ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಗ್ಯಾರಂಟಿ ಅನುಷ್ಠಾನ ಸಮಿತಿ ಹೆಸರಲ್ಲಿ ತೆರಿಗೆ ಹಣ ಪೋಲು: ಬಿಜೆಪಿ ವಕ್ತಾರ ಎಸ್. ಪ್ರಕಾಶ್ ಆಕ್ರೋಶ

S Prakash: ಗ್ಯಾರಂಟಿ ಅನುಷ್ಠಾನ ಸಮಿತಿಯು ಒಂದೇ ಒಂದು ಅರ್ಹ ಹೆಸರನ್ನು ಸೇರಿಸಿಲ್ಲ ಅಥವಾ ಅನರ್ಹರ ಹೆಸರನ್ನು ರದ್ದು ಮಾಡಲು ಶಿಫಾರಸು ಮಾಡಿಲ್ಲ. ಓಡಾಡಲು ಕಾರು, ಸಂಬಳ, ಆಪ್ತ ಸಹಾಯಕರನ್ನು ಹೊಂದಿದ ಇವರು ಆರಾಮವಾಗಿ ಇದ್ದಾರೆ. ಏನೂ ಕೆಲಸ ಮಾಡದ ಇವರನ್ನು ಯಾಕೆ ಸಾಕಬೇಕು? ಇವರ ಅವಶ್ಯಕತೆ ಇದೆಯೇ ಎಂದು ಬಿಜೆಪಿ ರಾಜ್ಯ ವಕ್ತಾರ ಎಸ್. ಪ್ರಕಾಶ್ ಪ್ರಶ್ನಿಸಿದ್ದಾರೆ.

ಗ್ಯಾರಂಟಿ ಅನುಷ್ಠಾನ ಸಮಿತಿ ಹೆಸರಲ್ಲಿ ತೆರಿಗೆ ಹಣ ಪೋಲು: ಎಸ್. ಪ್ರಕಾಶ್

ಬಿಜೆಪಿ ರಾಜ್ಯ ವಕ್ತಾರ ಎಸ್. ಪ್ರಕಾಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. -

Profile
Siddalinga Swamy Jun 16, 2026 5:31 PM

ಬೆಂಗಳೂರು, ಜೂ.16: ಗ್ಯಾರಂಟಿ ಅನುಷ್ಠಾನ ಸಮಿತಿ ರಚಿಸಿದ ಸರ್ಕಾರವು ಕಳೆದ 3 ವರ್ಷಗಳಲ್ಲಿ ಆ ಸಮಿತಿಗಳಿಗೆ ಸುಮಾರು 100 ಕೋಟಿ ಖರ್ಚು ಮಾಡಿದೆ. ಆದರೆ, ಈ ಸಮಿತಿ ಸಮರ್ಪಕವಾಗಿ ಕೆಲಸ ಮಾಡಿಲ್ಲ ಎಂಬುದಕ್ಕೆ ಸರ್ಕಾರವು ಗೃಹಲಕ್ಷ್ಮಿ ಯೋಜನೆಯಡಿ 3 ರಿಂದ 4 ಲಕ್ಷ ಅನರ್ಹರು, ಅಪಾತ್ರರ ಹೆಸರನ್ನು ತೆಗೆದುಹಾಕಲು ಮುಂದಾದುದೇ ಸ್ಪಷ್ಟ ಉದಾಹರಣೆ ಎಂದು ಬಿಜೆಪಿ ರಾಜ್ಯ ವಕ್ತಾರ ಎಸ್. ಪ್ರಕಾಶ್ (S Prakash) ಆರೋಪಿಸಿದ್ದಾರೆ. ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.

ಅನುಷ್ಠಾನ ಸಮಿತಿಯ ಪದಾಧಿಕಾರಿಗಳಿಗೆ ಸಂಪುಟ ದರ್ಜೆ ಸ್ಥಾನಮಾನ ಕೊಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ನೇಮಕಾತಿ ಮಾಡಿ ಸಂಬಳ, ಪ್ರವಾಸ ಭತ್ಯೆ ನೀಡಿ ಸಮೃದ್ಧಿಯಾಗಿ ಪೋಷಿಸಲಾಗುತ್ತಿದೆ ಎಂದು ಟೀಕಿಸಿದ ಅವರು, ಈ ಸಮಿತಿಗೆ ವಾರ್ಷಿಕವಾಗಿ 35 ಕೋಟಿ ಖರ್ಚಾಗಿದೆ ಎಂದು ವಿವರಿಸಿದರು.

ಈ ಸಮಿತಿಯು ಒಂದೇ ಒಂದು ಅರ್ಹ ಹೆಸರನ್ನು ಸೇರಿಸಿಲ್ಲ ಅಥವಾ ಅನರ್ಹರೊಬ್ಬರ ಹೆಸರನ್ನು ರದ್ದು ಮಾಡಲು ಶಿಫಾರಸು ಮಾಡಿಲ್ಲ. ಓಡಾಡಲು ಕಾರು, ಸಂಬಳ, ಆಪ್ತ ಸಹಾಯಕರನ್ನು ಹೊಂದಿದ ಇವರು ಆರಾಮವಾಗಿ ಇದ್ದಾರೆ. ಏನೂ ಕೆಲಸ ಮಾಡದ ಇವರನ್ನು ಯಾಕೆ ಸಾಕಬೇಕು? ಇವರ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸಿದರು.

ಅನುಷ್ಠಾನ ಸಮಿತಿ ಉಪಾಧ್ಯಕ್ಷ ಮೆಹ್ರಾಜ್ ಖಾನ್ ಅವರಿಗೆ ಜಯಮಹಲ್‍ನಲ್ಲಿ ಸರ್ಕಾರಿ ಮನೆ ಕೊಟ್ಟಿರುವುದು ದುರಂತ ಎಂದು ಅವರು ಮಾಹಿತಿಯನ್ನು ಪ್ರದರ್ಶಿಸಿದರು. ಮೇಲ್ಮನೆ ಮತ್ತು ಕೆಳಮನೆ ವಿಪಕ್ಷ ನಾಯಕರಿಗೆ ಮನೆ ಕೊಡುತ್ತಿಲ್ಲ. ಸರ್ಕಾರಿ ನಿವಾಸದ ದುರುಪಯೋಗ ಆಗಿದೆ ಎಂದು ದೂರಿದರು. ತೆರಿಗೆ ಹಣ ಪೋಲಾಗುತ್ತಿದೆ. ಇವರಿಗೆ ಪ್ರಜಾಪ್ರಭುತ್ವದ ಮೌಲ್ಯದ ಲೆಕ್ಕ ಇಲ್ಲ. ಅಧಿಕಾರಕ್ಕೆ ಬಂದುದಕ್ಕಾಗಿ ನಿಮ್ಮ ಕಾರ್ಯಕರ್ತರನ್ನು ಸಾಕುತ್ತಿದ್ದೀರಿ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಕೇಳಿದರು. ಇವರ ಕೈಯಲ್ಲಿ ಏನೂ ಮಾಡಲಾಗದಿದ್ದರೆ ಇವರನ್ನು ಮುಂದುವರಿಸಬೇಡಿ. ಸರ್ಕಾರವು ಇದರ ಕುರಿತು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.

ವಿಧಾನಪರಿಷತ್ ಸದಸ್ಯ ನಸೀರ್ ಅಹ್ಮದ್ ಅವರು ದಿವಾಳಿ ಎಂದು ಘೋಷಿಸಿಕೊಂಡಿದ್ದಾರೆ. ಈ ದಿವಾಳಿ ಪ್ರಕ್ರಿಯೆ ನಿನ್ನೆ ಮೊನ್ನೆ ಆರಂಭವಾಗಿಲ್ಲ; ಇವರು 21 ಟೆಕ್ಸ್‍ಟೈಲ್ ಕಂಪೆನಿ ಹೊಂದಿದ್ದು, ಸಿಬ್ಬಂದಿಗೆ ಸಂಬಳ, ಇಎಸ್‍ಐ, ಪಿಎಫ್ ಹಣ ಪಾವತಿಸಿಲ್ಲ. ಇಂಥ ವ್ಯಕ್ತಿಯನ್ನು ಮುಖ್ಯಮಂತ್ರಿಗಳಿಗೆ ಸಲಹೆಗಾರರಾಗಿ ಇಟ್ಟುಕೊಂಡಿದ್ದರು ಎಂದು ಟೀಕಿಸಿದರು.

ದಿವಾಳಿ ಘೋಷಣೆ ಹೇಗೆ? ಬ್ಯಾಂಕ್‍ಗಳಿಗೆ, ನೌಕರರಿಗೆ ಹೇಗೆ ಟೋಪಿ ಇಡಬೇಕು? ಎಂಬುದಕ್ಕಾಗಿ ಇವರನ್ನು ಸಲಹೆಗಾರರನ್ನಾಗಿ ಇಟ್ಟುಕೊಂಡಿದ್ದರೇ ಎಂದು ಕೇಳಿದರು. ಇವರು ಪಕ್ಷಕ್ಕೂ ಮೋಸ ಮಾಡಿದವರು. ದಾವಣಗೆರೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆಲಸ ಮಾಡಿದ್ದರೆಂದು ಪಕ್ಷದಿಂದ ಉಚ್ಚಾಟಿಸಿದ್ದರು ಎಂದು ಗಮನ ಸೆಳೆದರು. ಅವರು ಈಗಲೂ ವಿಧಾನಪರಿಷತ್ ಸದಸ್ಯರಾಗಿದ್ದಾರೆ ಎಂದು ವಿವರಿಸಿದರು. 1,500 ಕೋಟಿ ಬ್ಯಾಂಕ್ ಹಣ ನುಂಗಿ ನೀರು ಕುಡಿದ ವ್ಯಕ್ತಿ ಬಗ್ಗೆ ಚಕಾರ ಎತ್ತಿಲ್ಲ. ಪಕ್ಷದಿಂದ ಅಮಾನತು ಮಾಡಲು ರಾಹುಲ್ ಗಾಂಧಿಯವರು ಸೂಚಿಸಿಲ್ಲ ಎಂದು ದೂರಿದರು.

ಸಂಚಾರ ದಟ್ಟಣೆಯಲ್ಲಿ ಜನರ ಪರದಾಟ

ನೂತನ ಮುಖ್ಯಮಂತ್ರಿಗಳು ತಮ್ಮ ಪಕ್ಷದ ಸಚಿವಾಕಾಂಕ್ಷಿಗಳಿಗೆ ತಮ್ಮ ಬೆಂಬಲಿಗರನ್ನು ನಗರಕ್ಕೆ ಕರೆತಂದು ಪ್ರತಿಭಟನೆ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಇವರ ಪ್ರತಿಭಟನೆಯಿಂದ ನಾಗರಿಕರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಸಂಚಾರ ದಟ್ಟಣೆಯಲ್ಲಿ ಜನರು ಪರದಾಡುವಂತಾಗಿದೆ. ಇವರ ಅಧಿಕಾರ ಲಾಲಸೆಗೆ ನಗರದ ನಾಗರಿಕರಿಗೆ ತೊಂದರೆ ಕೊಡಬಾರದು. ಸಚಿವರ ನಿರ್ಧಾರ ನಿಮ್ಮ ಕೈಯಲ್ಲಿ ಇಲ್ಲದ ಕಾರಣ ಆಕಾಂಕ್ಷಿತರು ದೆಹಲಿಗೆ ಹೋಗಿ ಪ್ರತಿಭಟನೆ ಮಾಡುವುದು ಸೂಕ್ತ. ನಿಮ್ಮ ನಿಮ್ಮ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸುವಂತೆ ನಿರ್ದೇಶಿಸಿ, ನಗರದ ನಾಗರಿಕರ ಬವಣೆಗೆ ಪರಿಹಾರ ಕೊಡಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಒತ್ತಾಯಿಸುತ್ತೇನೆ ಎಂದು ತಿಳಿಸಿದರು.‌

ಮಳೆಗಾಲ ಆರಂಭವಾಗಿದೆ ಅದರೊಂದಿಗೆ ಮಳೆಯ ಅವಾಂತರ ಶುರುವಾಗಿದೆ. ಬೆಂಗಳೂರು ಅಭಿವೃದ್ಧಿ ಖಾತೆ ಸಚಿವ ಕೃಷ್ಣಭೈರೇಗೌಡರು ತಮ್ಮ ಖಾತೆಯ ಅಧಿಕಾರವನ್ನು ಇನ್ನೂ ವಹಿಸಿಕೊಂಡಿಲ್ಲ. ನಗರದ ನಾಗರಿಕರ ಬವಣೆಗಿಂತ ಅವರಿಗೆ ತಮಗೆ ನೀಡದ ಬಿಡಿಎ ಬಿಎಂಆರ್‌ಡಿಎಲ್ ಇಲಾಖೆಯ ಬಗ್ಗೆ ಚಿಂತಿತರಾಗಿದ್ದಾರೆ ಎಂದ ಅವರು, ನೀವು ವಿದ್ಯಾವಂತರು, ಬುದ್ಧಿವಂತರು, ಪ್ರಾಮಾಣಿಕರು ಎಂದು ಹಣೆಪಟ್ಟಿ ಹಾಕಿಕೊಂಡಿದ್ದೀರಾ ಅಂತಹವರು ಖಾತೆಯ ಕ್ಯಾತೆಯಲ್ಲಿ ಜವಾಬ್ದಾರಿ ಮರೆತು ವರ್ತಿಸುತ್ತಿರುವುದು ತುಂಬಾ ಸಣ್ಣತನದ ವರ್ತನೆ. ನಗರದ ಸಮಸ್ಯೆಗಳ ಬಗ್ಗೆ ಕೂಡಲೇ ಗಮನ ಹರಿಸಿ ಇಲ್ಲ ನಿಮ್ಮ ಸಮಸ್ಯೆ ಬಗೆಹರಿಯುವವರೆಗೂ ಅಧಿಕಾರವಹಿಸಿಕೊಳ್ಳದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿ ಎಂದರು.

Guarantee schemes: ಗ್ಯಾರಂಟಿ ಯೋಜನೆಗಳ ಲಕ್ಷಾಂತರ ಫಲಾನುಭವಿಗಳ ಕಡಿತ ಸರಿಯಲ್ಲ: ಬಿ.ವೈ. ವಿಜಯೇಂದ್ರ ಕಿಡಿ

ನಟ್ಟು ಬೋಲ್ಟ್ ಟೈಟ್ ಮಾಡಿ ಕೆಲಸ ಮಾಡಲು ಹೇಳಿ

ನಿಮ್ಮ ಅಧಿಕಾರದ ಕಚ್ಚಾಟಕ್ಕೆ ಬೆಂಗಳೂರಿಗರು ಸಂಕಷ್ಟ ಅನುಭವಿಸಬಾರದು. ಮುಖ್ಯಮಂತ್ರಿಗಳು ಇವರಿಗೆ ಕೂಡಲೇ ಅಧಿಕಾರ ಸ್ವೀಕರಿಸಲು ಆದೇಶಿಸಬೇಕು ಅಥವಾ ಸಂಪುಟದಿಂದ ಕೈಬಿಡಬೇಕು ಆಗದಿದ್ದರೆ ಅವರ ನಟ್ಟು ಬೋಲ್ಟ್ ಟೈಟ್ ಮಾಡಿ ಕೆಲಸ ಮಾಡಕ್ಕೆ ಹೇಳಿ ಎಂದು ಬಿಜೆಪಿ ರಾಜ್ಯ ವಕ್ತಾರ ಎಸ್. ಪ್ರಕಾಶ್ ಒತ್ತಾಯಿಸಿದರು. ಈ ಸಂದರ್ಭದಲ್ಲಿ ರಾಜ್ಯ ವಕ್ತಾರ ಮೋಹನ್ ವಿಶ್ವ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಉಪಸ್ಥಿತರಿದ್ದರು.