Kantara: Chapter 1: ಕಾಂತಾರದ ಬಗ್ಗೆ ದೈವ ಯಾವ ಮಾತೂ ಆಡಿಲ್ಲ: ಪೆರಾರ ದೈವಸ್ಥಾನ ಸ್ಪಷ್ಟನೆ
Sri Kshethra Perara: ಕಾಂತಾರ ಸಿನಿಮಾ ಅಭಿಮಾನಿಗಳು ದೈವದ ಅನುಕರಣೆ ಮಾಡುತ್ತಿರುವುದು ದೈವನರ್ತಕರು, ದೈವಾರಾಧಕರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಬಗ್ಗೆ ದೈವವೂ ಎಚ್ಚರಿಕೆ ನೀಡಿತ್ತು ಎನ್ನಲಾಗಿತ್ತು. ನನ್ನ ಹೆಸರಿನಲ್ಲಿ ಹಣ ಮಾಡುತ್ತಿರುವವರನ್ನು ನಾನು ನೋಡಿಕೊಳ್ಳುತ್ತೇನೆ. ಅಪಚಾರ ಮಾಡುವವರಿಗೆ ನಾನು ಬುದ್ಧಿ ಕಲಿಸುತ್ತೇನೆ ಎಂದು ದೈವ ಹೇಳಿದೆ ಎಂಬ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಇದೀಗ ಪಡುಪೆರಾರ ದೇವಸ್ಥಾನ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.

-

ಮಂಗಳೂರು: ಇತ್ತೀಚೆಗೆ ಸಾಕಷ್ಟು ಸುದ್ದಿಯಾದ ಮಂಗಳೂರಿನ ದೈವ ನುಡಿ ಬಗ್ಗೆ ಇದೀಗ ಸ್ವತಃ ಪೆರಾರ ದೈವಸ್ಥಾನದಿಂದಲೇ ಸ್ಪಷ್ಟೀಕರಣ ಬಂದಿದೆ. ಕಾಂತಾರ ಚಿತ್ರ (Kantara: Chapter 1) ಮತ್ತು ಚಿತ್ರ ತಂಡದ ಬಗ್ಗೆ ಕ್ಷೇತ್ರದಲ್ಲಿ ದೈವ ಯಾವ ಮಾತೂ ಆಡಿಲ್ಲ ಎಂದು ಪಡುಪೆರಾರದ ಶ್ರೀ ಬ್ರಹ್ಮದೇವರು, ಇಷ್ಟದೇವತಾ ಬಲವಾಂಡಿ, ಪಿಲಿಚಾಂಡಿ ದೈವಸ್ಥಾನ ಆಡಳಿತ ಮಂಡಳಿ (Sri Kshethra Perara) ಸ್ಪಷ್ಟನೆ ನೀಡಿದೆ.
ಕಾಂತಾರ ಸಿನಿಮಾ ಅಭಿಮಾನಿಗಳು ದೈವದ ಅನುಕರಣೆ ಮಾಡುತ್ತಿರುವುದು ದೈವನರ್ತಕರು, ದೈವಾರಾಧಕರ ಕೆಂಗಣ್ಣಿಗೆ ಗುರಿಯಾಗಿತ್ತು. ಇನ್ನು ಈ ಬೆಳವಣಿಗೆಗಳಿಂದ ಬೇಸತ್ತ ದೈವನರ್ತಕರು ದೈವಕ್ಷೇತ್ರದ ಮೊರೆ ಹೋಗಿ, ದೂರು ನೀಡಿದ್ದರು. ಈ ವೇಳೆನನ್ನ ಹೆಸರಿನಲ್ಲಿ ಹಣ ಮಾಡುತ್ತಿರುವವರನ್ನು ನಾನು ನೋಡಿಕೊಳ್ಳುತ್ತೇನೆ. ಹಣವೆಲ್ಲ ಆಸ್ಪತ್ರೆ ಸೇರುವಂತೆ ಮಾಡುತ್ತೇನೆ. ಅಪಚಾರ ಮಾಡುವವರಿಗೆ ನಾನು ಬುದ್ಧಿ ಕಲಿಸುತ್ತೇನೆ. ಇನ್ಮುಂದೆ ಎಲ್ಲಾ ದೈವಸ್ಥಾನಗಳಲ್ಲಿ ಚಿತ್ರೀಕರಣ ನಿಲ್ಲಿಸಿ. ನೀವು ಹೋರಾಟವನ್ನು ಮುಂದುವರಿಸಿ. ನಾನು ನಿಮ್ಮ ಬೆನ್ನ ಹಿಂದೆ ಇದ್ದೇನೆ ಎಂದು ದೈವ ಹೇಳಿರುವುದಾಗಿ ಸುದ್ದಿ ಹರಿದಾಡಿತ್ತು. ಆದರೆ, ಈ ರೀತಿ ದೈವ ಹೇಳಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ.
ಶ್ರೀ ಬ್ರಹ್ಮ ದೇವರು -ಇಷ್ಟ ದೇವತಾ ಬಲವಾಂಡಿ -ಪಿಲಿಚಾಂಡಿ ದೈವಸ್ಥಾನ, ಪಡುಪೆರಾರ-ಕ್ಷೇತ್ರದಲ್ಲಿ ಶತಮಾನದ ಕಾಲದ ಸಂಪ್ರದಾಯದಂತೆ ಇತ್ತೀಚೆಗೆ ಪುದ್ದರ್-ಮೆಚ್ಚಿ ಜಾತ್ರೆ ನಡೆದಿತ್ತು. ಈ ಸಂದರ್ಭದಲ್ಲಿ ದೈವದ ಪಾತ್ರಿ-ದೈವವು ನೀಡಿದ ಅಭಯ ನುಡಿವಿಚಾರದಲ್ಲಿ ಗೊಂದಲ ಭಿನ್ನಾಭಿಪ್ರಾಯ ಏರ್ಪಟ್ಟಿರುವುದು ಕ್ಷೇತ್ರದ ಆಡಳಿತ ಮಂಡಳಿಯ ಗಮನಕ್ಕೆ ಬಂದಿದೆ.
ಆದರೆ, ಕ್ಷೇತ್ರದ ಬಲವಾಂಡಿ -ಪಿಲಿಚಾಂಡಿ ದೈವದ ನರ್ತನದ ಬಳಿಕ ಕೆಲ ಯುವಕರು, ದೈವ-ದೇವರ ವಿಚಾರದಲ್ಲಿ ಆಗುತ್ತಿರುವ ಅಪಪ್ರಚಾರ ಬಗ್ಗೆ ದೈವದ ಮುಂದೆ ನಿವೇದನೆ ಮಾಡಿಕೊಂಡಿದ್ದರು. ಈ ಬಗ್ಗೆ, ದೈವವು ಸೂಕ್ತ ಅಭಯವನ್ನು ನೀಡಿತ್ತು. ಆದರೆ, ಯಾವುದೇ ಚಲನಚಿತ್ರ ಅದರಲ್ಲೂ ಮುಖ್ಯವಾಗಿ ಪ್ರಸ್ತುತ ಪ್ರಚಾರದಲ್ಲಿರುವ ಕಾಂತಾರ-1 ಬಗ್ಗೆ ಯಾವುದೇ ಅಭಯ ನುಡಿಯನ್ನು ದೈವವು ನೀಡಿಲ್ಲ. ಆದರೆ ಕೆಲ ಯುವಕರ ಹೇಳಿಕೆಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿರುವುದಕ್ಕೆ ಶ್ರೀಕ್ಷೇತ್ರದ ಭಕ್ತರು ಬೇಸರ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ಸ್ಪಷ್ಟೀಕರಣ ನೀಡಲಾಗುತ್ತಿದೆ.
ಈ ಸುದ್ದಿಯನ್ನೂ ಓದಿ | Deepavali Festivals: ಕೆಜಿಎಫ್- ಕಾಂತಾರ ಸಿನಿಮಾ ಹೆಸರಿನ ಪಟಾಕಿ ಬ್ರ್ಯಾಂಡ್- ಖರೀದಿಗೆ ಮುಗಿಬಿದ್ದ ಫ್ಯಾನ್ಸ್
ಜಾತ್ರೆ ಸಂದರ್ಭದಲ್ಲಿ ಉದ್ಭವವಾಗಿರುವ ಗೊಂದಲ-ಭಿನ್ನಾಭಿಪ್ರಾಯಗಳಿಗೆ ಶ್ರೀ ಕ್ಷೇತ್ರದ ದೈವ-ದೇವರು-ಆಡಳಿತ ಮಂಡಳಿಯು ಹೊಣೆಗಾರರಲ್ಲವೆಂದು ಈ ಮೂಲಕ ಸ್ಪಷ್ಟಪಡಿಸಲಾಗುತ್ತಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.