Vishwavani Editorial: ಎಡವಟ್ಟನಿಗೆ ಎದುರೇಟು
ಅತೀವ ಕುಶಲಿಗಳಾಗಿರುವ ವಿದೇಶಿ ಉದ್ಯೋಗಾರ್ಥಿಗಳನ್ನು ಅಮೆರಿಕಕ್ಕೆ ಕರೆಸಿಕೊಂಡು ನೇಮಕ ಮಾಡಿಕೊಳ್ಳಲು ಅನುವು ಮಾಡಿಕೊಡುವ ಎಚ್-1ಬಿ ವೀಸಾದ ವಾರ್ಷಿಕ ಶುಲ್ಕದ ಪ್ರಮಾಣವನ್ನು 1 ಲಕ್ಷ ಡಾಲರ್‌ಗೆ ಏರಿಸಿದಾಗ, ವಿಶ್ವದ ವಿವಿಧೆಡೆ ಮತ್ತೊಮ್ಮೆ ಟ್ರಂಪ್ ವಿರುದ್ಧದ ಹುಯಿಲು ಕೇಳಿಬಂತು ಮತ್ತು ಅದು ಸಹಜವೂ ಆಗಿತ್ತು.
-
ಅಮೆರಿಕದ ಅಧ್ಯಕ್ಷಗಿರಿ ಎಂಬ ಅಧಿಕಾರದ ಗದ್ದುಗೆಗೆ ಎರಡನೇ ಬಾರಿಗೆ ಅಮರಿಕೊಂಡಿರುವ ಡೊನಾಲ್ಡ್ ಟ್ರಂಪ್ ಅವರು ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಈ ಬಾರಿ ತಾಯ್ನಾಡಿನಲ್ಲೇ ಅವರಿಗೆ ‘ರಾಜಕೀಯ ತಪರಾಕಿ’ ಬಿದ್ದಿರುವುದು ಮತ್ತೊಂದು ವಿಶೇಷ. ಭಾರತ ಸೇರಿದಂತೆ ವಿಶ್ವದ ವಿವಿಧ ರಾಷ್ಟ್ರಗಳಿಂದ ಅಮೆರಿಕಕ್ಕೆ ಆಮದಾಗುವ ಸರಕುಗಳ ಮೇಲೆ ಅತಿರೇಕದ ಸುಂಕವನ್ನು ಹೇರಿದಾಗ, ಟ್ರಂಪ್ ಅವರ ವಿರುದ್ಧ ಮೊದಲ ಸುತ್ತಿನ ಅಸಮಾಧಾನದ ಅಲೆ ತೇಲಿಬಂದದ್ದು ಖರೆ.
ಅತೀವ ಕುಶಲಿಗಳಾಗಿರುವ ವಿದೇಶಿ ಉದ್ಯೋಗಾರ್ಥಿಗಳನ್ನು ಅಮೆರಿಕಕ್ಕೆ ಕರೆಸಿಕೊಂಡು ನೇಮಕ ಮಾಡಿಕೊಳ್ಳಲು ಅನುವು ಮಾಡಿಕೊಡುವ ಎಚ್-1ಬಿ ವೀಸಾದ ವಾರ್ಷಿಕ ಶುಲ್ಕದ ಪ್ರಮಾಣವನ್ನು 1 ಲಕ್ಷ ಡಾಲರ್‌ಗೆ ಏರಿಸಿದಾಗ, ವಿಶ್ವದ ವಿವಿಧೆಡೆ ಮತ್ತೊಮ್ಮೆ ಟ್ರಂಪ್ ವಿರುದ್ಧದ ಹುಯಿಲು ಕೇಳಿಬಂತು ಮತ್ತು ಅದು ಸಹಜವೂ ಆಗಿತ್ತು.
ಇದನ್ನೂ ಓದಿ: Vishwavani Editorial: ಮೃದು ರಾಜತಂತ್ರಕ್ಕೆ ಇದು ಕಾಲವಲ್ಲ
ಇತ್ತೀಚಿನ ಬೆಳವಣಿಗೆಯೆಂದರೆ, ಶುಲ್ಕ ಏರಿಕೆಯ ಕ್ರಮದ ವಿರುದ್ಧ ಅಮೆರಿಕದ 20 ರಾಜ್ಯಗಳು ಟ್ರಂಪ್ ಸರಕಾರದ ವಿರುದ್ಧವೇ ತಗಾದೆ ತೆಗೆದಿರುವುದು ಮತ್ತು ಈ ಆದೇಶಕ್ಕೆ ತಡೆಯಾಜ್ಞೆ ನೀಡು ವಂತೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿರುವುದು! ಕಾರ್ಯಕುಶಲಿ ವಿದೇಶಿ ಉದ್ಯೋಗಿ ಗಳನ್ನೇ ನೆಚ್ಚಿರುವ ಮಾಹಿತಿ ತಂತ್ರಜ್ಞಾನ ಮೊದಲಾದ ಉದ್ಯಮಗಳಿಗೆ, ಸರಕಾರದ ಈ ಕ್ರಮದಿಂದ ತೊಡಕಾಗುತ್ತದೆ ಎಂಬುದು ಇದಕ್ಕೆ ಕಾರಣ.
ಸುಶಾಸನಕ್ಕಾಗಿ ಮತ್ತು ಜನಕಲ್ಯಾಣಕ್ಕಾಗಿ ದಕ್ಕಿರುವ ರಾಜಕೀಯ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳಲು ಹೊರಟರೆ ಏನಾಗುತ್ತದೆ ಎಂಬುದಕ್ಕೆ ಈ ಬೆಳವಣಿಗೆಯೊಂದು ಜ್ವಲಂತಸಾಕ್ಷಿ. ಇಡೀ ಜಗತ್ತೇ ತನ್ನ ಇಶಾರೆಗೆ ತಕ್ಕಂತೆ ನರ್ತಿಸಬೇಕು ಎಂಬ ತಮ್ಮ ಧಾರ್ಷ್ಟ್ಯಭರಿತ ಧೋರಣೆಗೆ ತಮ್ಮವರೇ ಹೀಗೆ ತಪರಾಕಿ ನೀಡಿರುವುದನ್ನು ಟ್ರಂಪ್ ಇನ್ನಾದರೂ ಮನಗಂಡು ಪಾಠ ಕಲಿಯ ಬೇಕು. ಈ ಜಗತ್ತು ಉಸಿರು ಹಿಡಿದುಕೊಂಡಿರುವುದು ಸಹಬಾಳ್ವೆಯಿಂದ; ತಾನು ಮಾತ್ರವೇ ಬದುಕಬೇಕು ಎಂದುಕೊಳ್ಳುವುದು ಸ್ವಾರ್ಥದ ಪರಮಾವಧಿಯಾದೀತು...