ಬಿಹಾರ ವಿಧಾನಸಭಾ ಚುನಾವಣೆಗೆ ಎನ್‌ಡಿಎ ಸೀಟು ಹಂಚಿಕೆ ಪೂರ್ಣ; ಬಿಜೆಪಿ-ಜೆಡಿಯು ತಲಾ 101 ಕಡೆ ಸ್ಪರ್ಧೆ; ಚಿರಾಗ್ ಪಾಸ್ವಾನ್‌ಗೆ ಸಿಕ್ಕಿದ್ದೆಷ್ಟು?
Bihar Election: ನವೆಂಬರ್ 6 ಮತ್ತು 11ರಂದು ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಈ ಮಧ್ಯೆ ಎನ್‌ಡಿಎ ಮಿತ್ರಪಕ್ಷದೊಳಗಿನ ಸೀಟು ಹಂಚಿಕೆಯನ್ನು ಅಂತಿಮಗೊಳಿಸಿದೆ. ಯಾರಿಗೆ ಎಷ್ಟು ಸೀಟು ಸಿಕ್ಕಿದೆ ಎನ್ನುವ ವಿವರ ಇಲ್ಲಿದೆ.

-

ಪಾಟ್ನಾ, ಅಕ್ಟೋಬರ್ 12: ದೇಶದ ಗಮನ ಸೆಳೆದ ಬಿಹಾರ ವಿಧಾನಸಭಾ ಚುನಾವಣೆಗೆ (Bihar Election) ದಿನಾಂಕ ಘೋಷಣೆಯಾಗಿದ್ದು, ರಾಜಕೀಯ ಚಟುವಟಿಕೆ ಗರಿಗೆದರಿದೆ. ಇದೀಗ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಮಿತ್ರಪಕ್ಷದೊಳಗಿನ ಸೀಟು ಹಂಚಿಕೆಯನ್ನು ಅಂತಿಮಗೊಳಿಸಿದೆ. ರಾಜ್ಯದಲ್ಲಿ ಒಟ್ಟು 243 ಕ್ಷೇತ್ರಗಳಿದ್ದು, ಈ ಪೈಕಿ ಬಿಜೆಪಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು (Janata Dal United) ತಲಾ 101 ಕಡೆ ಕಣಕ್ಕಿಳಿಯಲಿದೆ. ಇನ್ನು ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷವು (Lok Janshakti Party (Ram Vilas) 29 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಈ ಬಗ್ಗೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದಾರೆ.
ʼʼಇನ್ನು ಎನ್‌ಡಿಎಯ ಮಿತ್ರ ಪಕ್ಷಗಳಾದ ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಮೋರ್ಚಾ (Rashtriya Lok Morcha-RLM) ಮತ್ತು ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನ್ ಅವಾಮ್ ಮೋರ್ಚಾ (Hindustan Awam Morcha-HAM) ತಲಾ 6 ಸ್ಥಾನಗಳಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದೆʼʼ ಎಂದು ಪ್ರಧಾನ್ ತಿಳಿಸಿದ್ದಾರೆ.
ಈ ಹಿಂದೆ ಚಿರಾಗ್ ಪಾಸ್ವಾಗ್ ತಮ್ಮ ಪಕ್ಷಕ್ಕೆ 40-45 ಸೀಟು ಕೊಡಬೇಕೆಂದು ಪಟ್ಟು ಹಿಡಿದಿದ್ದರು. ಇದು ಸಾಧ್ಯವಾಗದಿದ್ದರೆ ಅವರು ಮೈತ್ರಿ ತೊರೆಯಲಿದ್ದಾರೆ ಎನ್ನುವ ವದಂತಿ ಹರಡಿತ್ತು. ಬಿಜೆಪಿ 25 ಸ್ಥಾನಗಳನ್ನು ಮಾತ್ರ ಹಂಚಿಕೆ ಮಾಡಲು ಸಿದ್ಧವಿತ್ತು. ಕೊನೆಗೂ ಧರ್ಮೇಂದ್ರ ಪ್ರಧಾನ್ ಅವರ ಮಾತುಕತೆ ಫಲ ನೀಡಿದ್ದು, 29 ಕ್ಷೇತ್ರದ ಒಪ್ಪಂದಕ್ಕೆ ಬರಲಾಗಿದೆ.
ಧರ್ಮೇಂದ್ರ ಪ್ರಧಾನ್ ಅವರ ಎಕ್ಸ್ ಪೋಸ್ಟ್:
हम एनडीए के साथियों ने सौहार्दपूर्ण वातावरण में सीटों का वितरण पूर्ण किया।
— Dharmendra Pradhan (@dpradhanbjp) October 12, 2025
BJP – 101
JDU – 101
LJP (R) – 29
RLM – 06
HAM – 06
एनडीए के सभी दलों के कार्यकर्ता और नेता इसका हर्षपूर्वक स्वागत करते हैं।
बिहार है तैयार,
फिर से एनडीए सरकार।#NDA4Bihar ✌️
ಈ ಸುದ್ದಿಯನ್ನೂ ಓದಿ: Bihar Assembly election: ರಂಗೇರಿದ ಬಿಹಾರ ಚುನಾವಣೆ; ಜೆಡಿಯು ಮೊದಲ ಅಭ್ಯರ್ಥಿ ಪಟ್ಟಿ ರಿಲೀಸ್!
ಬಿಹಾರದಲ್ಲಿ ಮತ್ತೊಮ್ಮೆ ಎನ್‌ಡಿಎ ಸರ್ಕಾರ
"ಎನ್‌ಡಿಎ ಮಿತ್ರಪಕ್ಷಗಳು ಸೌಹಾರ್ದಯುತವಾಗಿ ಸೀಟು ಹಂಚಿಕೆಯನ್ನು ಪೂರ್ಣಗೊಳಿಸಿವೆ. ಎನ್‌ಡಿಎ ಪಕ್ಷಗಳ ಎಲ್ಲ ಕಾರ್ಯಕರ್ತರು ಮತ್ತು ನಾಯಕರು ಈ ತೀರ್ಮಾನವನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತಾರೆ. ಬಿಹಾರದಲ್ಲಿ ಮತ್ತೊಮ್ಮೆ ಸರ್ಕಾರ ರಚಿಸಲು ಎನ್‌ಡಿಎ ಸಿದ್ಧವಾಗಿದೆ" ಎಂದು ಪ್ರಧಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೇ ಮೊಲ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಬಿಜೆಪಿಗಿಂತ ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿಲ್ಲ ಎನ್ನುವುದು ವಿಶೇಷ. 2020ರ ಚುನಾವಣೆಯಲ್ಲಿ ಜೆಡಿಯು 115 ಸ್ಥಾನಗಳಲ್ಲಿ ಮತ್ತು ಬಿಜೆಪಿ 110 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷವು ಪ್ರತೇಕವಾಗಿ ಕಣಕ್ಕಿಳಿದಿತ್ತು.
ಈತನ್ಮಧ್ಯೆ ನಿತೀಶ್ ಕುಮಾರ್ ಅವರ ಆಡಳಿತವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿರುವ ವಿಪಕ್ಷಗಳ ʼಇಂಡಿಯಾʼ ಒಕ್ಕೂಟವು ಮಿತ್ರ ಪಕ್ಷಗಳ ಸೀಟು ಹಂಚಿಕೆಯನ್ನು ಶೀಘ್ರದಲ್ಲೇ ಅಂತಿಮಗೊಳಿಸುವುದಾಗಿ ತಿಳಿಸಿದೆ. "ಎಲ್ಲವೂ ಸರಿಯಾಗಿದೆ ಹಾಗೂ ಮಾತುಕತೆ ಧನಾತ್ಮಕವಾಗಿ ಸಾಗಿದೆ. ಸೋಮವಾರ ಪತ್ರಿಕಾಗೋಷ್ಠಿ ಮೂಲಕ ವಿವರ ಪ್ರಕಟಿಸಲಾಗುತ್ತದೆ" ಎಂದು ಆರ್‌ಜೆಡಿ ಶಾಸಕ ಭಾಯಿ ವೀರೇಂದ್ರ ಹೇಳಿದ್ದಾರೆ.
ರಾಷ್ಟ್ರ ರಾಜಕೀಯದಲ್ಲಿ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭಾ ಚುನಾವಣೆಯ ಮತದಾನ 2 ಹಂತಗಳಲ್ಲಿ ನವೆಂಬರ್ 6 ಮತ್ತು 11ರಂದು ನಡೆದು ನವೆಂಬರ್ 14ರಂದು ಫಲಿತಾಂಶ ಹೊರ ಬೀಳಲಿದೆ.