ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

All Party Delegation: ಭಯೋತ್ಪಾದನೆ ವಿರುದ್ಧ ಕೇಂದ್ರದ ರಾಜತಾಂತ್ರಿಕ ನಡೆ; ಸರ್ವಪಕ್ಷ ಸದಸ್ಯರ ನಿಯೋಗಕ್ಕೆ ಶಶಿ ತರೂರ್‌ ಹೆಸರು ಸೂಚಿಸದ ಕಾಂಗ್ರೆಸ್‌

Shashi Tharoor: ಉಗ್ರವಾದಕ್ಕೆ ಬೆಂಬಲ ನೀಡುತ್ತಿರುವ ಪಾಕಿಸ್ತಾನದ ನಿಜ ಮುಖವನ್ನು ಜಗತ್ತಿನೆದುರು ತೆರೆದಿಡಲು ಕೇಂದ್ರ ಸರ್ಕಾರ ನಿಯೋಜಿಸಿದ ಸರ್ವ ಪಕ್ಷಗಳ ನಿಯೋಗವನ್ನು ತಿರುವನಂತಪುರಂ ಸಂಸದ ಶಶಿ ತರೂರ್‌ ಮುನ್ನಡೆಸಲಿದ್ದಾರೆ. ಅದಾಗ್ಯೂ ಕಾಂಗ್ರೆಸ್‌ ಸೂಚಿಸಿದ 4 ಹೆಸರಿನಲ್ಲಿ ಶಶಿ ತರೂರ್‌ ಹೆಸರಿರಲಿಲ್ಲ.

ಸರ್ವಪಕ್ಷ ಸದಸ್ಯರ ನಿಯೋಗಕ್ಕೆ ಶಶಿ ತರೂರ್‌ ಹೆಸರು ಸೂಚಿಸದ ಕಾಂಗ್ರೆಸ್‌

ಶಶಿ ತರೂರ್‌.

Profile Ramesh B May 17, 2025 2:53 PM

ಹೊಸದಿಲ್ಲಿ: ಉಗ್ರವಾದಕ್ಕೆ ಬೆಂಬಲ ನೀಡುತ್ತಿರುವ ಪಾಕಿಸ್ತಾನದ ನಿಜ ಮುಖವನ್ನು ಜಗತ್ತಿನೆದುರು ತೆರೆದಿಡಲು ಮತ್ತು ಪಹಲ್ಗಾಮ್‌ ದಾಳಿಯ ಬಳಿಕ ನಡೆದ ಆಪರೇಷನ್‌ ಸಿಂದೂರ್‌ನ (Operation Sindoor) ವಿವರವನ್ನು ತಿಳಿಸಲು ಕೇಂದ್ರ ಸರ್ಕಾರ ಸರ್ವ ಪಕ್ಷಗಳ ನಿಯೋಗವನ್ನು (All Party Delegation) ಪ್ರಮುಖ ದೇಶಗಳಿಗೆ ಕಳುಹಿಸಲು ನಿರ್ಧರಿಸಿದೆ. ಕಾಂಗ್ರೆಸ್‌ ನಾಯಕ, ತಿರುವನಂತಪುರಂ ಸಂಸದ ಶಶಿ ತರೂರ್‌ (Shashi Tharoor) ಈ ನಿಯೋಗವನ್ನು ಮುನ್ನಡೆಸಲಿದ್ದಾರೆ. ಅದಾಗ್ಯೂ ಕಾಂಗ್ರೆಸ್‌ ಸೂಚಿಸಿದ 4 ಹೆಸರಿನಲ್ಲಿ ಶಶಿ ತರೂರ್‌ ಹೆಸರಿರಲಿಲ್ಲ. ಕೇಂದ್ರ ಸಚಿವ ಕಿರಣ್‌ ರಿಜಿಜು (Kiren Rijiju) ಮನವಿ ಮಾಡಿದ ಹಿನ್ನೆಲೆಯಲ್ಲಿ ಮೇ 16ರಂದು ನಾಲ್ವರು ಸಂಸದರ ಹೆಸರನ್ನು ಶಿಫಾರಸ್ಸು ಮಾಡಲಾಗಿತ್ತು ಎಂದು ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ತಿಳಿಸಿದ್ದಾರೆ.

ಈ ಹಿಂದೆ ಆಪರೇಷನ್‌ ಸಿಂದೂರ್‌ ಕಾರ್ಯಾಚರಣೆಯನ್ನು ಶಶಿ ತರೂರ್‌ ಮೆಚ್ಚುಗೆ ಸೂಚಿಸಿ ಕಾಂಗ್ರೆಸ್‌ ಕೆಂಗಣ್ಣಿಗೆ ಗುರಿಯಾಗಿದ್ದರು.

ಜೈರಾಮ್‌ ರಮೇಶ್‌ ಅವರ ಪೋಸ್ಟ್‌:



ಲೋಕಸಭೆಯ ವಿಪಕ್ಷಗಳ ನಾಯಕ ರಾಹುಲ್‌ ಗಾಂಧಿ ಅವರೇ 4 ಸಂಸದರ ಹೆಸರನ್ನು ಆಯ್ಕೆ ಮಾಡಿದ್ದಾರೆ. ಆನಂದ್‌ ಶರ್ಮಾ, ಗೌರವ್‌ ಗೊಗೊಯ್‌, ರಾಜಾ ಬ್ರಾರ್‌ ಮತ್ತು ರಾಜ್ಯಸಭೆ ಸಂಸದ ಡಾ.ಸೈಯದ್‌ ನಾಸೀರ್‌ ಹುಸೇನ್‌ ಇವರೇ ರಾಹುಲ್‌ ಗಾಂಧಿ ಆಯ್ಕೆ ಮಾಡಿದ ಕಾಂಗ್ರೆಸ್‌ ನಾಯಕರು.

ರಾಹುಲ್‌ ಗಾಂಧಿ ಶಿಫಾರಸ್ಸು ಮಾಡಿದ ನಾಯಕರು ಪಾಕಿಸ್ತಾನ ಪರ ಒಲುವು ಹೊಂದಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಇತ್ತ ತಾನು ಶಿಫಾರಸ್ಸು ಮಾಡಿ ಪಟ್ಟಿಯನ್ನು ಬಿಟ್ಟು ಶಶಿ ತರೂರ್‌ ಅವರನ್ನು ನೇಮಕ ಮಾಡಿದ ಕೇಂದ್ರದ ನಿರ್ಧಾರಕ್ಕೆ ಕಾಂಗ್ರೆಸ್‌ ಅಸಮಾಧಾನ ವ್ಯಕ್ತಪಡಿಸಿದೆ ಎನ್ನಲಾಗಿದೆ.

ಶಶಿ ತರೂರ್‌ ಅವರ ಪೋಸ್ಟ್‌:



ಈ ಸುದ್ದಿಯನ್ನೂ ಓದಿ: All Party Delegation: ಭಯೋತ್ಪಾದನೆ ಬಗ್ಗೆ ಶೂನ್ಯ ಸಹಿಷ್ಣುತೆ: ಭಾರತದ ಸಂದೇಶ ಹೊತ್ತು ವಿವಿಧ ದೇಶಗಳಿಗೆ ಸಾಗಲಿದೆ ಸರ್ವಪಕ್ಷ ಸಂಸದರ ನಿಯೋಗ; ಆ 7 ಎಂಪಿಗಳು ಯಾರು?

7 ಸದಸ್ಯರ ನಿಯೋಗದಲ್ಲಿ ಯಾರೆಲ್ಲ ಇದ್ದಾರೆ?

ವಿವಿಧ ಪಕ್ಷಗಳ ಸಂಸತ್ ಸದಸ್ಯರು, ಪ್ರಮುಖ ರಾಜಕೀಯ ನಾಯರನ್ನೊಳಗೊಂಡ ಈ ನಿಯೋಗದಲ್ಲಿ ಸಂಸದರಾದ ಕಾಂಗ್ರೆಸ್‌ನ ಶಶಿ ತರೂರ್, ಬಿಜೆಪಿಯ ರವಿಶಂಕರ್ ಪ್ರಸಾದ್, ಬೈಜಯಂತ್ ಪಾಂಡಾ, ಜೆಡಿಯುನ ಸಂಜಯ್ ಕುಮಾರ್ ಝಾ, ಡಿಎಂಕೆಯ ಕನಿಮೋಳಿ ಕರುಣಾನಿಧಿ, ಎನ್‌ಸಿಪಿಯ ಸುಪ್ರಿಯಾ ಸುಳೆ, ಶಿವಸೇನೆಯ ಶ್ರೀಕಾಂತ್ ಏಕನಾಥ್ ಶಿಂಧೆ ಇದ್ದಾರೆ.

ಈ ನಿಯೋಗವು ಇಂಗ್ಲೆಂಡ್‌, ಅಮೆರಿಕ, ಯುಎಇ, ಕತಾರ್‌ ಮತ್ತಿತರ ರಾಷ್ಟ್ರಗಳಿಗೆ 10 ದಿನಗಳ ಕಾಲ ಪ್ರವಾಸ ಕೈಗೊಂಡು ರಾಜತಾಂತ್ರಿಕ ಕಾರ್ಯದ ಕುರಿತು ಮಾಹಿತಿ ನೀಡಲಿದೆ. ಮೇ 22 ಅಥವಾ 23ರಿಂದ ನಿಯೋಗ ಪ್ರವಾಸ ಆರಂಭಿಸುವ ಸಾಧ್ಯತೆ ಇದೆ. ಭಾರತದ ವಿರುದ್ಧದ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಪಾಕಿಸ್ತಾನ ಭಾಗಿಯಾಗಿರುವುದನ್ನು ವಿವರಿಸುವ ದಾಖಲೆಗಳು ಮತ್ತು ಪುರಾವೆಗಳನ್ನು ನಿಯೋಗದ ಸದಸ್ಯರಿಗೆ ನೀಡಲಾಗುವುದು ಎಂದು ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು 40 ಸದಸ್ಯರನ್ನು ಒಳಗೊಂಡಿರುವ ನಿಯೋಗವನ್ನು 7 ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಈ ತಂಡಗಳು ವಿಶ್ವದ ವಿವಿಧ ದೇಶಗಳಿಗೆ ತೆರಳಿ ಭಯೋತ್ಪಾದನೆಯ ವಿರುದ್ಧ ದೇಶದ ಶೂನ್ಯ ಸಹಿಷ್ಣುತೆಯನ್ನು ತಿಳಿಸಲಿದೆ. ಈ 7 ನಿಯೋಗಗಳಲ್ಲಿರುವ ಇತರ ಸದಸ್ಯರ ಹೆಸರನ್ನು ಇನ್ನೂ ಘೋಷಿಸಲಾಗಿಲ್ಲ. ಪ್ರತಿ ನಿಯೋಗವು ಏಳರಿಂದ ಎಂಟು ಸದಸ್ಯರನ್ನು ಒಳಗೊಂಡಿದ್ದು, ನಾಲ್ಕರಿಂದ ಐದು ದೇಶಗಳಿಗೆ ಭೇಟಿ ನೀಡಲಿದೆ.