ವೈಭವ್ ಸೂರ್ಯವಂಶಿಗೆ ಆಡದೇ ಇರುವುದಕ್ಕೆ ಸ್ವಲ್ಪ ಬೇಸರವಾಯಿತೆಂದು ಜಪಾನ್ ನಾಯಕ!
ಭಾರತದ ಐತಿಹಾಸಿಕ ಟಿ20ಐ ಪಂದ್ಯದಲ್ಲಿ ಯುವ ಬ್ಯಾಟರ್ ವೈಭವ್ ಸೂರ್ಯವಂಶಿಗೆ ಆಡುವ ಬಳಗದಲ್ಲಿ ಸ್ಥಾನ ಸಿಗದಿರುವುದು ಜಪಾನ್ ನಾಯಕ ಕೆಂಡೆಲ್ ಕಾಡೋವಾಕಿ-ಫ್ಲೆಮಿಂಗ್ ಅವರಿಗೆ ನಿರಾಸೆ ಮೂಡಿಸಿದೆ. ಸಾನೊದಲ್ಲಿ ನಡೆದಿದ್ದ ಐದು ಓವರ್‌ಗಳ ರೋಚಕ ಪಂದ್ಯದಲ್ಲಿ ಭಾರತ ಕೇವಲ ಎರಡು ರನ್‌ಗಳ ಅಂತರದಿಂದ ಜಪಾನ್ ತಂಡವನ್ನು ಮಣಿಸಿತು. ಮಳೆಯ ಕಾರಣ ಪಂದ್ಯವನ್ನು ತಲಾ ಐದು ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು.
ವೈಭವ್ ಸೂರ್ಯವಂಶಿ ಬಗ್ಗೆ ಬೇಸರ ವ್ಯಕ್ತಪಡಿಸಿದ ಜಪಾನ್ ನಾಯಕ. -
ಕ್ಯಾಂಟೊ: ಇಲ್ಲಿನ ಸಾನೊದಲ್ಲಿ ಮಂಗಳವಾರ ನಡೆದಿದ್ದ ಜಪಾನ್ ವಿರುದ್ಧದ ಐತಿಹಾಸಿಕ ಮೊದಲ ಪುರುಷರ ಟಿ20ಐ ಪಂದ್ಯದಲ್ಲಿ(IND vs JAP) ಭಾರತದ ಆಡುವ ಬಳಗದಲ್ಲಿ 15 ವರ್ಷದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿಗೆ ಅವಕಾಶ ಸಿಗಲಿಲ್ಲ. ಇದು ಜಪಾನ್ ನಾಯಕ ಕೆಂಡೆಲ್ ಕಾಡೋವಾಕಿ-ಫ್ಲೆಮಿಂಗ್ (Kendel Kadowaki-Fleming) ಅವರಿಗೆ ನಿರಾಸೆ ಮೂಡಿಸಿತು. ಭಾರತದ ತಂಡದಲ್ಲಿ ವೈಭವ್ ಸೂರ್ಯವಂಶಿ ಸ್ಥಾನ ಪಡೆದಿದ್ದರೂ, ಐತಿಹಾಸಿಕ ಪಂದ್ಯದಲ್ಲಿ ಕಣಕ್ಕಿಳಿಯುವ ಅವಕಾಶ ಅವರಿಗೆ ದೊರೆಯಲಿಲ್ಲ. ಭಾರತ-ಜಪಾನ್ ನಡುವಿನ ರಾಜತಾಂತ್ರಿಕ ಸಂಬಂಧಗಳಿಗೆ 75 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ವಿಶೇಷ ಪಂದ್ಯ ಇದಾಗಿತ್ತು.
ನಿಗದಿಯಂತೆ ಪಂದ್ಯವನ್ನು 20 ಓವರ್‌ಗಳಿಗೆ ನಡೆಸಬೇಕಾಗಿತ್ತು. ಆದರೆ, ಮಳೆ ಹಾಗೂ ಒದ್ದೆಯಾದ ಮೈದಾನದ ಕಾರಣ ತಲಾ ಐದು ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ಟಾಸ್ ಗೆದ್ದ ಭಾರತದ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 5 ಓವರ್‌ಗಳಿಗೆ 32 ರನ್‌ಗಳನು ಕಲೆ ಹಾಕಿತು. ಬಳಿಕ ಗುರಿಯನ್ನು ಹಿಂಬಾಲಿಸಿದ ಜಪಾನ್ ತಂಡ 30 ರನ್‌ಗಳಿಗೆ ಸೀಮಿತವಾಯಿತು. ಅಂತಿಮವಾಗಿ ಭಾರತ ಕೇವಲ ಎರಡು ರನ್‌ಗಳಿಂದ ಗೆದ್ದು ಬೀಗಿತು.
ಕ್ರಿಕೆಟ್ ಶಿಶು ಜಪಾನ್ ವಿರುದ್ಧ ಸೋಲಿನ ಆಘಾತದಿಂದ ಪಾರಾದ ವಿಶ್ವ ಚಾಂಪಿಯನ್ ಭಾರತ; 2 ರನ್ ರೋಚಕ ಗೆಲುವು
ಪಂದ್ಯದ ಬಳಿಕ ಮಾತನಾಡಿದ ಜಪಾನ್ ನಾಯಕ ಕಾಡೋವಾಕಿ-ಫ್ಲೆಮಿಂಗ್, “15 ವರ್ಷದ ಪ್ರತಿಭಾವಂತ ವೈಭವ್ ಸೂರ್ಯವಂಶಿ ಇಂದು (ಮಂಗಳವಾರ) ತಂಡದ ಆಡುವ ಬಳಗದಲ್ಲಿ ಇರಲಿಲ್ಲ ಎಂಬುದು ನನಗೆ ಸ್ವಲ್ಪ ನಿರಾಸೆ ತಂದಿತು,” ಎಂದು ಹೇಳಿದ್ದಾರೆ.
ಪಂದ್ಯಕ್ಕೂ ಮುನ್ನವೂ ಜಪಾನ್ ನಾಯಕ ಫ್ಲೆಮಿಂಗ್, ವೈಭವ್ ಬಗ್ಗೆ ಮಾತನಾಡಿದ್ದರು. ಕಳೆದ ಒಂದೂವರೆ ವರ್ಷದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿರುವ ವೈಭವ್, ಈ ಐತಿಹಾಸಿಕ ಪಂದ್ಯದಲ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಬಹುದು ಎಂಬ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದರು. ಆದರೆ, ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಅವರನ್ನು ಓಪನರ್ಸ್ ಆಗಿ ಮುಂದುವರಿಸುವ ಮೂಲಕ ಟೀಮ್ ಮ್ಯಾನೇಜ್‌ಮೆಂಟ್ ವೈಭವ್ ಸೂರ್ಯವಂಶಿಯನ್ನು ಬೆಂಚ್ ಕಾಯಿಸಿತು.
IND vs JAP ನಡುವಣ ಏಕೈಕ ಪಂದ್ಯದಲ್ಲಿ ಟಾಸ್ ಗೆದ್ದು ವಿಶಿಷ್ಠ ದಾಖಲೆ ಬರೆದ ಶ್ರೇಯಸ್ ಅಯ್ಯರ್!
ಇನ್ನು ಪಂದ್ಯದ ಬಗ್ಗೆ ಮಾತನಾಡುವುದಾದರೆ ಭಾರತ ಐದು ಓವರ್‌ಗಳಲ್ಲಿ 4 ವಿಕೆಟ್‌ಗೆ ಕೇವಲ 32 ರನ್ ಗಳಿಸಿತು. ಜಪಾನ್ ಬೌಲರ್ ಚಾರ್ಲಿ ಹರಾ-ಹಿನ್ಜೆ ಮೊದಲ ಎಸೆತದಲ್ಲೇ ಅಭಿಷೇಕ್ ಶರ್ಮಾ ಅವರನ್ನು ಔಟ್ ಮಾಡುವ ಮೂಲಕ ಭಾರತಕ್ಕೆ ಆಘಾತ ನೀಡಿದರು. ಸಂಜು ಸ್ಯಾಮ್ಸನ್ ಕೂಡ ಅಲ್ಪ ಮೊತ್ತಕ್ಕೆ ವಿಕೆಟ್ ಕಳೆದುಕೊಂಡರು.
ಗುರಿ ಬೆನ್ನಟ್ಟಿದ ಜಪಾನ್ ಭಾರತಕ್ಕೆ ಕಠಿಣ ಸವಾಲು ನೀಡಿತು. ನಾಲ್ಕು ಓವರ್‌ಗಳ ಅಂತ್ಯಕ್ಕೆ ಜಪಾನ್ 3 ವಿಕೆಟ್‌ಗೆ 25 ರನ್ ಗಳಿಸಿತ್ತು. ಅಂತಿಮ ಓವರ್‌ನಲ್ಲಿ ಗೆಲುವಿಗೆ 8 ರನ್ ಅಗತ್ಯವಿತ್ತು.ಜಪಾನ್ ನಾಯಕ ಕಾಡೋವಾಕಿ-ಫ್ಲೆಮಿಂಗ್ 12 ರನ್ ಗಳಿಸಿ ತಂಡದ ಗೆಲುವಿನ ಭರವಸೆ ಮೂಡಿಸಿದ್ದರು. ಆದರೆ ನಾಲ್ಕನೇ ಓವರ್‌ನ ಕೊನೆಯ ಎಸೆತದಲ್ಲಿ ವಾಷಿಂಗ್ಟನ್ ಸುಂದರ್ ಅವರನ್ನು ಔಟ್ ಮಾಡಿದರು.
Target defended 👏👏#TeamIndia seal a nail-biter with a 2-run victory over Japan 💙
— BCCI (@BCCI) September 22, 2026
Scorecard ▶️ https://t.co/0YhYTwc8HS#TeamIndiaInJapan | #JPNvIND pic.twitter.com/icPNwzOb5s
ಅಂತಿಮ ಓವರ್ ಬೌಲ್ ಮಾಡಿದ ಅಕ್ಷರ್ ಪಟೇಲ್, ಕೇವಲ ಐದು ರನ್ ನೀಡಿ ಭಾರತದ ಗೆಲುವನ್ನು ಖಚಿತಪಡಿಸಿದರು. ಕೊನೆಯ ಎಸೆತದಲ್ಲಿ ಜಪಾನ್‌ಗೆ ನಾಲ್ಕು ರನ್‌ಗಳ ಅಗತ್ಯವಿದ್ದರೂ, ಲೆಗ್ ಬೈ ಮೂಲಕ ಒಂದು ರನ್ ಮಾತ್ರ ಪಡೆಯಲು ಸಾಧ್ಯವಾಯಿತು. ಹೀಗಾಗಿ ಭಾರತ ಎರಡು ರನ್‌ಗಳ ರೋಚಕ ಗೆಲುವು ದಾಖಲಿಸಿತು.
ಸೋಲಿನ ನಡುವೆಯೂ ಜಪಾನ್ ವಿಶ್ವದ ಬಲಿಷ್ಠ ತಂಡಗಳಲ್ಲೊಂದಾದ ಭಾರತದ ವಿರುದ್ಧ ಉತ್ತಮ ಹೋರಾಟ ನೀಡಿತು. ಏಷ್ಯನ್ ಗೇಮ್ಸ್ ಅಭಿಯಾನಕ್ಕೆ ಮುನ್ನ ಭಾರತಕ್ಕೆ ಈ ಪಂದ್ಯ ಉತ್ತಮ ಅಭ್ಯಾಸ ಒದಗಿಸಿದರೆ, ವೈಭವ್ ಸೂರ್ಯವಂಶಿ ತನ್ನ ಅವಕಾಶಕ್ಕಾಗಿ ಇನ್ನಷ್ಟು ಕಾಯಬೇಕಾಗಿದೆ.