ರಾಜ್ಯದಲ್ಲಿ ಅಕ್ರಮ ವಲಸಿಗರ ರಕ್ಷಣೆಗೆ ಹುನ್ನಾರ; ಶಾಶ್ವತ ನಿವಾಸಿ ಪ್ರಮಾಣಪತ್ರಕ್ಕೆ ಶೋಭಾ ಕರಂದ್ಲಾಜೆ ಆಕ್ಷೇಪ
Shobha Karandlaje: ದೇಶದ ನಾಗರಿಕರಿಗೆ ಪೌರತ್ವ ನೀಡುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ ಮಾತ್ರ. ವಿದೇಶಿಗ ಯಾರು ಎಂಬ ಪ್ರಮಾಣ ಪತ್ರ ಕೊಡುವ, ವಲಸೆ ಪ್ರಮಾಣಪತ್ರ ನೀಡುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ. ಆದರೆ ರಾಜ್ಯ ಸರ್ಕಾರ ಈಗ ನಿವಾಸಿ ಪ್ರಮಾಣ ಪತ್ರ ನೀಡುತ್ತಿರುವುದು ಏಕೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. -
ಬೆಂಗಳೂರು, ಜು.10: ಕರ್ನಾಟಕ ಸರ್ಕಾರವು ಶಾಶ್ವತ ನಿವಾಸಿ ಪ್ರಮಾಣಪತ್ರ (ಪಿಆರ್‌ಸಿ) ನೀಡಲು ಮುಂದಾಗಿರುವ ಉದ್ದೇಶ ಏನು ಮತ್ತು ಇದರ ಹಿಂದಿರುವ ಷಡ್ಯಂತ್ರ ಏನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಆಗ್ರಹಿಸಿದ್ದಾರೆ. ನಗರದ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಹೊಸ ಹೊಸ ಕಾನೂನುಗಳನ್ನು ಜಾರಿಗೆ ತರುತ್ತಿದೆ. ಎಸ್‍ಐಆರ್ ಆರಂಭವಾದ ನಂತರ ಶಾಶ್ವತ ನಿವಾಸಿ ಪ್ರಮಾಣಪತ್ರ ನೀಡಲು ಸರ್ಕಾರ ಮುಂದಾಗಿದೆ. ಇದಕ್ಕೆ ಮಾರ್ಗಸೂಚಿಗಳನ್ನು ಎರಡು ದಿನದ ಹಿಂದೆ ಬಿಡುಗಡೆ ಮಾಡಲಾಗಿದೆ ಎಂದು ಆಕ್ಷೇಪಿಸಿದರು.
ನಮ್ಮ ಸಂವಿಧಾನದ ಆರ್ಟಿಕಲ್ 14 ರ ಅಡಿಯಲ್ಲಿ ಭಾರತದಲ್ಲಿ 'ಒಂದು ದೇಶ ಒಂದು ಪೌರತ್ವ' ನಿಯಮ ಇದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಶಾಶ್ವತ ನಿವಾಸಿ ಪ್ರಮಾಣಪತ್ರ ವಿತರಿಸಲು ಸರ್ಕಾರ ಮುಂದಾಗಿದೆ. ದೇಶದ ನಾಗರಿಕರಿಗೆ ಪೌರತ್ವ ನೀಡುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ ಮಾತ್ರ. ವಿದೇಶಿಗ ಯಾರು ಎಂಬ ಪ್ರಮಾಣ ಪತ್ರ ಕೊಡುವ, ವಲಸೆ ಪ್ರಮಾಣಪತ್ರ ನೀಡುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ. ಆದರೆ ರಾಜ್ಯ ಸರ್ಕಾರ ಈಗ ನಿವಾಸಿ ಪ್ರಮಾಣ ಪತ್ರ ನೀಡುತ್ತಿರುವುದು ಏಕೆ ಎಂದು ಟೀಕಿಸಿದರು.
ಅಕ್ರಮ ವಲಸಿಗರನ್ನು ಮತಪಟ್ಟಿಗೆ ಸೇರಿಸಲು ಸಂಚು
ಎಸ್‍ಐಆರ್ ಪ್ರಕ್ರಿಯೆಯನ್ನು ಹಳ್ಳ ಹಿಡಿಸಿದ ನಂತರ ಅಕ್ರಮ ವಲಸಿರನ್ನು ರಕ್ಷಿಸಲು, ಸೌಲಭ್ಯ ನೀಡಲು, ಅವರನ್ನು ಮತಪಟ್ಟಿಗೆ ಸೇರಿಸಲು ಈ ಶಾಶ್ವತ ನಿವಾಸಿ ಪ್ರಮಾಣಪತ್ರ ಆಲೋಚನೆಯನ್ನು ಸರ್ಕಾರ ಮಾಡಿದೆ ಎಂದು ಅವರು ಆರೋಪಿಸಿದರು. ಎರಡು ದಿನದ ಹಿಂದೆ ಅಧಿಸೂಚನೆ ಹೊರಬಿದ್ದಿದೆ. ಈ ಅಧಿಸೂಚನೆ ಸಂವಿಧಾನ ವಿರೋಧಿಯಾಗಿದೆ. ಕಾನೂನುಬಾಹಿರವಾಗಿದ್ದು, ಆಂತರಿಕ ಭದ್ರತೆ ದೊಡ್ಡ ಸವಾಲಾಗಿದೆ ಎಂದರು. ಅಕ್ರಮ ವಲಸಿಗರನ್ನು ಕಾನೂನುಬದ್ಧಗೊಳಿಸಲು ಪಿಆರ್‌ಸಿ ನೀಡಲಾಗುತ್ತದೆ. ಕಂದಾಯ ಅಧಿಕಾರಿ ಸಹ ಪಿಎರ್‌ಸಿ ನೀಡಲು ಅವಕಾಶ ಇದೆ ಎಂದು ಆರೋಪಿಸಿದರು.
ವಿದೇಶಾಂಗ ಸಚಿವಾಲಯದ ಅವಲೋಕನ ಇಲ್ಲ
ಪಿಆರ್‌ಸಿ ನೀಡಲು ವಿದೇಶಾಂಗ ಸಚಿವಾಲಯದ ಅವಲೋಕನದ ಅವಶ್ಯಕತೆ ಇದೆ. ಆದರೆ ಅದೆಲ್ಲ ಇಲ್ಲದೆ ಹೋದಲ್ಲಿ ಬಂದಲ್ಲಿ ಸಂವಿಧಾನದ ಪ್ರತಿ ಹಿಡಿಯುವ ಡಿ.ಕೆ.ಶಿವಕುಮಾರ್ ಮತ್ತು ರಾಹುಲ್ ಗಾಂಧಿ ಅವರು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಓಟ್ ಬ್ಯಾಂಕ್ ರಾಜಕಾರಣ
ರಾಜ್ಯ ಸರ್ಕಾರ ಈ ರೀತಿ ಪ್ರಮಾಣ ಪತ್ರ ಕೊಡುವುದರ ಹಿಂದಿನ ಉದ್ದೇಶ ಓಟ್ ಬ್ಯಾಂಕ್ ರಾಜಕಾರಣ. ಎಸ್‍ಐಆರ್ ನಡೆಯವ ವೇಳೆ ಪಿಆರ್‌ಸಿ ನೀಡಲು ಮುಂದಾಗಿರುವುದು ಏಕೆ. ಇಷ್ಟು ವರ್ಷಗಳಿಂದ ಬಾಂಗ್ಲಾದೇಶದಿಂದ ಬಂದವರಿಗೆ ಈಗ ರಾಜ್ಯದ ನಾಗರಿಕರನ್ನು ಮಾಡಲು ಹೊರಟಿದ್ದೀರಿ. ಪಿಆರ್‌ಸಿ ಪಡೆದವರು ಸರ್ಕಾರದ ಎಲ್ಲಾ ಸೌಲಭ್ಯ ಪಡೆಯಲಿದ್ದಾರೆ. ಮತ ಪಡೆಯಲು ದೇಶದ ಭದ್ರತೆಗೆ ಧಕ್ಕೆ ತರುವ ಕೆಲಸವನ್ನು ಡಿ.ಕೆ. ಶಿವಕುಮಾರ್ ಅವರ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ಹಿಂದಿನ ಸಿಎಂ ಸಿದ್ದರಾಮಯ್ಯ ಅವರೂ ಇಂತಹ ಧೈರ್ಯ ಮಾಡಿರಲಿಲ್ಲ. ಈಗ ಶಿವಕುಮಾರ್ ಅವರು, ಅಹಂಕಾರದಿಂದ ನಾನು ಏನು ಮಾಡಿದರೂ ನಡೆಯುತ್ತದೆ ಎಂಬ ರೀತಿ ಮಾಡುತ್ತಿದ್ದಾರೆ. ದೇಶದ ಭದ್ರತೆ ಆತಂಕ ತರುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಬೇರೆ ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಅಕ್ರಮ ಬಾಂಗ್ಲಾ ವಲಸಿಗರು ಬಂದಿರುವುದನ್ನು ನಾವು ಪತ್ತೆ ಮಾಡಿದ್ದೇವೆ. ಈ ಸರ್ಕಾರಕ್ಕೆ ನಮ್ಮ ರಾಜ್ಯದ ನೈಜ ನಿವಾಸಿಗಳ ಹಿತ ಬೇಕಿಲ್ಲ. ಅಲ್ಪಸಂಖ್ಯಾತ ಮತದಾರರನ್ನು ಕಾನೂನುಬಾಹಿರವಾಗಿ ಮತಪಟ್ಟಿಗೆ ಸೇರಿಸುವ ಕೆಲಸವೂ ನಡೆಯುತ್ತಿದೆ. ಇದನ್ನೇ ವೋಟ್ ಚೋರಿ. ಕಾಂಗ್ರೆಸ್ ಅಂದರೆ ಮತಗಳ್ಳತನ ಆಗಿದೆ. ಆದ್ದರಿಂದ ಇದಕ್ಕೆ ಬಿಜೆಪಿ ವಿರೋಧ ಮಾಡಿದೆ ಎಂದು ಹೇಳಿದರು.
ಗೃಹ ಸಚಿವರಿಗೆ ಪತ್ರ
ನಿವಾಸಿ ಪ್ರಮಾಣ ಪತ್ರದ ವಿರುದ್ಧ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯಲಾಗಿದೆ. ಅಕ್ರಮ ವಲಸಿಗರಿಂದ ರಾಜ್ಯದ ಜನರ ಮೇಲೆ, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆಯೂ ನಾವು ಕೇಳಿದ್ದೇವೆ. ಇಷ್ಟಾದರೂ ಎಚ್ಚೆತ್ತುಕೊಂಡು ಸರ್ಕಾರ ಕಾನೂನು ಉಲ್ಲಂಘಿಸಿ ಪಿಆರ್‌ಸಿ ನೀಡುವುದನ್ನು ಸ್ಥಗಿತಗೊಳಿಸಬೇಕು. ಕಾನೂನು ಪ್ರಕಾರ ಏನು ಮುಂದೆ ಹೋರಾಟ ಮಾಡಬಹುದು ಎಂಬುದನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಮಧುಸೂದನ್ ನಾಯಕ್ ಸಮೀಕ್ಷಾ ವರದಿ ಅಧಿವೇಶನದಲ್ಲಿ ಮಂಡಿಸಿ: ವಿ. ಸುನಿಲ್ ಕುಮಾರ್ ಆಗ್ರಹ
ಸರ್ಕಾರ ಕಾಂಗ್ರೆಸ್ ಪಾರ್ಟಿಯಾಗಿದೆ
ಸರ್ಕಾರ ಸರ್ಕಾರವಾಗಿ ಕೆಲಸ ಮಾಡುತ್ತಿಲ್ಲ. ಕಾಂಗ್ರೆಸ್ ಪಕ್ಷವಾಗಿ ಸರ್ಕಾರ ಕೆಲಸ ಮಾಡುತ್ತಿದೆ. ಸರ್ಕಾರವಾಗಿದ್ದರೆ ಜವಾಬ್ದಾರಿಯಿಂದ ನಡೆದುಕೊಳ್ಳುತ್ತೆ. ಅಧಿಕಾರಿಗಳಿಗೆ ಒತ್ತಡ ಹಾಕಿ ಸರ್ಕಾರ ಕೆಲಸ ಮಾಡಿಸುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು. ಈ ವೇಳೆ ವಿಧಾನ ಪರಿಷತ್ ಸದಸ್ಯ ಲಿಂಗರಾಜು ಪಾಟೀಲ್, ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಮಂಜುಳಾ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಹಾಜರಿದ್ದರು.