ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಿಡದಿ ಟೌನ್‌ಶಿಪ್‌ಗೆ ಬಲವಂತವಾಗಿ ರೈತರ ಜಮೀನು ಸ್ವಾಧೀನ: ವಿಜಯೇಂದ್ರ ಆಕ್ರೋಶ

B.Y. Vijayendra: ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ತಮ್ಮ ಸರ್ಕಾರದ ಆದ್ಯತೆ ರಿಯಲ್ ಎಸ್ಟೇಟ್ ಎಂಬುದನ್ನು ತೋರಿಸಿದ್ದಾರೆ. ಈ ಸರ್ಕಾರಕ್ಕೆ ರೈತರ ಮೇಲೆ ಕಾಳಜಿಯಿಲ್ಲ. ಬಿಡದಿಯಲ್ಲಿ ಟೌನ್‍ಶಿಪ್ ಮಾಡಲು ಮುಂದಾಗಿರುವ ಸರ್ಕಾರ ಬಲಾತ್ಕಾರವಾಗಿ, ಅಕ್ರಮವಾಗಿ ರೈತರ ಜಮೀನು ಕಸಿಯಲು ಮುಂದಾಗಿದೆ. ಇದನ್ನು ಬಿಜೆಪಿ ವಿರೋಧಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ರಾಜ್ಯ ಸರ್ಕಾರದ ಆದ್ಯತೆ ರಿಯಲ್ ಎಸ್ಟೇಟ್ ಹೊರತು ರೈತರಲ್ಲ: ಬಿವೈವಿ

ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ. -

Profile
Siddalinga Swamy Jun 17, 2026 4:55 PM

ಬೆಂಗಳೂರು, ಜೂ.17: ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರದ ಪ್ರಮುಖ ಆದ್ಯತೆ ರಿಯಲ್ ಎಸ್ಟೇಟ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ (B.Y. Vijayendra) ಆರೋಪಿಸಿದರು. ಧವಳಗಿರಿ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ (CM DK Shivakumar) ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ತಮ್ಮ ಸರ್ಕಾರದ ಆದ್ಯತೆ ರಿಯಲ್ ಎಸ್ಟೇಟ್ ಎಂಬುದನ್ನು ತೋರಿಸಿದ್ದಾರೆ. ಈ ಸರ್ಕಾರಕ್ಕೆ ರೈತರ ಮೇಲೆ ಕಾಳಜಿಯಿಲ್ಲ ಎಂದು ಕಿಡಿಕಾರಿದರು.

ಬಿಡದಿಯಲ್ಲಿ ಟೌನ್‍ಶಿಪ್ ಮಾಡಲು ಮುಂದಾಗಿರುವ ಸರ್ಕಾರ ಬಲಾತ್ಕಾರವಾಗಿ, ಅಕ್ರಮವಾಗಿ ರೈತರ ಜಮೀನು ಕಸಿಯಲು ಮುಂದಾಗಿದೆ. ಇದನ್ನು ಬಿಜೆಪಿ ವಿರೋಧಿಸಲಿದೆ. ಆದ್ದರಿಂದ ಇಂತಹ ಕೆಲಸವನ್ನು ಸರ್ಕಾರ ಕೈಬಿಡಬೇಕು ಎಂದು ಒತ್ತಾಯಿಸಿದರು.

ಅನ್ನದಾತರಿಗೆ ಈ ಸರ್ಕಾರ ನೆರವಾಗಬೇಕಿತ್ತು. ಆದರೆ ದುರದೃಷ್ಟವೆಂದರೆ ಬೆಂಗಳೂರಿನ ರಿಯಲ್ ಎಸ್ಟೇಟ್ ಸರ್ಕಾರಕ್ಕೆ ಮುಖ್ಯವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಂಡತನ ಬಿಟ್ಟು ರೈತರ ಸಮಸ್ಯೆಗಳನ್ನು ಆಲಿಸಬೇಕು. ಅವರನ್ನು ಒಕ್ಕಲೆಬ್ಬಿಸಬಾರದು. ಟೌನ್‍ಶಿಪ್‍ಗಾಗಿ ಭೂಸ್ವಾಧೀನವನ್ನು ನಿಲ್ಲಿಸಬೇಕು ಎಂದರು.

ಗೊಡ್ಡು ಬೆದರಿಕೆ ಹೆದರಲ್ಲ

ನನ್ನ ವಿರುದ್ಧ, ಬಿಜೆಪಿ ನಾಯಕರ ವಿರುದ್ಧ, ವಿರೋಧ ಪಕ್ಷದ ನಾಯಕರ ವಿರುದ್ಧ ಪೋಸ್ಟರ್ ಆಂದೋಲನ ನಡೆಸಲಾಗುತ್ತಿದೆ. ಇದಕ್ಕೆ ಹೆರದಲ್ಲ. ನಿಮ್ಮ ಗೊಡ್ಡು ಬೆದರಿಕೆ ಹೆದರಲು ಕಾಂಗ್ರೆಸ್ ಶಾಸಕರಲ್ಲ. ಈ ನಾಡಿನ ರೈತರ ಪರವಾಗಿ ನಿಲ್ಲುವ ಕರ್ತವ್ಯ ನಮ್ಮದು ಅದನ್ನು ಮಾಡೇ ಮಾಡುತ್ತೇವೆ. ವಿರೋಧ ಪಕ್ಷದ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುತ್ತೇವೆ ಎಂದರು.

ಗ್ಯಾರಂಟಿ ಅನುಷ್ಠಾನ ಸಮಿತಿ ಕತ್ತೆ ಕಾಯುತ್ತಿದೆಯೇ

ಗ್ಯಾರಂಟಿಗಳಲ್ಲಿ ಅಕ್ರಮ ಆಗೋವರೆಗೆ ಅನುಷ್ಠಾನ ಸಮಿತಿಗಳು ಕತ್ತೆ ಕಾಯುತ್ತಿದ್ದವೇ. ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ಆದಾಯ ತೆರಿಗೆ ಪಾವತಿ ಮಾಡುವವರು ಗೃಹ ಲಕ್ಷ್ಮಿ ಪಡೆಯುತ್ತಿದ್ದಾರೆ ಎಂದು ಅನುಷ್ಠಾನ ಸಮಿತಿ ಹೇಳಿದೆ. ಗ್ಯಾರಂಟಿ ಜಾರಿ ಮಾಡುವಾಗ ಕಾಕಾ ಪಾಟೀಲ್, ಮಹಾದೇವಪ್ಪಗೆ ಫ್ರೀ ಎಂದಿದ್ದರು. ಈಗ ಹೇಗೆ ಅವರೆಲ್ಲ ತೆರಿಗೆ ಪಾವತಿದಾರರಾಗುತ್ತಾರೆ ಎಂದು ಕೇಳಿದರು.

ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷರಿಗೆ ಸಚಿವ ಸಂಪುಟ ದರ್ಜೆ ನೀಡಲಾಗಿದೆ. ಜಿಲ್ಲೆಯಲ್ಲಿ ಅಧ್ಯಕ್ಷರಿದ್ದಾರೆ. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅನುಷ್ಠಾನ ಸಮಿತಿ ಇದೆ. ಇವರೆಲ್ಲ ಕತ್ತೆ ಕಾಯುತ್ತಿದ್ದಾರೆಯೇ ಎಂದು ವ್ಯಂಗ್ಯವಾಡಿದರು. ಗ್ಯಾರಂಟಿಗಳಿಂದ ಸರ್ಕಾರಕ್ಕೆ ಈಗ ಹೊರೆ ಆಗ್ತಾ ಇದೆ. ಸಮಿತಿಗಳಿಗೆ, ಅಧ್ಯಕ್ಷರಿಗೆ ಕಚೇರಿ, ವೇತನ, ಇತರ ಸೌಲಭ್ಯಗಳಿಗೆ ನೂರಾರು ಕೋಟಿ ವ್ಯಯಿಸಲಾಗುತ್ತಿದೆ. ಇದು ಸರ್ಕಾರದ ವೈಫಲ್ಯ. ಗ್ಯಾರಂಟಿಗಳಿಗೆ ಹಣ ಹೊಂದಿಸಲು ಸಾಧ್ಯವಾಗದೇ ಒಂದೊಂದೆ ನೆಪ ಹೇಳಿಕೊಂಡು ಈಗ ಸೌಲಭ್ಯಗಳಿಗೆ ಕತ್ತರಿ ಹಾಕ್ತ ಇದ್ದಾರೆ. ಇದಕ್ಕೆ ರಾಜ್ಯದ ಜನ ಛೀಮಾರಿ ಹಾಕ್ತ ಇದ್ದಾರೆ ಎಂದರು.

ಎಸ್‍ಐಆರ್‌ನಲ್ಲಿ ಸರ್ಕಾರದ ಧ್ವಂಧ್ವ ನಿಲುವು

ರಾಜ್ಯ ಸರ್ಕಾರವೇ ಎಸ್‍ಐಆರ್ ವಿಚಾರದಲ್ಲಿ ಧ್ವಂಧ್ವ ನಿಲುವು ತೋರಿಸುತ್ತಿದೆ. ಅಧಿಕಾರಿಗಳನ್ನು ಎತ್ತಿಕಟ್ಟುವ ಕೆಲಸ ಮಾಡಲಾಗುತ್ತಿದೆ. ಬಿಎಲ್‍ಒಗಳಿಗೆ ರಾಜ್ಯ ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಎಂದು ದೂರಿದರು.

ಕಾಂಗ್ರೆಸ್‍ ನಾಯಕ ರಾಹುಲ್ ಗಾಂಧಿ ಅವರು ಬೇರೆ ದೇಶ ನೈಜ ಪೌರತ್ವ ಪಡೆದಿದ್ದಾರೆ. ಇನ್ನೊಂದು ದೇಶದ ಪೌರತ್ವ ಇಟ್ಟುಕೊಂಡು ಅಕ್ರಮವಾಗಿ ಸುಳ್ಳು ಮಾಹಿತಿ ನೀಡಿದ್ದಾರೆ. ಇದರ ಬಗ್ಗೆ ಡಿ.ಕೆ. ಶಿವಕುಮಾರ್ ಹಾಗೂ ಪ್ರಿಯಾಂಕ್ ಖರ್ಗೆ ಅವರು ಬೆಳಕು ಚೆಲ್ಲುವ ಕೆಲಸವನ್ನು ಮಾಡಲಿ ಎಂದರು.

ಚುನಾವಣಾ ಆಯೋಗ ಅಕ್ರಮ ವಲಸಿಗರ ಪತ್ತೆಗೆ, ಮತಪಟ್ಟಿಯಲ್ಲಿ ಎರಡು ಕಡೆ ಹೆಸರು ಇದ್ದರೆ, ಮೃತಪಟ್ಟವರ ಹೆಸರು ಸೇರಿದ್ದರೆ ಸರಿಪಡಿಸಲು ಎಸ್‍ಐಆರ್ ಮಾಡುತ್ತಾ ಇದೆ. ಸಾಂವಿಧಾನಿಕ ಸಂಸ್ಥೆ ವಿರುದ್ಧ ಅಧಿಕಾರಿಗಳನ್ನು, ಜನರನ್ನು ಎತ್ತಿಕಟ್ಟುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಇದು ಅಕ್ಷಮ್ಯ ಅಪರಾಧ ಎಂದರು.

ರಾಜ್ಯ ಸರ್ಕಾರ ಸುಧಾರಣೆಗಳನ್ನು ಮಾಡಲಿ. ಗ್ಯಾರಂಟಿಗಳಿಗೆ ಹಣ ಹೊಂದಿಸಲು ಫಲಾನುಭವಿಗಳಿಗೆ ಕತ್ತರಿ ಹಾಕುತ್ತಿದ್ದೇವೆ ಎಂಬ ಸತ್ಯವನ್ನು ಜನರ ಮುಂದೆ ಮುಚ್ಚಿಡಲಿ. ಈ ಸರ್ಕಾರದ ಯೋಗ್ಯತೆಗೆ ಮೂರು ವರ್ಷದಲ್ಲಿ ಜನರಿಗೆ ಮನೆ ನೀಡಲಿಲ್ಲ. ರೈತರ ಸಂಕಷ್ಟಕ್ಕೆ ಸ್ಪಂದಿಸಲಿಲ್ಲ, ಗಂಗಾ ಕಲ್ಯಾಣ ಅಕ್ರಮ ತನಿಖೆ ಮಾಡಲಿಲ್ಲ. ಹೈನುಗಾರಿಕೆಗೆ ಪ್ರೋತ್ಸಾಹ ಧನ ನೀಡಲಿಲ್ಲ ಎಂದು ಟೀಕಿಸಿದರು. ‌

ಗ್ಯಾರಂಟಿ ಅನುಷ್ಠಾನ ಸಮಿತಿ ಹೆಸರಲ್ಲಿ ತೆರಿಗೆ ಹಣ ಪೋಲು: ಬಿಜೆಪಿ ವಕ್ತಾರ ಎಸ್. ಪ್ರಕಾಶ್ ಆಕ್ರೋಶ

ಬಾಯಿ ಚಪಲದ ಮಾತಿಗೆ ಉತ್ತರ ಕೊಡಲ್ಲ

ಆರ್‍ಎಸ್‍ಎಸ್ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಒಂದಲ್ಲ ಒಂದು ಹೇಳಿಕೆ ಪ್ರತಿದಿನ ನೀಡುತ್ತಾ ಇದ್ದಾರೆ. ಅವರ ಬಾಯಿ ಚಪಲಕ್ಕೆ ಉತ್ತರ ಕೊಡಲ್ಲ. ಅವರು ರಾಜ್ಯದ ಗೃಹ ಸಚಿವರು. ಅವರು ಮಾಡಬೇಕಾದ ಕೆಲಸ ತುಂಬಾ ಇವೆ. ಅಕ್ರಮ ನುಸುಳುಕೋರರು, ಲವ್ ಜಿಹಾದ್, ಹಿಂದೂ ಕಾರ್ಯಕರ್ತರ ಹತ್ಯೆ ಬಗ್ಗೆ ಗಮನ ಹರಿಸಲಿ. ಅದನ್ನು ಬಿಟ್ಟು ಬೇರೆ ಮಾತನಾಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಹೇಳಿದರು.