ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vishwavani Editorial: ಮೈಮರೆವು ಬೇಡ, ಎಚ್ಚರವಿರಲಿ

ಇದು ದಶಕಗಳಿಂದಲೂ ಕೆನೆಗಟ್ಟಿರುವ ಭಾರತದ ಆಶಯಕ್ಕೆ ಅಮೆರಿಕದ ಕಡೆಯಿಂದ ಹೊಮ್ಮಿರುವ ಸಕಾರಾತ್ಮಕ ಸೂಚ್ಯವರ್ತನೆ ಎನ್ನುತ್ತಿದ್ದಾರೆ ಬಲ್ಲವರು. ಹಾಗಂತ ಭಾರತವು ಮೈಮರೆಯುವಂತಿಲ್ಲ. ತನಗೆ ಏನಾದರೂ ಲಾಭವಾಗುವಂತಿದ್ದರೆ ಮಾತ್ರವೇ ಅಮೆರಿಕ ಇಂಥ ಇಂಗಿತಗಳನ್ನು ವ್ಯಕ್ತಪಡಿಸುತ್ತದೆ ಎಂಬುದಕ್ಕೆ ಇತಿಹಾಸವೇ ಸಾಕ್ಷಿ

Vishwavani Editorial: ಮೈಮರೆವು ಬೇಡ, ಎಚ್ಚರವಿರಲಿ

-

Ashok Nayak
Ashok Nayak Feb 9, 2026 10:51 AM

ಎರಡು ಮಹತ್ವದ ಬೆಳವಣಿಗೆಗಳ ಕುರಿತು ಇಲ್ಲಿ ಉಲ್ಲೇಖಿಸಬೇಕು. ಮೊದಲಿನದು, ಮಲೇಷಿಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರ ಆಹ್ವಾನದ ಮೇರೆಗೆ ಎರಡು ದಿನಗಳ ಅಧಿಕೃತ ಭೇಟಿಗೆ ಅಲ್ಲಿಗೆ ತೆರಳಿದ್ದಾರೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು. ಈ ಭೇಟಿಯ ವೇಳೆ ಅವರು ಕೌಲಾಲಂಪುರದಲ್ಲಿ ಮಾತನಾಡುತ್ತಾ, ‘ವಿಶ್ವದ ಹಲವೆಡೆ ಸೇನಾ ಸಂಘರ್ಷಗಳು, ಆರ್ಥಿಕ ಹಿನ್ನಡೆ ಕಂಡುಬಂದಿರುವ ಈ ಸಂದರ್ಭದಲ್ಲಿ ಬಹಳಷ್ಟು ದೇಶಗಳಿಗೆ ಭಾರತವು ಪ್ರಗತಿ ಪಥದಲ್ಲಿನ ವಿಶ್ವಾಸಾರ್ಹ ಜತೆಗಾರನಾಗಿ ಕಾಣುತ್ತಿದೆ’ ಎಂಬ ಅರ್ಥಪೂರ್ಣ ಮಾತುಗಳನ್ನು ಆಡಿದ್ದಾರೆ.

ಇದರಲ್ಲಿ ಅತಿಶಯೋಕ್ತಿಯೇನಿಲ್ಲ. ಐರೋಪ್ಯ ಒಕ್ಕೂಟದ ದೇಶಗಳೊಂದಿಗೆ ಭಾರತವು ‘ಮುಕ್ತ ವ್ಯಾಪಾರ ಒಪ್ಪಂದ’ವನ್ನು ಮಾಡಿಕೊಂಡ ನಂತರ, ತೀರಾ ಇತ್ತೀಚೆಗೆ ಅಮೆರಿಕದ ಜತೆಗೂ ವಾಣಿಜ್ಯಿಕ ಸಂಬಂಧವನ್ನು ಕುದುರಿಸಿಕೊಂಡಿರುವುದು ಇತರ ದೇಶಗಳು ಭಾರತದಲ್ಲಿ ಇಟ್ಟಿರುವ ನಂಬಿಕೆ-ವಿಶ್ವಾಸಗಳಿಗೆ ಸಾಕ್ಷಿ.

ಇದನ್ನೂ ಓದಿ: Vishwavani Editorial: ಬಲೂಚ್ ಕಿಚ್ಚಿಗೆ ಪಾಕ್ ದಬ್ಬಾಳಿಕೆ ಕಾರಣ

ಎರಡನೆಯದಾಗಿ, ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಸಂಬಂಧ ಕುದುರಿರುವ ಮೊದಲ ಹಂತದಲ್ಲಿ ‘ಅಮೆರಿಕದ ವ್ಯಾಪಾರ ಪ್ರತಿನಿಧಿಗಳು’ ಬಿಡುಗಡೆ ಮಾಡಿರುವ ಭಾರತದ ಸಮಗ್ರ ನಕ್ಷೆಯಲ್ಲಿ, ‘ಪಾಕ್ ಆಕ್ರಮಿತ ಕಾಶ್ಮೀರ’ ಹಾಗೂ ‘ಅಕ್ಸಾಯ್ ಚಿನ್’ ಪ್ರದೇಶಗಳನ್ನೂ ಭಾರತದ ಭಾಗ ಎಂದೇ ಬಿಂಬಿಸಲಾಗಿದೆ.

ಇದು ದಶಕಗಳಿಂದಲೂ ಕೆನೆಗಟ್ಟಿರುವ ಭಾರತದ ಆಶಯಕ್ಕೆ ಅಮೆರಿಕದ ಕಡೆಯಿಂದ ಹೊಮ್ಮಿ ರುವ ಸಕಾರಾತ್ಮಕ ಸೂಚ್ಯವರ್ತನೆ ಎನ್ನುತ್ತಿದ್ದಾರೆ ಬಲ್ಲವರು. ಹಾಗಂತ ಭಾರತವು ಮೈಮರೆಯು ವಂತಿಲ್ಲ. ತನಗೆ ಏನಾದರೂ ಲಾಭವಾಗುವಂತಿದ್ದರೆ ಮಾತ್ರವೇ ಅಮೆರಿಕ ಇಂಥ ಇಂಗಿತಗಳನ್ನು ವ್ಯಕ್ತಪಡಿಸುತ್ತದೆ ಎಂಬುದಕ್ಕೆ ಇತಿಹಾಸವೇ ಸಾಕ್ಷಿ. ಆದ್ದರಿಂದ, ಅಮೆರಿಕದ ಜತೆಗಿನ ದ್ವಿಪಕ್ಷೀಯ ವ್ಯಾಪಾರ ಸಂಬಂಧಗಳ ಕಡೆಗೆ ಭಾರತವು ಗರಿಷ್ಠ ಗಮನವನ್ನು ನೀಡುವುದರ ಜತೆಜತೆಗೆ ತನ್ನ ಏಕತೆ, ಸಮಗ್ರತೆ, ಸಾರ್ವಭೌಮತೆಗಳ ರಕ್ಷಣೆಯ ವಿಚಾರದಲ್ಲಿ ಎಚ್ಚರವನ್ನೂ ಕಾಯ್ದು ಕೊಳ್ಳುವಂತಾಗಲಿ ಎಂಬುದು ದೇಶಪ್ರೇಮಿಗಳ ಆಶಯ.