IND vs AFG: ರಿಷಭ್ ಪಂತ್‌ಗೆ ಕೊಕ್, ಅಫ್ಘಾನಿಸ್ತಾನ ವಿರುದ್ದ ಏಕದಿನ ಸರಣಿಗೆ ಭಾರತ ತಂಡ ಪ್ರಕಟ!
India's ODI Squad: ಅಫ್ಘಾನಿಸ್ತಾನ ವಿರುದ್ಧ ಮುಂಬರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಬಿಸಿಸಿಐ 15 ಸದಸ್ಯರ ಭಾರ ತಂಡವನ್ನು ಮೇ 19 ರಂದು ಪ್ರಕಟಿಸಿದೆ. 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ವೈಫಲ್ಯ ಅನುಭವಿಸಿದ ರಿಷಭ್ ಪಂತ್ ಅವರನ್ನು ಕೈಬಿಟ್ಟಿರುವ ಬಿಸಿಸಿಐ, ಇಶಾನ್ ಕಿಶನ್ ಅವರನ್ನು ಎರಡನೇ ವಿಕೆಟ್‌ಕೀಪರ್ ಸ್ಥಾನಕ್ಕೆ ಆಯ್ಕೆ ಮಾಡಿದೆ.
ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ಪ್ರಕಟ. -
ಗುವಾಹಟಿ: ಅಫ್ಘಾನಿಸ್ತಾನ ಮುಂಬರುವ ಮೂರು ಪಂದ್ಯಗಳ ತವರು ಏಕದಿನ ಸರಣಿಗೆ (IND vs AFG) 15 ಸದಸ್ಯರ ಭಾರತ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI) ಮೇ 19 ರಂದು ಮಂಗಳವಾರ ಪ್ರಕಟಿಸಿದೆ. ನಿರೀಕ್ಷೆಯಂತೆ ಆಧುನಿಕ ಕ್ರಿಕೆಟ್ ದಿಗ್ಗಜರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಸ್ಥಾನ ಪೆಡದಿದ್ದು, 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ರಿಷಭ್ ಪಂತ್‌ಗೆ (Rishabh Pant) ಏಕದಿನ ತಂಡದಿಂದ ಕೈ ಬಿಡಲಾಗಿದ್ದು, ಕೆಎಲ್ ರಾಹುಲ್ ಜೊತೆಗೆ ಎರಡನೇ ವಿಕೆಟ್ ಕೀಪರ್ ಸ್ಥಾನಕ್ಕೆ ಇಶಾನ್ ಕಿಶನ್‌ಗೆ ಅವಕಾಶವನ್ನು ನೀಡಲಾಗಿದೆ.
ಭಾರತ ಹಾಗೂ ಅಫ್ಘಾನಿಸ್ತಾನ ನಡುವಣ ಮೂರು ಪಂದ್ಯಗಳ ಏಕದಿನ ಸರಣಿ ಜೂನ್ 14 ರಂದು ಆರಂಭವಾಗಲಿದೆ. ಎಂದಿನಂತೆ ಶುಭಮನ್ ಗಿಲ್ ಅವರು ತಂಡವನ್ನು ಮುನ್ನಡೆಸಲಿದ್ದಾರೆ. ಕಿಂಗ್ ವಿರಾಟ್ ಕೊಹ್ಲಿ ಈ ಸರಣಿಯ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದಾರೆ. ಪ್ರಸ್ತುತ ಗಾಯದ ಸಮಸ್ಯೆಗಳನ್ನು ಎದುರಿಸುತ್ತಿರುವ ರೋಹಿತ್ ಶರ್ಮಾ ಹಾಗೂ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಗೂ ಏಕದಿನ ತಂಡದಲ್ಲಿ ಸ್ಥಾನವನ್ನು ನೀಡಲಾಗಿದೆ, ಆದರೆ ಈ ಇಬ್ಬರೂ ಸರಣಿಗೂ ಮುನ್ನ ಫಿಟ್ನೆಸ್ ಪಾಸ್ ಮಾಡಬೇಕಾದ ಅಗತ್ಯವಿದೆ.
2027ರ ಐಪಿಎಲ್ ಟೂರ್ನಿಯಲ್ಲಿ ಎಂಎಸ್ ಧೋನಿ ಆಡ್ತಾರಾ? ಬಿಗ್ ಅಪ್‌ಡೇಟ್ ಕೊಟ್ಟ ಸ್ಟೀಫನ್ ಫ್ಲೆಮಿಂಗ್!
ಭಾರತ ತಂಡದ ನಿಯಮಿತ ಸದಸ್ಯರಾಗಿದ್ದರೂ ರಿಷಭ್ ಪಂತ್ 2024ರ ಆಗಸ್ಟ್ ತಿಂಗಳಲ್ಲಿ ಶ್ರೀಲಂಕಾ ವಿರುದ್ಧ ಕೊಲಂಬೊದಲ್ಲಿ ನಡೆದಿದ್ದ ಪಂದ್ಯದ ಬಳಿಕ ಏಕದಿನ ಕ್ರಿಕೆಟ್‌ನಲ್ಲಿ ಇನ್ನೂ ಒಂದೂ ಪಂದ್ಯವನ್ನು ಆಡಿಲ್ಲ. 2022ರ ಡಿಸೆಂಬರ್ ತಿಂಗಳಲ್ಲಿ ಸಂಭವಿಸಿದ್ದ ಭೀಕರ ಕಾರು ಅಪಘಾತದ ಬಳಿಕ ತಂಡಕ್ಕೆ ಮರಳಿದ ನಂತರ, ಅವರು ಟೆಸ್ಟ್ ಜತೆಗೆ ಏಕದಿನ ಸ್ವರೂಪದಲ್ಲಿ ಮಾತ್ರ ಮುಂದುವರಿದಿದ್ದರು.
ಇನ್ನೊಂದೆಡೆ ಇಶಾನ್ ಕಿಶನ್ ಸುಮಾರು ಮೂರು ವರ್ಷಗಳ ಬಳಿಕ ಮತ್ತೆ ಭಾರತ ಏಕದಿನ ತಂಡಕ್ಕೆ ಮರಳಿದ್ದಾರೆ. ಅವರು ಕೊನೆಯದಾಗಿ 2023ರ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ವೇಳೆ 50 ಓವರ್‌ಗಳ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದರು. ಆ ಟೂರ್ನಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆದಿದ್ದ ಭಾರತದ ಎರಡನೇ ಪಂದ್ಯದಲ್ಲಿ ಕಿಶನ್ ಕೊನೆಯ ಬಾರಿ ಭಾರತದ ಪರ 50 ಓವರ್‌ಗಳ ಪಂದ್ಯವನ್ನು ಆಡಿದ್ದರು.
🚨 News 🚨
— BCCI (@BCCI) May 19, 2026
Presenting #TeamIndia's squads for the @IDFCFIRSTBank Test match and the 3️⃣-match ODI series against Afghanistan in June 🙌#INDvAFG pic.twitter.com/hFiABALLld
ಮೂವರು ಹೊಸಬರಿಗೆ ಅವಕಾಶ
ರವೀಂದ್ರ ಜಡೇಜಾ ಅವರನ್ನು ತಂಡದಿಂದ ಕೈಬಿಡಲಾಗಿದೆ. ಈ ಕುರಿತು ಮಾತನಾಡಿದ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ 2027ರ ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಈ ಸರಣಿಯಲ್ಲಿ ಹೊಸ ಆಯ್ಕೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ ಬಾರಿ ತಂಡದಲ್ಲಿ ಮೂವರು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ. ವೇಗದ ಬೌಲರ್‌ಗಳಾದ ಪ್ರಿನ್ಸ್ ಯಾದವ್ ಮತ್ತು ಗುರ್ನೂರ್ ಬ್ರಾರ್ ಜೊತೆಗೆ ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ಹರ್ಷ್ ದುಬೇಗೆ ತಂಡದಲ್ಲಿ ಚೊಚ್ಚಲ ಅವಕಾಶವನ್ನು ನೀಡಲಾಗಿದೆ. ಇವರಿಗೆ ಈ ಸರಣಿಯಲ್ಲಿ ಭಾರತ ಪರ ಮೊದಲ ಪಂದ್ಯ ಆಡುವ ಅವಕಾಶ ದೊರಕುವ ಸಾಧ್ಯತೆ ಇದೆ.
ಫಿಟ್ನೆಸ್ ಕ್ಲಿಯರೆನ್ಸ್ ಆಧಾರದಲ್ಲಿ ಆಫ್ಘಾನ್ ಏಕದಿನ ಸರಣಿಗೆ ರೋಹಿತ್, ಪಾಂಡ್ಯ ಆಯ್ಕೆ
ಶ್ರೇಯಸ್ ಅಯ್ಯರ್ ಉಪ ನಾಯಕ
ಶ್ರೇಯಸ್ ಅಯ್ಯರ್ ತಂಡದ ಉಪನಾಯಕರಾಗಿ ಮುಂದುವರಿದಿದ್ದಾರೆ. ಜೊತೆಗೆ ನಿತೀಶ್ ಕುಮಾರ್ ರೆಡ್ಡಿ ಮತ್ತು ವಾಷಿಂಗ್ಟನ್ ಸುಂದರ್ ತಮ್ಮ ಸ್ಥಾಗಳನ್ನು ಉಳಿಸಿಕೊಂಡಿದ್ದಾರೆ. ಇನ್ನೊಂದೆಡೆ ವೇಗದ ಬೌಲರ್‌ಗಳಾದ ಜಸ್‌ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಅಚ್ಚರಿಯೆಂದರೆ ಯಶಸ್ವಿ ಜೈಸ್ವಾಲ್ ತಮ್ಮ ಕೊನೆಯ ಪಂದ್ಯದಲ್ಲಿ ಶತಕ ಸಿಡಿಸಿದ್ದರೂ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಕಳೆದ ಮೂರು ಸರಣಿಗಳಲ್ಲೂ ನಿರಂತರವಾಗಿ ತಂಡದ ಭಾಗವಾಗಿದ್ದ ಯಶಸ್ವಿಗೆ ಈ ಬಾರಿ ಅವಕಾಶ ಸಿಗದಿರುವುದು ಅಚ್ಚರಿ ತಂದಿದೆ.
ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ: ಶುಭಮನ್ ಗಿಲ್ (ನಾಯಕ), ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ (ಫಿಟ್ನೆಸ್), ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಪ್ರಸಿಧ್ ಕೃಷ್ಣ, ಅರ್ಷದೀಪ್ ಸಿಂಗ್, ಪ್ರಿನ್ಸ್ ಯಾದವ್, ಗುರ್ನೂರ್ ಬ್ರಾರ್ ಹಾಗೂ ಹರ್ಷ್ ದುಬೇ