ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹುಟ್ಟಿದ್ದು ಆಂಧ್ರ ಪ್ರದೇಶದಲ್ಲಾದರೂ ನೆಲೆಸಿದ್ದು ಕರುನಾಡಲ್ಲಿ; ಕನ್ನಡ ಚಿತ್ರ ಸಂಗೀತಕ್ಕೆ ಗಾನ ಕೋಗಿಲೆ ಜಾನಕಿ ಕೊಡುಗೆಯ ಮೆಲುಕು

S Janaki: ಕನ್ನಡದ ಸೂಪರ್‌ ಹಿಟ್‌ ಚಿತ್ರಗೀತೆಗಳಿಗೆ ಧ್ವನಿ ನೀಡಿದ ಗಾಯಕಿ, ದಕ್ಷಿಣ ಭಾರತದ ಗಾನ ಕೋಗಿಲೆ ಎಸ್‌. ಜಾನಕಿ ಇನ್ನಿಲ್ಲ. ಹೌದು, ತಮ್ಮ ಭಾವಪೂರ್ಣ ಧ್ವನಿಯಿಂದಲೇ ಚಿತ್ರರಸಿಕರ ಮನಗೆದ್ದ, ಬರೋಬ್ಬರಿ 6 ದಶಕಗಳ ಕಾಲ ಗಾಯನ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದ ಅವರ ಬಗ್ಗೆ ಸಾಧನೆಯ ಬಗ್ಗೆ ಇಲ್ಲಿದೆ ವಿವರ.

ಕನ್ನಡ ಚಿತ್ರ ಸಂಗೀತಕ್ಕೆ ಗಾನ ಕೋಗಿಲೆ ಜಾನಕಿ ಕೊಡುಗೆ

ಎಸ್‌. ಜಾನಕಿ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Jul 11, 2026 11:22 PM

ಬೆಂಗಳೂರು, ಜು. 11: 'ಪೂಜಿಸಲೆಂದೇ ಹೂಗಳ ತಂದೆʼ, ʼಬಾನಲ್ಲೂ ನೀನೆ, ಭುವಿಯಲ್ಲೂ ನೀನೆʼ, ʼಶಿವ ಶಿವʼ, ʼಬಿಡೆನು ನಿನ್ನ ಪಾದʼ....ಹೀಗೆ ಕನ್ನಡದ ಸೂಪರ್‌ ಹಿಟ್‌ ಚಿತ್ರಗೀತೆಗಳಿಗೆ ಧ್ವನಿ ನೀಡಿದ ಗಾಯಕಿ, ದಕ್ಷಿಣ ಭಾರತದ ಗಾನ ಕೋಗಿಲೆ ಎಸ್‌. ಜಾನಕಿ (S Janaki) ಇನ್ನಿಲ್ಲ. ಹೌದು, ತಮ್ಮ ಭಾವಪೂರ್ಣ ಧ್ವನಿಯಿಂದಲೇ ಚಿತ್ರರಸಿಕರ ಮನಗೆದ್ದ, ಬರೋಬ್ಬರಿ 6 ದಶಕಗಳ ಕಾಲ ಗಾಯನ ಸ್ರಾಮ್ರಾಜ್ಞದಲ್ಲಿ ಅನಭಿಷಕ್ತ ರಾಣಿಯಾಗಿ ಮೆರೆದ ಅವರು ಶಾಶ್ವತವಾಗಿ ಚಿರ ನಿದ್ರೆಗೆ ಜಾರಿದ್ದಾರೆ. ಹೃದಯಾಘಾತದಿಂದ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಅವರು ಜುಲೈ 11ರಂದು ಇಹಲೋಕ ತ್ಯಜಿಸಿದರು. ಹುಟ್ಟಿದ್ದು ಆಂಧ್ರ ಪ್ರದೇಶದಲ್ಲಾದರೂ ಕರ್ನಾಟಕದ ಬಗ್ಗೆ ವಿಶೇಷ ಒಲವು ಇಟ್ಟುಕೊಂಡಿದ್ದರು. ಹೀಗಾಗಿ ತಮ್ಮ ಕೊನೆಯ ದಿನಗಳನ್ನು ಮೈಸೂರಿನಲ್ಲೇ ಕಳೆದರು.

ಸುಮಾರು 20ಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಹಾಡುಗಳಿಗೆ ಧ್ವನಿ ನೀಡಿದ್ದ ಜಾನಕಿ ಅತೀ ಹೆಚ್ಚು ಹಾಡಿದ್ದು ಕನ್ನಡದ ಹಾಡುಗಳನ್ನು. ಅದರಲ್ಲೂ ಅವರು ‍ಧ್ವನಿ ನೀಡಿದ ಬಹುತೇಕ ಎಲ್ಲ ಹಾಡುಗಳು ಸೂಪರ್‌ ಹಿಟ್‌ ಆಗಿವೆ. ಪಿ.ಬಿ. ಶ್ರೀನಿವಾಸ್‌ ಅವರಿಂದ ಹಿಡಿದು, ಡಾ. ರಾಜ್‌ಕುಮಾರ್‌, ಎಸ್‌.ಪಿ. ಬಾಲಸುಬ್ರಹ್ಮಣ್ಯಂ, ಕೆ.ಜೆ. ಯೇಸುದಾಸ್‌ ಅವರಂತಹ ದಿಗ್ಗಜರ ಜತೆ ಜಾನಕಿ ಡ್ಯುಯೆಟ್‌ ಹಾಡು ಹಾಡಿದ್ದಾರೆ. ಎಸ್‌. ಜಾನಕಿ ಹಾಡಿದ್ದಾರೆ ಎಂದರೆ ಆ ಹಾಡು ಸೂಪರ್‌ ಹಿಟ್‌ ಎಂಬ ವಿಶ್ವಾಸ ಸಿನಿ ಪ್ರೇಮಿಗಳಲ್ಲಿತ್ತು.

ಎಸ್‌. ಜಾನಕಿ ಅವರ ಸಿನಿ ಜರ್ನಿ:



ಸಂಗೀತ ನಿರ್ದೇಶಕರ ನೆಚ್ಚಿನ ಗಾಯಕಿ

ಎಸ್‌. ಜಾನಕಿ ಸಂಗೀತ ನಿರ್ದೇಶಕರ ಅಚ್ಚುಮೆಚ್ಚಿನ ಗಾಯಕಿಯಾಗಿದ್ದರು. ಎ.ಆರ್‌. ರೆಹಮಾನ್‌, ಕನ್ನಡದ ಜಿ.ಕೆ. ವೆಂಕಟೇಶ್‌, ಹಂಸಲೇಖ, ಇಳಯರಾಜ, ಎಂ. ರಂಗರಾವ್‌, ರಾಜನ್‌-ನಾಗೇಂದ್ರ, ವಿಜಯ್‌ ಭಾಸ್ಕರ್‌, ಎಲ್‌. ವೈದ್ಯನಾಥನ್‌ ಮುಂತಾದ ಜನಪ್ರಿಯ ಸಂಗೀತ ನಿರ್ದೇಶಕರ ಹಾಡಿಗೆ ಜಾನಕಿ ಧ್ವನಿ ನೀಡಿದ್ದಾರೆ.

ದಕ್ಷಿಣ ಭಾರತದ ಗಾನ ಕೋಗಿಲೆ ಎಸ್‌ ಜಾನಕಿ ಮೊದಲ ಹಾಡು ಹಾಡಿದ್ದು ಯಾವಾಗ?

ಜಿ.ಕೆ. ವೆಂಕಟೇಶ್‌

ಕನ್ನಡ ಚಿತ್ರರಂಗದ ಹಾಡುಗಳನ್ನು ಜನಪ್ರಿಯಗೊಳಿಸಿದ ಸಂಗೀತ ನಿರ್ದೇಶಕರಲ್ಲಿ ಒಬ್ಬರಾದ ಜಿ.ಕೆ. ವೆಂಕಟೇಶ್‌ ಅವರ ಹಲವು ಸೂಪರ್‌ ಹಿಟ್‌ ಹಾಡುಗಳನ್ನು ಎಸ್‌. ಜಾನಕಿ ತಮ್ಮ ಧ್ವನಿಯ ಮೂಲಕ ಸ್ಮರಣೀಯಗೊಳಿಸಿದ್ದಾರೆ. ಜಿ.ಕೆ. ವೆಂಕಟೇಶ್‌ ಸಂಗೀತ ನೀಡಿದ ʼಸಂಧ್ಯಾ ರಾಗʼದ ʼನಂಬಿದೆ ನಾದದೇವತೆʼ ಮತ್ತು ʼಸನಾದಿ ಅಪ್ಪಣ್ಣʼ ಸಿನಿಮಾದ ʼಕರೆದರೂ ಕೇಳದೆʼ ಹಾಡು ಇಂದಿಗೂ ಜನಪ್ರಿಯ. ವಿಶೇಷ ಎಂದರೆ ವರನಟ ಡಾ. ರಾಜ್‌ಕುಮಾರ್‌ ತಮ್ಮ ಮೊದಲ ಡ್ಯುಯೆಟ್‌ ಸಾಂಗ್‌ ಹಾಡಿದ್ದು ಜಾನಕಿ ಜತೆಗೆ. ʼಮಹಿಷಾಸುರ ಮರ್ದಿನಿʼ ಚಿತ್ರದ ʼತಂಬಿಟ್ಟು ಮನವಾʼ ಹಾಡಿಗೆ ಈ ಇಬ್ಬರು ದಿಗ್ಗಜರು ಧ್ವನಿ ನೀಡಿದ್ದರು.

ಹಂಸಲೇಖ

ಇನ್ನು ಹಂಸಲೇಖ ಮತ್ತು ಜಾನಕಿ ಕಾಂಬಿನೇಷನ್‌ನ ಹಾಡುಗಳಂತೂ ಒಂದಕ್ಕಿಂತ ಒಂದು ಸೂಪರ್‌ ಹಿಟ್‌. ಆರಂಭದಲ್ಲಿ ಹಂಸಲೇಖ ಅವರ ಮೊದಲ ಆಯ್ಕೆಯೇ ಎಸ್‌. ಜಾನಕಿ ಆಗಿದ್ದರು. ಎಸ್‌.ಪಿ. ಬಾಲಸುಬ್ರಹ್ಮಣ್ಯ-ಎಸ್‌.ಜಾನಕಿ-ಹಂಸಲೇಖ ಸ್ಯಾಂಡಲ್‌ವುಡ್‌ನಲ್ಲಿ ಮ್ಯಾಜಿಕ್‌ ಅನ್ನೇ ಸೃಷ್ಟಿಸಿದ್ದಾರೆ. ಅದರಲ್ಲೂ ʼಪ್ರೇಮಲೋಕʼ, ʼರಣಧೀರʼ ಚಿತ್ರದ ಹಾಡುಗಳು ಇಂದಿಗೂ ಹಲವರ ಪ್ಲೇ ಲಿಸ್ಟ್‌ನಲ್ಲಿದೆ. ಹಂಸಲೇಖ ಅವರ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ಜಾನಕಿ ಹಾಡಿದ್ದಾರೆ.

ಇಳಯರಾಜ

ದಕ್ಷಿಣ ಭಾರತದ ಜನಪ್ರಿಯ ಸಂಗೀತ ನಿರ್ದೇಶಕ ಇಳಯರಾಜ ಕನ್ನಡದಲ್ಲೂ ಹಲವು ಸೂಪರ್‌ ಹಿಟ್‌ ಹಾಡುಗಳನ್ನು ನೀಡಿದ್ದಾರೆ. ಇಳಯರಾಜ ಅವರಿಗೂ ಜಾನಕಿ ಅಚ್ಚುಮೆಚ್ಚಿನ ಗಾಯಕಿಯಾಗಿದ್ದರು. ಇಳಯರಾಜ ಅವರ ಮೊದಲ ಚಿತ್ರ ತಮಿಳಿನ ʼಅಣ್ಣಾಕ್ಕಿʼಯಲ್ಲಿ ಜಾನಕಿ ಹಾಡಿದ 3 ಹಾಡುಗಳು ಸೂಪರ್‌ ಹಿಟ್‌ ಆಗಿವೆ. ಅದರಲ್ಲೂ ಕನ್ನಡದ 'ಗೀತಾ' ಚಿತ್ರದ ʼಜೊತೆ ಜೊತೆಯಲಿʼ ಹಾಡು ಇಂದಿಗೂ ಜನಪ್ರಿಯ.

ಎಂ. ರಂಗರಾವ್‌

ಕನ್ನಡ ಚಿತ್ರ ಸಂಗೀತಕ್ಕೆ ಮಹತ್ವದ ಕೊಡುಗೆ ನೀಡಿದವರಲ್ಲಿ ಎಂ. ರಂಗರಾವ್‌ ಕೂಡ ಒಬ್ಬರು. ಅವರು ಸಂಗೀತ ನೀಡಿದ ಹಲವು ಹಾಡುಗಳಿಗೆ ಜಾನಕಿ ಧ್ವನಿ ನೀಡಿದ್ದಾರೆ. ರಾಂಗರಾವ್‌-ಜಾನಕಿ ಕಾಂಬಿನೇಷನ್‌ನ ʼಎಡಕಲ್ಲು ಗುಡ್ಡದ ಮೇಲೆʼ ಸಿನಿಮಾದ ʼಸನ್ಯಾಸಿ ಸನ್ಯಾಸಿʼ ಭಾರಿ ಸಂಚಲನ ಸೃಷ್ಟಿಸಿತ್ತು. ʼಹೊಸಬೆಳಕುʼ ಚಿತ್ರಕ್ಕಾಗಿ ರಂಗರಾವ್‌ ರಾಷ್ಟ್ರಕವಿ ಕುವೆಂಪು ಅವರ ʼತೆರೆದಿದೆ ಮನೆಗೆ ಬಾ ಅತಿಥಿʼ ಹಾಡು ಬಳಸಿದ್ದರು. ಇದನ್ನು ಎಸ್‌. ಜಾನಕಿ ಹಾಡಿದ್ದರು.

ಹಾಡು ನಿಲ್ಲಿಸಿದ ʻಕೋಗಿಲೆʼ; ಎಸ್‌.ಜಾನಕಿ ನಿಧನಕ್ಕೆ ಸಿಎಂ ಡಿ.ಕೆ.ಶಿವಕುಮಾರ್‌ ಸೇರಿ ಗಣ್ಯರ ಸಂತಾಪ

ರಾಜನ್‌-ನಾಗೇಂದ್ರ

ರಾಜನ್‌-ನಾಗೇಂದ್ರ ಅವರ ಅವರ ಬಹುತೇಕ ಹಾಡುಗಳಿಗೆ ಜಾನಕಿ ಧ್ವನಿ ನೀಡಿದ್ದಾರೆ. ʼಎರಡು ಕನಸುʼ, ʼಹೊಂಬಿಸಿಲುʼ, ʼಗಾಳಿ ಮಾತುʼ, ʼಅವಳ ಹೆಜ್ಜೆʼ, ʼಚಂದನ ಗೊಂಬೆʼ, ʼನಾ ನಿನ್ನ ಬಿಡಲಾರೆʼ ಮತ್ತಿತರ ಚಿತ್ರಗಳಲ್ಲಿ ರಾಜನ್‌-ನಾಗೇಂದ್ರ-ಜಾನಕಿ ಕಾಂಬಿನೇಷನ್‌ ಮೋಡಿ ಮಾಡಿದೆ.

ವಿಜಯ ಭಾಸ್ಕರ್‌

ವಿಜಯ ಭಾಸ್ಕರ್‌ ಅವರ ʼಗೆಜ್ಜೆ ಪೂಜೆʼ, ಬೆಳ್ಳಿಮೋಡʼ, ʼಉಪಾಸನೆʼ ಮತ್ತು ʼಸೀತಾʼ ಮುಂತಾದ ಚಿತ್ರಗಳಲ್ಲಿ ಜಾನಕಿ ಹಾಡಿದ್ದಾರೆ. ಹೀಗೆ ಎಸ್‌. ಜಾನಕಿ ಹಲವು ಸ್ಮರಣೀಯ ಹಾಡುಗಳನ್ನು ನೀಡಿದ್ದಾರೆ.

ಎಲ್‌. ವೈದ್ಯನಾಥನ್‌

ಎಲ್‌. ವೈದ್ಯನಾಥನ್‌ ಸಂಗೀತ ನಿರ್ದೇಶನದಲ್ಲೂ ಜಾನಕಿ ಹಾಡಿದ್ದಾರೆ. ಒಮ್ಮೆ ಸಂದರ್ಶನವೊಂದರಲ್ಲಿ ತಾವು ತಮ್ಮ ವೃತ್ತಿ ಜೀವನದಲ್ಲಿ ಹಾಡಿದ ಅತ್ಯಂತ ಕಠಿಣ ಹಾಡು ಯಾವುದು ಎಂದು ಬಹಿರಂಗಪಡಿಸಿದ್ದರು. ಕನ್ನಡದ ʼಹೇಮಾವತಿʼ ಚಿತ್ರದ ʻಶಿವ ಶಿವ ಎನ್ನದ ನಾಲಿಗೆಯೇಕುʼ ಎಂಬ ಹಾಡು ತಮಗೆ ಅತ್ಯಂತ ಕಠಿಣವಾಗಿತ್ತು ಎಂದು ಹೇಳಿಕೊಂಡಿದ್ದರು. ಈ ಚಿತ್ರಕ್ಕೆ ತಮಗೆ ರಾಷ್ಟ್ರ ಪ್ರಶಸ್ತಿ ಸಿಗಬೇಕಿತ್ತು ಎಂದಿದ್ದರು.

ಮನರಂಜನೆಯ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.