Vishwavani Editorial: ಅಕಟಕಟಾ, ಜೈಲಿನಲ್ಲೂ ವೈಭೋಗ!
ಬದಲಾದ ಕಾಲ ಘಟ್ಟದಲ್ಲಿ ಜೈಲುಗಳಲ್ಲಿ ‘ಪ್ರಭಾವಿ’ ಕೈದಿಗಳಿಗೆ ರಾಜವೈಭೋಗ ಸದೃಶ ವಾಗಿರುವ ಸೇವೆ ಸಲ್ಲುತ್ತಿರುವುದು ಒಂದೊಂದಾಗಿ ವರದಿಯಾಗುತ್ತಿದೆ. ಕಲಬುರ್ಗಿಯ ಕೇಂದ್ರ ಕಾರಾಗೃಹದಲ್ಲಿ ಸಿಗರೇಟು-ಮದ್ಯ ಸರಬರಾಜಿಗೆ, ಇಸ್ಪೀಟು ಆಟಕ್ಕೆ ಎಡೆಮಾಡಿಕೊಡಲಾಗಿದೆಯೇ ಎಂಬ ಸಂಶಯಕ್ಕೆ ಎಡೆಮಾಡಿ ಕೊಡುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ಇದರ ತಥ್ಯವನ್ನು ಸಂಬಂಧ ಪಟ್ಟವರು ಹೊರಗೆಡಹಬೇಕಿದೆ.
-
ತಪ್ಪು ಮಾಡಿದೋರನ್ನ ಕೊಪ್ಪಕ್ಕೆ ಹಾಕು- ಇದು ದಶಕಗಳ ಹಿಂದೆ ಸರಕಾರಿ ಸಿಬ್ಬಂದಿ ವ್ಯವಸ್ಥೆ ಯಲ್ಲಿ ಚಾಲ್ತಿಯಲ್ಲಿದ್ದ ಒಂದು ಅಲಿಖಿತ ನಿಯಮ. ಸರಕಾರಿ ಕಚೇರಿಗಳಲ್ಲಿನ ಕಾರ್ಯ ನಿರ್ವಹಣೆ ಯ ವೇಳೆ ಯಾವುದೇ ಸ್ತರದ ನೌಕರರು ಅದಕ್ಷತೆ ತೋರಿದರೆ ಅಥವಾ ಟೇಬಲ್ ಕೆಳಗೆ ಕೈಯೊಡ್ಡಿ ಸಿಕ್ಕಿಹಾಕಿಕೊಂಡರೆ, ಅಂಥವರನ್ನು ಮಲೆನಾಡು ಚಿಕ್ಕಮಗಳೂರು ಜಿಲ್ಲೆಯ ‘ಕೊಪ್ಪ’ ಎಂಬ ಪ್ರದೇಶಕ್ಕೆ ವರ್ಗಾವಣೆ ಮಾಡಬೇಕು; ಆಗ ಅವರಿಗೆ ಬುದ್ಧಿ ಬರುತ್ತದೆ ಎಂಬುದು ಈ ಮಾತಿನ ಹಿಂದಿದ್ದ ಗ್ರಹಿಕೆ.
ಕಾರಣ ಒಂದು ಕಾಲಕ್ಕೆ ಕೊಪ್ಪದಲ್ಲಿ ಮಲೇರಿಯಾ ಕಾಯಿಲೆ ತಾರಕಕ್ಕೇರಿತ್ತು ಮತ್ತು ಆ ಕಾರಣ ದಿಂದಾಗಿ ಅದು ಕೊಂಪೆಯಾಗಿ ಪರಿಣಮಿಸಿತ್ತು, ಅಲ್ಲಿನ ಜೀವನ ನಿರ್ವಹಣೆ ದುರ್ಭರವಾಗಿತ್ತು. ಇಂಥ ಜಾಗಕ್ಕೆ ತಪ್ಪಿತಸ್ಥರನ್ನು ವರ್ಗಾಯಿಸಿದರೆ, ಅದಕ್ಕಿಂತ ಬೇರೊಂದು ಶಿಕ್ಷೆ ಬೇಡ ಎಂಬುದು ಇದರರ್ಥವಾಗಿತ್ತು.
ಇದನ್ನೂ ಓದಿ: Vishwavani Editorial: ಆನಂದದ ಸೆಲೆಯೊಂದು ಜಿನುಗಲಿ
ಇನ್ನು, ಕಾನೂನಿನ ದೃಷ್ಟಿಯಲ್ಲಿ ಅಪರಾಧಿಗಳು ಎನಿಸಿಕೊಂಡವರನ್ನು, ಅವರ ಅಪರಾಧದ ತೀವ್ರತೆಗೆ ತಕ್ಕಂತೆ ಜೈಲುವಾಸಕ್ಕೆ ಕಳಿಸುವುದು ಇದೆಯಲ್ಲವೇ? ಮುಖ್ಯವಾಹಿನಿ ಸಮಾಜದಲ್ಲಿರುವ ಬಹುತೇಕ ಸೌಲಭ್ಯಗಳಿಗೆ ಜೈಲುಗಳಲ್ಲಿ ಕತ್ತರಿ ಬೀಳುವುದರಿಂದಾಗಿ ತಪ್ಪಿತಸ್ಥರಿಗೆ ಅದೊಂದು ಶಿಕ್ಷೆಯಾಗಿ ಪರಿಣಮಿಸಿ ಪಾಠ ಕಲಿಯಲಿ ಎಂಬುದು ಈ ಕ್ರಮದ ಉದ್ದೇಶ.
ಆದರೆ, ಬದಲಾದ ಕಾಲ ಘಟ್ಟದಲ್ಲಿ ಜೈಲುಗಳಲ್ಲಿ ‘ಪ್ರಭಾವಿ’ ಕೈದಿಗಳಿಗೆ ರಾಜವೈಭೋಗ ಸದೃಶ ವಾಗಿರುವ ಸೇವೆ ಸಲ್ಲುತ್ತಿರುವುದು ಒಂದೊಂದಾಗಿ ವರದಿಯಾಗುತ್ತಿದೆ. ಕಲಬುರ್ಗಿಯ ಕೇಂದ್ರ ಕಾರಾಗೃಹದಲ್ಲಿ ಸಿಗರೇಟು-ಮದ್ಯ ಸರಬರಾಜಿಗೆ, ಇಸ್ಪೀಟು ಆಟಕ್ಕೆ ಎಡೆಮಾಡಿಕೊಡಲಾಗಿದೆಯೇ ಎಂಬ ಸಂಶಯಕ್ಕೆ ಎಡೆಮಾಡಿಕೊಡುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ಇದರ ತಥ್ಯವನ್ನು ಸಂಬಂಧಪಟ್ಟವರು ಹೊರಗೆಡಹಬೇಕಿದೆ.
ತಪ್ಪನ್ನು ತಿದ್ದಿಕೊಳ್ಳುವುದಕ್ಕೆ ಮತ್ತು ಪಶ್ಚಾತ್ತಾಪ ಪಡುವುದಕ್ಕೆ ಅನುವು ಮಾಡಿಕೊಡಬೇಕಿದ್ದ ನೆಲೆಯೇ ಹೀಗೆ ತನ್ನ ಸ್ವರೂಪಕ್ಕೆ ಕಳಂಕ ಮೆತ್ತಿಕೊಂಡರೆ, ಇನ್ನು ದುರುಳರಿಗೆ ಅದಿನ್ಯಾವ ಭಯ ಉಳಿದೀತು? ಇಂಥ ವಿಪರ್ಯಾಸಗಳಿಗೆ ಕೊನೆ ಯಾವಾಗ?