ಕನ್ನಡಿಗರ ಹೆಸರಲ್ಲಿ ರಾಜಕೀಯ ಮಾಡಿದ್ದು, ಮಾಡುತ್ತಿರುವುದು ಕಾಂಗ್ರೆಸ್: ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಬಿ.ವೈ. ವಿಜಯೇಂದ್ರ ಟೀಕೆ
ಕೇಂದ್ರ ಸರ್ಕಾರ ಜನರಿಗೆ ದಿನಕ್ಕೊಮ್ಮೆ ಬೆಲೆ ಏರಿಕೆಯ ಬರೆ ಎಳೆಯುತ್ತಿದೆ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಬಿ.ವೈ. ವಿಜಯೇಂದ್ರ ಅವರು ಪ್ರತಿಕ್ರಿಯಿಸಿದ್ದಾರೆ. ದೇಶದ ಸವಾಲಿನ ಸೂಕ್ಷ್ಮ ಸಂದರ್ಭಗಳಲ್ಲಿ ಇಡೀ ದೇಶ ಒಂದಾಗಿ, ಒಗ್ಗಟ್ಟಿನಿಂದ ಮುನ್ನಡೆಯಬೇಕು ಎನ್ನುವುದನ್ನು ಎಂದಿಗೂ ಅರ್ಥಮಾಡಿಕೊಳ್ಳದ ನಿಮ್ಮ ಪಕ್ಷದ ಬಗ್ಗೆ ಹೆಚ್ಚು ಏನು ಹೇಳುವುದು ಸಾಧ್ಯ? ಎಂದು ಕಿಡಿಕಾರಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ. -
ಬೆಂಗಳೂರು: ಮಾನ್ಯ ಪ್ರಿಯಾಂಕ್ ಖರ್ಗೆ (Priyank Kharge) ಅವರೇ, ಬೆಲೆ ಏರಿಕೆಯ ಬಗ್ಗೆ ನಿಮ್ಮ ಹೇಳಿಕೆಯಲ್ಲಿ ಕೂಡ ನಿಮ್ಮ ಜನಪರ ಕಾಳಜಿ ಬದಲಿಗೆ ನಿಮ್ಮ ಕೊಳಕು ರಾಜಕೀಯ ಮನಸ್ಥಿತಿಯೇ ಎದ್ದು ಕಾಣುತ್ತಿದೆ. ಜಾಗತಿಕ ಸವಾಲುಗಳು, ಸೂಕ್ಷ್ಮ ಸನ್ನಿವೇಶಗಳು ಗೊತ್ತಿದ್ದರೂ, ದೇಶದ ಬಗ್ಗೆ ಯೋಚಿಸದೆ ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕಾಂಗ್ರೆಸ್ ವರ್ತನೆ ಹೊಸದೇನಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಟೀಕಿಸಿದ್ದಾರೆ.
ಕೇಂದ್ರ ಸರ್ಕಾರ ಜನರಿಗೆ ದಿನಕ್ಕೊಮ್ಮೆ ಬೆಲೆ ಏರಿಕೆಯ ಬರೆ ಎಳೆಯುತ್ತಿದೆ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವಿಜಯೇಂದ್ರ ಅವರು ಪ್ರತಿಕ್ರಿಯಿಸಿದ್ದಾರೆ.
ತೈಲ ಬೆಲೆ ಏರಿಕೆ ಮಾಡುತ್ತಿರುವುದು ತೈಲ ಕಂಪನಿಗಳು, ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಏರಿಕೆ, ಅನ್ಯದೇಶಗಳಲ್ಲಿ ತೈಲಬೆಲೆಗಳ ಏರಿಕೆ ಪ್ರಮಾಣ ಇವೆಲ್ಲವೂ ಗೊತ್ತಿದ್ದರೂ ಜನರನ್ನು ದಾರಿ ತಪ್ಪಿಸಲು ನಿಮ್ಮ ರಾಜಕೀಯ ವ್ಯರ್ಥ ಪ್ರಯತ್ನವೇ ನಿಮ್ಮ ಮುತ್ಸದ್ದಿತನವೆಂದು ಪ್ರದರ್ಶಿಸಬೇಡಿ. ಜನರಿಗೆ ಸತ್ಯ ಗೊತ್ತಿದೆ.
ಪೆಟ್ರೋಲ್ ಬೆಲೆಯಲ್ಲಿ ಶೇ 32% VAT ಯಾರ ಸರ್ಕಾರ ವಸೂಲಿ ಮಾಡುತ್ತಿದೆ? ಹೇಗೂ ನಿಮ್ಮ ಮುಖ್ಯಮಂತ್ರಿಗಳ ಪ್ರಕಾರ ರಾಜ್ಯದ ಹಣಕಾಸು ಪರಿಸ್ಥಿತಿ ದೇಶಕ್ಕಿಂತಲೂ ಉತ್ತಮವಾಗಿದೆಯಲ್ಲವೇ? ಕೇಂದ್ರದ ಮೇಲೆ ಆರೋಪ ಮಾಡುವ ಮುನ್ನ ನಿಮ್ಮ ಸರ್ಕಾರ ವಾಟ್ ಯಾಕೆ ಕಡಿಮೆ ಮಾಡಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ಕಳೆದ 10 ವರ್ಷಗಳಲ್ಲಿ, ದೇಶದಲ್ಲಿ 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತಲಾಗಿದೆ; ಬಡವರಿಗಾಗಿ 5 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ. ದಶಕಗಳಿಂದ 'ಗರೀಬಿ ಹಠಾವೋ' ಎಂದು ಜನರನ್ನು ವಂಚಿಸಿಕೊಂಡೇ ಬಂದ ಕಾಂಗ್ರೆಸ್ಸಿಗರ ಸ್ಲೋಗನ್ ಸಾಧನೆಯನ್ನು ಜನರು ಚೆನ್ನಾಗಿ ಅರ್ಥಮಾಡಿಕೊಂಡದ್ದಕ್ಕೆ ಇವತ್ತು ಕಾಂಗ್ರೆಸ್ ಪರಿಸ್ಥಿತಿ ದೇಶದಲ್ಲಿ ಇಷ್ಟು ಹೀನಾಯ ಹಂತದಲ್ಲಿದೆ. ಈ ಬಗ್ಗೆ ಮಾತನಾಡುವ ಕಿಂಚಿತ್ ನೈತಿಕತೆ ಕೂಡ ನಿಮ್ಮಲ್ಲಿ ಉಳಿದಿಲ್ಲ. ಅಷ್ಟಕ್ಕೂ ಮಾನ್ಯ ಖರ್ಗೆಯವರೇ, ದೇಶದ ಚಿಂತೆ ಮಾಡುವ ಮುನ್ನ, ಮೊದಲು, ನಿಮ್ಮನ್ನು ನಂಬಿ ಅಧಿಕಾರ ನೀಡುತ್ತಲೇ ಬಂದಿರುವ ನಿಮ್ಮ ಜಿಲ್ಲೆಯನ್ನು, ಎಲ್ಲಾ ಮಾನದಂಡಗಳಲ್ಲೂ ಕೊನೆಯಲ್ಲಿರುವ ನಿಮ್ಮ ಜಿಲ್ಲೆಯತ್ತ, ರಾಜ್ಯದ ಅತ್ಯಂತ ಹಿಂದುಳಿದ ತಾಲೂಕುಗಳತ್ತ ಸ್ವಲ್ಪವಾದರೂ ಗಮನಹರಿಸಿ. ಆಮೇಲೆ ಇನ್ನೊಬ್ಬರ ಬಗ್ಗೆ ಮಾತನಾಡುವಿರಂತೆ!
32 ದೇಶಗಳ ಅತ್ಯುನ್ನತ ಗೌರವಗಳನ್ನು ಪಡೆದ ವಿಶ್ವನಾಯಕ ಆದರಣೀಯ ಪ್ರಧಾನಿ ಮೋದಿ ಜೀ ರವರ ಬಗ್ಗೆ ನಿಮ್ಮ ಅಸಹನೆ ಅರ್ಥವಾಗುತ್ತದೆ. ಇದು ಆಕಾಶ ನೋಡಿ ಮೇಲೆ ಉಗಿದಂತೆ! ಭಾರತ ಜಾಗತಿಕ ಸವಾಲುಗಳನ್ನು ಎದುರಿಸುತ್ತಿರುವಾಗ, ಪ್ರಾದೇಶಿಕ ವಾದವನ್ನು ಮಂಡಿಸಿದ್ದೀರಿ! ಕನ್ನಡಿಗರ ಕೊಡುಗೆ ಬಗ್ಗೆ ನಾವೂ ಹೆಮ್ಮೆಪಡುತ್ತೇವೆ. ಆದರೆ ನಿಮ್ಮ ಕುತರ್ಕದ ಬಗ್ಗೆ ನಮ್ಮ ಆಕ್ಷೇಪವಿದೆ. ರಾಜ್ಯದ ಜಿಡಿಪಿಗೆ ಶೇ 40ರಷ್ಟು ಕೊಡುಗೆ ನೀಡುವ ಬೆಂಗಳೂರಿನ ರಸ್ತೆಗಳು, ನೀರು, ಒಳಚರಂಡಿ, ಸಾರಿಗೆ ಯಾರ ಆಡಳಿತದಲ್ಲಿ ಹದಗೆಟ್ಟಿವೆ? ಯಾಕೆ? ಬೆಂಗಳೂರಿನಿಂದ ಅಷ್ಟು ಪಡೆಯುತ್ತಿರುವ ನಿಮ್ಮ ಸರ್ಕಾರ ಬೆಂಗಳೂರಿಗೆ ಎಷ್ಟು ತಿರುಗಿ ನೀಡಿದೆ?
ನಿಮ್ಮ UPA ಕಾಲದಲ್ಲಿ (2004-2014) ಕರ್ನಾಟಕಕ್ಕೆ ನಿಮ್ಮ ಸರ್ಕಾರ ನೀಡಿದ್ದು 81,795 ಕೋಟಿ ರೂ. NDA ಕಾಲ (2014-2024) ರಾಜ್ಯಕ್ಕೆ ನೀಡಿದ್ದು 2,85,452 ಕೋಟಿ ರೂ. 350% ಹೆಚ್ಚಳ ಮಾಡಿದ್ದು ಯಾವ ಸರ್ಕಾರ? ಕನ್ನಡಿಗರ ಹಿತ ಕಾಯ್ದದ್ದು ಮೋದಿ ಸರ್ಕಾರ, ಕನ್ನಡಿಗರ ಹೆಸರಿನಲ್ಲಿ ರಾಜಕೀಯ ಮಾಡಿದ್ದು, ಮಾಡುತ್ತಿರುವುದು ಕಾಂಗ್ರೆಸ್ ಎಂದು ಆರೋಪಿಸಿದ್ದಾರೆ.
ಕಾಕ್ರೋಚ್ ಜನತಾ ಪಾರ್ಟಿಯಿಂದ ವಿಚಲಿತ ಆಗಿದ್ದು ಕಾಂಗ್ರೆಸ್ ಪಕ್ಷವೇ: ಜೋಶಿ ತಿರುಗೇಟು
ದೇಶದ ಸವಾಲಿನ ಸೂಕ್ಷ್ಮ ಸಂದರ್ಭಗಳಲ್ಲಿ ಇಡೀ ದೇಶ ಒಂದಾಗಿ, ಒಗ್ಗಟ್ಟಿನಿಂದ ಮುನ್ನಡೆಯಬೇಕು ಎನ್ನುವುದನ್ನು ಎಂದಿಗೂ ಅರ್ಥಮಾಡಿಕೊಳ್ಳದ ನಿಮ್ಮ ಪಕ್ಷದ ಬಗ್ಗೆ ಹೆಚ್ಚು ಏನು ಹೇಳುವುದು ಸಾಧ್ಯ? ಕಾಂಗ್ರೆಸ್ ಎಂದಿಗೂ ತನ್ನ ಕೊಳಕು ರಾಜಕೀಯ ಬಿಟ್ಟು ಮೇಲೆ ಎದ್ದು ಬಂದಿಲ್ಲ! ಯಾವ ವಾಸ್ತವವನ್ನೂ ಪರಿಗಣಿಸದೆ ಕೇವಲ ನಿಮ್ಮ ರಾಜಕೀಯದ ಮೂಗಿನ ನೇರಕ್ಕೆ ಮಾತನಾಡುವ ಕಾಂಗ್ರೆಸ್ಸಿಗರಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ತಿಳಿಸಿದ್ದಾರೆ.