ಕದನ ವಿರಾಮ: ಶಾಂತಿಯತ್ತ ಮೊದಲ ಹೆಜ್ಜೆ
ಯುದ್ಧಪೀಡಿತ ದೇಶಗಳ ಸಾಮಾನ್ಯ ನಾಗರಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಮತ್ತೊಂದೆಡೆ ತೈಲ ಬೆಲೆಗಳ ಏರಿಳಿತ, ವಾಣಿಜ್ಯ ಮಾರ್ಗಗಳ ಅಸ್ಥಿರತೆ ಮತ್ತು ಭದ್ರತಾ ಆತಂಕಗಳಿಂದ ದಿನ ಕಳೆಯುತ್ತಿರುವ ಇತರ ದೇಶಗಳಿಗೂ ಕೂಡ ತಾತ್ಕಾಲಿಕವಾಗಿ ಭರವಸೆ ಸಿಕ್ಕಂತಾಗಿದೆ. ಈ ಕದನ ವಿರಾಮವು ತಾತ್ಕಾಲಿಕವಾಗಿ ಹಿಂಸೆಯನ್ನು ತಗ್ಗಿಸಿದರೂ, ಇದು ಶಾಶ್ವತ ಪರಿಹಾರವಲ್ಲ ಎಂಬುದು ಸ್ಪಷ್ಟ.
-
ಕೊಲ್ಲಿ ಯುದ್ಧದ ಉದ್ವಿಗ್ನತೆಗೆ ಕದನ ವಿರಾಮ ಘೋಷಣೆ ರೂಪದಲ್ಲಿ ತಾತ್ಕಾಲಿಕ ವಿರಾಮ ಸಿಕ್ಕಿದೆ. ಅಮೆರಿಕ-ಇಸ್ರೇಲ್ ಮತ್ತು ಇರಾನ್ ದೇಶಗಳು ಶಾಂತಿಯತ್ತ ಒಂದು ಸೂಕ್ಷ್ಮ ಹೆಜ್ಜೆ ಇಟ್ಟಿವೆ. ದಾಳಿ-ಪ್ರತಿದಾಳಿಗಳಿಂದ ಪರಿಸ್ಥಿತಿ ತೀವ್ರಗೊಂಡಿದ್ದ ಸಂದರ್ಭದಲ್ಲಿ ಈ ವಿರಾಮವು ಮಾನವೀಯ ಸಂಕಷ್ಟವನ್ನು ತಾತ್ಕಾಲಿಕವಾಗಿ ತಗ್ಗಿಸಿದೆ.
ಯುದ್ಧಪೀಡಿತ ದೇಶಗಳ ಸಾಮಾನ್ಯ ನಾಗರಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಮತ್ತೊಂದೆಡೆ ತೈಲ ಬೆಲೆ ಗಳ ಏರಿಳಿತ, ವಾಣಿಜ್ಯ ಮಾರ್ಗಗಳ ಅಸ್ಥಿರತೆ ಮತ್ತು ಭದ್ರತಾ ಆತಂಕಗಳಿಂದ ದಿನ ಕಳೆಯು ತ್ತಿರುವ ಇತರ ದೇಶಗಳಿಗೂ ಕೂಡ ತಾತ್ಕಾಲಿಕವಾಗಿ ಭರವಸೆ ಸಿಕ್ಕಂತಾಗಿದೆ. ಈ ಕದನ ವಿರಾಮವು ತಾತ್ಕಾ ಲಿಕವಾಗಿ ಹಿಂಸೆಯನ್ನು ತಗ್ಗಿಸಿದರೂ, ಇದು ಶಾಶ್ವತ ಪರಿಹಾರವಲ್ಲ ಎಂಬುದು ಸ್ಪಷ್ಟ.
ಈ ಸಂಘರ್ಷದ ಮೂಲದಲ್ಲಿ ರಾಜಕೀಯ ಪ್ರಾಬಲ್ಯ, ಭದ್ರತಾ ಆತಂಕಗಳು ಮತ್ತು ಪ್ರಾದೇಶಿಕ ಪ್ರಭಾವದ ಪೈಪೋಟಿ ಅಡಕವಾಗಿದೆ. ವಿಶೇಷವಾಗಿ ಮಧ್ಯಪ್ರಾಚ್ಯದ ರಾಜಕೀಯ ಸಮೀಕರಣಗಳಲ್ಲಿ ಈ ಎರಡೂ ರಾಷ್ಟ್ರಗಳ ಪಾತ್ರ ಬಹಳ ಸಂಕೀರ್ಣವಾಗಿದೆ. ಈ ಹಿನ್ನೆಲೆಗಳಲ್ಲಿ ಈ ಕದನ ವಿರಾಮವು ಶಾಂತಿಯ ಸಂಕೇತವಾಗಿ ಕಾಣಿಸಿಕೊಂಡರೂ, ಅದರ ಹಿಂದಿನ ಅಂತರಾಳದಲ್ಲಿ ಇನ್ನೂ ಗಾಢವಾದ ಅವಿಶ್ವಾಸ ಇದೆ.
ಇದನ್ನೂ ಓದಿ: Vishwavani Editorial: ವಿನಾಶಕಾರಿ ಯುದ್ಧ ನಿಲ್ಲಲಿ
ಆದ್ದರಿಂದ, ಕೇವಲ ಸೇನೆಯ ಮಟ್ಟದ ವಿರಾಮದಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಈ ಸಮಸ್ಯೆ ಶಾಶ್ವತವಾಗಿ ಅಂತ್ಯಗೊಳ್ಳಬೇಕಾದರೆ, ರಾಜತಾಂತ್ರಿಕ ಮಾತುಕತೆಗಳು ಅತ್ಯಗತ್ಯ. ಪರಸ್ಪರ ವಿಶ್ವಾಸ ನಿರ್ಮಾಣ, ಮಧ್ಯಸ್ಥಿಕೆಯ ಮೂಲಕ ಸಂವಾದ ಮತ್ತು ಅಂತಾರಾಷ್ಟ್ರೀಯ ಒತ್ತಡವು ಪರಿಹಾರದ ದಾರಿ ತೋರಿಸಬಹುದು. ಈ ನಿಟ್ಟಿನಲ್ಲಿ ವಿಶ್ವಸಂಸ್ಥೆ ಮತ್ತು ಇತರ ಜಾಗತಿಕ ಸಂಸ್ಥೆಗಳು ಹೆಚ್ಚು ಸಕ್ರಿಯ ಪಾತ್ರವಹಿಸಬೇಕಾಗಿದೆ.
ಇದಲ್ಲದೆ, ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡುವುದು ಕೂಡ ಮುಖ್ಯ. ಯುದ್ಧದಲ್ಲಿ ಸಾಮಾನ್ಯ ನಾಗರಿಕರೇ ಹೆಚ್ಚು ಬಲಿಯಾಗುತ್ತಿದ್ದು, ಅವರ ಸುರಕ್ಷತೆ ಮತ್ತು ಬದುಕಿನ ಹಕ್ಕುಗಳನ್ನು ರಕ್ಷಿಸುವುದು ಎಲ್ಲ ರಾಷ್ಟ್ರಗಳ ಜವಾಬ್ದಾರಿಯಾಗಿದೆ. ಕದನ ವಿರಾಮವು ಶಾಂತಿಯತ್ತ ಒಂದು ಆರಂಭಿಕ ಹೆಜ್ಜೆ ಮಾತ್ರ. ಶಾಶ್ವತ ಶಾಂತಿಗೆ ದಾರಿ ಮಾಡಿಕೊಡಬೇಕಾದರೆ, ರಾಜಕೀಯ ಬದ್ಧತೆ, ಸಂವಾದ ಮತ್ತು ಜಾಗತಿಕ ಸಹಕಾರ ಅಗತ್ಯ. ಇಲ್ಲವಾದರೆ, ಈ ವಿರಾಮವು ಮತ್ತೊಂದು ಯುದ್ಧದ ಮುನ್ನೋಟವಾಗಿಯೇ ಉಳಿಯುವ ಅಪಾಯ ಇದೆ.