ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕನಕಪುರಕ್ಕೆ ಸಿಎಂ ಡಿ.ಕೆ.ಶಿವಕುಮಾರ್‌ ಭೇಟಿ; ಗಣೇಶೋತ್ಸವದಲ್ಲಿ ಭಾಗಿ, ಕ್ಷೇತ್ರದ ಜನರ ಕುಶಲೋಪರಿ ವಿಚಾರಣೆ

CM DK Shivakumar: ಕನಕಪುರ ತಾಲೂಕಿನ ಚಿಕ್ಕೇಗೌಡನದೊಡ್ಡಿಯಲ್ಲಿ ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ 10ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಪ್ರತಿಷ್ಠಾಪಿಸಿರುವ ವಿಘ್ನ ವಿನಾಶಕ ಶ್ರೀ ಗಣೇಶನಿಗೆ ಸಿಎಂ ಡಿ.ಕೆ. ಶಿವಕುಮಾರ್‌, ಸೋಮವಾರ ವಿಶೇಷ ಪೂಜೆ ಸಲ್ಲಿಸಿದರು.

ಕನಕಪುರಕ್ಕೆ ಸಿಎಂ ಡಿ.ಕೆ.ಶಿವಕುಮಾರ್‌ ಭೇಟಿ; ಗಣೇಶೋತ್ಸವದಲ್ಲಿ ಭಾಗಿ

-

Profile
Siddalinga Swamy Sep 14, 2026 8:51 PM

ಕನಕಪುರ, ಸೆ.14: ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕನಕಪುರ ತಾಲೂಕಿನ ಚಿಕ್ಕೇಗೌಡನದೊಡ್ಡಿಯಲ್ಲಿ 10ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಪ್ರತಿಷ್ಠಾಪಿಸಿರುವ ವಿಘ್ನ ವಿನಾಶಕ ಶ್ರೀ ಗಣೇಶನಿಗೆ ಸಿಎಂ ಡಿ.ಕೆ. ಶಿವಕುಮಾರ್‌ (CM DK Shivakumar) ಸೋಮವಾರ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಸಿಎಂ, ಶ್ರೀ ಗಣೇಶನ ಕೃಪೆಯಿಂದ ನಾಡಿನ ಪ್ರತಿಯೊಂದು ಮನೆಯಲ್ಲೂ ಸುಖ, ಶಾಂತಿ, ಆರೋಗ್ಯ, ನೆಮ್ಮದಿ ಹಾಗೂ ಸಕಲ ಸಮೃದ್ಧಿ ನೆಲೆಸಲಿ. ಪ್ರತಿಯೊಬ್ಬರ ಬದುಕಿನಲ್ಲೂ ಹೊಸ ಭರವಸೆ ಮತ್ತು ಸಂತೋಷ ಮೂಡಲಿ ಎಂದು ದೇವರಿಗೆ ಪ್ರಾರ್ಥಿಸಿದೆ ಎಂದು ತಿಳಿಸಿದರು. ‌

DKS

ಸ್ವಕ್ಷೇತ್ರ ಕನಕಪುರ ಕ್ಷೇತ್ರದ ನಾಗರಿಕರನ್ನು ಭೇಟಿ ಮಾಡಿ, ಕುಶಲೋಪರಿ ವಿಚಾರಿಸಿದ್ದು ಸಂತಸವನ್ನುಂಟು ಮಾಡಿದೆ. ಹಬ್ಬದ ಸಡಗರದ ನಡುವೆ ಜನರ ಮುಖದಲ್ಲಿನ ನಗು, ಆತ್ಮೀಯತೆ ಹಾಗೂ ಪ್ರೀತಿಯನ್ನು ಕಂಡು ಮನಸ್ಸು ತುಂಬಿ ಬಂತು. ಅವರ ಪ್ರೀತಿ, ವಿಶ್ವಾಸಕ್ಕೆ ಸದಾ ಚಿರಋಣಿ ಎಂದು ಹೇಳಿದ್ದಾರೆ.

DK Shivakumar

ಕುಟುಂಬ ಸಮೇತ ತೆರಳಿ ಹಿರಿಯರಿಗೆ ಪೂಜೆ

ಹಬ್ಬದ ಹಿನ್ನೆಲೆಯಲ್ಲಿ ತಾಯಿ ಗೌರಮ್ಮ ಅವರ ಆಶೀರ್ವಾದ ಪಡೆದ ಬಳಿಕ ಪ್ರತಿ ವರ್ಷದಂತೆ ಕನಕಪುರ ತಾಲೂಕಿನ ದೊಡ್ಡಆಲಹಳ್ಳಿಯಲ್ಲಿ ಕುಟುಂಬ ಸಮೇತ ತೆರಳಿ, ಹಿರಿಯರಿಗೆ ಸಿಎಂ ಡಿ.ಕೆ. ಶಿವಕುಮಾರ್‌ ಪೂಜೆ ಸಲ್ಲಿಸಿದರು. ಹಿರಿಯರ ಆಶೀರ್ವಾದವೇ ನಮ್ಮ ಬದುಕಿನ ಶ್ರೀರಕ್ಷೆ. ಅವರು ನೀಡಿದ ಪ್ರೀತಿ, ಕಲಿಸಿದ ಸಂಸ್ಕಾರ, ತೋರಿಸಿದ ಜೀವನದ ಮೌಲ್ಯಗಳು ಹಾಗೂ ಹಾಕಿಕೊಟ್ಟ ಹೆಜ್ಜೆ ಜಾಡು ನಮ್ಮ ಬದುಕಿಗೆ ಸದಾ ದಾರಿದೀಪ ಎಂದು ಹೇಳಿದ್ದಾರೆ.

DKS

ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ

ವಸತಿ ರಹಿತ ಕುಟುಂಬಗಳಿಗಾಗಿ ಕನಕಪುರ ತಾಲೂಕಿನ ಸಾತನೂರು ಹೋಬಳಿಯ ಕೆಮ್ಮಲೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಬಡಾವಣೆಯನ್ನು ಸಹೋದರ ಡಿ.ಕೆ. ಸುರೇಶ್ ಅವರೊಂದಿಗೆ ತೆರಳಿ ಪರಿಶೀಲನೆ ನಡೆಸಿದ ಸಿಎಂ ಅವರು, ಕಾಮಗಾರಿಯ ಪ್ರಗತಿ ಹಾಗೂ ಅಗತ್ಯ ಮಾಹಿತಿಯನ್ನು ಪಡೆದುಕೊಂಡರು. ಪ್ರತಿಯೊಂದು ಕುಟುಂಬಕ್ಕೂ ಸ್ವಂತ ಸೂರು ಇರಬೇಕು, ನೆಮ್ಮದಿಯಿಂದ ಬದುಕುವ ಹಕ್ಕು ದೊರೆಯಬೇಕು ಎಂಬುದೇ ನಮ್ಮ ಮುಖ್ಯ ಗುರಿಯಾಗಿದೆ ಎಂದು ತಿಳಿಸಿದ್ದಾರೆ.

200ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರ ಪರಿಸ್ಥಿತಿ; ಕೇಂದ್ರದ ನಿಯಮಾನುಸಾರ ಬರ ತಾಲೂಕುಗಳ ಘೋಷಣೆ ಎಂದ ಸಿಎಂ

ಅದೇ ರೀತಿ ಕನಕಪುರ ತಾಲೂಕಿನ ಹುಲಿಬೆಲೆ ಗ್ರಾಮದಲ್ಲಿ ನಡೆಯುತ್ತಿರುವ ರಸ್ತೆ ಹಾಗೂ ಚರಂಡಿ ಕಾಮಗಾರಿಗಳನ್ನು ಸಿಎಂ ಪರಿಶೀಲಿಸಿ, ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರಿಂದ ಕಾಮಗಾರಿಯ ಪ್ರಗತಿ ಕುರಿತು ಮಾಹಿತಿ ಪಡೆದುಕೊಂಡರು. ಸ್ವಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರತಿಯೊಂದು ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸುವುದು ನನ್ನ ಕರ್ತವ್ಯವಾಗಿದ್ದು, ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸದಾ ಬದ್ಧನಾಗಿದ್ದೇನೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.