ವಿಧಾನ ಪರಿಷತ್ ಚುನಾವಣೆ; ಮರು ಮತ ಎಣಿಕೆಯಲ್ಲಿ ಎಂ.ಕೆ. ಪ್ರಾಣೇಶ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡಗೆ ಗೆಲುವು
Chikkamagaluru MLC Election Recount: 2021ರ ಡಿಸೆಂಬರ್‌ನಲ್ಲಿ ನಡೆದಿದ್ದ ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಎಂ.ಕೆ. ಪ್ರಾಣೇಶ್ ಅವರು 6 ಮತಗಳಿಂದ ಗೆದ್ದಿದ್ದರು. ಆದರೆ, ನಾಮನಿರ್ದೇಶಿತ ಸದಸ್ಯರು ಮತ ಚಲಾಯಿಸಿರುವುದನ್ನು ಆಕ್ಷೇಪಿಸಿ ಗಾಯತ್ರಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ಮರು ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಗೆಲುವು ಪಡೆದಿದ್ದಾರೆ.
-
ಚಿಕ್ಕಮಗಳೂರು: ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯ (Chikkamagaluru MLC Election Recount) ಮರು ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ (Gayatri Shanthegowda) ಅವರು ಎಂ.ಕೆ. ಪ್ರಾಣೇಶ್ ಅವರ ವಿರುದ್ಧ 9 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಹೈಕೋರ್ಟ್ ಆದೇಶದಂತೆ ಮುಚ್ಚಿದ ಲಕೋಟೆಯಲ್ಲಿದ್ದ ಫಲಿತಾಂಶವನ್ನು ಪ್ರಕಟಿಸಲಾಗಿದ್ದು, ಇದರಿಂದಾಗಿ ಹಾಲಿ ಬಿಜೆಪಿ ಸದಸ್ಯ ಹಾಗೂ ಪರಿಷತ್ ಉಪಸಭಾಪತಿಯಾಗಿದ್ದ ಎಂ.ಕೆ. ಪ್ರಾಣೇಶ್ ಅವರಿಗೆ ಹಿನ್ನಡೆಯಾಗಿದೆ.
2021ರ ಡಿಸೆಂಬರ್‌ನಲ್ಲಿ ನಡೆದಿದ್ದ ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಎಂ.ಕೆ. ಪ್ರಾಣೇಶ್ ಅವರು 6 ಮತಗಳಿಂದ ಗೆದ್ದಿದ್ದರು. ಆದರೆ, ನಾಮನಿರ್ದೇಶಿತ ಸದಸ್ಯರು ಮತ ಚಲಾಯಿಸಿರುವುದನ್ನು ಆಕ್ಷೇಪಿಸಿ ಗಾಯತ್ರಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಈ ವೇಳೆ, ಹೈಕೋರ್ಟ್ ಆದೇಶದ ಅನ್ವಯ ನಾಮನಿರ್ದೇಶಿತ ಸದಸ್ಯರ ಮತಗಳನ್ನು ಹೊರತುಪಡಿಸಿ ಮರು ಎಣಿಕೆಗೆ ಸೂಚಿಸಿತ್ತು.
ಆದರೆ, ಇದನ್ನು ಪ್ರಶ್ನಿಸಿ ಪ್ರಾಣೇಶ್ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆದರೆ ಅಲ್ಲೂ ಕೂಡ ಪ್ರಾಣೇಶ್ ಅವರಿಗೆ ಹಿನ್ನಡೆ ಆಗಿ, ಮನವಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿತ್ತು. ಜೊತೆಗೆ ಮರು ಎಣಿಕೆಗೆ ಸೂಚನೆ ನೀಡಿತ್ತು.
ಮುಂದುವರಿದು, ನ್ಯಾಯಾಲಯದ ಆದೇಶದ ಅನ್ವಯ ನಾಮನಿರ್ದೇಶಿತ ಸದಸ್ಯರ ಮತಗಳನ್ನು ಹೊರತುಪಡಿಸಿ ನಡೆದ ಮರು ಎಣಿಕೆಯಲ್ಲಿ ಗಾಯತ್ರಿ ಶಾಂತೇಗೌಡ ಅವರು 9 ಮತಗಳ ಅಂತರದಿಂದ ಜಯಗಳಿಸಿರುವುದಾಗಿ ನ್ಯಾ. ಎಸ್. ಜಿ. ಪಂಡಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠವು ಆದೇಶ ನೀಡಿತ್ತು. ಇದರೊಂದಿಗೆ, ಗಾಯತ್ರಿ ಶಾಂತೇಗೌಡ ಅವರಿಗೆ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಲು ಇನ್ನು ಒಂದೂವರೆ ವರ್ಷಗಳ ಅವಧಿ ಬಾಕಿ ಇದೆ.
ಏತನ್ಮಧ್ಯೆ, ನ್ಯಾಯಾಲಯವು ಗಾಯತ್ರಿ ಶಾಂತೇಗೌಡ ಅವರಿಗೆ ಪ್ರಮಾಣವಚನ ಬೋಧಿಸುವಂತೆ ವಿಧಾನ ಪರಿಷತ್ ಸಭಾಪತಿಗಳಿಗೆ ಸೂಚನೆ ನೀಡಿದೆ. ಈ ತೀರ್ಪಿನಿಂದಾಗಿ 75 ಸದಸ್ಯರ ಬಲದ ವಿಧಾನ ಪರಿಷತ್‌ನಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸದಸ್ಯರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ.