯಲ್ಲಿ ಭೂಮಿ ಹೊಂದಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಆ ಭಾಗದಲ್ಲಿ ಎಲ್ಲಿಯೇ ಆದರೂ ನಾನು ಜಮೀನು ಖರೀದಿ ಮಾಡಿರುವುದನ್ನು ರುಜುವಾತು ಮಾಡಿದರೆ ಸಾರ್ವಜನಿಕವಾಗಿ ನೇಣು ಹಾಕಿಕೊಳ್ಳುತ್ತೇನೆ ಎಂದು ಕುಮಾರಸ್ವಾಮಿ ಅವರು ಸವಾಲು ಹಾಕಿದರು.
ಸುಳ್ಳು ಯಾರ ಮನೆ ದೇವರು ಎಂಬುದು ಅರ್ಥವಾಗುತ್ತಿದೆ. ನೈಸ್ ಯೋಜನೆ ಹೆಸರಿನಲ್ಲಿ ಗುತ್ತಿಗೆದಾರನ ಜತೆ ಶಾಮೀಲಾಗಿ ಅಪಾರ ಪ್ರಮಾಣದ ಭೂಮಿಯನ್ನು ಲೂಟಿ ಹೊಡೆಯುತ್ತಿರುವ ಡಿಕೆಶಿ ಬಗ್ಗೆ ಮೊದಲನೇ ಕಂತಿನ ದಾಖಲೆಗಳನ್ನು ಬಿಡುಗಡೆ ಮಾಡಿದ್ದೇನೆ. ಇನ್ನು ಹಲವಾರು ಕಂತುಗಳಷ್ಟು ಬಿಡುಗಡೆ ಮಾಡುವ ದಾಖಲೆಗಳು ಬಾಕಿ ಇದೆ ಎಂದು ಕೇಂದ್ರ ಸಚಿವರು ಎಚ್ಚರಿಕೆ ನೀಡಿದರು.
ನೈಸ್ ಯೋಜನೆಯಿಂದ ಭೂಮಿ ಕಳೆದುಕೊಂಡ ತೋಟದಗುಡ್ಡದಹಳ್ಳಿ, ಅಂಚೆಪಾಳ್ಯ, ತಿರುಮಲಪುರ, ಕೆ.ಜಿ.ಶ್ರೀಕಂಠಪುರ, ಗಂಗನಹಳ್ಳಿ, ಕಾಚೋಹಳ್ಳಿ, ಹೊಸಹಳ್ಳಿ, ಗೊಲ್ಲರಹಟ್ಟಿ ಸೇರಿದಂತೆ ಅನೇಕ ಹಳ್ಳಿಗಳ ಭೂ ಸಂತ್ರಸ್ತರಿಂದ ಅಹವಾಲು ಸ್ವೀಕರಿಸಿದ ಬಳಿಕ ಮಾತನಾಡಿದ ಕೇಂದ್ರ ಸಚಿವರು; ನೈಸ್ ಯೋಜನೆ ಒಂದರಲ್ಲಿಯೇ ಈ ಮುಖ್ಯಮಂತ್ರಿ ಬ್ರಹ್ಮಾಂಡ ಭ್ರಷ್ಟಾಚಾರ ಮತ್ತು ಭೂಕಬಳಿಕೆ ನಡೆಸಿದ್ದಾರೆ. ಬಿ ಎಂ ಕಾವಲ್ ಪ್ರದೇಶದಲ್ಲಿ ಈ ವ್ಯಕ್ತಿ ಸುಮಾರು 200ರಿಂದ 300 ಎಕರೆಯಷ್ಟು ಭೂಮಿಯನ್ನು ಖರೀದಿಸಿದ್ದಾರೆ. ಅಷ್ಟು ಭೂಮಿಯನ್ನು ಇವರು ಯಾವ ಮಾರ್ಗದಲ್ಲಿ ಖರೀದಿಸಿದರು? ನೈಸ್ ಯೋಜನೆ ವ್ಯಾಪ್ತಿಯಲ್ಲಿರುವ ಈ ಭೂಮಿಯನ್ನು ಅವರು ಖರೀದಿಸಿದ್ದು ಏಕೆ? ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು.
ಈ ಭೂಮಿ ಇರುವ ಪ್ರದೇಶಕ್ಕೆ ಮಾಧ್ಯಮಗಳನ್ನು ಮತ್ತು ಸಾರ್ವಜನಿಕರನ್ನು ಕರೆದುಕೊಂಡು ಹೋಗಿ ತೋರಿಸಿದ ಸಚಿವ ಕುಮಾರಸ್ವಾಮಿ ಅವರು; ಇದು ಅತ್ಯಂತ ಫಲವತ್ತಾದ ಕೃಷಿ ಭೂಮಿಯಾಗಿದೆ. ಇಲ್ಲಿ ಈ ಮುಖ್ಯಮಂತ್ರಿ ಸುಮಾರು 300 ಎಕರೆಯಷ್ಟು ಜಮೀನು ಹೊಂದಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಇಂತಹ ವ್ಯಕ್ತಿ ನಾನು ಜಮೀನು ಖರೀದಿ ಮಾಡಿದ್ದೇನೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ರಾಜಕೀಯಕ್ಕೆ ಬರುವ ಮೊದಲೇ ಬಿಡದಿಯಲ್ಲಿ 44 ಎಕರೆ ಜಮೀನು ಖರೀದಿಸಿದ್ದೇನೆ. ಅಲ್ಲಿ ನಾನು ಇವರೊಂದಿಗೆ ರಿಯಲ್ ಎಸ್ಟೇಟ್ ಮಾಡುತ್ತಿಲ್ಲ. ಬದಲಿಗೆ ಕೃಷಿ, ಪಶುಸಂಗೋಪನೆ ಮಾಡುತ್ತಿದ್ದೇನೆ. ಬೇಕಿದ್ದರೆ ಬಂದು ನೋಡಬಹುದು. ಕಾನೂನುಬಾಹಿರವಾಗಿ ನಾನೇನಾದರೂ ಒಂದು ಇಂಚು ಅಕ್ರಮವಾಗಿ ಭೂಮಿಯನ್ನು ಸಂಪಾದಿಸಿದರೆ ತಕ್ಷಣವೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಇವರ ಹಾಗೆ ಮುಗ್ಧರನ್ನು ಹೆದರಿಸಿ ಬೆದರಿಸುವ ಮೂಲಕ ಭೂಮಿಯನ್ನು ಕಿತ್ತುಕೊಳ್ಳುವ ಜಾಯಮಾನ ನನ್ನದಲ್ಲ ಎಂದು ಮುಖ್ಯಮಂತ್ರಿ ವಿರುದ್ಧ ಕುಮಾರಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದರು.
ಅವನು ಯಾವನೋ ನನ್ನ ಬಗ್ಗೆ 3ಬಿ ಎಂದು ಮಾತನಾಡಿದ್ದಾನೆ. ಬ್ಲ್ಯಾಕ್ ಮೇಲ್ ಮಾಡುವುದು, ಬ್ಲ್ಯಾಕ್ ಮ್ಯಾಜಿಕ್ ಮಾಡುವುದು, ಬೆನ್ನಿಗೆ ಚೂರಿ ಹಾಕುವುದು ನನ್ನ ಜಾಯಮಾನವಲ್ಲ. ಯಾರು ಯಾರಿಗೆ ಇವೆಲ್ಲವನ್ನೂ ಮಾಡಿದರು ಎಂಬುದು ರಾಜ್ಯದ ಜನರಿಗೆ ಚೆನ್ನಾಗಿ ಗೊತ್ತಿದೆ. ಇವರೆಲ್ಲ ಸೇರಿ ನೈಸ್ ಯೋಜನೆ ವ್ಯಾಪ್ತಿಯ ಭೂಮಿಯನ್ನು ಯಾವ ರೀತಿಯಲ್ಲಿ ಲಪಟಾಯಿಸಿದ್ದಾರೆ ಎಂಬುದು ನನಗೆ ಗೊತ್ತಿದೆ. ರೈತರ ಭೂಮಿ ವಾಪಸ್ ಬರುವ ತನಕ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಅವರು ಗುಡುಗಿದರು.
ನೈಸ್ ಗುತ್ತಿಗೆದಾರನ ಬಂಧನ ಆಗಬೇಕು:
ಪರಮಪೂಜ್ಯ ಶಿವಕುಮಾರ ಮಹಾಸ್ವಾಮೀಜಿ ಅವರ ಬಗ್ಗೆ ಲಘುವಾಗಿ ಮಾತನಾಡಿರುವ ನೈಸ್ ಗುತ್ತಿಗೆದಾರ ಅಶೋಕ್ ಖೇಣಿಯನ್ನು ತಕ್ಷಣವೇ ಬಂಧಿಸಬೇಕು ಎಂದು ಒತ್ತಾಯ ಮಾಡಿದ ಸಚಿವ ಕುಮಾರಸ್ವಾಮಿ ಅವರು; ಇಂತಹ ಫ್ರಾಡ್ ವ್ಯಕ್ತಿಗೆ ಈ ರಾಜ್ಯದ ಮುಖ್ಯಮಂತ್ರಿ ರಕ್ಷಣೆ ಕೊಡುತ್ತ ಬಂದಿದ್ದಾರೆ. ಅಲ್ಲದೆ ಆತನ ಜೊತೆ ಶಾಮೀಲಾಗಿ ಮಾಡಬಾರದ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಈ ಅಶೋಕ್ ಖೇಣಿ ಸಿದ್ದಗಂಗಾ ಮಠದ ಆಸ್ತಿಯನ್ನು ಕೂಡ ಲೂಟಿ ಮಾಡಿದ್ದಾನೆ. ಇಂತಹ ಧರ್ಮ ದ್ರೋಹಿಗೆ ಡಿಕೆಶಿ ಸಹಕಾರ ಕೊಡುತ್ತಾ ಬಂದಿದ್ದಾರೆ. ಇಲ್ಲಿ ನನಗೆ ರಾಜಕೀಯ ಬೇಕಿಲ್ಲ. ರೈತರ ಭೂಮಿ ವಾಪಸ್ ಕೊಡಿಸುವ ಉದ್ಧೇಶದಿಂದ ಹೋರಾಟ ಮಾಡುತ್ತಿದ್ದೇನೆ. ಭೂಮಿ ಕಳೆದುಕೊಂಡ ಜನರು ಕೂಡ ಒಟ್ಟಾಗಿ ಹೋರಾಟಕ್ಕೆ ಧುಮುಕಬೇಕು. ನಾನು ಯಾರ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಪೈಕಿ ಅಲ್ಲ. ತೆಲಂಗಾಣದ ಮಹೇಶ್ ರೆಡ್ಡಿ ಎಂಬಾತನ ಜತೆ ಸೇರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಒಟ್ಟಾಗಿ ಭೂಮಿ ಲೂಟಿ ಹೊಡೆಯಲು ಸಂಚು ಮಾಡಿದ್ದಾರೆ. ಆದರೆ ಈ ಲೂಟಿಗೆ ನಾನು ಅವಕಾಶ ಕೊಡುವುದಿಲ್ಲ. ಹೇಗಾದರೂ ಮಾಡಿ ರೈತರ ಭೂಮಿಯನ್ನು ಉಳಿಸಿಕೊಡುತ್ತೇನೆ ಎಂದು ಕೇಂದ್ರ ಸಚಿವರು ಭರವಸೆ ನೀಡಿದರು.
ನನಗೆ ಆಮಿಷ ಒಡ್ಡಲು ಬಂದಿದ್ದರು!
ನೈಸ್ ಯೋಜನೆ ಉಸಾಬರಿ ನಿಮಗೇಕೆ ಬೇಕು? ಈ ವಿಷಯದಲ್ಲಿ ನೀವು ಸುಮ್ಮನೆ ಇದ್ದುಬಿಡಿ. ನಿಮಗೆ ಏನು ಬೇಕೋ ಅದನ್ನು ತೆಗೆದುಕೊಳ್ಳಿ ಎಂದು ನನಗೆ ಯಾರನ್ನೂ ಕಳಿಸಿ ಇವರೆಲ್ಲರೂ ಆಮಿಷ ಒಡ್ಡಲು ಪ್ರಯತ್ನ ಮಾಡಿದರು. ನನ್ನ ಬಳಿ ಬಂದವರನ್ನು ಮುಗಿದು ಹೊರಗೆ ಅಟ್ಟಿದ್ದೇನೆ. ಯಾರಿಂದಲೂ ನನ್ನನ್ನು ಖರೀದಿ ಮಾಡುವುದು ಸಾಧ್ಯವಿಲ್ಲ. ನಾನು ಜನರ ಮನುಷ್ಯ. ಜನರಿಗಾಗಿ ಬದುಕುತ್ತೇನೆ ಮತ್ತು ಅವರಿಗಾಗಿಯೇ ಪ್ರಾಣ ಬಿಡಲು ಸಿದ್ಧನಿದ್ದೇನೆ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.
ನನ್ನ ಮೇಲೆ ಬಹಳ ಒತ್ತಡ ಇದೆ. ಒಂದೂವರೆ ವರ್ಷದಲ್ಲಿ ಚುನಾವಣೆ ಇದೆ, ದಯವಿಟ್ಟು ಈ ಹೋರಾಟವನ್ನು ಇಲ್ಲಿಗೆ ಬಿಟ್ಟುಬಿಡಿ. ಚುನಾವಣೆ ಖರ್ಚು ಸೇರಿ ನಿಮಗೆ ಅಗತ್ಯ ಇರುವುದನ್ನು ತಂದು ಒಪ್ಪಿಸುತ್ತೇವೆ ಎಂದು ಹೇಳಿದವರನ್ನು ಮನೆ ಬಾಗಿಲಲ್ಲಿಯೇ ಬೈದು ಕಳಿಸಿದ್ದೇನೆ. ನಾನು ಒಬ್ಬ ಸುಮ್ಮನೆ ಇದ್ದರೆ ಇವರ ಲೂಟಿ ಸುಲಭವಾಗಿ ಆಗುತ್ತದೆ. ಅದಕ್ಕಾಗಿ ನಾನು ಕೇಳುವ ಪ್ರಶ್ನೆಗಳಿಗೆ ಹಾಗೂ ನನ್ನ ದಾಖಲೆಗಳಿಗೆ ಉತ್ತರ ಕೊಡುವುದನ್ನು ಬಿಟ್ಟು ಬೇರೆ ವಿಷಯಗಳನ್ನು ಚರ್ಚೆ ಮಾಡುತ್ತಾ ವಿಷಯಾಂತರ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.
ಇವತ್ತು ಮಾದಾವರದಿಂದ ಎಲೆಕ್ಟ್ರಾನಿಕ್ ಸಿಟಿ ಅವರಿಗೆ ಅನೇಕ ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ನಾಲ್ಕಾರು ಕಡೆ ಸಭೆಗಳನ್ನು ಮಾಡಿ ನೊಂದ ಜನರ ದುಃಖ ದುಮ್ಮಾನಗಳನ್ನು ಆಲಿಸಿದ್ದೇನೆ. ಸೋಂಪುರದಲ್ಲಿ ಕೊನೆಯದಾಗಿ ಬೃಹತ್ ಸಭೆಯನ್ನು ನಡೆಸಿ ಅಹವಾಲು ಆಲಿಸಿದ್ದೇನೆ. ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಜನರೊಂದಿಗೆ ಬೃಹತ್ ಆಂದೋಲನವನ್ನು ರೂಪಿಸಲಾಗುವುದು. ನಮ್ಮ ಹೋರಾಟ ಶಾಂತಿಯುತವಾಗಿರುತ್ತದೆ. ಆದಷ್ಟು ಬೇಗ ಎಲ್ಲಾ ಪ್ರಮುಖರ ಮತ್ತೊಂದು ಸಭೆ ಕರೆಯುತ್ತೇನೆ. 5ನೇ ತಾರೀಕು ಸುಪ್ರೀಂ ಕೋರ್ಟ್‌ನಲ್ಲಿ ಹೈಕೋರ್ಟ್ ಅಭಿಪ್ರಾಯಗಳ ಮೇಲೆ ವಿಚಾರಣೆ ನಡೆಯುತ್ತದೆ. ಅದನ್ನು ನೋಡಿಕೊಂಡು ಮುಂದಿನ ಹೋರಾಟ ರೂಪಿಸೋಣ. ಭೂಮಿ ಕಳೆದುಕೊಂಡವರು ಯಾವುದೇ ಕಾರಣಕ್ಕೂ ಅಧೈರ್ಯ ಪಡುವುದು ಬೇಡ. ನಿಮ್ಮ ಜೊತೆ ನಾನಿದ್ದೇನೆ ಎಂದು ಕೇಂದ್ರ ಸಚಿವರು ಅಭಯ ನೀಡಿದರು.
ಕೇಂದ್ರ ಸಚಿವರ ಜತೆ ವಿಧಾನ ಪರಿಷತ್ ಸದಸ್ಯ ಜವರಾಯಿಗೌಡ, ಮಾಜಿ ಶಾಸಕ ಎ.ಮಂಜುನಾಥ್, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಎಚ್.ಎಂ. ರಮೇಶ್ ಗೌಡ, ಹಿರಿಯ ಮುಖಂಡ ರುದ್ರೇಶ್ ಸೇರಿದಂತೆ ಅನೇಕರು ಇದ್ದರು.
ಸಚಿವರ ಸಂಚಾರ ಎಲ್ಲೆಲ್ಲಿ?:
ಸಚಿವ ಕುಮಾರಸ್ವಾಮಿ ಅವರು ಬೆಳಗ್ಗೆ 10 ಗಂಟೆಯಿಂದ ನೈಸ್ ರಸ್ತೆಯಲ್ಲಿ ತಮ್ಮ ಪ್ರಯಾಣವನ್ನು ಆರಂಭಿಸಿದರು. ಬೆಳಗ್ಗೆ 10 ಗಂಟೆ ಸುಮಾರಿಗೆ ಮಾದಾವರ ಸಮೀಪ ಇರುವ ನೈಸ್ ಟೋಲ್ ಪ್ಲಾಜಾ ಸಮೀಪದ ರೈತರು ಕಳೆದುಕೊಂಡ ಜಾಗವನ್ನು ಪರಿಶೀಲನೆ ನಡೆಸಿದರು. ಆ ಭೂಮಿಯ ಪ್ರತಿ ಭಾಗಕ್ಕೂ ತೆರಳಿದ ಸಚಿವರು ಅದರ ಮೂಲ ಮಾಲೀಕರ ಜೊತೆ ಸಭೆ ನಡೆಸಿದರು. ಅಲ್ಲದೆ ಈ ಭೂಮಿಯನ್ನು ಮೂಲ ಮಾಲೀಕರಿಗೆ ವಾಪಸ್ ನೀಡಬೇಕು ಎಂದು ಒತ್ತಾಯ ಮಾಡಿದರು.
ನೈಸ್ ರಸ್ತೆ ವಿವಾದ: 3 ದಶಕ, 3 ನ್ಯಾಯಾಲಯ-ಯಾರ ವೈಫಲ್ಯ? 3 ದಶಕಗಳಲ್ಲಿ ಏನೆಲ್ಲ ಆಯ್ತು? ಇಲ್ಲಿದೆ ವಿವರ
ತದನಂತರ ತೋಟದ ಗುಡ್ಡದಹಳ್ಳಿ, ಅಂಚೆಪಾಳ್ಯ, ತಿರುಮಲಪುರ, ಕೆ.ಜಿ ಶ್ರೀಕಂಠಪುರಂ, ಗಂಗೊಂಡನಹಳ್ಳಿ, ಕಾಚೋಹಳ್ಳಿ, ಹೊಸಹಳ್ಳಿ, ಗೊಲ್ಲರಹಟ್ಟಿ, ಕೊಡಿಗೆಹಳ್ಳಿ, ರಾಮಸಂದ್ರ, ಕೊಮ್ಮಘಟ್ಟ, ದೊಡ್ಡ ಬಸ್ತಿ, ಚಿಕ್ಕಬಸ್ತಿ, ಚಿಕ್ಕನಹಳ್ಳಿ, ಕೆಂಗೇರಿ, ದೊಡ್ಡ ತೂಗೂರು, ಚಿಕ್ಕ ತೂಗೂರು, ಎಲೆಕ್ಟ್ರಾನಿಕ್ ಸಿಟಿ, ಕೋನಪ್ಪನ ಅಗ್ರಹಾರ, ಬೇಗೂರು, ಸೋಂಪುರ, ನೈಸ್ ವೃತ್ತ, ವರಾಹಸಂದ್ರ, ಬಿ.ಎಂ. ಕಾವಲ್, ಎಚ್ ಗೊಲ್ಲಹಳ್ಳಿ, ತಲಘಟ್ಟಪುರ, ಕೆಮ್ಮಿಗೆಪುರ, ಗಾಣಸಂದ್ರ ಸೇರಿದಂತೆ ಅನೇಕ ಗ್ರಾಮಗಳ ನೊಂದ ಸಾರ್ವಜನಿಕರ ಜತೆಯಲ್ಲಿ ಸಚಿವರು ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಅವರ ಮನವಿಗಳನ್ನು ಸ್ವೀಕರಿಸಿ ಅದಕ್ಕೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.