50 ಮಿಲಿಯನ್ ಸಸಿಗಳ ನೆಡುವ ಅಭಿಯಾನಕ್ಕೆ ಚಿಕ್ಕಬಳ್ಳಾಪುರವನ್ನು ಪೈಲಟ್ ಜಿಲ್ಲೆಯಾಗಿ ಆಯ್ಕೆ ಮಾಡಿರುವ ಬಗ್ಗೆ ಘೋಷಣೆ
ಅಮೃತವನ ನಿರ್ಮಾಣದಲ್ಲಿ ಕುಟುಂಬಕ್ಕೆ ಒಂದು ಸಸಿ, ಶಾಲಾ ಕಾಲೇಜು ಆವರಣದಲ್ಲಿ ಒಂದು ಅಮೃತ ವನ ನಿರ್ಮಾಣ ಮಾಡಬೇಕು. ಇದು ಸಾಕ್ಷಾತ್ ಈಶ್ವರ ಕಾರ್ಯವೆಂದೇ ಭಾವಿಸಿ.ಒಂದು ಕುಟುಂಬ ಒಂದು ಮರ ಸಂಕಲ್ಪ ತೊಡಲೇಬೇಕು. ಶಾಲಾ ಶಿಕ್ಷಕರು 5 ಗಿಡ ಉಚಿತ ನೀಡಬೇಕು. ಪ್ರತಿ ಸರ್ಕಾರಿ ನೌಕರರು ಕನಿಷ್ಠ 5 ಗಿಡ ನೀಡಲಿ. ನಾನು ಕನಿಷ್ಠ 100 ಗಿಡ ದಾನ ಮಾಡುತ್ತೇನೆ. ಜಿಲ್ಲಾ ನ್ಯಾಯಾಧೀಶರು ಕೂಡ ಶಕ್ತಿ ಮೀರಿ ದಾನ ಮಾಡಿರಿ.
೫ ಲಕ್ಷ ಸಸಿ ನೆಡುವ ಮೂಲಕ ಜಿಲ್ಲೆಯಲ್ಲಿ ಅಮೃತವನ ನಿರ್ಮಿಸೋಣ ಆರೋಗ್ಯವಂತ ಭವಿಷ್ಯ ನೀಡೋಣ ಎಂದು ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿ ಹಂಚಾಟೆ ಸಂಜೀವ್‌ಕುಮಾರ್ ಕರೆ ನೀಡಿದರು. -
ಚಿಕ್ಕಬಳ್ಳಾಪುರ: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಕರ್ನಾಟಕ ದಾದ್ಯಂತ 50 ಮಿಲಿಯನ್ ಸಸಿಗಳನ್ನು ನೆಡುವ ಮಹತ್ವದ ಅಭಿಯಾನ ಹಮ್ಮಿಕೊಂಡಿದೆ. ಜಿಲ್ಲೆಯಲ್ಲಿಯೂ ಕೂಡ 5 ಲಕ್ಷ ಸಸಿ ನೆಡುವ ಮೂಲಕ ಅಮೃತವನ ನಿರ್ಮಿಸೋಣ ಎಂದು ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶರಾದ ಹಂಚಾಟೆ ಸಂಜೀವ ಕುಮಾರ್ ಕರೆ ನೀಡಿದರು.
ನಗರದ ಜಿಲ್ಲಾ ನ್ಯಾಯಾಲಯದ 1ನೇ ಮಹಡಿಯ ಸಭಾಂಗಣದಲ್ಲಿ ಶನಿವಾರ ಮುಂಬ ರುವ ಪರಿಸರ ದಿನಾಚರಣೆ ಅಂಗವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ 5 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡುವ ಸಂಬಂಧ ಏರ್ಪಡಿಸಿದ್ದ ಅಮೃತವನ ನಿರ್ಮಾಣದ ಸುದ್ದಿಗೋಷ್ಠಿ ಯನ್ನು ಉದ್ದೇಶಿಸಿ ಮಾತನಾಡಿದರು.
ಮಳೆಗಾಲದ ಪೂರ್ಣಾವಧಿ ಜಿಲ್ಲೆಯಲ್ಲಿ 5 ಲಕ್ಷ ಸಸಿ ನೆಡುವ ಸಂಕಲ್ಪ ಮಾಡಲಾಗಿದೆ. ಇದು ಅಧಿಕಾರಿಗಳ ಮಟ್ಟದ ಕಾರ್ಯಕ್ರಮ ಮಾತ್ರವಾಗಿರದೆ ಸಾರ್ವಜನಿಕರು ಮತ್ತು, ಸಮಾಜದ ಸಹಭಾಗಿತ್ವದ ಕಾರ್ಯಕ್ರಮವಾಗಬೇಕು. ಈ ಸಂಕಲ್ಪಕ್ಕೆ ಜಿಲ್ಲೆಯ ಸಜ್ಜನ ನಾಗರೀಕರ ಸಹಕಾರ ಅಗತ್ಯ ಎಂದರು.
ಇದನ್ನೂ ಓದಿ: Chikkaballapur News: ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ಅಶೋಕ್ ಆಯ್ಕೆ
ಅಮೃತವನ ನಿರ್ಮಾಣದಲ್ಲಿ ಕುಟುಂಬಕ್ಕೆ ಒಂದು ಸಸಿ, ಶಾಲಾ ಕಾಲೇಜು ಆವರಣದಲ್ಲಿ ಒಂದು ಅಮೃತ ವನ ನಿರ್ಮಾಣ ಮಾಡಬೇಕು. ಇದು ಸಾಕ್ಷಾತ್ ಈಶ್ವರ ಕಾರ್ಯವೆಂದೇ ಭಾವಿಸಿ.ಒಂದು ಕುಟುಂಬ ಒಂದು ಮರ ಸಂಕಲ್ಪ ತೊಡಲೇಬೇಕು. ಶಾಲಾ ಶಿಕ್ಷಕರು 5 ಗಿಡ ಉಚಿತ ನೀಡಬೇಕು. ಪ್ರತಿ ಸರ್ಕಾರಿ ನೌಕರರು ಕನಿಷ್ಠ 5 ಗಿಡ ನೀಡಲಿ. ನಾನು ಕನಿಷ್ಠ 100 ಗಿಡ ದಾನ ಮಾಡುತ್ತೇನೆ. ಜಿಲ್ಲಾ ನ್ಯಾಯಾಧೀಶರು ಕೂಡ ಶಕ್ತಿ ಮೀರಿ ದಾನ ಮಾಡಿರಿ. ಹಬ್ಬದ ರೀತಿಯಲ್ಲಿ ವನಮಹೋತ್ಸವ ನಡೆಯಲಿ. ಈ ಭೂಮಿ ಪರಿಸರ ಮುಂದಿನ ಪೀಳಿಗೆ ಗೆ ಸುರಕ್ಷಿತವಾಗಿ ನೀಡಬೇಕಿದೆ ಎಂದು ಮನವಿ ಮಾಡಿದರು.
ಜಪಾನ್ ಮಾದರಿ ಅರಣ್ಯ!!
ಸಸಿ ನೆಡುವ ಅಭಿಯಾನವನ್ನು ಜಿಲ್ಲೆಯಲ್ಲಿ ಪೈಲಟ್ ಯೋಜನೆಯಾಗಿ ತೆಗೆದುಕೊಳ್ಳ ಲಾಗಿದೆ ಎಂದ ಅವರು ಜಪಾನ್ ಮಾದರಿಯಲ್ಲಿ ಇಲ್ಲಿ ಮಿಯಾವಾಕಿ ವಿಧಾನದಲ್ಲಿ 5 ಲಕ್ಷ ಸಸಿಗಳನ್ನು ನೆಡುವ ಯೋಜನೆ ಕೈಗೊಳ್ಳಲಾಗಿದೆ.
ಮಳೆಗಾಲ ಪೂರ್ಣ ನಡೆಯಲಿದೆ !!
ಭೂಮಿ ಮೇಲೆ ಮನುಷ್ಯ ಮಾತ್ರ ಅಲ್ಲ, 84 ಕೋಟಿ ಜೀವರಾಶಿಗೂ ಬದುಕುವ ಹಕ್ಕಿದೆ. ಅಮೃತವನದ ಮೂಲಕ ಜೀವ ವೈವಿಧ್ಯತೆ ಕಾಪಾಡಲು ನೆರವಾಗೋಣ. ಒಂದು ಸಸಿ ನೆಟ್ಟು 3 ವರ್ಷ ಪೋಷಣೆ ಮಾಡಲಿ 200ರೂ. ತಗುಲಿದೆ. ಇದು ಹಣದ ವಿಚಾರವಲ್ಲ ಪರಿಸರ ಸಮತೋಲನದ ಕೆಲಸವಾಗಿದ್ದು ಜಿಲ್ಲೆಯಲ್ಲಿ ಮಳೆಗಾಲ ಮುಗಿಯುವವರೆಗೆ 5 ಲಕ್ಷ ಸಸಿ ನೆಡುವ ಈ ಸಂಕಲ್ಪ ಮುಂದುವರೆಯಲಿದೆ. ಉತ್ತರ ಪ್ರದೇಶದಲ್ಲಿ ಕರ್ನಾಟಕ ಮೂಲದ ಐಎಎಸ್ ಅಧಿಕಾರಿ ಏಕ್ ದಿನ್ ಏಕ್ ಲಾಕ್ ಕಾರ್ಯಕ್ರಮ ನಡೆಸಿ ಹೆಸರಾದರು. ಅವರ ಪ್ರೇರಣೆಯಿಂದ ಗುಲ್ಬರ್ಗ ಮತ್ತು ತುಮಕೂರಿನಲ್ಲಿ ಕೂಡ ಯಶಸ್ವಿಯಾಗಿ ಮಾಡಲಾಗಿದೆ. ಜಿಲ್ಲೆಯಲ್ಲಿಯೂ ಈ ಕಾರ್ಯ ಯಶಸ್ವಿಯಾಗುವ ವಿಶ್ವಾಸವಿದೆ ಎಂದರು.
ಅಂತರ್ಜಲ ಕುಸಿತ!!
ಜಿಲ್ಲೆಯಲ್ಲಿ ಅಂತರ್ಜಲ ಪಾತಾಳ ಮುಟ್ಟಿರುವುದು ಆಘಾತಕಾರಿ ವಿಚಾರ. ನೀರನ್ನು ಕೃತಕ ವಾಗಿ ಸೃಷ್ಟಿಸಲಾಗದ ಕಾರಣ ಮಿತಬಳಕೆ ಬಗ್ಗೆ ಎಚ್ಚರ ವಹಿಸುವುದು ಅಗತ್ಯ. ಸಸಿ ನೆಡುವ ಕಾರ್ಯಕ್ರಮವು ಸಂಘಟಿತ ಪ್ರಯತ್ನವಾಗಿದ್ದು ಇದೊಂದು ಪವಿತ್ರ ಕೈಂಕರ್ಯವಾದ ಕಾರಣ ಅವರಿವರೆನ್ನದೆ ಎಲ್ಲರೂ ಕೈಜೋಡಿಸಿ ಎಂದು ಮನವಿ ಮಾಡಿದರು.
ಬರಪೀಡಿತ ಜಿಲ್ಲೆಯಾದ ಕಾರಣ ಹೆಚ್ಚಿನ ಅರಣ್ಯೀಕರಣ ನಿರ್ಮಾಣದ ಅಗತ್ಯ ತುರ್ತಾಗಿದೆ. ಹೀಗಾಗಿ ಜಿಲ್ಲೆಯು ಗಂಭೀರ ಪರಿಸರ ಒತ್ತಡವನ್ನು ಎದುರಿಸುತ್ತಿದ್ದು, ಅಂತರ್ಜಲ ಮಟ್ಟವು ದಿನೇ ದಿನೇ ಕುಸಿದು ಪಾತಾಳ ಮುಟ್ಟಿದೆ. 2023ರ ಫೆಬ್ರವರಿಯಲ್ಲಿ ಜಿಲ್ಲೆಯ ಸರಾಸರಿ ಅಂತರ್ಜಲ ಮಟ್ಟವು ಭೂಮಿಯ ಮಟ್ಟದಿಂದ 17.52 ಮೀಟರ್ ಆಳದಲ್ಲಿತ್ತು. ಆದರೆ 2024ರ ಫೆಬ್ರವರಿಯ ವೇಳೆಗೆ ಅದು 35.66 ಮೀಟರ್ ಆಳಕ್ಕೆ ಕುಸಿದಿದ್ದು, ಸರಾಸರಿ 18.14 ಮೀಟರ್ ಕುಸಿತ ದಾಖಲಾಗಿರುವುದು ಆಶ್ಚರ್ಯವನ್ನುಂಟು ಮಾಡಿದೆ ಎಂದರು.
ಸಂವಿಧಾನದತ್ತವಾಗಿ ಬಂದಿರುವ ಹಕ್ಕುಗಳನ್ನು ಎಲ್ಲರೂ ಚಲಾಯಿಸುತ್ತೇವೆ. ಆದರೆ ಕರ್ತವ್ಯಗಳನ್ನು ಮರೆಯುತಿದ್ದೇವೆ.ನಮ್ಮ ಸಂವಿಧಾನವು ಪರಿಸರ ರಕ್ಷಣೆಯನ್ನು ವಿಧಿ 48ಎ, 51ಎಜಿರಲ್ಲಿ ಸ್ಪಷ್ಟವಾಗಿ ನಾಗರಿಕರ ಕರ್ತವ್ಯಗಳಲ್ಲಿ ತಿಳಿಸಿದೆ. ಈ ಬಗ್ಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಒತ್ತು ನೀಡಿ ಹೇಳಿದ್ದಾರೆ.
ನಮ್ಮ ಇಂದಿನ ಮತ್ತು ಮುಂದಿನ ಪೀಳಿಗೆಯ ಉಳಿವಿಗಾಗಿ ಪರಿಸರ ಸಂರಕ್ಷಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಗಿಡಗಳನ್ನು ನೆಟ್ಟು ಪೋಷಿಸುವ ಅಗತ್ಯತೆ ನಮ್ಮ ಮೇಲಿದೆ. ಇದರ ಭಾಗವಾಗಿ ಚಿಕ್ಕಬಳ್ಳಾಪುರ ನ್ಯಾಯಾಂಗ ಮತ್ತು ಜಿಲ್ಲಾ ಡಳಿತದ ಆಡಳಿತ ವರ್ಗಗಳು 5 ಲಕ್ಷ ಸಸಿಗಳನ್ನು ನೆಟ್ಟು ಬೆಳೆಸುವ ಕಾರ್ಯಕ್ಕೆ ಮುಂದಾಗಿ ರುವುದು ಶ್ಲಾಘನೀಯ ವಿಚಾರವಾಗಿದೆ ಎಂದು ತಿಳಿಸಿದರು.
ಗ್ರೀನ್ ರಿಂಗ್ ಕಾರಿಡಾರ್!!
ಚಿಕ್ಕಬಳ್ಳಾಪುರವು ಗ್ರೀನ್ ರಿಂಗ್ ಬೆಂಗಳೂರು ಕಾರಿಡಾರ್ ವ್ಯಾಪ್ತಿಯಲ್ಲಿ ಬರುತ್ತದೆ. ಆದ್ದರಿಂದ ಈ ಕಾರಿಡಾರ್ ವಿಧಾನಸೌಧದಿಂದ ಸುಮಾರು 50 ಕಿ.ಮೀ ವೈಮಾನಿಕ ಅಂತರ ದೊಳಗಿನ ಪ್ರದೇಶಗಳನ್ನು ಒಳಗೊಂಡಿದೆ. ಈ ಗ್ರೀನ್ ರಿಂಗ್ ಕಾರಿಡಾರ್ ಯೋಜನೆಯಡಿ, ವಿಸ್ತರಿಸುತ್ತಿರುವ ಬೆಂಗಳೂರು ಪ್ರದೇಶದ ಸುತ್ತಮುತ್ತ ಅರಣ್ಯೀಕರಣದ ಮೂಲಕ ಜೀವ ವೈವಿಧ್ಯತೆಯನ್ನು ವೃದ್ಧಿಸುವುದು, ತನ್ಮೂಲಕ ಅಂತರ್ಜಲ ಮರುಪೂರಣವನ್ನು ಹೆಚ್ಚಿಸಲು ಮುತುವರ್ಜಿ ವಹಿಸುವುದಾಗಿದೆ. ಇದು ಯಶಸ್ವಿಯಾದಲ್ಲಿ ಧೂಳು ಮತ್ತು ವಾಯುಮಾಲಿನ್ಯವನ್ನು ಕಡಿಮೆ ಮಾಡಲು ರಾಜ್ಯದಲ್ಲಿ 5 ಕೋಟಿ ಸಸಿಗಳನ್ನು ನೆಡುವ ಉದ್ದೇಶವನ್ನು ಹೊಂದಲಾಗಿದೆ. ಇದನ್ನು ಸಾಧ್ಯವಾಗಿಸುವುದು ನಾಗರೀಕರೆಲ್ಲರ ಕರ್ತವ್ಯ ವಾಗಬೇಕಿದೆ ಎಂದು ತಿಳಿಸಿದರು.
ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಟಿ.ಪಿ.ರಾಮಲಿಂಗೇಗೌಡ ಅವರು ಮಾತನಾಡಿ, ರಾಜ್ಯದಲ್ಲಿ 5 ಕೋಟಿ ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆ ಮಾಡುವ ಜವಾಬ್ದಾರಿಯ ಕಾರ್ಯಕ್ಕಾಗಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಧರೆ ಫೌಂಡೇಶನ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಆ ಮೂಲಕ ಪರಿಸರ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ತೋರುತ್ತಿದೆ. ಇದರ ಭಾಗವಾಗಿ ಈಗಾಗಲೇ ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಇಂದಿರಾ ಗಾಂಧಿ ವಸತಿ ಶಾಲೆಯ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಕಳೆದ ಏಪ್ರಿಲ್ ಮಾಹೆಯಲ್ಲಿ ಚಾಲನೆ ದೊರಕಿದೆ. ಅದರ ಮುಂದುವರೆದ ಭಾಗವಾಗಿ ಸರ್.ಎಂ.ವಿಶ್ವೇಶ್ವರಯ್ಯ ನವರ ಸ್ಮಾರಕದ ಬಳಿ 5 ಗುಂಟೆ ಜಮೀನಿನಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದರು.
ಈ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಜಿಲ್ಲೆಯ ವಿವಿಧೆಡೆ ಅನುಷ್ಠಾನವಾಗಿ ಒಟ್ಟು 5 ಲಕ್ಷ ಗಿಡಗಳನ್ನು ನೆಟ್ಟು ಬೆಳೆಸುವ ಯೋಜಿತ ಗುರಿಯನ್ನು ಹೊಂದಲಾಗಿದೆ. ಕೇವಲ ಗಿಡಗಳನ್ನು ನೆಟ್ಟು ಹೋಗುವುದರಿಂದ ಗಿಡ ಬೆಳೆಯುವುದಿಲ್ಲ, ಅವು ಬೆಳೆಯುವವರೆಗೆ ಕನಿಷ್ಠ 3 ವರ್ಷ ಸಂರಕ್ಷಣೆ ಮಾಡುವ ಅಗತ್ಯವಿದೆ. ಜಿಲ್ಲಾಡಳಿತ, ಅರಣ್ಯ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆ ಇವರ ಸಹಕಾರ ಪಡೆದು ಜಿಲ್ಲೆಯಲ್ಲಿ 5 ಲಕ್ಷ ಸಸಿಗಳನ್ನು ನೆಟ್ಟು ಬೆಳೆಸಲಾಗುವುದು. ಆ ಮೂಲಕ ಅಂತರ್ಜಲ ವೃದ್ಧಿಸಿ ಪರಿಸರ ಸಂರಕ್ಷಣೆಗೆ ಕೊಡುಗೆ ನೀಡಲಾಗುವುದು. ಈ ಕಾರ್ಯಕ್ಕೆ ಜಿಲ್ಲೆಯ ಸರ್ಕಾರೇತರ ಸಂಸ್ಥೆಗಳು, ಸಮಸ್ತ ಸಾರ್ವಜನಿಕರು, ಸಹಕಾರ ನೀಡಬೇಕು. ಗಿಡ ಬೆಳೆಸುವ ಜವಬ್ದಾರಿಯನ್ನು ಸಾರ್ವಜನಿಕರು ತೆಗೆದುಕೊಳ್ಳಬೇಕು ಎಂದು ಕರೆ ನೀಡಿದರು.
ಜಿಲ್ಲಾಧಿಕಾರಿ ಜಿ.ಪ್ರಭು ಮಾತನಾಡಿ, ಈ ವರ್ಷ 5 ಲಕ್ಷ ಗಿಡಗಳನ್ನು ಮುಂಗಾರು ಮಳೆಯ ಅವಧಿಯಲ್ಲಿ ನೆಡಲು ಜಿಲ್ಲಾಡಳಿತ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ. ಸಾರ್ವಜನಿಕ ಆಸ್ತಿಗಳಾದ ಸರ್ಕಾರಿ ಶಾಲಾ ಕಾಲೇಜುಗಳ ಆವರಣ, ಸರ್ಕಾರಿ ಆಸ್ಪತ್ರೆಗಳ ಆವರಣ, ಮುಜರಾಯಿ ಇಲಾಖೆಯ ಆಸ್ತಿಗಳು, ದೇವಸ್ಥಾನಗಳ ಆವರಣ, ಸ್ಮಶಾನಗಳು, ಕೆರೆಗಳ ಸುತ್ತಮುತ್ತ, ತ್ಯಾಜ್ಯ ವಿಲೇವಾರಿ ಘಟಕಗಳ ಆವರಣ ಸೇರಿದಂತೆ ಇನ್ನಿತರ ಸರ್ಕಾರಿ ಆಸ್ತಿಗಳ ವ್ಯಾಪ್ತಿಯಲ್ಲಿ ಗಿಡ ನೆಡಲು ಯೋಜಿಸಲಾಗಿದೆ, ಜಿಲ್ಲಾಡಳಿತದ ಕಾರ್ಯಕ್ರಮದ ಜೊತೆಗೆ ಕಾನೂನು ಸೇವಾ ಪ್ರಾಧಿಕಾರದ ಜೊತೆಗೂಡಿ ಹೆಚ್ಚುವರಿಯಾಗಿ 5 ಲಕ್ಷ ಸಸಿಗಳನ್ನು ಬೆಳೆಸುವ ಅರ್ಥಪೂರ್ಣ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಾಗುವುದು. ಜಿಲ್ಲೆಯಲ್ಲಿ ಈ ವರ್ಷ ನೆಡಲಿರುವ 10 ಲಕ್ಷ ಗಿಡಗಳ ಪೈಕಿ ಶೇ.80ರಷ್ಟು ಗಿಡಗಳನ್ನು ಉಳಿಸಿ ಬೆಳೆಸಲು ಎಲ್ಲಾ ನೆಟ್ಟ ಸಸಿಗಳ ಮೌಲ್ಯಮಾಪನ ಮಾಡುವ ಮೂಲಕ ಈ ಮೌಲ್ಯಯುತವಾದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಗುವುದು ಎಂದರು.
ಈ ವೇಳೆ 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಕಾಂತರಾಜ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಶಿಲ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ,ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಭಿಲಾಷ್, ಧರೆ ಫೌಂಡೇಶನ್ ಪ್ರತಿನಿಧಿ ವೃಷಾಂಕ್ ಬಟ್, ಬಾರ್ ಕೌನ್ಸಿಲ್ ನ ಸದಸ್ಯ ಹರೀಶ್ ಕುಮಾರ್, ವಕೀಲರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.