ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vishwavani Editorial: ಬೇಗುದಿಯಲ್ಲಿ ಮೈ ಕಾಯಿಸಿಕೊಳ್ಳುವಿಕೆ!

ಇದು ಎರಡು ದೇಶಗಳ ನಡುವೆ ಶುರುವಾಗುವ ಹಣಾಹಣಿಗೂ ಅನ್ವಯವಾಗುವ ಉಪಮೆ. ಭಾರತದ ಮೇಲೆ ಕಾಲು ಕೆರೆದುಕೊಂಡು ಜಗಳಕ್ಕಿಳಿಯಲು, ಅದು ಸೇನಾಸಂಘರ್ಷದಲ್ಲಿ ಪರ್ಯವಸಾನವಾ ಗುವಂತಾಗಲು ಪಾಕಿಸ್ತಾನಕ್ಕೆ ಪರೋಕ್ಷವಾಗಿ ಕುಮ್ಮಕ್ಕು ನೀಡುವ ಅಮೆರಿಕ ದ್ದು ಬಹುತೇಕ ಇಂಥ ಚಿತ್ತಸ್ಥಿತಿಯೇ.

Vishwavani Editorial: ಬೇಗುದಿಯಲ್ಲಿ ಮೈ ಕಾಯಿಸಿಕೊಳ್ಳುವಿಕೆ!

-

Ashok Nayak
Ashok Nayak Mar 9, 2026 7:14 AM

ಯಾವ್ಯಾವುದೋ ಕಾರಣಕ್ಕೆ ಇಬ್ಬರ ನಡುವೆ ಶುರುವಾಗುವ ಜಗಳವು ‘ಮೂರನೆಯವ’ನಿಗೆ ಲಾಭ ಮಾಡಿಕೊಡುವ ಕುರಿತಾಗಿ ಹೊಸದಾಗಿ ಹೇಳಬೇಕಿಲ್ಲ. ಅಂದರೆ, ಸಂಘರ್ಷದಿಂದಾಗಿ ಆ ಇಬ್ಬರಿಗೆ ಅದೇನು ಪ್ರಯೋಜನವಾಗುತ್ತದೋ ಬಿಡುತ್ತದೋ ಗೊತ್ತಿಲ್ಲ; ಆದರೆ ಮೂರನೆ ಯವನು ಮಾತ್ರ ದಂಡಿಯಾಗಿ ಗಂಟುಮಾಡಿಕೊಳ್ಳುತ್ತಾನೆ.

ಇದು ಎರಡು ದೇಶಗಳ ನಡುವೆ ಶುರುವಾಗುವ ಹಣಾಹಣಿಗೂ ಅನ್ವಯವಾಗುವ ಉಪಮೆ. ಭಾರತದ ಮೇಲೆ ಕಾಲು ಕೆರೆದುಕೊಂಡು ಜಗಳಕ್ಕಿಳಿಯಲು, ಅದು ಸೇನಾಸಂಘರ್ಷದಲ್ಲಿ ಪರ್ಯವಸಾನವಾ ಗುವಂತಾಗಲು ಪಾಕಿಸ್ತಾನಕ್ಕೆ ಪರೋಕ್ಷವಾಗಿ ಕುಮ್ಮಕ್ಕು ನೀಡುವ ಅಮೆರಿಕದ್ದು ಬಹುತೇಕ ಇಂಥ ಚಿತ್ತಸ್ಥಿತಿಯೇ.

ಇದನ್ನೂ ಓದಿ: Vishwavani Editorial: ಕೊರತೆಯಲ್ಲೂ ಚಿಮ್ಮಿದ ಒರತೆ

ಮೇಲ್ನೋಟಕ್ಕೆ ಗೋಚರಿಸುವಂತೆ ಶಾಂತಿಮಂತ್ರವನ್ನು ಪಠಿಸುತ್ತಿದ್ದರೂ, ‘ಜಗತ್ತಿನ ವಿವಿಧ ದೇಶಗಳ ನಡುವೆ ಕಾಲಾನುಕಾಲಕ್ಕೆ ಸಂಘರ್ಷಗಳು ಜರುಗುತ್ತಿರಲಿ’ ಎಂದೇ ಆಶಿಸುವ, ಹಣಾಹಣಿಯ ಬೆಂಕಿಗೆ ತಿದಿ ಊದುವ ಜಾಯಮಾನ ಅಮೆರಿಕದ್ದು. ಕಾರಣ, ಹೀಗೆ ಯುದ್ಧಗಳು ನಡೆಯುತ್ತಿದ್ದರೇ ಅಲ್ಲವೇ ಅಲ್ಲಿನ ಶಸ್ತ್ರಾಸ್ತ್ರಗಳ ಉದ್ಯಮಗಳು ಉಸಿರಾಡಿ ಕೊಂಡಿರಲಿಕ್ಕೆ ಸಾಧ್ಯ?! ಪ್ರಸ್ತುತ ತಾನೀಗ ನೇರವಾಗಿ ತೊಡಗಿಸಿಕೊಂಡಿರುವ ಇರಾನ್ ಮೇಲಿನ ಯುದ್ಧದಲ್ಲಿ ಇನ್ನಿಲ್ಲದ ಪೌರುಷ ಮೆರೆಯುತ್ತಿರುವ ಅಮೆರಿಕ, ತನ್ನ ಹಿತಾಸಕ್ತಿಯ ರಕ್ಷಣೆಗೆ ಮತ್ತೊಂದು ಹೆಜ್ಜೆಯನ್ನಿಟ್ಟಿದೆ.

ಅಂದರೆ, ಶಸ್ತ್ರಾಸ್ತ್ರಗಳ ಉತ್ಪಾದನೆಯನ್ನು 4 ಪಟ್ಟು ಹೆಚ್ಚಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಲ್ಲಿನ ಕಂಪನಿಗಳಿಗೆ ಆದೇಶಿಸಿದ್ದಾರಂತೆ. ಜೀವದಾಯಕವಾದ ಆಮ್ಲಜನಕಭರಿತ ಗಾಳಿಯು ಪರಿಸರದಲ್ಲಿ ಗಿರಕಿ ಹೊಡೆಯುತ್ತಿರಲಿ ಎಂದು ಸಹೃದಯಿ ಗಳು ಒಂದೆಡೆ ಆಶಿಸುತ್ತಿದ್ದರೆ, ಮತ್ತೊಂದೆಡೆ ಆ ಗಾಳಿಯಲ್ಲಿ ಮದ್ದು-ಗುಂಡುಗಳು, ಸ್ಫೋ ಟಕ ಸಾಮಗ್ರಿಗಳು ಹೊಮ್ಮಿಸುವ ‘ಗಂಧಕ’ ತುಂಬಿರಲಿ ಎಂದು ಸಮರೋನ್ಮಾದಿಗಳು ಆಶಿಸುವ ಪರಿಯಿದು.

ಇತಿಹಾಸ ಕಂಡಿರುವ ಎರಡು ಮಹಾಯುದ್ಧಗಳಿಂದಾಗಿ ಜಗತ್ತಿನ ವಿವಿಧ ರಾಷ್ಟ್ರಗಳು ಚೇತರಿಸಿಕೊಳ್ಳುವುದಕ್ಕೆ ದಶಕಗಳೇ ಹಿಡಿದವು ಎಂಬ ಅಪ್ರಿಯಸತ್ಯ ಗೊತ್ತಿದ್ದರೂ, ಇಂಥ ದೊಂದು ಉನ್ಮಾದವನ್ನು ಮುಂದುವರಿಸಿಕೊಂಡು ಹೋಗುವವರಿಗೆ, ಯುದ್ಧದ ಬೇಗುದಿ ಯಲ್ಲಿ ತಮ್ಮ ಮೈಕಾಯಿಸಿಕೊಳ್ಳುವವರಿಗೆ ಏನನ್ನುವುದು?!