ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

M J Akbar Column: ಮೋತಿಲಾಲ್‌ -ಜವಾಹರ ನಡುವಿನ ಐಷಾರಾಮಿ ವ್ಯತ್ಯಾಸ

ಭಾರತಕ್ಕೆ ಸ್ವಾತಂತ್ರ್ಯ ಬರುವುದಕ್ಕೂ ಮೊದಲು ಕೇಂದ್ರೀಯ ಶಾಸನಸಭೆಗಾಗಿ ನಡೆಯುತ್ತಿದ್ದ ಚುನಾವಣೆ ಅದಾಗಿದ್ದರಿಂದ ಬ್ರಿಟಿಷ್ ಆಳ್ವಿಕೆಯಲ್ಲಿ ಮತದಾನದ ಹಕ್ಕು ಹೊಂದಿದ್ದ ಮತದಾ ರರ ಸಂಖ್ಯೆ ಬಹಳ ಕಡಿಮೆಯಿತ್ತು. ಹೀಗಾಗಿ ಒಂದೊಂದು ಮತ ಕೂಡ ತುಂಬಾ ಮುಖ್ಯ ವಾಗಿತ್ತು. ಅದೊಂದು ಅರೆ-ಪ್ರಜಾಪ್ರಭುತ್ವ ವ್ಯವಸ್ಥೆ. ಕೇವಲ ಶೇ.2.8ರಷ್ಟು ಭಾರತೀಯರಿಗೆ ಮಾತ್ರ ಮತದಾನದ ಹಕ್ಕಿತ್ತು.

ಮೋತಿಲಾಲ್‌ -ಜವಾಹರ ನಡುವಿನ ಐಷಾರಾಮಿ ವ್ಯತ್ಯಾಸ

-

Profile
Ashok Nayak Jun 10, 2026 8:44 PM

ಅಕ್ಬರ್‌ʼನಾಮಾ‌ (ಭಾಗ-1)

ಎಂ.ಜೆ.ಅಕ್ಬರ್

ಇದು ಆಲ್ಕೋಹಾಲ್ ಕುರಿತ ಕತೆಯಲ್ಲ. ಆಷಾಢಭೂತಿತನದ ಕತೆಯೂ ಅಲ್ಲ.ಒಮ್ಮೆ ಮೋತಿಲಾಲ್ ನೆಹರೂ ಅವರು ಕೇಂದ್ರೀಯ ಶಾಸನಸಭೆಯ ಸೀಟಿಗಾಗಿ ಪ್ರಚಾರ ಮಾಡು ತ್ತಿದ್ದರು. ಅಲ್ಲಿಗೆ ಬಂದಿದ್ದ ಒಬ್ಬ ವ್ಯಕ್ತಿ ಮೋತಿಲಾಲ್ ಬಳಿ ‘ನೀವು ಕುಡಿಯುತ್ತೀರಾ’ ಎಂದು ಕೇಳಿದ್ದ. ಭಾರತೀಯ ಸಾಂಪ್ರದಾಯಿಕ ಪರಿಸರದಲ್ಲಿ ಆಲ್ಕೋಹಾಲ್ ಯಾವತ್ತೂ ಒಳ್ಳೆಯ ರೀತಿಯಲ್ಲಿ ಪರಿಗಣಿತವಾಗಿದ್ದೇ ಇಲ್ಲ.

ಮಹಾತ್ಮ ಗಾಂಧೀಜಿಯವರಂತೂ 1920ರಲ್ಲಿ ಸ್ವಾತಂತ್ರ್ಯ ಚಳವಳಿಯ ನೇತೃತ್ವ ವಹಿಸಿ ಕೊಂಡ ಮೇಲೆ ಮುಲಾಜಿಲ್ಲದೆ ಮದ್ಯ ಸೇವನೆಯನ್ನು ಅಪರಾಧವೆಂದೇ ಹೇಳುತ್ತಿದ್ದರು. ಹಿಂದೂ ಮತ್ತು ಮುಸ್ಲಿಮರು ಒಗ್ಗಟ್ಟಿನಿಂದ ವಿರೋಧಿಸುತ್ತಿದ್ದ ಕೆಲವೇ ಸಂಗತಿಗಳಲ್ಲಿ ಮದ್ಯ ಕೂಡ ಒಂದಾಗಿತ್ತು.

ಭಾರತಕ್ಕೆ ಸ್ವಾತಂತ್ರ್ಯ ಬರುವುದಕ್ಕೂ ಮೊದಲು ಕೇಂದ್ರೀಯ ಶಾಸನಸಭೆಗಾಗಿ ನಡೆಯು ತ್ತಿದ್ದ ಚುನಾವಣೆ ಅದಾಗಿದ್ದರಿಂದ ಬ್ರಿಟಿಷ್ ಆಳ್ವಿಕೆಯಲ್ಲಿ ಮತದಾನದ ಹಕ್ಕು ಹೊಂದಿದ್ದ ಮತದಾರರ ಸಂಖ್ಯೆ ಬಹಳ ಕಡಿಮೆಯಿತ್ತು. ಹೀಗಾಗಿ ಒಂದೊಂದು ಮತ ಕೂಡ ತುಂಬಾ ಮುಖ್ಯವಾಗಿತ್ತು. ಅದೊಂದು ಅರೆ-ಪ್ರಜಾಪ್ರಭುತ್ವ ವ್ಯವಸ್ಥೆ. ಕೇವಲ ಶೇ.೨.೮ರಷ್ಟು ಭಾರತೀಯರಿಗೆ ಮಾತ್ರ ಮತದಾನದ ಹಕ್ಕಿತ್ತು.

ಯಾರು ಹೆಚ್ಚು ತೆರಿಗೆ ಪಾವತಿಸುತ್ತಾರೋ ಅವರಿಗೆ ಮಾತ್ರ ಮತದಾನದ ಹಕ್ಕು ನೀಡಲಾಗು ತ್ತಿತ್ತು. ಅಂದರೆ ಶ್ರೀಮಂತರಿಗಷ್ಟೇ ಮತ ಚಲಾಯಿಸುವ ಅಧಿಕಾರ. ಮೋತಿಲಾಲ್ ನೆಹರೂ ಬಹಳ ಗಟ್ಟಿಯಾಗಿ, ಯಾವುದೇ ಅಳುಕಿಲ್ಲದೆ, ‘ಹೌದು, ನಾನು ಕುಡಿಯುತ್ತೇನೆ. ನನ್ನ ಅಪ್ಪ ಕುಡಿಯುತ್ತಿದ್ದರು, ಅದಕ್ಕೂ ಮೊದಲು ನನ್ನ ಅಜ್ಜ ಕುಡಿಯುತ್ತಿದ್ದರು, ನನ್ನ ಮಗ ಕೂಡ ಕುಡಿಯುತ್ತಾನೆ, ಬಹುಶಃ ನನ್ನ ಮೊಮ್ಮಗ ಕೂಡ ಕುಡಿಯುವವನೇ ಆಗಿರುತ್ತಾನೆ. ಅದರಿಂದ ನಿಮಗೇನಾದರೂ ಸಮಸ್ಯೆಯಿದೆಯೇ?’ ಎಂದು ಕೇಳಿದ್ದರು. ಪ್ರಶ್ನೆ ಕೇಳಿದವನು ಮೌನವಾಗಿದ್ದ. ಯಾವ ಅಡೆತಡೆಯೂ ಇಲ್ಲದೆ ಮೋತಿಲಾಲ್ ಗೆದ್ದರು. ಅವರು ಮತ್ತು ಅವರ ತಲೆಮಾರು ಯಾವುದೇ ರೀತಿಯ ಆಷಾಢಭೂತಿತನ ಅಥವಾ ನಾಟಕಗಳನ್ನು ಮೀರಿ ನಿಂತಿತ್ತು.

ಇದನ್ನೂ ಓದಿ: M J Akbar Column: ಐದು ಸಮುದ್ರಗಳ ನಡುವಿನ 21ನೇ ಶತಮಾನದ ಯುದ್ಧ

ಈ ಕತೆ ಹೇಳಿದವರು ಬ್ರಜ್ ಕುಮಾರ್ ನೆಹರೂ. ಬಿಕೆ ಅಥವಾ ಬಿಜ್ಜು ಎಂದೂ ಅವರು ಪ್ರಸಿದ್ಧರು. ಬಿಕೆ ಬೆಳೆದಿದ್ದು ಮೋತಿಲಾಲ್ ನೆಹರೂ ಅವರ ಕೂಡು ಕುಟುಂಬದ ‘ಆನಂದ ಭವನ’ ಮನೆಯಲ್ಲಿ. ಬಿಕೆ ಒಂದು ಪುಸ್ತಕ ಬರೆದಿದ್ದಾರೆ. ಅದರ ಹೆಸರು ‘ನೈಸ್ ಗೈಸ್ ಫಿನಿಶ್ ಸೆಕೆಂಡ್.’ ಅದು ಕೇವಲ ಹತ್ತರಲ್ಲೊಂದು ಎಂಬಂತಹ ಸ್ಮರಣಿಕೆಯಲ್ಲ. ಈ ದೇಶದ ಇತಿಹಾಸದ ಅತ್ಯಂತ ಪ್ರಮುಖ ವಿದ್ಯಮಾನಗಳ ಸರೋವರದಿಂದ ಹೆಕ್ಕಿ ತೆಗೆದ ನೆನಪುಗಳು ಅದರಲ್ಲಿವೆ.

21ನೇ ಶತಮಾನದ ಉತ್ತರ ಭಾರತದ ಶ್ರೀಮಂತ ಕುಟುಂಬವೊಂದರ ಸೊಗಸಾದ ಚಿತ್ರಣವನ್ನು ಅದುಹೊಂದಿದೆ. ಹೆಚ್ಚುಕಮ್ಮಿ ಮೂರು ದಶಕಗಳಿಂದ ಈ ಪುಸ್ತಕ ನನ್ನ ರೀಡಿಂಗ್ ಲಿಸ್ಟ್‌ನಲ್ಲಿತ್ತು. ಆದರೆ ಓದಿರಲಿಲ್ಲ. ಇತ್ತೀಚೆಗೆ ಹೇಗೋ ಕೈಗೆತ್ತಿಕೊಂಡೆ. ನಂತರ ಕೆಳಗಿರಿಸಲು ಆಗಲಿಲ್ಲ. ಮೋತಿಲಾಲರ ವ್ಯಕ್ತಿತ್ವವು ಸಾಮಾಜಿಕ ಇತಿಹಾಸಕ್ಕೆ ಹೊಸ ಆಯಾಮ ನೀಡುವ ಬೆಳಕಿದ್ದಂತೆ. ಅವರ ಬದುಕಿನಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಅಡಿಗಲ್ಲು ಹಾಕಿದ ಆ ತಲೆಮಾರಿನವರ ಪ್ಯಾಷನ್, ನಂಬಿಕೆಗಳು ಹಾಗೂ ಸಾಮಾಜಿಕ ನಡವಳಿಕೆಗಳು ಬಿಂಬಿತವಾಗಿದ್ದವು.

1920ರ ನಂತರ ಭಾರತದ ರಾಷ್ಟ್ರೀಯತೆಯ ಆತ್ಮವನ್ನು ರೂಪಿಸಿದ ಶಿಲ್ಪಿಯಾಗಿ ಮೋಹನ ದಾಸ್ ಗಾಂಧಿ ಹೊರಹೊಮ್ಮಿದರು. ಅವರು ಸ್ವಯಂ ಆಡಳಿತದ ನಿಯಮಗಳನ್ನು ರಚಿಸಿದರು. ಆದರೆ 1948ರಲ್ಲಿ ಮಹಾತ್ಮನ ಹತ್ಯೆಯಾಗಿ ಒಂದೇ ದಶಕದೊಳಗೆ ಅವು ಹೇಳಹೆಸರಿಲ್ಲದಂತೆ ಹೋದವು.

6

ಗಾಂಧೀಜಿಯವರ ರಾಜಕೀಯ ಸಿದ್ಧಾಂತ ಮೋತಿಲಾಲ್‌ಗೆ ಒಪ್ಪಿತವಾಗುತ್ತಿರಲಿಲ್ಲ. ಬ್ರಹ್ಮ ಚರ್ಯ, ಮದ್ಯಪಾನ ವಿರೋಧ ಗುಡಿ ಕೈಗಾರಿಕೆಗಳನ್ನು ಆಧರಿಸಿದ ಗ್ರಾಮೀಣ ಆರ್ಥಿಕತೆ ಹಾಗೂ ಅಹಿಂಸಾ ತತ್ವಗಳಲ್ಲಿ ಮೋತಿಲಾಲ್‌ಗೆ ನಂಬಿಕೆಯಿರಲಿಲ್ಲ. ಭಾರತೀಯ ರನ್ನು ಶೋಷಿಸುತ್ತಿರುವ ಬ್ರಿಟಿಷ್ ಅಧಿಕಾರಿಗಳನ್ನು ಸಿಗಿದು ಹಾಕುತ್ತೇನೆ ಎಂದು ಮೋತಿ ಲಾಲ್ ತಮ್ಮ ಮನೆಯವರ ಎದುರು ಅಬ್ಬರಿಸಿದ್ದರು. ಆದರೆ ಬೇರಾವ ವಿದೇಶಿಗರ ಬಗ್ಗೆಯೂ ಅವರು ಈ ರೀತಿಯ ದ್ವೇಷಭಾವನೆ ಹೊಂದಿರಲಿಲ್ಲ.

ಮೋತಿಲಾಲ್ ಪಾಶ್ಚಾತ್ಯ ಉಡುಗೆ, ಊಟವನ್ನು ಇಷ್ಟಪಡುತ್ತಿದ್ದರು. ಸಾಮಾಜಿಕ ಸುಧಾರಣೆ ಹಾಗೂ ಶಿಕ್ಷಣವನ್ನು ಉತ್ತೇಜಿಸುತ್ತಿದ್ದರು. ಅದರಿಂದಆರ್ಥಿಕ ಉನ್ನತಿ ಸಾಧ್ಯ ಎನ್ನುತ್ತಿದ್ದರು. ಗಾಂಧೀಜಿಯವರ ಬುದ್ಧಿವಂತಿಕೆ, ತ್ಯಾಗ, ಬದ್ಧತೆ ಹಾಗೂ ಭಾರತೀಯರ ಕಲ್ಪನಾ ಶಕ್ತಿಯ ಮೇಲೆ ಅವರಿಗಿರುವ ಹಿಡಿತವನ್ನು ಮೋತಿಲಾಲ್ ಮೆಚ್ಚಿಕೊಳ್ಳುತ್ತಿದ್ದರು.

ಗಾಂಧೀಜಿಯವರ ನಾಯಕತ್ವವನ್ನೂ ಅವರು ಒಪ್ಪಿಕೊಳ್ಳುತ್ತಿದ್ದರು, ಆದರೆ ಪ್ರತಿಯೊಂದು ವಿಷಯದಲ್ಲೂ ಉಪದೇಶ ಮಾಡುವ ತವಕ ಹೊಂದಿರುತ್ತಿದ್ದ ಗಾಂಧೀಜಿಯ ನಡೆ ಅವರಿಗೆ ಇಷ್ಟವಾಗುತ್ತಿರಲಿಲ್ಲ. ಆದರೆ ಅದಕ್ಕೆ ಪ್ರತಿಯಾಗಿ ಗಾಂಧೀಜಿ ತಾವು ಬಯಸಿದ್ದನ್ನೇ ಸ್ವತಂತ್ರ ಬೌದ್ಧಿಕ ವಲಯದಲ್ಲಿ ಇರಲು ಇಚ್ಛಿಸುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರರ ಮೇಲೂ ಬಹಳ ಜಾಣ್ಮೆಯಿಂದ ಹೇರುತ್ತಿದ್ದರು.

ಮಗ ಜವಾಹರಲಾಲ್ ಎತ್ತರಕ್ಕೆ ಬೆಳೆದಾಗ ಮೋತಿಲಾಲ್ ಬಹಳ ಹೆಮ್ಮೆಪಟ್ಟಿದ್ದರು. ಮಗ ತನ್ನನ್ನು ಮೀರಿಸಿದಾಗ ಒಬ್ಬ ತಂದೆಗೆ ಆಗುವ ಸಂತೋಷವೇ ಅವರಿಗೂ ಆಗಿತ್ತು. ಆಗ ಮನೆಯವರು ಹಾಗೂ ಸ್ನೇಹಿತರ ಎದುರು ‘ಜವಾಹರ್ ಒಬ್ಬ ವಿಧಿಯ ಮನುಷ್ಯ’ ಎಂದು ಹೇಳಿದ್ದರು.

‘ಮ್ಯಾನ್ ಆಫ್ ಡೆಸ್ಟಿನಿ’ ಎಂಬುದು ವಿಕ್ಟೋರಿಯನ್ ಇಂಗ್ಲಿಷ್‌ನ ಪದಗಟ್ಟು. ಭಾರತದ ಮೊದಲ ಪ್ರಧಾನಿಯಾಗಿ ಜವಾಹರಲಾಲ್ ನೆಹರೂ ಅವರು ಕಾಲು ಭಾಗ ಬೆಂದ ಗಾಂಽ ತತ್ವಗಳು ಹಾಗೂ ಅರೆಬರೆ ಬೆಂದ ಮಾರ್ಕ್ಸಿಸ್ಟ್ ತತ್ವಗಳನ್ನು ಬಳಸಿ ಆರ್ಥಿಕತೆಯ ಮೇಲೆ ಸರಕಾರದ ಹಿಡಿತ ಸಾಧಿಸಲು ಯತ್ನಿಸಿದರು. ಅದು ಹಲವು ದಶಕಗಳ ಕಾಲ ಭಾರತದ ಆರ್ಥಿಕತೆಯನ್ನು ಲೈಸನ್ಸ್ ರಾಜ್‌ನ ಸಂಕೋಲೆಯಲ್ಲಿ ಸಿಲುಕಿ ನರಳುವಂತೆ ಮಾಡಿತು.

1980 ಹಾಗೂ 1990ರ ದಶಕದ ಆಧುನಿಕ ಯುಗ ಆರಂಭವಾದ ನಂತರವಷ್ಟೇ ಲೈಸನ್ಸ್ ರಾಜ್ʼನಿಂದ ಭಾರತ ಮುಕ್ತಿ ಪಡೆಯಿತು. ನನ್ನ ಒಳಮನಸ್ಸಿನಲ್ಲಿ ಯಾವಾಗಲೂ ಒಂದು ಪ್ರಶ್ನೆಯಿದೆ. ಜವಾಹರಲಾಲರು ಗಾಂಧೀಜಿಯವರ ಆರ್ಥಿಕ ನೀತಿ ಹಾಗೂ ಕಾರ್ಲ್ ಮಾರ್ಕ್ಸ್‌ರ ನೀತಿಗಳನ್ನು ಮಿಶ್ರಣ ಮಾಡಿ ವಿಚಿತ್ರವಾದ ಹೊಸ ಪಾಕವನ್ನು ತಯಾರಿಸು ವುದರ ಬದಲಾಗಿ ಮೋತಿಲಾಲರ ಆರ್ಥಿಕ ನೀತಿಗಳನ್ನೇ ಅನುಸರಿಸಿದ್ದರೆ ಭಾರತ ಇಂದು ಇನ್ನೂ ಶಕ್ತಿಶಾಲಿಯಾದ ಆರ್ಥಿಕತೆಯಾಗಿ ಬೆಳೆದಿರುತ್ತಿತ್ತೇ? ಉತ್ತರ ನನಗೆ ಗೊತ್ತಿಲ್ಲ. ಆದರೆ ಅದರಿಂದ ಪ್ರಶ್ನೆಯ ಗಂಭೀರತೆಯೇನೂ ಕಡಿಮೆಯಾಗುವುದಿಲ್ಲ.

ಯುವಕನಾಗಿದ್ದಾಗ ಜವಾಹರಲಾಲ್ ತಮ್ಮ ತಂದೆಯ ಶ್ರೀಮಂತಿಕೆಯನ್ನು ಚೆನ್ನಾಗಿಯೇ ಅನುಭವಿಸಿದ್ದರು. ಅವರ ನಡೆ ನುಡಿಯಲ್ಲಿ ದರ್ಪವಿತ್ತು. ಮುರಬ್ಬದ ಡಬ್ಬಿಯ ಮುಚ್ಚಳ ತೆಗೆಯಲಾಗದಷ್ಟು ಬಿಗಿಯಾಗಿದೆಯೆಂದು ಒಮ್ಮೆ ಮನೆಯ ಕೆಲಸಗಾರರ ಮೇಲೇ ಆ ಡಬ್ಬಿ ಎಸೆದಿದ್ದರಂತೆ. ಮೋತಿಲಾಲರು ತಮ್ಮ ಮಕ್ಕಳಿಗೆ ಒಳ್ಳೆಯ ಪಾಶ್ಚಾತ್ಯ ಶಿಕ್ಷಣ ಕೊಡಿಸಿದ್ದರು.

ಜವಾಹರಲಾಲ್ ಮತ್ತು ಸಹೋದರಿಯರಿಗೆ ಖಾಸಗಿ ಇಂಗ್ಲಿಷ್ ಶಿಕ್ಷಕರಿದ್ದರು. ಜವಾಹರ ಲಾಲ್ ತಮ್ಮ ಬಟ್ಟೆಯನ್ನು ಬ್ರಿಟನ್ ರಾಜನ ದರ್ಜಿಯಿಂದ ಹೊಲಿಸುತ್ತಿದ್ದರು. ಅವರು ಧೂಮಪಾನ ಆರಂಭಿಸಿದಾಗ ಅವರ ಸಿಗರೆಟ್‌ಗೆ ಗುಲಾಬಿ ಅಥವಾ ನೇರಳೆ ಫ್ಲೇವರ್‌ನ ಫಿಲ್ಟರ್ ಇರುತ್ತಿತ್ತು. ಗೆರೆ ಕೊರೆದಂತೆ ಅವರ ಮನೆಯ ದೈನಂದಿನ ಚಟುವಟಿಕೆಗಳು ಶಿಸ್ತಿನಿಂದ ನಡೆಯುತ್ತಿದ್ದವು.

ಕಾಶ್ಮೀರಿ ಪಂಡಿತ ಅಡುಗೆಯವನು ಸಾಂಪ್ರದಾಯಿಕ ಅಡುಗೆಗಳನ್ನು ಮಾಡುತ್ತಿದ್ದ; ಮುಸ್ಲಿಂ ಅಡುಗೆಯವನು ಪಾಶ್ಚಾತ್ಯ ಶೈಲಿಯಲ್ಲಿ ಸೂಪ್, ಮೀನು, ಮಾಂಸ, ಸಿಹಿ ತಿನಿಸುಗಳನ್ನು ತಯಾರಿಸುತ್ತಿದ್ದ. ಮೋತಿಲಾಲರ ಟೇಬಲ್ ಮೇಲೆ ನಿತ್ಯ ಪಾಶ್ಚಾತ್ಯ ಊಟ ಇರಲೇಬೇಕಿತ್ತು.

ಆದರೆ ಯಾವತ್ತೂ ಅವರ ಮನೆಯಲ್ಲಿ ಆಡಂಬರ ಅಥವಾ ಶ್ರೀಮಂತಿಕೆಯ ಅಸಹ್ಯ ಪ್ರದರ್ಶನ ಇರುತ್ತಿರಲಿಲ್ಲ. ಇದಕ್ಕೆ ತದ್ವಿರುದ್ಧ ಉದಾಹರಣೆ ಅಲ್ಲೇ ಪಕ್ಕದಲ್ಲಿತ್ತು. ಮೋತಿ ಲಾಲರ ಜೊತೆ ಅಲಹಾಬಾದ್‌ನಲ್ಲೇ ವಕೀಲಿ ವೃತ್ತಿ ಮಾಡುತ್ತಿದ್ದ ಸರ್ ತೇಜ್ ಬಹಾದೂರ್ ಸಪ್ರು ಅವರ ಎರಡನೆಯ ಮಗ ತ್ರಿಜುಗಿ ನಾರಾಯಣ್ ನಾಲ್ಕೆ ದು ಹೆಜ್ಜೆಗಿಂತ ಹೆಚ್ಚು ಓಡದೆ ಟೆನ್ನಿಸ್ ಆಡುತ್ತಿದ್ದರು!

ಬಾಲ್ ಬಾಯ್‌ಗಳು ಬಾಲ್ ಹೆಕ್ಕಿ ಕೊಡುವುದಷ್ಟೇ ಅಲ್ಲ, ಅದನ್ನು ತ್ರಿಜುಗಿಯವರ ಬ್ಯಾಟ್ ಮೇಲೆ ಅಥವಾ ಕೈಮೇಲೆ ಇಡಬೇಕಿತ್ತು. ಕೆಳಗೆ ಬಾಗಿ ಬಾಲ್ ಎತ್ತಿಕೊಳ್ಳುವುದು ತಮ್ಮ ಘನತೆಗೆ ತಕ್ಕುದಲ್ಲ ಎಂಬಂತೆ ತ್ರಿಜುಗಿ ನಡೆದುಕೊಳ್ಳುತ್ತಿದ್ದರು. ಆಟ ಮುಗಿಯುತ್ತಿದ್ದಂತೆ ಒಬ್ಬ ಸೇವಕ ಓಡಿಬಂದು ಭುಜ ಹಾಗೂ ಕೈಗಳಿಗೆ ಮಸಾಜ್ ಮಾಡುತ್ತಿದ್ದ. ತ್ರಿಜುಗಿ ಕೋಟು ಧರಿಸುವುದ ಕೂಡ ಹೀಗೇ ಆಗಿತ್ತು.

ಇನ್ನು, ಅವರಿಗೆ ಸಿಗರೆಟ್ ಸೇದಬೇಕು ಅನ್ನಿಸಿದಾಗ ಸೇವಕರು ಅದನ್ನು ತ್ರಿಜುಗಿಯ ಬಾಯಿಗೆ ಇಟ್ಟು ಬೆಂಕಿ ಹಚ್ಚಬೇಕಿತ್ತು. ಕೊನೆಗೆ ಹೊಗೆಯನ್ನು ಮಾತ್ರ ಸ್ವತಃ ತಾನೇ ಒಳಗೆ ಎಳೆದುಕೊಳ್ಳುತ್ತಿದ್ದರು. ಆನಂದ ಭವನದ ಐಷಾರಾಮಿ ಜೀವನ 1920ರಲ್ಲಿ ಬದಲಾಯಿತು.

ಗಾಂಧೀಜಿಯವರು ಸರಳ ಜೀವನಕ್ಕೆ ಕರೆ ನೀಡಿದ್ದರಿಂದ ಜವಾಹರಲಾಲ್ ನೆಹರೂ ಚಹಾ ಜೊತೆ ಬಡವರ ಬಾದಾಮಿ ತಿನ್ನತೊಡಗಿದರು. ರೇಷ್ಮೆ ಬಟ್ಟೆಯ ಬದಲು ಕೈಮಗ್ಗದ ಖಾದಿ ಬಟ್ಟೆ ಧರಿಸತೊಡಗಿದರು. ಮೋತಿಲಾಲರು ಒಲ್ಲದ ಮನಸ್ಸಿನಿಂದ ಖಾದಿ ಕೈಮಗ್ಗದ ಬಟ್ಟೆಗಷ್ಟೇ ತಮ್ಮ ಜೀವನಶೈಲಿ ಬದಲಿಸಿಕೊಂಡರು. ಆದರೆ ಆಂಧ್ರದಿಂದ ಅತ್ಯುತ್ತಮ ಕೈಮಗ್ಗದ ಬಟ್ಟೆ ತರಿಸಿಕೊಂಡರು.

‘ಡಿಯರ್ ಓಲ್ಡ್ ಕಾಶ್ಮೀರಿ ಲೇಡಿ’ ಮೋತಿಲಾಲರ ಬಳಿ ನಿಮ್ಮ ಐಷಾರಾಮಿ ಆಧುನಿಕ ಬಂಗಲೆಗೆ ಜವಾಹರಲಾಲನ ಕೊಡುಗೆಯೇನು ಎಂದು ಕೇಳಿದಾಗ, ‘ಆ ಮಹಾನುಭಾವ ಸಣ್ಣಪುಟ್ಟ ತಪ್ಪುಗಳನ್ನು ಹುಡುಕಿಕೊಂಡಿರುತ್ತಾನೆ’ ಎಂದು ಹೇಳಿದ್ದರು. ಮೋತಿಲಾಲರು ಕೊಲ್ಕತ್ತಾದ ಟಾಮ್ಲಿನ್‌ನಿಂದ ಬರೋಬ್ಬರಿ 16000 ರೂಪಾಯಿಗೆ ಪೀಠೋಪಕರಣ ಗಳನ್ನು ಆರ್ಡರ್ ಮಾಡಿದಾಗ (ಆಗ ಮುಂಬೈನ ತಾಜ್ ಹೋಟೆಲ್‌ನಲ್ಲಿ ಒಂದು ದಿನಕ್ಕೆ ೨೩ ರೂ. ಬಾಡಿಗೆ ಇತ್ತು) ಜವಾಹರಲಾಲ್ ‘ಸಾಮಾನ್ಯ ಫರ್ನೀಚರ್ ಸಾಕು’ ಎಂದು ಹೇಳಿದ್ದರು.

ಗಾಂಧೀಜಿಯ ಸಿದ್ಧಾಂತಗಳಿಗೆ ಶರಣಾದ ಮತ್ತು ಮಾರ್ಕ್ಸ್‌ನ ಗುಂಗಿನಲ್ಲೇ ಇನ್ನೂ ಇರುವ ಜವಾಹರಲಾಲ್ ತಮ್ಮನ್ನು ತಾವು ‘ಡಿ-ಕ್ಲಾಸ್’ ಮಾಡಿಕೊಳ್ಳಲು ಯತ್ನಿಸಿದ್ದರು. ತ್ಯಾಗ ಕೂಡ ಕೆಲವೊಮ್ಮೆ ಕ್ಷುಲ್ಲಕವಾಗಬಹುದು. 1927ರಲ್ಲಿ ಜವಾಹರಲಾಲ್ ಯುರೋಪಿನಿಂದ ಮರಳಿದಾಗ ರಾತ್ರಿಯ ಊಟವನ್ನು ಕಡಿತಗೊಳಿಸಿದರು. ತಂದೆ ಮತ್ತು ಮಗ ಇಬ್ಬರೂ ಮನೆಯ ವಾತಾವರಣ ತಾರ್ಕಿಕವಾಗಿರಬೇಕು, ತಾವೆಲ್ಲರೂ ಅಜ್ಞೆಯತಾವಾದಿ ಯಾಗಿರ ಬೇಕು, ಸಂಪ್ರದಾಯಗಳಿಗೆ ಅಥವಾ ಜಾತಿಪದ್ಧತಿಗೆ ಶರಣಾಗುವುದರ ಬದಲು ಆಧ್ಯಾತ್ಮಿಕ ಸ್ವಾತಂತ್ರ್ಯಕ್ಕೆ ಒತ್ತು ನೀಡಬೇಕು ಎಂದು ಒಪ್ಪಂದ ಮಾಡಿಕೊಂಡಿದ್ದರು.

ಮೋತಿಲಾಲರು ಮೊದಲ ಬಾರಿ ವಿದೇಶ ಪ್ರಯಾಣ ಮಾಡಿ ಮರಳಿ ಬಂದಾಗ ಪ್ರಾಯಶ್ಚಿತ್ತ ಮಾಡಿಕೊಂಡು ಶುದ್ಧೀಕರಣ ಪ್ರಕ್ರಿಯೆಗೆ ಒಳಗಾಗಲು ನಿರಾಕರಿಸುವ ಮೂಲಕ ಉನ್ನತ ಜಾತಿಯ ‘ಪಾವಿತ್ರ್ಯ’ವನ್ನು ಉಳಿಸಿಕೊಳ್ಳಲು ನಿರಾಕರಿಸಿದ್ದರು. ಮೋತಿಲಾಲರ ಸಂಪತ್ತು ಅವರ ನಿರಂತರ ದುಡಿಮೆಯ ಫಲ. ರಾತ್ರಿ 8.30 ಅಥವಾ 9 ಗಂಟೆಯವರೆಗೂ ಅವರು ಕೆಲಸ ಮಾಡುತ್ತಿದ್ದರು. ಅದು ಮುಗಿಯುತ್ತಿದ್ದಂತೆ ‘ಯಾರಾದರೂ ಇದ್ದೀರಾ?’ ಎಂದು ಜೋರಾಗಿ ಕರೆಯುತ್ತಿದ್ದರು.

ಸದಾ ತಯಾರಾಗಿ ನಿಂತಿರುತ್ತಿದ್ದ ಭೋಲಾ ‘ಹಾಜಿರ್ ಸಾಬ್’ ಎಂದು ಪ್ರತ್ಯಕ್ಷನಾಗುತ್ತಿದ್ದ. ಅವನ ಕೈಲಿ ಹೇಗ್ಸ್ ಡಿಂಪಲ್ ಸ್ಕಾಚ್ ಮತ್ತು ಅಬ್ದುಲ್ಲಾ ಸಿಗರೆಟ್ ಇರುತ್ತಿತ್ತು. ಅದು ಕಳಪೆ ವರ್ಜೀನಿಯಾ ತಂಬಾಕಿನಿಂದ ತಯಾರಿಸಿದ್ದಲ್ಲ, ಅತ್ಯುತ್ಕೃಷ್ಟ ಟರ್ಕಿಶ್ ಅಥವಾ ಈಜಿಪ್ಷಿ ಯನ್ ತಂಬಾಕಿನ ಸಿಗರೇಟ್.

ಮೋತಿಲಾಲರು ನಿತ್ಯ ಕುಡಿಯುತ್ತಿದ್ದುದು ಎರಡು ಡ್ರಿಂಕ್ ಮಾತ್ರ. ಆದರೆ ಪ್ರತಿ ಡ್ರಿಂಕ್‌ನ ಗಾತ್ರ ಎಷ್ಟು ಎಂಬುದು ಯಾರಿಗೂ ಗೊತ್ತಿರಲಿಲ್ಲ. ಎರಡನೇ ಡ್ರಿಂಕ್ ಮುಗಿಯುತ್ತಾ ಬಂದಾಗ ನಿಗೂಢ ರೀತಿಯಲ್ಲಿ ಗ್ಲಾಸ್‌ನಲ್ಲಿ ನೊಣ ಬಿದ್ದಿರುತ್ತಿತ್ತು! ಅಂದರೆ ಅದನ್ನು ಚೆಲ್ಲಿ ಮೂರನೇ ಡ್ರಿಂಕ್ ಸುರಿಯಬೇಕಾಗಿತ್ತು.

ಗಾಂಧೀಜಿ ಅಸಹಕಾರ ಚಳವಳಿಗೆ ಕರೆ ಕೊಟ್ಟಾಗ ಜವಾಹರಲಾಲ್ ಅವರು ತಂದೆಯ ಮನವೊಲಿಸಿ ಮದ್ಯ ಸೇವನೆ ನಿಲ್ಲಿಸಿದರು. ಐಷಾರಾಮಿ ಬದುಕನ್ನೂ ನಿಲ್ಲಿಸುವಂತೆ ನೋಡಿಕೊಂಡಿದ್ದರು. ಆದರೆ, ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ವಿಧಿಯೇ ಅವರ ನೆರವಿಗೆ ಬಂದಿತು. ಬ್ರಿಟಿಷ್ ಆಡಳಿತಕ್ಕೆ ಸವಾಲೆಸೆದ ಕಾರಣವೊಡ್ಡಿ ಮೋತಿಲಾಲ್, ಕಾನೂನು ಪಂಡಿತರು ಹಾಗೂ ರಾಜಸಂಸ್ಥಾನಗಳ ಪ್ರಮುಖರಿಗೆ ಆರು ತಿಂಗಳ ಸಾಮಾನ್ಯ ಜೈಲುಶಿಕ್ಷೆ ವಿಧಿಸಲಾಯಿತು.

ವಾಸಸ್ಥಾನ ಬದಲಾಯಿತು, ಆದರೆ ವಾಸಿಸುವವರು ಬದಲಾಗಲಿಲ್ಲ. ಮೋತಿಲಾಲರು ಮನೆಯಲ್ಲಿ ಮಾಡುತ್ತಿದ್ದಂತೆ ಜೈಲಿನ ಕೋಣೆಯಿಂದಲೂ ವಾರ್ಡನ್‌ಗಳಿಗೆ ಅದೇ ಹಳೆಯ ಗತ್ತಿನಲ್ಲಿ ಆದೇಶಗಳನ್ನು ನೀಡುತ್ತಿದ್ದರು. ಟೇಬಲ್ ಬದಲು ನೆಲದ ಮೇಲೆ ಜಮಖಾನ ಹಾಸಿಕೊಂಡು ಕುಳಿತು ಪ್ರತಿದಿನ ಮಧ್ಯಾಹ್ನದ ಬಳಿಕ ಜೈಲಿನ ಕೋಣೆಗೇ ಅತಿಥಿಗಳನ್ನು ಕರೆಸಿಕೊಳ್ಳುತ್ತಿದ್ದರು. ಅವರ ಮುಂದೆ ದೊಡ್ಡ ಹಣ್ಣಿನ ಬುಟ್ಟಿ ಮತ್ತು ಸ್ವೀಟ್‌ಗಳಿರು ತ್ತಿದ್ದವು. ಅವರಿಗೆ ಯಾವುದೇ ನಿರ್ಬಂಧಗಳಿರಲಿಲ್ಲ. ಇಡೀ ಲಕ್ನೋದಲ್ಲಿ ಅತ್ಯುತ್ತಮ ಮಧ್ಯಾಹ್ನದ ಟೀ ಜೈಲಿನೊಳಗೆ ಸಿಗುತ್ತದೆ ಎಂದು ಸುದ್ದಿಯಾಗಿತ್ತು!

ಮೋತಿಲಾಲರು ಹೊಟ್ಟೆಯೊಳಗಿನಿಂದ ಗಹಗಹಿಸಿ ನಗುವುದು ಇಡೀ ಜೈಲಿನಲ್ಲಿ ಪ್ರತಿಧ್ವನಿ ಸುತ್ತಿತ್ತು. ಅವರಿಗೆ ಜೈಲಿನಲ್ಲೂ ಐಷಾರಾಮಿ ಬದುಕು ಲಭಿಸಲು ಕಾರಣ- ಸಂಯುಕ್ತ ಪ್ರಾಂತ್ಯಗಳ ಗವರ್ನರ್ ಆಗಿದ್ದ ಸರ್ ಹಾರ್‌ಕೌರ್ಟ್ ಬಟ್ಲರ್ ಜೊತೆ ಮೋತಿಲಾಲರಿಗೆ ಆಪ್ತವಾದ ಸ್ನೇಹವಿತ್ತು. ಅವರಿಬ್ಬರೂ ಒಟ್ಟಾಗಿ ನದಿಗಟ್ಟಲೆ ಶಾಂಪೇನ್ ಕುಡಿದಿದ್ದರು. ಭೂಮಾಲಿಕರು, ತಾಲೂಕಿನ ಶ್ರೀಮಂತರು, ಜಮೀನ್ದಾರರು ಏರ್ಪಡಿಸುತ್ತಿದ್ದ ಪಾರ್ಟಿಗಳಿಗೆ ಅವರಿಬ್ಬರೂ ಒಟ್ಟಿಗೇ ಹೋಗುತ್ತಿದ್ದರು. ಆದರೆ, ಮೋತಿಲಾಲರ ಸಾವಿನ ಬಳಿಕ 1930ರ ದಶಕದಲ್ಲಿ ಜವಾಹರಲಾಲರ ಜೈಲುವಾಸ ಬಹಳ ಸರಳವಾಗಿತ್ತು.

(ಮುಂದುವರೆಯುವುದು)