ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನನ್ನ ಮತ್ತು ಸಿದ್ದರಾಮಯ್ಯ ಗುಂಪು ಅಂಥ ಎಲ್ಲಿದೆ? ಎಲ್ಲರೂ ನಮ್ಮ ಶಾಸಕರೇ ಎಂದ ಡಿ.ಕೆ. ಶಿವಕುಮಾರ್

DK Shivakumar: ನಿಮ್ಮ ಪಕ್ಷದಲ್ಲಿ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಾ ಇದ್ದಾರಲ್ಲಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ʼಯಾವ ಹೇಳಿಕೆಯೂ ಇಲ್ಲ. ಯಾವ ಗುಂಪೂ ಇಲ್ಲ. 139 ಶಾಸಕರು ನನ್ನದೇ ಗುಂಪು. ಕಾಂಗ್ರೆಸ್ ಗುಂಪು. ನಮಗೆ ಪಕ್ಷ ಹಾಗೂ ಪಕ್ಷದ ಹಿತ ಮುಖ್ಯ. ಪಕ್ಷದ ಅಭಿವೃದ್ಧಿಗೆ ಹಾಗೂ ಅದರ ಒಳಿತಿಗೆ ಏನು ಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಿದ್ದೇವೆ. ನಾವೆಲ್ಲ ಒಟ್ಟಿಗೆ ಸೇರಿ ಕೆಲಸ ಮಾಡುತ್ತಿದ್ದೇವೆ, ಮಾಡುತ್ತೇವೆʼ ಎಂದು ಹೇಳಿದ್ದಾರೆ.

ನನ್ನ ಮತ್ತು ಸಿದ್ದರಾಮಯ್ಯ ಗುಂಪು ಅಂಥ ಎಲ್ಲಿದೆ?: ಡಿ.ಕೆ. ಶಿವಕುಮಾರ್

ಡಿಸಿಎಂ ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ) -

Profile
Siddalinga Swamy Apr 17, 2026 4:17 PM

ಬೆಂಗಳೂರು, ಏ.17: ಸಿದ್ದರಾಮಯ್ಯ ಮತ್ತು ನಾನು ಒಟ್ಟಿಗೇ ಇದ್ದೇವೆ. ಪ್ರತಿದಿನ ಜತೆಯಲ್ಲೇ ಕೂರುತ್ತೇವೆ, ಚರ್ಚಿಸುತ್ತೇವೆ. ಎಲ್ಲಿದೆ ನಮ್ಮಲ್ಲಿ ಗುಂಪು ಎಂಬುದು? ಎಲ್ಲರೂ ನಮ್ಮ ಶಾಸಕರೇ. ಮಾಧ್ಯಮಗಳೇ ನಮ್ಮನ್ನು ಇಬ್ಭಾಗ ಮಾಡುತ್ತಿವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದರು. ಸಿದ್ದರಾಮಯ್ಯ ಅವರೊಟ್ಟಿಗೆ ಒಂದೇ ವಿಮಾನದಲ್ಲಿ ಬಹಳ ದಿ‌ನಗಳ ನಂತರ ಪ್ರಯಾಣ ಮಾಡುತ್ತಿದ್ದೀರಲ್ಲಾ ಎಂಬ ಮಾಧ್ಯಮದವರ ಪ್ರಶ್ನೆಗೆ ಸಿಟ್ಟಾದ ಡಿಸಿಎಂ ಡಿ.ಕೆ. ಶಿವಕುಮಾರ್, ʼನಿಮಗೆ ತಲೆ ಕೆಟ್ಟಿದೆ ಎನಿಸುತ್ತಿದೆ. ಎಲ್ಲಿದೆ ನನ್ನ ಮತ್ತು ಸಿದ್ದರಾಮಯ್ಯ ಗುಂಪು. ನೀವೇ ಗುಂಪು ಸೃಷ್ಟಿ ಮಾಡುತ್ತಿದ್ದೀರಿ ಎಂದು ಅಸಮಾಧಾನ ಹೊರಹಾಕಿದರು.

ದೆಹಲಿಯಲ್ಲಿ ಸಿದ್ದರಾಮಯ್ಯ ಅವರ ಗುಂಪು ಎಂದು ಹೇಳಿದ್ದೀರಿ. ಅವರೇನೂ ಸಿದ್ದರಾಮಯ್ಯ ಗುಂಪು ಎಂದು ಬೋರ್ಡ್ ಹಾಕಿಕೊಂಡಿದ್ದಾರೆಯೇ? ಅಥವಾ ನನ್ನ ಗುಂಪು ಎಂದು ನಾನು ಬೋರ್ಡ್ ಹಾಕಿಕೊಂಡಿದ್ದೇನೆಯೇ? ಎಲ್ಲ 139 ಶಾಸಕರು ನನ್ನ ಹಾಗೂ ಸಿದ್ದರಾಮಯ್ಯ ಅವರ ಶಾಸಕರೇ ಆಗಿದ್ದಾರೆ. ಯಾವ ಗುಂಪೂ ಇಲ್ಲ, ಬೋರ್ಡೂ ಇಲ್ಲ. ನಿಮಗೆ ಗೊತ್ತಿದೆಯೇ ಯಾರ್ಯಾರ ಗುಂಪು ಏನಿದೆ ಅಂತ? ನಿಮಗೆ ಹೆಂಗೆ ಬೇಕೋ ಹಂಗೆ ಚಟಕ್ಕೆ ಬರೆಯುತ್ತಾ ಇದ್ದೀರಿʼ ಎಂದರು.

ನಿಮ್ಮ ಪಕ್ಷದಲ್ಲಿ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಾ ಇದ್ದಾರಲ್ಲಾ ಎಂದು ಕೇಳಿದಾಗ, ʼಯಾವ ಹೇಳಿಕೆಯೂ ಇಲ್ಲ. ಯಾವ ಗುಂಪೂ ಇಲ್ಲ. 139 ಶಾಸಕರು ನನ್ನದೇ ಗುಂಪು. ಕಾಂಗ್ರೆಸ್ ಗುಂಪು. ನಮಗೆ ಪಕ್ಷ ಹಾಗೂ ಪಕ್ಷದ ಹಿತ ಮುಖ್ಯ. ಪಕ್ಷದ ಅಭಿವೃದ್ಧಿಗೆ ಹಾಗೂ ಅದರ ಒಳಿತಿಗೆ ಏನು ಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಿದ್ದೇವೆ. ನಾವೆಲ್ಲ ಒಟ್ಟಿಗೆ ಸೇರಿ ಕೆಲಸ ಮಾಡುತ್ತಿದ್ದೇವೆ, ಮಾಡುತ್ತೇವೆʼ ಎಂದರು.

"ಮಹಿಳಾ ಕೋಟಾ ಬಿಲ್ ಭಾರತದ ಚುನಾವಣಾ ನಕ್ಷೆಯನ್ನೇ ಬದಲಾಯಿಸುವ ಪ್ರಯತ್ನ"; ರಾಹುಲ್‌ ಗಾಂಧಿ ವಾಗ್ದಾಳಿ

ಜಬ್ಬಾರ್ ಹಾಗೂ ನಸೀರ್ ಅಹ್ಮದ್ ಅವರ ವಿರುದ್ದ ಕ್ರಮ ಕೈಗೊಂಡಿರುವುದರ ಬಗ್ಗೆಯೂ ಮಾತನಾಡುತ್ತೇನೆ ಎಂದು ಸತೀಶ್ ಜಾರಕಿಹೊಳಿ ಅವರು ಹೇಳಿದ್ದರ ಬಗ್ಗೆ ಕೇಳಿದಾಗ, ʼಇಲ್ಲಿ ಯಾವುದೇ ವೈಯಕ್ತಿಕ ವಿಚಾರಗಳು ಇಲ್ಲ. ಪಕ್ಷಕ್ಕೆ ತನ್ನದೇ ಆದ ರೀತಿ-ರಿವಾಜುಗಳಿವೆ. ಎಂಎಲ್ ಎ, ಎಂಎಲ್ ಸಿ ವಿಚಾರವಾಗಿ ದೆಹಲಿ ನಾಯಕರು ಏನೂ ಹೇಳದೇ, ಅವರು ಏನೂ ಸೂಚನೆ ಕೊಡದೆ, ನಾವು ಏನೂ ಮಾಡಲೂ ಆಗುವುದಿಲ್ಲ. ಕೆಲವನ್ನು ಮಾರ್ಗದರ್ಶನದ ಅನುಸಾರವಾಗಿ ಮಾಡಬೇಕಾಗುತ್ತದೆ. ಕೆಲವರು ನನ್ನ ಮೇಲೆ ದೂರಬಹುದು. ಹಾಗೇ ನನ್ನ ಮೇಲೆ ಹೇಳಿದರೂ ಚಿಂತೆಯಿಲ್ಲ. ಪಕ್ಷದ ಶಿಸ್ತಿನ ಚೌಕಟ್ಟಿ‌ನಲ್ಲಿ ನಾವೆಲ್ಲರೂ ಕೆಲಸ ಮಾಡಬೇಕಾಗುತ್ತದೆʼ ಎಂದರು.

ಕಾಂಗ್ರೆಸ್ ಪಕ್ಷ ಇರುವುದೇ ಎಲ್ಲರ ಒಳಿತಿಗೆ

ಅಲ್ಪಸಂಖ್ಯಾತ ಸಮುದಾಯವನ್ನು ಮತ್ತೆ ತುಳಿಯುವ ಯತ್ನ ಮಾಡಲಾಗುತ್ತಿದೆ ಎನ್ನುವ ಆರೋಪದ ಬಗ್ಗೆ ಕೇಳಿದಾಗ, ʼಇಡೀ ಕಾಂಗ್ರೆಸ್ ಪಕ್ಷ ಇರುವುದೇ ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗ, ರೈತರು - ಹೀಗೆ ಎಲ್ಲಾ ವರ್ಗಕ್ಕೂ ನ್ಯಾಯ ಒದಗಿಸಲುʼ ಎಂದರು.

ಸತೀಶ್ ಜಾರಕಿಹೊಳಿ ಅವರ ಜತೆ ಏನು ಚರ್ಚೆ ನಡೆಯಿತು ಎಂದು ಕೇಳಿದಾಗ, ʼಅವರು ನಮ್ಮ ಪಕ್ಷದ ನಾಯಕರು. 2028 ಕ್ಕೆ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದೇ ನಮ್ಮ ಉದ್ದೇಶ. ನಾವು ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ನನಗೆ ಶೇ. 1000 ಪಟ್ಟು ಅಧಿಕಾರಕ್ಕೆ ಮರಳುವ ವಿಶ್ವಾಸವಿದೆʼ ಎಂದರು.

ʼನಾನು ಹಾಗೂ ಸತೀಶ್ ಜಾರಕಿಹೊಳಿ ಅವರು ಬೆಂಗಳೂರಿನ ಟ್ರಾಫಿಕ್ ಅನ್ನು ಹೇಗೆ ನಿಯಂತ್ರಣ ಮತ್ತು ಕಡಿಮೆ ಮಾಡಬೇಕು ಎನ್ನುವ ವಿಚಾರವಾಗಿ ಚರ್ಚೆ ನಡೆಸಿದ್ದೇವೆ. ನೆಲಮಂಗಲದಿಂದ ಗೊರಗುಂಟೆಪಾಳ್ಯದವರೆಗೆ ಹೆಚ್ಚು ವಾಹನ ಸಂಚಾರ ದಟ್ಟಣೆ ಇದೆ. ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಮೂಲಕ ನಗರದ ಒಳಗೆ ವಾಹನಗಳು ಬರದಂತೆ ಹೇಗೆ ಬದಲಿ ವ್ಯವಸ್ಥೆ ಮಾಡಬಹುದು. ನೈಸ್ ರಸ್ತೆಗೆ ಮುನ್ನ ಯಾವ ವ್ಯವಸ್ಥೆ ಮಾಡಬಹುದು ಎಂದು ಚರ್ಚೆ ನಡೆಸಿದ್ದೇವೆ. ಈಗಾಗಲೇ ಬಿಜಿನೆಸ್ ಕಾರಿಡಾರ್ ಯೋಜನೆ ಕೈಗೆತ್ತಿಕೊಂಡಿದ್ದೇವೆʼ ಎಂದರು.

ರಾಜಕೀಯ ಲಾಭಕ್ಕಾಗಿ ಕ್ಷೇತ್ರ ಮರುವಿಂಗಡಣೆ ತೀರ್ಮಾನ

ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ಪುನರ್ ವಿಂಗಡಣೆ ಬಗ್ಗೆ ಕೇಂದ್ರದ ತರಾತುರಿ ನಿರ್ಧಾರದ ಬಗ್ಗೆ ಕೇಳಿದಾಗ, ʼಅವರು ಏಕೆ ಆತುರದಲ್ಲಿ ಇದ್ದಾರೆ ಎಂದು ತಿಳಿಯುತ್ತಿಲ್ಲ. ಕಾಂಗ್ರೆಸ್ ಪಕ್ಷವು ಚೌಕಟ್ಟಿನ ಒಳಗೆ ಇದರ ಬಗ್ಗೆ ಸೂಕ್ತ ಚರ್ಚೆ ನಡೆಸಬೇಕು ಎಂದು ಬಯಸುತ್ತದೆ. ರಾಜಕೀಯ ಲಾಭಕ್ಕಾಗಿ ಯಾವುದೇ ಸ್ಪಷ್ಟನೆ ಇಲ್ಲದೇ ಈ ನಿರ್ಧಾರವನ್ನು ಬಿಜೆಪಿ ತೆಗೆದುಕೊಳ್ಳುತ್ತಿದೆ. ಇದು ಒಳ್ಳೆಯದಲ್ಲ‌ʼ ಎಂದರು.

ʼಬಿಜೆಪಿಯವರು ಅಭದ್ರತೆ ಎದುರಿಸುತ್ತಿದ್ದಾರೆ. ಅದಕ್ಕೆ ಈ ವಿಚಾರದ ಬಗ್ಗೆ ತರಾತುರಿಯಲ್ಲಿದ್ದಾರೆ. ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಈ ಹಿಂದೆ ಈ ಬಗ್ಗೆ ತೀರ್ಮಾನ ಆಗಿತ್ತುʼ ಎಂದರು. ಕ್ಷೇತ್ರ ಪುನರ್ ವಿಂಗಡಣೆ ವಿರೋಧಿಸಿ ತಮಿಳುನಾಡಿನ ನಿಲುವಿನ ಬಗ್ಗೆ ಕೇಳಿದಾಗ, ʼಕ್ಷೇತ್ರ ಪುನರ್ ವಿಂಗಡಣೆ ಸರಿಯಾದ ಕ್ರಮವಲ್ಲ. ಇದು ಬೇಕಾಗಿಲ್ಲʼ ಎಂದು ಹೇಳಿದರು.

Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ನಸೀರ್ ಅಹ್ಮದ್ ವಜಾ; ಡಿಸಿಎಂ ಡಿಕೆಶಿ ಹೇಳಿದ್ದೇನು?

ದೆಹಲಿ ಭೇಟಿ ಹಾಗೂ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕೇಳಿದಾಗ, ʼಈಗ ಆ ವಿಚಾರ ಚರ್ಚೆಯಿಲ್ಲ. ಮೊದಲು ಚುನಾವಣೆಗಳನ್ನು ಮುಗಿಸೋಣ. ಮೊದಲ ಆದ್ಯತೆ ಚುನಾವಣೆಗೆ. 'ಬ್ರಿಡ್ಜ್ ಟು ಬೆಂಗಳೂರು' ಕಾರ್ಯಕ್ರಮ ನಿಮಿತ್ತ ನಾನು ಹಾಗೂ ಮುಖ್ಯಮಂತ್ರಿ ದೆಹಲಿಗೆ ತೆರಳುತ್ತಿದ್ದೇವೆ. ಇತರೇ ದೇಶಗಳ ರಾಯಭಾರಿಗಳು, ಉದ್ಯಮಿಗಳು ಸೇರಿದಂತೆ ಅನೇಕರು ಸೇರುತ್ತಿದ್ದಾರೆ. ಐಟಿ ಬಿಟಿ ಸಚಿವರು ಇದನ್ನು ಆಯೋಜಿಸಿದ್ದಾರೆʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.