ಯುವರಾಜ್-ಸೂರ್ಯ ಔಟ್! ಸಾರ್ವಕಾಲಿಕ ಶ್ರೇಷ್ಠ ಏಷ್ಯಾ ಕಪ್ ಪ್ಲೇಯಿಂಗ್ XI ಆರಿಸಿದ ಬ್ರೆಟ್ ಲೀ!
ಆಸ್ಟ್ರೇಲಿಯಾ ಮಾಜಿ ವೇಗಿ ಬ್ರೆಟ್ ಲೀಗ್ ಅವರು ಸಾರ್ವಕಾಲಿಕ ಶ್ರೇಷ್ಠ ಪ್ಲೇಯಿಂಗ್ XI ಆರಿಸಿದ್ದು, ಭಾರತದಿಂದ ಐವರು ಸ್ಟಾರ್ ಆಟಗಾರರಿಗೆ ಅವಕಾಶವನ್ನು ನೀಡಿದ್ದಾರೆ. ಆದರೆ, ಭಾರತ ಟಿ20ಐ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ಸಿಕ್ಸರ್ ಸರದಾರ ಯುವರಾಜ್ ಸಿಂಗ್ ಅವರನ್ನು ಕೈ ಬಿಡು ಮೂಲಕ ವೇಗದ ಬೌಲಿಂಗ್ ದಿಗ್ಗಜ ಅಚ್ಚರಿ ಮೂಡಿಸಿದ್ದಾರೆ.

ಸಾರ್ವಕಾಲಿಕ ಶ್ರೇಷ್ಠ ಏಷ್ಯಾ ಕಪ್ ಪ್ಲೇಯಿಂಗ್ XI ಆರಿಸಿದ ಬ್ರೆಟ್ ಲೀ. -

ನವದೆಹಲಿ: ಸೆಪ್ಟಂಬರ್ 9ರಂದು ಆರಂಭವಾಗಲಿರುವ 2025ರ ಏಷ್ಯಾ ಕಪ್ ಟೂರ್ನಿಗೆ (Asia Cup 2025) ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡ (India) ಸಜ್ಜಾಗುತ್ತಿದೆ. ಇದರ ನಡುವೆ ಆಸ್ಟ್ರೇಲಿಯಾ ದಿಗ್ಗಜ ವೇಗಿ ಬ್ರೆಟ್ ಲೀ (Brett Lee) ಅವರು ಸಾರ್ವಕಾಲಿಕ ಶ್ರೇಷ್ಠ ಏಷ್ಯಾ ಕಪ್ ಪ್ಲೇಯಿಂಗ್ XI ಅನ್ನು ಆಯ್ಕೆ ಮಾಡಿದ್ದಾರೆ. ಆದರೆ, ಭಾರತದ ದಿಗ್ಗಜರಾದ ಸೂರ್ಯಕುಮಾರ್ ಯಾದವ್ ಹಾಗೂ ಯುವರಾಜ್ ಸಿಂಗ್ ಅವರನ್ನು ಕೈ ಬಿಡುವ ಮೂಲಕ ಮಾಜಿ ವೇಗಿ ಅಚ್ಚರಿ ಮೂಡಿಸಿದ್ದಾರೆ. ಭಾರತದ ತಂಡದ ಐವರು ಸ್ಟಾರ್ ಆಟಗಾರರನ್ನು ಮಾಜಿ ವೇಗಿ ಆಯ್ಕೆ ಮಾಡಿದ್ದಾರೆ.
ಬ್ರೆಟ್ ಲೀ ಆಯ್ಕೆ ಮಾಡಿದ ಸಾರ್ವಕಾಲಿಕ ಶ್ರೇಷ್ಠ ಏಷ್ಯಾ ಕಪ್ ತಂಡದ ಪ್ಲೇಯಿಂಗ್ XIನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಎಂಎಸ್ ಧೋನಿ, ಹಾರ್ದಿಕ್ ಪಾಂಡ್ಯ ಹಾಗೂ ಜಸ್‌ಪ್ರೀತ್ ಬುಮ್ರಾ ಸ್ಥಾನವನ್ನು ಪಡೆದಿದ್ದಾರೆ. ಟಿ20ಐ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ರೋಹಿತ್ ಶರ್ಮಾ ಅಗ್ರ ಸ್ಥಾನದಲ್ಲಿದ್ದಾರೆ. 4,231 ರನ್‌ಗಳನ್ನು ಸಿಡಿಸಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಅವರು 4188 ರನ್‌ಗಳನ್ನು ಗಳಿಸಿದ್ದಾರೆ. ಈ ಇಬ್ಬರ ಸಾರಥ್ಯದಲ್ಲಿ ಭಾರತ ತಂಡ 2024ರಲ್ಲಿ ಟಿ20 ವಿಶ್ವಕಪ್ ಅನ್ನು ಗೆದ್ದಿತ್ತು.
Asia Cup 2025: ಯುಎಇ ವಿರುದ್ದದ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ XI ಆರಿಸಿದ ಕೆ ಶ್ರೀಕಾಂತ್!
ಎಂಎಸ್ ಧೋನಿ ನಾಯಕತ್ವದ ಭಾರತ ತಂಡ 2007ರಲ್ಲಿ ಉದ್ಘಾಟನಾ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಇವರು ತಮ್ಮ ಟಿ20 ವೃತ್ತಿ ಜೀವನದಲ್ಲಿ ಆಡಿದ 98 ಪಂದ್ಯಗಳಿಂದ 1617 ರನ್‌ಗಳನ್ನು ಕಲೆ ಹಾಕಿದ್ದಾರೆ. 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಪ್ರಶಸ್ತಿ ಗೆಲುವಿಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಹಾಗೂ ಜಸ್‌ಪ್ರೀತ್ ಬುಮ್ರಾ ಮಹತ್ತರ ಪಾತ್ರವನ್ನು ವಹಿಸಿದ್ದರು.
2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಜಸ್‌ಪ್ರೀತ್ ಬುಮ್ರಾ ಆಡಿದ್ದ ಎಂಟು ಪಂದ್ಯಗಳಿಂದ 15 ವಿಕೆಟ್‌ಗಳನ್ನು ಕಬಳಿಸಿದ್ದರು. ಆ ಮೂಲಕ ಟೂರ್ನಿ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್ ಪಂದ್ಯದಲ್ಲಿ ಹಾರ್ದಿಕ್ ಡೆತ್ ಓವರ್‌ಗಳಲ್ಲಿ 3 ನಿರ್ಣಾಯಕ ವಿಕೆಟ್‌ಗಳನ್ನು ಕಬಳಿಸಿದ್ದರು. ಇದರಲ್ಲಿ ಅವರು ಸ್ಪೋಟಕ ಬ್ಯಾಟ್ ಮಾಡಿದ್ದ ಹೆನ್ರಿಚ್ ಕ್ಲಾಸೆನ್ ಹಾಗೂ ಅಪಾಯಕಾರಿ ಡೇವಿಡ್ ಮಿಲ್ಲರ್ ಅವರನ್ನು ಔಟ್ ಮಾಡಿ ಭಾರತದ ಕಮ್‌ಬ್ಯಾಕ್‌ಗೆ ನೆರವು ನೀಡಿದ್ದರು.
Asia Cup 2025: ನಾಳೆಯಿಂದ ಏಷ್ಯಾಕಪ್ ಕ್ರಿಕೆಟ್; ಪ್ರಶಸ್ತಿಗಾಗಿ 8 ತಂಡಗಳ ಕಾದಾಟ
ಪಾಕಿಸ್ತಾನ ತಂಡದಿಂದ ಮೊಹಮ್ಮದ್ ರಿಝ್ವಾನ್ ಹಾಗೂ ವೇಗದ ಬೌಲರ್ ಹ್ಯಾರಿಸ್ ರೌಫ್ ಅವರನ್ನು ಆಯ್ಕೆ ಮಾಡಿದ ಬ್ರೆಟ್ ಲೀ, ಶ್ರೀಲಂಕಾ ತಂಡದಿಂದ ವಾನಿಂದು ಹಸರಂಗ ಹಾಗೂ ಅಫ್ಘಾನಿಸ್ತಾನ ತಂಡದಿಂದ ರಶೀದ್ ಖಾನ್ ಅವರನ್ನು ಆಯ್ಕೆ ಮಾಡಿದ್ದಾರೆ. ಹಾಂಕಾಂಗ್ ತಂಡದಿಂದ ಬಾಬರ್ ಹಯಾತ್ ಹಾಗೂ ಯುಎಇ ತಂಡದಿಂದ ಅಜ್ಮದ್ ಜಾವೇದ್ ಮತ್ತು ಮೊಹಮ್ಮದ್ ನವೀದ್ ಅವರನ್ನು ಆಸೀಸ್ ಮಾಜಿ ವೇಗಿ ಆರಿಸಿದ್ದಾರೆ.
ಬ್ರೆಟ್ ಲೀ ಆಯ್ಕೆ ಮಾಡಿದ ಸಾರ್ವಕಾಲಿಕ ಶ್ರೇಷ್ಠ ಏಷ್ಯಾ ಕಪ್ ಪ್ಲೇಯಿಂಗ್ XI: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಮೊಹಮ್ಮದ್ ರಿಝ್ವಾನ್, ಬಾಬರ್ ಹಯಾತ್, ಎಂಎಸ್ ಧೋನಿ, ಹಾರ್ದಿಕ್ ಪಾಂಡ್ಯ, ವಾನಿಂದು ಹಸರಂಗ, ರಶೀದ್ ಖಾನ್, ಅಮ್ಜದ್ ಜಾವೇದ್, ಮೊಹಮ್ಮದ್ ನವೀದ್, ಹ್ಯಾರಿಸ್ ರೌಫ್, ಜಸ್‌ಪ್ರೀತ್ ಬುಮ್ರಾ