ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ramayana Wax Museum: ವಿಶ್ವದ ಮೊದಲ ರಾಮಾಯಣ ಮೇಣದ ವಸ್ತುಸಂಗ್ರಹಾಲಯ ಸಿದ್ಧ; ಎಲ್ಲಿ, ಹೇಗಿದೆ ಗೊತ್ತೆ?

ಈ ಬಾರಿ ದೀಪಾವಳಿ ಅಯೋಧ್ಯೆಯಲ್ಲಿ ಮತ್ತಷ್ಟು ವಿಶೇಷವಾಗಲಿದೆ. ಸಾಂಪ್ರದಾಯಿಕ ದಕ್ಷಿಣ ಭಾರತದ ವಾಸ್ತುಶಿಲ್ಪ ಶೈಲಿಯ ವಿಶ್ವದ ಮೊದಲ ರಾಮಾಯಣ ಮೇಣದ ವಸ್ತುಸಂಗ್ರಹಾಲಯ ಅಯೋಧ್ಯೆಯಲ್ಲಿ ತೆರೆದುಕೊಳ್ಳಲಿದೆ. ಇದರಲ್ಲಿ ರಾಮಾಯಣದ ದೃಶ್ಯಗಳನ್ನು ಜೀವಂತಗೊಳಿಸುವ 50 ಮೇಣದ ಪ್ರತಿಮೆ ಇರಲಿದೆ.

ರಾಮಾಯಣದ ದೃಶ್ಯಗಳಿಗೆ ಜೀವ ನೀಡುವ ವಸ್ತು ಸಂಗ್ರಹಾಲಯ

-

ಲಖನೌ: ನಂಬಿಕೆ, ಕಲೆ ಮತ್ತು ಪ್ರವಾಸೋದ್ಯಮದ ಸಂಕೇತವಾದ ಅಯೋಧ್ಯೆಯು (Ayodhya) ರಾಮ ಮಂದಿರದ (Ram Mandir) ಬಳಿಕ ಇದೀಗ ಮತ್ತೊಂದು ದಾಖಲೆಗೆ ಸಿದ್ಧವಾಗಿದೆ. ಈ ಬಾರಿಯ ದೀಪಾವಳಿಗೆ (Deepavali) ಇಲ್ಲಿ ಸಾಂಪ್ರದಾಯಿಕ ದಕ್ಷಿಣ ಭಾರತದ ವಾಸ್ತುಶಿಲ್ಪ ಶೈಲಿಯ ವಿಶ್ವದ ಮೊದಲ ರಾಮಾಯಣ ಮೇಣದ ವಸ್ತುಸಂಗ್ರಹಾಲಯ (world's first Ramayana wax museum) ತೆರೆದುಕೊಳ್ಳಲಿದೆ. ರಾಮಾಯಣದ (Ramayana) ದೃಶ್ಯಗಳನ್ನು ಜೀವಂತಗೊಳಿಸುವ ಈ ವಸ್ತುಸಂಗ್ರಹಾಲಯವನ್ನು ಒಂಬತ್ತನೇ ದೀಪೋತ್ಸವ ಆಚರಣೆ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಉದ್ಘಾಟಿಸಲಿದ್ದಾರೆ.

ವಿಶ್ವದ ಮೊದಲ ರಾಮಾಯಣ ವಿಷಯದ ಮೇಣದ ವಸ್ತುಸಂಗ್ರಹಾಲಯದ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. 9,850 ಚದರ ಅಡಿ ವಿಸ್ತೀರ್ಣ ಹೊಂದಿರುವ ಈ ವಸ್ತು ಸಂಗ್ರಹಾಲಯವನ್ನು 6 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ವಸ್ತುಸಂಗ್ರಹಾಲಯವು ರಾಮಾಯಣದ ಯುಗವಾದ ತ್ರೇತಾಯುಗಕ್ಕೆ ನೇರವಾಗಿ ಸಂಪರ್ಕ ಕಲ್ಪಿಸುವ ಭರವಸೆಯನ್ನು ಸಂದರ್ಶಕರಿಗೆ ನೀಡುತ್ತದೆ. ಭಕ್ತಿಯ ಕೇಂದ್ರ ಮತ್ತು ಪ್ರವಾಸಿ ಆಕರ್ಷಣೆ ಎರಡನ್ನೂ ಸಂಯೋಜಿಸಿ ಇದನ್ನು ವಿನ್ಯಾಸಗೊಳಿಸಲಾಗಿದೆ.

ಅಯೋಧ್ಯಾ ಮುನ್ಸಿಪಲ್ ಕಾರ್ಪೊರೇಷನ್‌ನ ಸಹಯೋಗದೊಂದಿಗೆ ನಿರ್ವಹಿಸಲಾಗುವ ಈ ವಸ್ತುಸಂಗ್ರಹಾಲಯದ ಬರುವ ಆದಾಯದಲ್ಲಿ ಶೇ. 12ರಷ್ಟನ್ನು ನಗರದ ಅಭಿವೃದ್ಧಿಗೆ ಬಳಕೆ ಮಾಡಲು ಉದ್ದೇಶಿಸಲಾಗಿದೆ.

ayo1

ವಸ್ತು ಸಂಗ್ರಹಾಲಯದಲ್ಲಿ ಏನಿದೆ?

ಹೊಸ ರಾಮಾಯಣ ಮೇಣದ ವಸ್ತುಸಂಗ್ರಹಾಲಯದ ಒಳಗೆ ಭಗವಾನ್ ರಾಮ, ಮಾತಾ ಸೀತಾ, ಲಕ್ಷ್ಮಣ, ಭರತ, ಹನುಮಾನ್, ರಾವಣ ಮತ್ತು ವಿಭೀಷಣ ಸೇರಿದಂತೆ ರಾಮಾಯಣದ ಪ್ರಮುಖ ಪಾತ್ರಗಳ 50 ಜೀವಂತ ಮೇಣದ ಪ್ರತಿಮೆಗಳಿವೆ. ಇವು ಮಹಾಕಾವ್ಯದ ಸಾರವನ್ನು ಮರುಸೃಷ್ಟಿಸುವಂತಿರುತ್ತದೆ. ರಾಮಾಯಣ ಜಗತ್ತಿಗೆ ಕಾಲಿಡುವ ಮೊದಲು ಗಣೇಶನ ಭವ್ಯ ವಿಗ್ರಹವನ್ನು ಕಾಣಬಹುದು. ಇದು ಸಂದರ್ಶಕರನ್ನು ಪ್ರವೇಶದ್ವಾರದಲ್ಲಿ ಸ್ವಾಗತಿಸುತ್ತದೆ.

ಸಾಂಪ್ರದಾಯಿಕ ದಕ್ಷಿಣ ಭಾರತೀಯ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾದ ಈ ವಸ್ತು ಸಂಗ್ರಹಾಲಯವು ಎರಡು ಅಂತಸ್ತನ್ನು ಹೊಂದಿದ್ದು, ಇಲ್ಲಿ ರಾಮಾಯಣದ ದೃಶ್ಯಗಳನ್ನು ಜೀವಂತಗೊಳಿಸಲಾಗಿದೆ.

ನೆಲ ಮಹಡಿಯಲ್ಲಿ ಭಗವಾನ್ ರಾಮನ ಬಾಲ್ಯ, ಸೀತೆಯ ಸ್ವಯಂವರ ಮತ್ತು ರಾಮ ಲಲ್ಲಾನ ಆರಂಭಿಕ ಜೀವನದ ಕ್ಷಣಗಳನ್ನು ಪ್ರದರ್ಶಿಸಿದರೆ ಮೊದಲ ಮಹಡಿಯಲ್ಲಿ ವನವಾಸದ ವರ್ಷಗಳು, ಲಂಕಾ ದಹನ ಮತ್ತು ಭವ್ಯ ರಾಮ-ರಾವಣ ಯುದ್ಧದ ಸನ್ನಿವೇಶವನ್ನು ಕಾಣಬಹುದು.

ಇದರೊಳಗೆ ವಿಶೇಷ ಸೆಲ್ಫಿ ಪಾಯಿಂಟ್, ಸೀತೆಯ ಅಪಹರಣ ಮತ್ತು ಹನುಮಂತನು ಲಂಕೆಯನ್ನು ಸುಡುವ ಪ್ರಮುಖ ದೃಶ್ಯಗಳಿಗೆ 3ಡಿ ಬೆಳಕನ್ನು ಹೊಂದಿಸಲಾಗಿದೆ. ಇದು ನೈಜ್ಯತೆಯ ರೂಪವನ್ನು ಪ್ರದರ್ಶಿಸುತ್ತದೆ.

ನಿರ್ಮಾಣ ಕಾರ್ಯ ಮಾಡಿರುವುದು ಯಾರು?

ಲೋನಾವಾಲ ಮತ್ತು ತಿರುವನಂತಪುರದಲ್ಲಿರುವ ಪ್ರಸಿದ್ಧ ಮೇಣದ ವಸ್ತುಸಂಗ್ರಹಾಲಯಗಳಿಗೆ ಹೆಸರುವಾಸಿಯಾದ ಕೇರಳ ಮೂಲದ ಸುನೀಲ್ ವ್ಯಾಕ್ಸ್ ಮ್ಯೂಸಿಯಂ ಈ ವಸ್ತುಸಂಗ್ರಹಾಲಯವನ್ನು ನಿರ್ಮಿಸಿದೆ. ಅಯೋಧ್ಯೆಯ ಪ್ರತಿಯೊಂದು ಪ್ರತಿಮೆಯನ್ನು ಎಷ್ಟು ನಿಖರತೆಯಿಂದ ಕೆತ್ತಲಾಗಿದೆಯೆಂದರೆ ಸಂದರ್ಶಕರು ತ್ರೇತಾಯುಗಕ್ಕೆ ಕಾಲಿಟ್ಟಿದ್ದಾರೆಂದು ಭಾವಿಸುತ್ತಾರೆ. ಇದು ಸಾಂಸ್ಕೃತಿಕ ಮತ್ತು ಭಕ್ತಿಪೂರ್ವಕ ಮೇರುಕೃತಿ ಎಂದು ವ್ಯಾಕ್ಸ್ ಮ್ಯೂಸಿಯಂ ಸಂಸ್ಥಾಪಕ ಸುನಿಲ್ ಹೇಳುತ್ತಾರೆ.

ಸೌಲಭ್ಯಗಳು

ರಾಮಾಯಣ ಮೇಣದ ವಸ್ತುಸಂಗ್ರಹಾಲಯದಲ್ಲಿ ಸಂದರ್ಶಕರಿಗೆ ಅಗತ್ಯವಿರುವ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಅವುಗಳಲ್ಲಿ ಮೀಸಲಾದ ಪಾರ್ಕಿಂಗ್ ಪ್ರದೇಶ, ತಿಂಡಿ ವಲಯ ಮತ್ತು ಸ್ಟುಡಿಯೋ ಕಾಫಿ ಹೌಸ್, ಕುಟುಂಬಗಳಿಗೆ ಮನರಂಜನಾ ಪ್ರದೇಶ, ಸಾಂಸ್ಕೃತಿಕ ವೈವಿಧ್ಯವನ್ನು ಪ್ರದರ್ಶಿಸುವ ದಕ್ಷಿಣ ಭಾರತ ಮತ್ತು ಉತ್ತರ ಭಾರತೀಯ ಭಕ್ಷ್ಯಗಳ ಮಿಶ್ರಣವನ್ನು ನೀಡುವ ಕ್ಯುರೇಟೆಡ್ ಫುಡ್ ಕೋರ್ಟ್, ಪೂರ್ಣ ಪ್ರಮಾಣದ ಭದ್ರತಾ ವ್ಯವಸ್ಥೆ, ದಿನದ 24 ಗಂಟೆಗಳ ಸಿಸಿಟಿವಿ ಕಣ್ಗಾವಲು, ಅಗ್ನಿ ಸುರಕ್ಷತಾ ನಿಬಂಧನೆಗಳು ಮತ್ತು ನಾಲ್ಕು ತುರ್ತು ನಿರ್ಗಮನ ವ್ಯವಸ್ಥೆ, ಹವಾನಿಯಂತ್ರಿತ ಒಳಾಂಗಣ ವ್ಯವಸ್ಥೆಯನ್ನು ಒಳಗೊಂಡಿದೆ.

ಇದನ್ನೂ ಓದಿ: Kantara: Chapter 1: ಕಾಂತಾರದ ಬಗ್ಗೆ ದೈವ ಯಾವ ಮಾತೂ ಆಡಿಲ್ಲ: ಪೆರಾರ ದೈವಸ್ಥಾನ ಸ್ಪಷ್ಟನೆ

ಪ್ರವೇಶ ಶುಲ್ಕ

ಕಾಶಿರಾಮ್ ಕಾಲೋನಿಯ ಎದುರು ಚೌಡಾ ಕೋಸಿ ಪರಿಕ್ರಮ ಮಾರ್ಗದಲ್ಲಿರುವ ವಸ್ತು ಸಂಗ್ರಹಾಲಯದೊಳಗೆ ಪ್ರವೇಶಕ್ಕೆ ಪ್ರತಿ ವ್ಯಕ್ತಿಗೆ 100 ರೂ. ಆಗಿದ್ದು, ಒಂದು ಸಮಯದಲ್ಲಿ 100 ಜನರು ಮಾತ್ರ ಒಳಗೆ ಹೋಗಬಹುದಾಗಿದೆ.