Vishwavani Editorial: ಉಗ್ರವಾದಕ್ಕೂ ಇದೇ ಗತಿಯಾಗಲಿ
ಪಹಲ್ಗಾಮ್ ಹತ್ಯಾಕಾಂಡ, ಇಸ್ರೇಲ್‌ನ ‘ನೋವಾ’ ಸಂಗೀತೋತ್ಸವದ ವೇಳೆ ಘಟಿಸಿದ ಉಗ್ರದಾಳಿ ಹಾಗೂ ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಮಾರ್ದನಿಸಿದ ಭಯೋತ್ಪಾದಕರ ಹೇಷಾರವ ಇವೆಲ್ಲವೂ ಜಾಗತಿಕ ಸಮುದಾಯದ ಮನವನ್ನು ಇನ್ನಿಲ್ಲದಂತೆ ಕಲಕಿರುವ ಘೋರ ಘಟನೆಗಳೇ. ಪ್ರಸ್ತುತ ಜಗತ್ತಿಗೆ ಬೇಕಿರುವುದು ಬುಲೆಟ್ಟು-ಬಾಂಬುಗಳ ಅಬ್ಬರವಲ್ಲ
-
ಒಡಿಶಾ ರಾಜ್ಯದ ಕಂಧಮಾಲ್ ಮತ್ತು ಗಂಜಾಮ್ ಜಿಲ್ಲೆಗಳ ಗಡಿಭಾಗದಲ್ಲಿರುವ ‘ರಂಪಾ ಅರಣ್ಯ’ ಪ್ರದೇಶದಲ್ಲಿ ನಡೆಸಲಾದ ದೀರ್ಘಾವಧಿಯ ನಕ್ಸಲ್ ನಿಗ್ರಹ ಕಾರ್ಯಾಚರಣೆ ಫಲ ಕೊಟ್ಟಿದೆ. ಗಡಿಭದ್ರತಾ ಪಡೆ, ಕೇಂದ್ರ ಮೀಸಲು ಪೊಲೀಸ್ ಪಡೆ ಮತ್ತು ಒಡಿಶಾ ಪೊಲೀಸ್ ಇಲಾಖೆಯ ವಿಶೇಷ ತಂಡ ನಡೆಸಿದ ಈ ಜಂಟಿ ಕಾರ್ಯಾಚರಣೆಯಲ್ಲಿ ಛತ್ತೀಸ್‌ಗಢ ಮೂಲದ ಇಬ್ಬರು ನಕ್ಸಲರು ಸೇರಿದಂತೆ ಐವರು ಮಾವೋವಾದಿಗಳು ಹತರಾಗಿದ್ದಾರೆ.
ಇವರ ತಲೆಗೆ ಭಾರಿ ಇನಾಮು ಘೋಷಿಸಲಾಗಿತ್ತು. ಈ ಕಾರ್ಯಾಚರಣೆಯ ನಂತರ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ‘2026ರ ಮಾರ್ಚ್ ವೇಳೆಗೆ ಭಾರತವು ನಕ್ಸಲ್ ಮುಕ್ತವಾಗಲಿದೆ’ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿರುವುದು ಗಮನಾರ್ಹ.
ಮುಖ್ಯವಾಹಿನಿಯಲ್ಲಿ ಬೆರೆಯದೆ, ತಮ್ಮ ಬೇಡಿಕೆ ಅಥವಾ ಆಗ್ರಹಗಳ ಈಡೇರಿಕೆಗೆ ಯಥೋಚಿತ ಮಾರ್ಗವನ್ನು ನೆಚ್ಚದೆ, ಆಳುಗ ವ್ಯವಸ್ಥೆಯೊಂದಿಗೆ ಕೈ ಕೈ ಮಿಲಾಯಿಸಲು ಮುಂದಾಗುತ್ತಿದ್ದ ನಕ್ಸಲರ ಅಸ್ತಿತ್ವವು ಕಾಲಕ್ರಮೇಣ ಬಲವನ್ನು ಕಳೆದುಕೊಳ್ಳುತ್ತಿರುವುದು ಸಮಾಧಾನಕರ ಸಂಗತಿ.
ಇದನ್ನೂ ಓದಿ: Vishwavani Editorial: ವಿಶ್ವಗುರುವಾಗಲಿ ಭಾರತ
ಹೀಗಾಗಿ, ‘ನಕ್ಸಲ್ ವಾದದ ದಮನಕ್ಕೆ ಅರೆದ ಮದ್ದನ್ನೇ ಉಗ್ರವಾದ ನಿಗ್ರಹಕ್ಕೂ ಅರೆಯ ಬೇಕು’ ಎಂಬುದು ದೇಶದ ಬಹುತೇಕ ಸಹೃದಯಿಗಳ ಆಶಯ ಮತ್ತು ನಿರೀಕ್ಷೆ. ಇದು ಜಾಗತಿಕ ಸಮುದಾಯದ ಬಯಕೆಯೂ ಹೌದು ಎಂದರೆ ಅತಿಶಯೋಕ್ತಿ ಆಗಲಾರದು.
ಏಕೆಂದರೆ, ಪಹಲ್ಗಾಮ್ ಹತ್ಯಾಕಾಂಡ, ಇಸ್ರೇಲ್‌ನ ‘ನೋವಾ’ ಸಂಗೀತೋತ್ಸವದ ವೇಳೆ ಘಟಿಸಿದ ಉಗ್ರದಾಳಿ ಹಾಗೂ ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಮಾರ್ದನಿಸಿದ ಭಯೋ ತ್ಪಾದಕರ ಹೇಷಾರವ ಇವೆಲ್ಲವೂ ಜಾಗತಿಕ ಸಮುದಾಯದ ಮನವನ್ನು ಇನ್ನಿಲ್ಲದಂತೆ ಕಲಕಿರುವ ಘೋರ ಘಟನೆಗಳೇ. ಪ್ರಸ್ತುತ ಜಗತ್ತಿಗೆ ಬೇಕಿರುವುದು ಬುಲೆಟ್ಟು-ಬಾಂಬುಗಳ ಅಬ್ಬರವಲ್ಲ, ಹಸಿರಕ್ತದ ವಾಸನೆಯೂ ಅಲ್ಲ; ಬದಲಿಗೆ ಅರೆಪಾವಿನಷ್ಟು ಶಾಂತಿ-ನೆಮ್ಮದಿ ಗಳು. ಈ ಎರಡಕ್ಕೆ ಸಂಚಕಾರ ತರುವ ಕುತ್ಸಿತ ಶಕ್ತಿಗಳನ್ನು ಮಟ್ಟ ಹಾಕುವುದು ಎಲ್ಲರ ಸಂಕಲ್ಪವಾಗಬೇಕು, ಧ್ಯೇಯವಾಕ್ಯವಾಗಬೇಕು...