Voter Deletion Claims: ರಾಜ್ಯ ಕಾಂಗ್ರೆಸ್ ಪ್ರತಿಭಟನೆಗೆ ಚುನಾವಣಾ ಆಯೋಗ ಸ್ಪಂದನೆ; SIRನಲ್ಲಿ ಸುಳ್ಳು ಆಕ್ಷೇಪಣೆ ಮೂಲಕ ಫಾರಂ-7 ಸಲ್ಲಿಸಿದವರ ವಿರುದ್ಧ ಕ್ರಮಕ್ಕೆ ಆದೇಶ
Congress Protest: ಚುನಾವಣಾ ನೋಂದಣಿ ಅಧಿಕಾರಣಿಗಳಿಗೆ (ERO) ನಮೂನೆ 7 ರಲ್ಲಿ ಬೃಹತ್ ಪ್ರಮಾಣದಲ್ಲಿ ಅರ್ಜಿಗಳನ್ನು ಸಲ್ಲಿಸುತ್ತಿರುವ ಪ್ರಕರಣಗಳು ಆಯೋಗದ ಗಮನಕ್ಕೆ ಬಂದಿವೆ. ಅರ್ಜಿಯಲ್ಲಿ ಲಿಖಿತವಾಗಿ ಉದ್ದೇಶಪೂರ್ವಕವಾಗಿ ಸುಳ್ಳು ಹೇಳಿಕೆ ಅಥವಾ ಘೋಷಣೆ ನೀಡಿದ ಅರ್ಜಿದಾರರ ವಿರುದ್ಧ ಸಂಬಂಧಪಟ್ಟ EROಗಳು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು ಸೂಚನೆ ನೀಡಿದ್ದಾರೆ.
-
ಬೆಂಗಳೂರು: ಪೂರ್ವಮುದ್ರಿತ ವಿವರಗಳನ್ನು ಒಳಗೊಂಡ ಫಾರಂ-7 ಮೂಲಕ ರಾಜ್ಯದ ನಿರ್ದಿಷ್ಟ ಸಮುದಾಯಗಳ ಅಧಿಕೃತ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಕ್ರಮವಾಗಿ ಅಳಿಸುವ ಷಡ್ಯಂತ್ರದಲ್ಲಿ (Voter Deletion Claims) ಭಾಗಿಯಾಗಿರುವವರ ವಿರುದ್ಧ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಚಿವ ಸಂಪುಟ ಹಾಗೂ ಕಾಂಗ್ರೆಸ್ ಪಕ್ಷ ನಾಯಕರು ನಡೆಸಿದ ಹೋರಾಟಕ್ಕೆ ಚುನಾವಣಾ ಆಯೋಗ ಸ್ಪಂದಿಸಿದೆ. ಆರೋಪಗಳ ಬಗ್ಗೆ ಸೂಕ್ತ ನಡೆಸಿ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗ ಆದೇಶಿಸಿದೆ.
ಬೆಂಗಳೂರಿನ ಗಾಂಧಿನಗರದಲ್ಲಿರುವ ಮುಖ್ಯ ಚುನಾವಣಾಧಿಕಾರಿ ಕಚೇರಿ ಎದುರು ಗುರುವಾರ ಮಧ್ಯಾಹ್ನ ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆಸಲಾಯಿತು. ಆದರೆ, ತಮ್ಮ ಮನವಿಗೆ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಅಹೋರಾತ್ರಿ ಧರಣಿಗೆ ಸಿಎಂ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮದ ಭರವಸೆಯನ್ನು ಚುನಾವಣಾ ಆಯೋಗ ನೀಡಿದೆ.
ಕೇಂದ್ರ ಚುನಾವಣಾ ಆಯೋಗ ಎಸ್‌ಐಆರ್ ನಡೆಸುತ್ತಿದ್ದು, ನಿರ್ದಿಷ್ಟ ಸಮುದಾಯಗಳ ಮತಗಳನ್ನು ಉದ್ದೇಶಪೂರ್ವಕವಾಗಿ ಡಿಲೀಟ್ ಮಾಡಿಸಲು ಪ್ರಯತ್ನ ನಡೆದಿದೆ ಎಂಬುವುದು ಕಾಂಗ್ರೆಸ್ ಆರೋಪವಾಗಿತ್ತು. ಸ್ವತಃ ಸಿಎಂ ಡಿ.ಕೆ ಶಿವಕುಮಾರ್ ಸಂಪುಟ ಸಹೋದ್ಯೋಗಿಗಳು ಹಾಗೂ ಶಾಸಕರ ಜತೆಗೂಡಿ ಚುನಾವಣಾ ಆಯೋಗದ ಕಚೇರಿ ಬಳಿ ಅಹೋರಾತ್ರಿ ಹೋರಾಟಕ್ಕೆ ಮುಂದಾಗಿದ್ದರು.
ಈ ಹೋರಾಟದ ಪರಿಣಾಮ ಹಕ್ಕು ಮತ್ತು ಸುಳ್ಳು ಆಕ್ಷೇಪಣೆ ಮೂಲಕ ಮತದಾರರ ಹೆಸರು ಕೈಬಿಡಲು ಅರ್ಜಿ ಕೊಟ್ಟವರ ಮೇಲೆ ಕ್ರಮಕ್ಕೆ ಚುನಾವಣಾ ಆಯೋಗ ಆದೇಶಿಸಿದೆ. ಹೀಗಾಗಿ ಸಿಎಂ ಡಿ.ಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಶಾಸಕರ ಅಹೋರಾತ್ರಿ ಧರಣಿ ಹಿಂಪಡೆಯಲಾಗಿದೆ.
ಮುಖ್ಯ ಚುನಾವಣಾಧಿಕಾರಿ ಆದೇಶದಲ್ಲಿ ಏನಿದೆ?
ಚುನಾವಣಾ ನೋಂದಣಿ ಅಧಿಕಾರಣಿಗಳಿಗೆ (ERO) ನಮೂನೆ 7 ರಲ್ಲಿ ಬೃಹತ್ ಪ್ರಮಾಣದಲ್ಲಿ ಅರ್ಜಿಗಳನ್ನು ಸಲ್ಲಿಸುತ್ತಿರುವ ಪ್ರಕರಣಗಳು ಆಯೋಗದ ಗಮನಕ್ಕೆ ಬಂದಿವೆ. ಅಂತಹ ಅರ್ಜಿಗಳು ನಿಜವಾದವುಗಳಲ್ಲ ಎಂಬ ಆರೋಪವೂ ಇದೆ. ಈ ಸಂಬಂಧ, ಜನತಾ ಪ್ರಾತಿನಿಧ್ಯದ ಕಾಯಿದೆ, 1950ರ ಸೆಕ್ಷನ್ 31ರ ಅವಕಾಶಗಳ ಪ್ರಕಾರ, ಅರ್ಜಿಯಲ್ಲಿ (ನಮೂನೆ 6, 6A, 7 ಮತ್ತು 8) ಲಿಖಿತವಾಗಿ ಉದ್ದೇಶಪೂರ್ವಕವಾಗಿ ಸುಳ್ಳು ಹೇಳಿಕೆ ಅಥವಾ ಘೋಷಣೆ ನೀಡಿದ ಅರ್ಜಿದಾರರ ವಿರುದ್ಧ ಸಂಬಂಧಪಟ್ಟ EROಗಳು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು. ಇನ್ನು ಕ್ರಮಕ್ಕೆ ಮುಂಚಿತವಾಗಿ ಮತದಾರರ ನೋಂದಣಿ ನಿಯಮಗಳು, 1960ರ ನಿಯಮ 20ರ ಪ್ರಕಾರ ವಿಚಾರಣೆ ನಡೆಸಬೇಕು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು ಸೂಚನೆ ನೀಡಿದ್ದಾರೆ.
ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದೇನು?
ಚುನಾವಣಾ ಆಯೋಗದ ತೀರ್ಮಾನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಡಿ ಕೆ ಶಿವಕುಮಾರ್ ಅವರು, "ಮರಣ ಹಾಗೂ ಎರಡು ಬಾರಿ ನೋಂದಣಿ ಪ್ರಕರಣಗಳನ್ನು ಹೊರತುಪಡಿಸಿ ಬೇರೆ ಯಾವುದೇ ಫಾರಂ 7 ಅನ್ನು ಅನುಮೋದನೆ ಮಾಡುವಂತಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತರು ರಾಜ್ಯದ ಎಲ್ಲಾ ತಹಸೀಲ್ದಾರ್ ಅವರಿಗೆ ನಿರ್ದೇಶನ ನೀಡಿದ್ದಾರೆ. ಮರಣ ಪ್ರಕರಣಗಳಲ್ಲಿ ಮರಣ ಪ್ರಮಾಣ ಪತ್ರ ಕಡ್ಡಾಯವಾಗಿ ಸಲ್ಲಿಕೆಯಾಗಬೇಕು, ಎರಡು ಬಾರಿ ನೋಂದಣಿ ಆಗಿದ್ದರೆ ಎರಡನೇ ಎಪಿಕ್ ಸಂಖ್ಯೆಯನ್ನು ನಮೂದಿಸಬೇಕು ಎಂದು ಸೂಚನೆ ನೀಡಲಾಗಿದೆ" ಎಂದು ಮಾಹಿತಿ ನೀಡಿದರು.
"ಇನ್ನು ಈಗ ನಡೆದಿರುವ ಷಡ್ಯಂತ್ರ ವಿರುದ್ಧ ತನಿಖೆ ನಡೆಯಬೇಕು ಎಂಬ ಆಗ್ರಹಕ್ಕೆ ಸ್ಪಂದಿಸಿರುವ ಆಯೋಗ, ರಾಜ್ಯದಲ್ಲಿ ಫಾರ್ಮ್ 6, ಫಾರ್ಮ್ 6ಎ, ಫಾರ್ಮ್ 7 ಬಳಸಿ ಉದ್ದೇಶಪೂರ್ವಕವಾಗಿ ಸುಳ್ಳು ಹಾಗೂ ಭಾರಿ ಪ್ರಮಾಣದಲ್ಲಿ ಅರ್ಜಿಗಳನ್ನು ಸಲ್ಲಿಸಿರುವವರ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇಂತಹ ಫಾರಂ 7 ಅರ್ಜಿಗಳು ನೈಜ್ಯ ಅರ್ಜಿಗಳಲ್ಲ ಎಂದು ಆಯೋಗ ತಿಳಿಸಿದೆ" ಎಂದು ಮಾಹಿತಿ ನೀಡಿದರು.
"ಆಯೋಗದ ಸಂಧಾನಕ್ಕೆ ನಾವು ಬಗ್ಗಲಿಲ್ಲ. ಚುನಾವಣಾ ಆಯೋಗದ ಅಧಿಕಾರಿಗಳು ಹಾಗೂ ಕಾನೂನು ತಜ್ಞರು ಸಭೆ ಮಾಡಿ ಕೆಲವು ತೀರ್ಮಾನ ಕೈಗೊಂಡಿದ್ದಾರೆ. ನಮ್ಮ ಹೋರಾಟಕ್ಕೆ ಆಯೋಗ ಮಣಿದಿದೆ. ಅರ್ಹ ಮತದಾರರಿಗೆ ನ್ಯಾಯ ಒದಗಿಸುವ ಭರವಸೆ ಸಿಕ್ಕಿದೆ. ಸೂಕ್ತ ತನಿಖೆ ಆಗದೇ ಇದ್ದರೆ ಮತ್ತೆ ಹೋರಾಟ ಮಾಡುತ್ತೇವೆ. ಇದರಲ್ಲಿ ವಿರೋಧ ಪಕ್ಷಗಳು ಕುತಂತ್ರವಿದೆ. ನಮ್ಮ ದಾಖಲೆಗಳನ್ನು ನೋಡಿ ಆಯೋಗ ಅಚ್ಚರಿ ವ್ಯಕ್ತಪಡಿಸಿದೆ. ಇದು ನಾಡಿನ ಜನತೆ ನಮಗೆ ಕೊಟ್ಟಿರುವ ಹಕ್ಕು. 136 ಮಂದಿಯನ್ನು ಗೆಲ್ಲಿಸಿ ಇಡೀ ಜನರ ರಕ್ಷಣೆ ಮಾಡುವಂತೆ ಸೂಚಿಸಿದ್ದಾರೆ. ಆ ಪ್ರಕಾರ ನಾವು ಈ ನಾಡಿನ ಜನರ ಹಕ್ಕನ್ನು ರಕ್ಷಿಸಲು ಇಂದು ಹೋರಾಟ ಮಾಡಿದ್ದೇವೆ' ಎಂದರು.
"ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆದಿರುವ ಅತಿದೊಡ್ಡ ವಂಚನೆ. ರಾಜ್ಯ ಚುನಾವಣಾ ಆಯೋಗ ನಮ್ಮನ್ನು ಮನವೊಲಿಸಲು ಬಂದರು ನಾವು ಜಗ್ಗಲಿಲ್ಲ. ನಾವು ಬೀದಿಯಲ್ಲಿ ನಿಂತು ಹೋರಾಟ ಮಾಡುತ್ತಿಲ್ಲ. ಮಹಾತ್ಮ ಗಾಂಧೀಜಿ ನಮಗೆ ಹೇಳಿಕೊಟ್ಟ ಮಾರ್ಗದಲ್ಲಿ ಚುನಾವಣೆ ಅಧಿಕಾರಿಗಳಿಗೆ ಅವರ ಕಚೇರಿಯಲ್ಲಿ ಕುಳಿತು ಅಕ್ರಮದ ಬಗ್ಗೆ ಮನದಟ್ಟು ಮಾಡಿಕೊಟ್ಟಿದ್ದೇವೆ. ಅವರಿಗೆ ಅಗತ್ಯ ದಾಖಲೆಗಳನ್ನು ನೀಡಿ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ' ಎಂದರು.
"ವಿರೋಧ ಪಕ್ಷಗಳು ಏನು ಬೇಕಾದರು ಮಾತನಾಡಿಕೊಳ್ಳಲಿ. ಅವರ ಬಗ್ಗೆ ಈಗ ಮಾತನಾಡುವುದಿಲ್ಲ. ನಾವು ಜನರ ಮತದಾನದ ಹಕ್ಕನ್ನು ರಕ್ಷಿಸಲು ಬದ್ಧರಾಗಿದ್ದಾರೆ. ಆಯೋಗ ನೋಟೀಸ್ ನೀಡಿರುವ ಬಾಕಿ 35 ಲಕ್ಷ ಮತದಾರರಿಗೆ ಅಗತ್ಯ ದಾಖಲೆ ಒದಗಿಸಲು ಸರ್ಕಾರ ಬದ್ಧವಾಗಿದೆ. ರಾಜ್ಯದ ಪ್ರತಿ ಅರ್ಹ ಮತದಾರರಿಗೆ ಮತದಾನದ ಹಕ್ಕು ಸಿಗುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ" ಎಂದು ಸಿಎಂ ಸ್ಪಷ್ಟಪಡಿಸಿದರು.