Yugadi 2026: ಯುಗಾದಿ 2026: ಅದೃಷ್ಟ, ಐಶ್ವರ್ಯ ಹೆಚ್ಚಳಕ್ಕೆ ಈ ಶುಭ ದಿನ ಮನೆಗೆ ತರಬೇಕಾದ ವಸ್ತುಗಳು ಇವು..!
ಯುಗಾದಿ 2026 ಮಾರ್ಚ್ 19ರಂದು ಆಚರಿಸಲಾಗುತ್ತಿದ್ದು, ಈ ದಿನ ಕೆಲವು ಶುಭ ವಸ್ತುಗಳನ್ನು ಮನೆಗೆ ತರುವುದರಿಂದ ಐಶ್ವರ್ಯ, ಆರೋಗ್ಯ ಮತ್ತು ಶಾಂತಿ ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಕವಡೆ, ಅಕ್ಕಿ, ಉಪ್ಪು, ಅರಿಶಿನ ಮತ್ತು ಅರಳಿ ಮರ ಪೂಜೆಗಳು ವಿಶೇಷ ಮಹತ್ವ ಹೊಂದಿವೆ.
ಯುಗಾದಿ (ಎಐ ಚಿತ್ರ) -
ಬೆಂಗಳೂರು: ಯುಗಾದಿ(Yugadi 2026) ಹಬ್ಬವು ಹಿಂದೂ ಧರ್ಮದಲ್ಲಿ ಹೊಸ ವರ್ಷದ ಆರಂಭವನ್ನು ಸೂಚಿಸುವ ಅತ್ಯಂತ ಪವಿತ್ರ ಹಬ್ಬವಾಗಿದೆ. ಇದು ಹೊಸ ಜೀವನ, ಹೊಸ ಆಶೆಗಳು ಮತ್ತು ಹೊಸ ಅವಕಾಶಗಳನ್ನು ಸ್ವಾಗತಿಸುವ ಸಂದರ್ಭವಾಗಿದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಈ ದಿನವೇ ಬ್ರಹ್ಮ ದೇವರು ಸೃಷ್ಟಿಯನ್ನು ಆರಂಭಿಸಿದನು ಎಂದು ಹೇಳಲಾಗುತ್ತದೆ. ಇನ್ನೂ ಕೆಲವು ಕಥೆಗಳ ಪ್ರಕಾರ, ಶ್ರೀರಾಮನ ಪಟ್ಟಾಭಿಷೇಕವೂ ಈ ದಿನ ನಡೆದಿತ್ತೆಂದು ನಂಬಲಾಗುತ್ತದೆ. 2025ರಲ್ಲಿ ಯುಗಾದಿ ಹಬ್ಬವನ್ನು ಮಾರ್ಚ್ 19ರಂದು ಗುರುವಾರ ಆಚರಿಸಲಾಗುತ್ತದೆ.
ಯುಗಾದಿಯಂದು ಕೆಲವು ಶುಭ ವಸ್ತುಗಳನ್ನು ಮನೆಗೆ ತರುವುದರಿಂದ ಅದೃಷ್ಟ, ಆರೋಗ್ಯ, ಆರ್ಥಿಕ ಪ್ರಗತಿ ಮತ್ತು ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ ಎಂಬ ನಂಬಿಕೆ ಇದೆ. ಇಂತಹ ವಸ್ತುಗಳ ಮಹತ್ವವನ್ನು ತಿಳಿದುಕೊಳ್ಳುವುದು ಮುಖ್ಯ.
ಕವಡೆ – ಲಕ್ಷ್ಮಿ ಕೃಪೆಗೆ ಸಂಕೇತ
ಲಕ್ಷ್ಮಿ ದೇವಿಗೆ ಪ್ರಿಯವಾದ ವಸ್ತುಗಳಲ್ಲಿ ಕವಡೆ ವಿಶೇಷ ಸ್ಥಾನ ಹೊಂದಿದೆ. ಮನೆಗೆ ಕವಡೆ ತಂದು ಇಡುವುದರಿಂದ ಧನಲಕ್ಷ್ಮಿಯ ಕೃಪೆ ದೊರೆಯುತ್ತದೆ ಎಂದು ನಂಬಲಾಗುತ್ತದೆ. ವಿಶೇಷವಾಗಿ ಹಳದಿ ಬಣ್ಣದ ಕವಡೆ ಅತ್ಯಂತ ಶುಭಕರವಾಗಿದೆ. ಯುಗಾದಿಯಂದು ಆರು ಹಳದಿ ಕವಡೆಗಳನ್ನು ತಂದು, ಅವನ್ನು ಅರಿಶಿನದ ನೀರಿನಲ್ಲಿ ತೊಳೆಯಬೇಕು. ನಂತರ ಅರಿಶಿನ, ಕುಂಕುಮ ಹಚ್ಚಿ ಕೆಂಪು ಬಟ್ಟೆಯ ಮೇಲೆ ಇಟ್ಟು ಪೂಜಿಸಿ, ನಂತರ ಹಣ ಇಡುವ ಸ್ಥಳದಲ್ಲಿ ಇಡುವುದರಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎನ್ನಲಾಗುತ್ತದೆ.
Ugadi-Ramzan Shopping 2026: ವೀಕೆಂಡ್‌ನಲ್ಲಿ ಯುಗಾದಿ-ರಂಜಾನ್ ಶಾಪಿಂಗ್ ಮೇನಿಯಾ
ಅಕ್ಕಿ – ಸಮೃದ್ಧಿ ಮತ್ತು ಧಾನ್ಯ ಲಕ್ಷ್ಮಿ
ಅಕ್ಕಿ ಅನ್ನವನ್ನು ದೇವಿಯ ಸ್ವರೂಪವೆಂದು ಪರಿಗಣಿಸಲಾಗುತ್ತದೆ. ಯುಗಾದಿ ದಿನ ಹೊಸ ಅಕ್ಕಿಯನ್ನು ತಂದು ತಾಮ್ರ ಅಥವಾ ಹಿತ್ತಾಳೆ ಪಾತ್ರೆಯಲ್ಲಿ ಇಟ್ಟು, ಅದಕ್ಕೆ ಅರಿಶಿನ, ಕುಂಕುಮ ಮತ್ತು ಹೂವನ್ನು ಅರ್ಪಿಸಿ ಪೂಜಿಸಬೇಕು. ಮಹಾಲಕ್ಷ್ಮಿಯನ್ನು ಪ್ರಾರ್ಥಿಸಿ ಧನ-ಧಾನ್ಯದಲ್ಲಿ ಸಮೃದ್ಧಿ ಕೋರಿ, ನಂತರ ಸ್ವಲ್ಪ ಅಕ್ಕಿಯನ್ನು ಪರ್ಸ್ ಅಥವಾ ಹಣ ಇಡುವ ಸ್ಥಳದಲ್ಲಿ ಇಡುವುದು ಶುಭಕರವೆಂದು ಹೇಳಲಾಗುತ್ತದೆ.
ಉಪ್ಪು – ನಕಾರಾತ್ಮಕತೆ ನಿವಾರಕ
ಉಪ್ಪು ಹಿಂದೂ ಸಂಪ್ರದಾಯದಲ್ಲಿ ಶುದ್ಧತೆ ಮತ್ತು ಸಕಾರಾತ್ಮಕತೆಯ ಸಂಕೇತವಾಗಿದೆ. ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ದೂರ ಮಾಡುವುದಾಗಿ ನಂಬಲಾಗುತ್ತದೆ. ಯುಗಾದಿಯಂದು ಮನೆಗೆ ಉಪ್ಪನ್ನು ತರುವುದು ಮತ್ತು ಅದನ್ನು ಬಳಸಿ ಮನೆಯನ್ನು ಸ್ವಚ್ಛಗೊಳಿಸುವುದು ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಉಪ್ಪು ಲಕ್ಷ್ಮಿ ದೇವಿಗೂ ಪ್ರಿಯವಾದುದಾಗಿ ಪರಿಗಣಿಸಲಾಗಿದೆ.
ಅರಿಶಿನ ತೋರಣ – ಶುಭದ ಸಂಕೇತ
ಅರಿಶಿನವು ಲಕ್ಷ್ಮಿ ಮತ್ತು ನಾರಾಯಣರಿಗೆ ಅತ್ಯಂತ ಪ್ರಿಯವಾಗಿದೆ. ಯುಗಾದಿ ದಿನ ಸಮ ಸಂಖ್ಯೆಯಲ್ಲಿ ಅರಿಶಿನದ ಕೊಂಬುಗಳನ್ನು ತಂದು, ಅವನ್ನು ಬಿಳಿ ದಾರದಲ್ಲಿ ಕಟ್ಟಿ ತೋರಣದಂತೆ ಮಾಡಿ ಮನೆಯ ಬಾಗಿಲಿಗೆ ಕಟ್ಟಬೇಕು. ಇದು ಶುಭವನ್ನು ತರಲು ಸಹಾಯಕವಾಗುತ್ತದೆ. ಇದನ್ನು ವ್ಯಾಪಾರ ಸ್ಥಳದಲ್ಲಿಯೂ ಕಟ್ಟಬಹುದು. ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಅಥವಾ 9 ಗಂಟೆಯೊಳಗೆ ಕಟ್ಟುವುದು ಉತ್ತಮ.
ಅರಳಿ ಮರ ಪೂಜೆ
ಯುಗಾದಿಯಂದು ಅರಳಿ ಮರಕ್ಕೆ ಪೂಜೆ ಸಲ್ಲಿಸುವುದು ವಿಶೇಷ ಮಹತ್ವ ಹೊಂದಿದೆ. ಈ ಮರದಲ್ಲಿ ಲಕ್ಷ್ಮಿ-ನಾರಾಯಣರು ವಾಸಿಸುತ್ತಾರೆ ಎಂಬ ನಂಬಿಕೆ ಇದೆ. ಸಂಜೆ ಸಮಯದಲ್ಲಿ ನೀರಿಗೆ ಹಾಲು ಮತ್ತು ಬೆಲ್ಲ ಬೆರೆಸಿ ಮರಕ್ಕೆ ಅರ್ಪಿಸಿ, ಹೂವು, ಅರಿಶಿನ, ಕುಂಕುಮದಿಂದ ಪೂಜಿಸಿ 12 ಬಾರಿ ಪ್ರದಕ್ಷಿಣೆ ಮಾಡಬೇಕು. ನಂತರ ತುಪ್ಪದ ದೀಪ ಹಚ್ಚುವುದು ಶುಭಕರ. ಇದು ಗ್ರಹದೋಷಗಳನ್ನು ನಿವಾರಿಸಿ ಆರ್ಥಿಕ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಎನ್ನಲಾಗುತ್ತದೆ.