Vishwavani Editorial: ಕಾವೇರಿ ನೀರಿನ ಮಾತುಕತೆ
ಸಿಎಂ ಭೇಟಿಗೆ ವಿಜಯ್ ಸಮಯ ಕೇಳಿದ್ದು, ಅವರ ಭೇಟಿಗೆ ಆಗಸ್ಟ್ 3ಕ್ಕೆ ಸಿಎಂ ಸಮಯಾವಕಾಶ ನೀಡಿದ್ದಾರೆ. ಈ ಭೇಟಿಯ ವೇಳೆ ಮೇಕೆದಾಟು ಯೋಜನೆ, ಕಾವೇರಿ ನೀರು ಹಂಚಿಕೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆಯಿದೆ. ತಮಿಳುನಾಡಿನಲ್ಲಿ ಟಿವಿಕೆ ಪಕ್ಷ ದೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿರುವುದರಿಂದ, ಈ ಕುರಿತ ಮಾತುಕತೆಯಲ್ಲಿ ಧನಾತ್ಮಕ ಬೆಳವಣಿಗೆ ಆಗಬಹುದು ಎಂದು ನಿರೀಕ್ಷಿಸುವುದರಲ್ಲಿ ಆರ್ಥವಿದೆ. ಸದ್ಯ ಉಭಯ ರಾಜ್ಯಗಳಲ್ಲಿ ಬರ ಪರಿಸ್ಥಿತಿಯಿದೆ.
-
ಯಾವುದೇ ಪಕ್ಷಗಳ ಸರಕಾರಗಳು ಬಂದರೂ ಕರ್ನಾಟಕ ಹಾಗೂ ತಮಿಳುನಾಡುಗಳ ನಡುವೆ ಕಾವೇರಿ ನದಿ ನೀರಿನ ಹಂಚಿಕೆ ತಗಾದೆ ಬಗೆಹರಿದಿದ್ದೇ ಇಲ್ಲ. ಕೋರ್ಟ್‌ಗಳು, ಪ್ರಾಧಿಕಾರಗಳು, ನಿಯಂತ್ರಣ ಸಮಿತಿ, ಆದೇಶಗಳ ಮೇಲೆ ಆದೇಶ ಹೊರಡಿಸಿದ್ದರೂ ತಮಿಳುನಾಡಿಗೆ ಅದರಿಂದ ತೃಪ್ತಿಯಾದ ಉದಾಹರಣೆಯೇ ಇಲ್ಲ. ಇಂಥ ಹೊತ್ತಿನಲ್ಲಿ, ನಮ್ಮ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಜೊತೆಗೆ ಮಾತುಕತೆಗೆ ಮುಂದಾಗಿ ದ್ದಾರೆ.
ಸಿಎಂ ಭೇಟಿಗೆ ವಿಜಯ್ ಸಮಯ ಕೇಳಿದ್ದು, ಅವರ ಭೇಟಿಗೆ ಆಗಸ್ಟ್ 3ಕ್ಕೆ ಸಿಎಂ ಸಮಯಾವಕಾಶ ನೀಡಿದ್ದಾರೆ. ಈ ಭೇಟಿಯ ವೇಳೆ ಮೇಕೆದಾಟು ಯೋಜನೆ, ಕಾವೇರಿ ನೀರು ಹಂಚಿಕೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆಯಿದೆ. ತಮಿಳುನಾಡಿನಲ್ಲಿ ಟಿವಿಕೆ ಪಕ್ಷ ದೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿರುವುದರಿಂದ, ಈ ಕುರಿತ ಮಾತುಕತೆಯಲ್ಲಿ ಧನಾತ್ಮಕ ಬೆಳವಣಿಗೆ ಆಗಬಹುದು ಎಂದು ನಿರೀಕ್ಷಿಸುವುದರಲ್ಲಿ ಆರ್ಥವಿದೆ. ಸದ್ಯ ಉಭಯ ರಾಜ್ಯಗಳಲ್ಲಿ ಬರ ಪರಿಸ್ಥಿತಿಯಿದೆ.
ಇದನ್ನೂ ಓದಿ: Cauvery Water Dispute: ಕರ್ನಾಟಕಕ್ಕೆ ತಾತ್ಕಾಲಿಕ ರಿಲೀಫ್; ಕಾವೇರಿ ನೀರು ಬಿಡುಗಡೆ ವಿಚಾರದಲ್ಲಿ ಯಥಾಸ್ಥಿತಿಗೆ CWMA ಸೂಚನೆ
ಕರ್ನಾಟಕದಲ್ಲಂತೂ ಪರಿಸ್ಥಿತಿ ಗಂಭೀರವಾಗಿದ್ದು, ಯಾವ ಅಣೆಕಟ್ಟಿನಲ್ಲೂ ಅರ್ಧದಷ್ಟೂ ನೀರು ಇನ್ನೂ ತುಂಬಿಲ್ಲ. ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಜಲ ವಿವಾದ ಜೋರಾಗುವುದು ಖಚಿತ. ಇದರ ನಡುವೆಯೂ ನಿಯಮದಂತೆ 28 ಟಿಎಂಸಿ ನೀರು ಬಿಡುವಂತೆ ತಮಿಳುನಾಡಿನ ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕಾವೇರಿ ನಿರ್ವಹಣಾ ಪ್ರಾಧಿಕಾರದ ಮುಂದೆ ಆಗ್ರಹಿಸಿದ್ದಾರೆ. ಆದರೆ ಕಾವೇರಿ ನೀರನ್ನು ಕುಡಿಯಲು ಮಾತ್ರ ಬಳಸುವಂತೆ ಉಭಯ ರಾಜ್ಯಗಳಿಗೆ ಕಾವೇರಿ ನಿರ್ವಹಣಾ ಪ್ರಾಧಿಕಾರ ಆದೇಶ ನೀಡಿದ್ದು, ನೀರನ್ನು ಬಿಡದಂತೆ ಕರ್ನಾಟಕಕ್ಕೆ ತಿಳಿಸಿರು ವುದು ಭರವಸೆಯ ತಂತು. ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಳ್ಳಲು ತಮಿಳುನಾಡು ಇನ್ನೂ ಅವಕಾಶ ನೀಡಿಲ್ಲ.
ಕರ್ನಾಟಕದ ನಗರಗಳಿಗೆ ಕುಡಿಯುವ ನೀರು ಒದಗಿಸುವ ಈ ಯೋಜನೆಗೆ ಅಡ್ಡಗಾಲು ಹಾಕಿ, ತಮಿಳುನಾಡು ಕಾವೇರಿ ನ್ಯಾಯಾಧೀಕರಣ-2 ರಚಿಸಲು ಆಗ್ರಹಿಸಿದೆ. ಈ ಎಲ್ಲ ವಿಚಾರಗಳು ಮಾತು ಕತೆಯಿಂದ ಬಗೆಹರಿಯುವುದಾದರೆ ಒಳಿತು. ಆದರೆ ಕಾನೂನು ಹೋರಾಟಕ್ಕೆ ಬೇಕಾದ ಎಲ್ಲ ತಯಾರಿಯನ್ನು ತಮಿಳುನಾಡು ಸದಾ ಮಾಡಿಕೊಳ್ಳುತ್ತ, ತನ್ನ ನಿಲುಮೆಯನ್ನು ಗಟ್ಟಿಗೊಳಿಸಿ ಕೊಳ್ಳುತ್ತಲೇ ಸಾಗಿದೆ.
ಕಾವೇರಿಯ ಉಪನದಿಗಳಿಗೂ ಅಡ್ಡಗಟ್ಟೆ ಹಾಕಬಾರದು ಎಂಬಲ್ಲಿಯವರೆಗೂ ಅದರ ವಾದವಿದೆ. ತಮಿಳುನಾಡಿನ ಕಾನೂನು ತಂಡ ಬಲವಾಗಿದೆ. ನಮ್ಮ ರಾಜ್ಯದ ಸಿದ್ಧತೆ ದುರ್ಬಲವಾಗಿದೆ. ಮಾತು ಕತೆಗೆ ಕೂರುವುದು ಒಳ್ಳೆಯದೇ. ಆದರೆ ನ್ಯಾಯಾಂಗ ಹೋರಾಟದ ತಯಾರಿ, ಕಾನೂನು ತಂಡದ ಬಲಿಷ್ಠತೆಗೆ ಸಿದ್ಧತೆ, ತಜ್ಞರ ತಂಡದ ಬೆಂಬಲ ಇವುಗಳನ್ನೆಲ್ಲ ಸರಕಾರ ಕ್ರೋಡೀಕರಿಸಬೇಕಿದೆ. ಬರಗಾಲದಲ್ಲಿ ಇದೆಲ್ಲ ಬೇಕಾದೀತು.