"ನನ್ನ ರಾಜಕೀಯ ಪಶ್ಚಿಮ ಬಂಗಾಳದಲ್ಲಿಲ್ಲ, ಅಸ್ಸಾಂನಲ್ಲಿದೆ”: ಟಿಎಂಸಿ ತೊರೆದ ರಾಜ್ಯಸಭಾ ಸದಸ್ಯೆ ಸುಷ್ಮಿತಾ ದೇವ್ ಅಚ್ಚರಿ ಹೇಳಿಕೆ
TMC Crisis: ತೃಣಮೂಲ ಕಾಂಗ್ರೆಸ್ ಮತ್ತು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಬಳಿಕ, ಸುಶ್ಮಿತಾ ದೇವ್ ತಮ್ಮ ರಾಜಕೀಯ ಭವಿಷ್ಯವು ಪಶ್ಚಿಮ ಬಂಗಾಳದಲ್ಲಲ್ಲ, ಅಸ್ಸಾಂನಲ್ಲಿದೆ ಎಂದು ಹೇಳಿದ್ದಾರೆ. 2021ರಲ್ಲಿ ಅವರು ಟಿಎಂಸಿಗೆ ಸೇರ್ಪಡೆಗೊಂಡಿದ್ದರು. ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ಅವರು ಶೀಘ್ರವೇ ಪಕ್ಷದ ಪ್ರಮುಖ ನಾಯಕರಲ್ಲಿ ಒಬ್ಬರಾಗಿ ಹೊರಹೊಮ್ಮಿ, ರಾಷ್ಟ್ರೀಯ ವಕ್ತಾರರಾಗಿ ನೇಮಕಗೊಂಡಿದ್ದರು.
ಸುಶ್ಮಿತಾ ದೇವ್ (ಸಂಗ್ರಹ ಚಿತ್ರ) -
ಕೋಲ್ಕತ್ತಾ, ಜೂ. 10: ತೃಣಮೂಲ ಕಾಂಗ್ರೆಸ್ (Trinamool Congress) ಮತ್ತು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಬಳಿಕ, ಸುಶ್ಮಿತಾ ದೇವ್ (Sushmita Dev) ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ತಮ್ಮ ರಾಜಕೀಯ ಭವಿಷ್ಯವು ಪಶ್ಚಿಮ ಬಂಗಾಳದಲ್ಲಲ್ಲ, ಅಸ್ಸಾಂನಲ್ಲಿದೆ ಎಂದು ಹೇಳಿದ್ದಾರೆ. ಅಸ್ಸಾಂನ ಸಿಲ್ಚಾರ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಸದೆಯಾಗಿದ್ದ ಅವರು, 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ರಾಜ್‌ದೀಪ್ ರಾಯ್ ವಿರುದ್ಧ ಸೋತಿದ್ದರು. ಅದಾದ ಬಳಿಕ ಕಾಂಗ್ರೆಸ್ ತೊರೆದಿದ್ದರು.
2021ರಲ್ಲಿ ಅವರು ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ಅವರು ಶೀಘ್ರವೇ ಪಕ್ಷದ ಪ್ರಮುಖ ನಾಯಕರಲ್ಲಿ ಒಬ್ಬರಾಗಿ ಹೊರಹೊಮ್ಮಿ, ರಾಷ್ಟ್ರೀಯ ವಕ್ತಾರರಾಗಿ ನೇಮಕಗೊಂಡಿದ್ದರು. ನಂತರ ಅವರಿಗೆ ರಾಜ್ಯಸಭಾ ಸದಸ್ಯತ್ವವೂ ದೊರೆಯಿತು. ಇದೀಗ ಅವರು ತೃಣಮೂಲ ಕಾಂಗ್ರೆಸ್ ಅನ್ನು ಕೂಡ ತೊರೆದಿದ್ದಾರೆ. 2026ರ ಚುನಾವಣೆಯಲ್ಲಿನ ಭಾರಿ ಸೋಲಿನ ಬಳಿಕ ಅಸ್ತಿತ್ವದ ಸಂಕಷ್ಟವನ್ನು ಎದುರಿಸುತ್ತಿರುವ ಟಿಎಂಸಿಗೆ ಇದು ಮತ್ತೊಂದು ಹಿನ್ನಡೆಯಾಗಿದೆ. ಇದರೊಂದಿಗೆ, ಪಕ್ಷವನ್ನು ತೊರೆದ ಎರಡನೇ ರಾಜ್ಯಸಭಾ ಸದಸ್ಯೆ ಅವರಾಗಿದ್ದಾರೆ.
ಟಿಎಂಸಿ ತೊರೆದ ಸುಶ್ಮಿತಾ ದೇವ್:
Another setback for #TMC supremo #MamataBanerjee as party Rajya Sabha MP Sushmita Dev resigns from the post of MP.
— Pooja Mehta (@pooja_news) June 10, 2026
Met Assam CM Himanta Biswa Sarma a short while ago. pic.twitter.com/mtSm4gXIDz
“ನನಗೆ ವೈಯಕ್ತಿಕ ಹಾಗೂ ರಾಜಕೀಯ ಎರಡೂ ಕಾರಣಗಳಿವೆ. ನಾನು ಎಲ್ಲಿ ಮತ್ತು ಹೇಗೆ ರಾಜಕೀಯ ಮಾಡಬೇಕು ಎಂಬುದು ನನ್ನ ವೈಯಕ್ತಿಕ ಹಕ್ಕು. ನಾನು ಟಿಎಂಸಿ ಸದಸ್ಯತ್ವವನ್ನು ತ್ಯಜಿಸುತ್ತಿದ್ದರೆ, ರಾಜ್ಯಸಭಾ ಸದಸ್ಯತ್ವವನ್ನೂ ತ್ಯಜಿಸಬೇಕು” ಎಂದು ಅವರು ಮಾಧ್ಯಮವೊಂದಕ್ಕೆ ಹೇಳಿದರು.
ಟಿಎಂಸಿ ಬಂಡಾಯದಿಂದ ಎನ್‌ಡಿಎಗೆ ಬಲ; ಮತ್ತೆ ಡಿಲಿಮಿಟೇಶನ್ ಮಸೂದೆ ಜಾರಿ?
ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ನಂತರ, ಅವರು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ದೆಹಲಿಯಲ್ಲಿ ಭೇಟಿಯಾಗಿರುವುದು ಅಚ್ಚರಿ ತಂದಿದೆ. ಅವರು ಬಿಜೆಪಿ ಸೇರುವ ಸಾಧ್ಯತೆಯಿದೆ ಎನ್ನಲಾಗಿದೆ. ಉಪಚುನಾವಣೆ ನಡೆಯಲಿರುವ ಅಸ್ಸಾಂ ಲೋಕಸಭಾ ಸ್ಥಾನದಿಂದ ಸುಶ್ಮಿತಾ ಸ್ಪರ್ಧಿಸಬಹುದು ಎಂದು ಹೇಳಲಾಗಿದೆ.
“ನನ್ನ ರಾಜಕೀಯ ಬಂಗಾಳದಲ್ಲಿಲ್ಲ, ಅದು ಅಸ್ಸಾಂನಲ್ಲಿದೆ. ನಾನು ನನ್ನ ರಾಜಕೀಯವನ್ನು ಅಲ್ಲಿ ಮಾಡಲು ಬಯಸುತ್ತೇನೆ. ಅಸ್ಸಾಂನ ರಾಜಕೀಯ ಪರಿಸ್ಥಿತಿಯ ಬಗ್ಗೆ ಮರೆಮಾಡಲು ಏನೂ ಇಲ್ಲ. ನಾನು ಹಿಮಂತ ಬಿಸ್ವಾ ಶರ್ಮಾ ಅವರನ್ನು ಭೇಟಿಯಾದೆ. ನಾನು ಯಾವುದೇ ಪಕ್ಷಕ್ಕೆ ಹೋಗಲು ಬಯಸಿದರೆ, ಅದು ಪಕ್ಷದ ನಿರ್ಧಾರ, ನನ್ನದಲ್ಲ” ಎಂದು ಅವರು ತಿಳಿಸಿದರು.
“ಮುಂದಿನ ಐದು ವರ್ಷಗಳ ಕಾಲ ಬಿಜೆಪಿ ಅಧಿಕಾರದಲ್ಲಿ ಉಳಿಯಲಿದೆ. ವಿಶೇಷವಾಗಿ ಬರಾಕ್ ಕಣಿವೆಯಲ್ಲಿ ನಡೆದಿರುವ ಮೂಲಸೌಕರ್ಯ ಅಭಿವೃದ್ಧಿ ಗಮನಾರ್ಹವಾಗಿದೆ. ನಾನು ಅಲ್ಲಿ ನನ್ನ ರಾಜಕೀಯ ಮಾಡಿದ್ದೇನೆ. ಈ ಪ್ರದೇಶದಲ್ಲಿ ಇಂತಹ ಅಭಿವೃದ್ಧಿಯನ್ನು ನಾನು ಹಿಂದೆಂದೂ ನೋಡಿರಲಿಲ್ಲ. ನಾನು ಬಿಜೆಪಿ ವಿರುದ್ಧ ಮಾತನಾಡುತ್ತಿದ್ದೆ. ಆದರೆ, ಈ ವಿಷಯದಲ್ಲಿ ನನ್ನಿಂದ ವಿರೋಧ ವ್ಯಕ್ತಪಡಿಸಲು ಸಾಧ್ಯವಾಗಲಿಲ್ಲ” ಎಂದು ಅವರು ಹೇಳಿದರು.
ʼʼಹಿಮಂತ ಬಿಸ್ವಾ ಶರ್ಮಾ ಅವರ ಕೆಲಸವನ್ನು ನೋಡಿ ಜನರು ಅವರನ್ನು ಮತ್ತೆ ಅಧಿಕಾರಕ್ಕೆ ತಂದಿದ್ದಾರೆ. ಜನರು ಅವರ ಕೆಲಸವನ್ನು ಇಷ್ಟಪಟ್ಟಿದ್ದಾರೆʼʼ ಎಂದು ಅವರು ತಿಳಿಸಿದರು.