Davanagere South by-election: ಅಲ್ಲಿ ಗಾಂಧಿ ಕುಟುಂಬ, ಇಲ್ಲಿ ಶಾಮನೂರು ಕುಟುಂಬ; ಬೇರೆ ಯಾರೂ ಸಮರ್ಥರಿಲ್ಲವೇ?: ಜೋಶಿ ಪ್ರಶ್ನೆ
Pralhad Joshi: ಕಾಂಗ್ರೆಸ್ ಪಕ್ಷ ಹೈಕಮಾಂಡ್ ಗಾಂಧಿ ಕುಟುಂಬದ ಕೈಯಲ್ಲಿದ್ದರೆ, ದಾವಣಗೆರೆಯಲ್ಲಿ ಶಾಮನೂರು ಕುಟುಂಬದ ಕೈಯಲ್ಲಿದೆ. ಪಕ್ಷಕ್ಕಿಂತ ಕುಟುಂಬ ರಾಜಕಾರಣ ಹಾಸುಹೊಕ್ಕಾಗಿದೆ. ಭವಿಷ್ಯದಲ್ಲೂ ನಿಷ್ಠಾವಂತ ಕಾರ್ಯಕರ್ತರಿಗಿಂತ ಕುಟುಂಬದ ಕುಡಿಗಳನ್ನೇ ಮುನ್ನಲೆಗೆ ತರುತ್ತಿದ್ದಾರೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (ಸಂಗ್ರಹ ಚಿತ್ರ) -
ದಾವಣಗೆರೆ, ಏ.6: ಕಾಂಗ್ರೆಸ್ ಪಕ್ಷದಲ್ಲಿ ಕುಟುಂಬ ರಾಜಕಾರಣ, ತುಷ್ಟೀಕರಣ, ಭ್ರಷ್ಟಾಚಾರದ ಪರಾಕಾಷ್ಠೆ ಎಲ್ಲೆ ಮೀರಿದೆ. 'ಅಲ್ಲಿ ಗಾಂಧಿ ಕುಟುಂಬ, ಇಲ್ಲಿ ಶಾಮನೂರು ಕುಟುಂಬದ ಕುಡಿಗಳನ್ನು ಕಣಕ್ಕಿಳಿಸಿ "ಕುಟುಂಬ ರಾಜಕಾರಣ" ವನ್ನು ಪೋಷಿಸಿಕೊಳ್ಳುತ್ತಿವೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಟೀಕಿಸಿದರು.
ದಾವಣಗೆರೆಯಲ್ಲಿ ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಹೈಕಮಾಂಡ್ ಗಾಂಧಿ ಕುಟುಂಬದ ಕೈಯಲ್ಲಿದ್ದರೆ, ದಾವಣಗೆರೆಯಲ್ಲಿ ಶಾಮನೂರು ಕುಟುಂಬದ ಕೈಯಲ್ಲಿದೆ. ಪಕ್ಷಕ್ಕಿಂತ ಕುಟುಂಬ ರಾಜಕಾರಣ ಹಾಸುಹೊಕ್ಕಾಗಿದೆ. ಭವಿಷ್ಯದಲ್ಲೂ ನಿಷ್ಠಾವಂತ ಕಾರ್ಯಕರ್ತರಿಗಿಂತ ಕುಟುಂಬದ ಕುಡಿಗಳನ್ನೇ ಮುನ್ನಲೆಗೆ ತರುತ್ತಿದ್ದಾರೆಂದು ಆರೋಪಿಸಿದರು.
ಪ್ರಿಯಾಂಕಾ ವಾದ್ರಾ ಪುತ್ರನ ಎಂಟ್ರಿಗೆ ಸಿದ್ಧತೆ
ಕಾಂಗ್ರೆಸ್ ಪಕ್ಷದಲ್ಲಿ ಸೋನಿಯಾ ಗಾಂಧಿ, ಪುತ್ರ ರಾಹುಲ್ ಗಾಂಧಿ, ಪುತ್ರಿ ಪ್ರಿಯಾಂಕಾ ಗಾಂಧಿ ಮೂವರೂ ಸಂಸದರು. ಜತೆಗೆ ಪ್ರಿಯಾಂಕಾ ವಾದ್ರಾ ಅವರ ಮಗನಿಗೂ ಒಂದು ಕ್ಷೇತ್ರ ಹುಡುಕುತ್ತಿದ್ದಾರೆ. ಅಕ್ಕಪಕ್ಕದ ಕ್ಷೇತ್ರದಲ್ಲಿ ನಿಲ್ಲಿಸಲು ತಯಾರಿ ನಡೆದಿದೆ ಎಂದರು ಜೋಶಿ.
ದಾವಣಗೆರೆಯಲ್ಲೂ ಕಾಂಗ್ರೆಸ್ ಹೈಕಮಾಂಡ್ ಮಾದರಿ ರಾಜಕಾರಣ ನಡೆಯುತ್ತಿದೆ. ತಂದೆ-ಮಗ ಇಬ್ಬರೂ ಶಾಸಕರಿದ್ದರೆ, ಸೊಸೆ ಸಂಸದರು. ಇದೀಗ ತಂದೆ MLA ಮಂತ್ರಿ, ಪತ್ನಿ ಸಂಸದೆ, ಮಗ MLA ಅಭ್ಯರ್ಥಿ. ಮುಂದೆ ಮತ್ಯಾವುದಾದರೂ ಅಕ್ಕಪಕ್ಕದ ಕ್ಷೇತ್ರಗಳಲ್ಲಿ ಈ ಕುಟುಂಬದವರೇ ನಿಲ್ಲುತ್ತಾರೆ ಎಂದು ಟೀಕಿಸಿದರು.
ಇಡೀ ದಾವಣಗೆರೆಯೇ ಕಬ್ಜಾ
ದಾವಣಗೆರೆಯಲ್ಲಿ ಕಾಂಗ್ರೆಸ್ ಗೆ ಶಾಮನೂರು ಕುಟುಂಬ ಬಿಟ್ಟರೆ ಬೇರೆ ಯಾರೂ 'ಸಮರ್ಥ' ರಿಲ್ಲವೇ? ಎಂದು ಪ್ರಶ್ನಿಸಿದ ಜೋಶಿ, ಇನ್ನೂ 40 ವರ್ಷ ಕುಟುಂಬ ರಾಜಕಾರಣವೇ ಮುಂದುವರಿದು, ಇಡೀ ದಾವಣಗೆರೆ ಕಬ್ಜಾ ಮಾಡಿಕೊಳ್ಳುತ್ತಾರೆ ಹುಷಾರಿ ಎಂದು ದಾವಣಗೆರೆ ಜನತೆಯನ್ನು ಎಚ್ಚರಿಸಿದರು.
ಜನ ಮಾತ್ರವಲ್ಲ, ಕಾಂಗ್ರೆಸ್ ಕಾರ್ಯಕರ್ತರೂ ವಂಶ ರಾಜಕಾರಣ ಕೊನೆಗಣಿಸಲಿ
ದೇಶದ ಹಲವು ಕಡೆ ಚುನಾವಣೆ ನಡೆದಿದೆ. ಎಲ್ಲೂ ಕಾಂಗ್ರೆಸ್ ಇಲ್ಲ. ಎಲ್ಲೋ ಅಲ್ಲಲ್ಲಿ ಉಸಿರಾಡುತ್ತಿದ್ದಾರೆ ಅಷ್ಟೇ. ಅಸ್ಸಾಂ ಅಲ್ಲಿ ಉಚಿತಗಳ ಘೋಷಣೆ ಮಾಡಿದ್ದಾರೆ. ಆದರೆ ಅಲ್ಲಿವರೆಗೆ ಸೋಲು ಖಚಿತ. ಇನ್ನು ಕೇರಳದಲ್ಲಿ ಸ್ವಲ್ಪ ಉಸಿರಾಡುತ್ತಿದ್ದಾರೆ. ತಮಿಳುನಾಡಲ್ಲಿ ಆಡಳಿತ ನಡೆಸಿದ ಇವರು ಈಗ 21 ಸೀಟಿಗೆ ಸ್ಟಾಲಿನ್ ಕೈಹಿಡಿದು ಹೋಗುವ ದುಸ್ಥಿತಿ ತಲುಪಿದ್ದಾರೆ ಎಂದು ಲೇವಡಿ ಮಾಡಿದರು.
ರಾಜ್ಯ ಸರ್ಕಾರವು EV ತೆರಿಗೆ ವಿನಾಯಿತಿ ಹಿಂಪಡೆದಿರುವುದು ಆರ್ಥಿಕ ದಿವಾಳಿತನದ ಸೂಚಕ: ಪ್ರಲ್ಹಾದ್ ಜೋಶಿ ಟೀಕೆ
ದಾವಣಗೆರೆ ಸಿದ್ದೇಶ್ವರ್ ಅವರ ಕಾಲದಲ್ಲಿ ಸ್ಮಾರ್ಟ್ ಸಿಟಿ ಆಗಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಸಾಕಷ್ಟು ಅಭಿವೃದ್ಧಿಪಡಿಸಿದ್ದಾರೆ. ಕಾಂಗ್ರೆಸ್ ಏನು ಮಾಡಿದೆ? ದುಡ್ಡಿನ ಬಲದಲ್ಲಿ ಪ್ರಜಾಪ್ರಭುತ್ವ ನಿರ್ಮೂಲನ ಮಾಡಲು ಹೊರಟಿದ್ದಾರೆ. ದಾವಣಗೆರೆ ಜನತೆ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಈ ಹುಡುಗನನ್ನು ಸೋಲಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕರೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ಜಿಎಂ ಸಿದ್ದೇಶ್ವರ, ಶಾಸಕ ಶ್ರೀವತ್ಸ, ಮಾಜಿ ಶಾಸಕ ಅರುಣಕುಮಾರ ಪೂಜಾರ, ಎಚ್.ಪಿ.ರಾಜೇಶ್, ಬಂಗಾರು ಹನುಮಂತು ಮತ್ತಿತರ ಪ್ರಮುಖರಿದ್ದರು.