ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿರಾಟ್‌ ಕೊಹ್ಲಿಯ 3ನೇ ಕ್ರಮಾಂಕಕ್ಕೆ ಸೂಕ್ತ ಆಟಗಾರನನ್ನು ಆರಿಸಿದ ವಾಸೀಮ್‌ ಜಾಫರ್‌!

ಭಾರತದ ಮಾಜಿ ಟೆಸ್ಟ್‌ ಆರಂಭಿಕ ಆಟಗಾರ ವಾಸೀಮ್‌ ಜಾಫರ್, ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ನಿರ್ವಹಿಸುತ್ತಿದ್ದ ಮೂರನೇ ಕ್ರಮಾಂಕದ ಸ್ಥಾನವನ್ನು ತಿಲಕ್ ವರ್ಮಾ ತುಂಬಬಲ್ಲರು ಎಂದು ಅಭಿಪ್ರಾಯಪಟ್ಟಿದ್ದಾರೆ. 2027ರ ಏಕದಿನ ವಿಶ್ವಕಪ್‌ನ್ನು ಗಮನದಲ್ಲಿಟ್ಟುಕೊಂಡು ಭಾರತ ತಂಡ ಭವಿಷ್ಯದ ಸಂಯೋಜನೆ ರೂಪಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಜಾಫರ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೊಹ್ಲಿಯ 3ನೇ ಕ್ರಮಾಂಕಕ್ಕೆ ಸೂಕ್ತ ಆಟಗಾರನನ್ನು ಆರಿಸಿದ ಜಾಫರ್‌!

ವಿರಾಟ್‌ ಕೊಹ್ಲಿಯ ಸ್ಥಾನಕ್ಕೆ ಸೂಕ್ತ ಆಟಗಾರನನ್ನು ಆರಿಸಿದ ವಸೀಮ್‌ ಜಾಫರ್‌. -

Profile
Ramesh Kote Oct 5, 2026 4:52 PM

ನವದೆಹಲಿ: ಮುಂಬರುವ 2027ರ ಏಕದಿನ ವಿಶ್ವಕಪ್‌ (ICC ODI World Cup 2027) ಟೂರ್ನಿಯಲ್ಲಿ ವಿರಾಟ್ ಕೊಹ್ಲಿ(Virat Kohli) ತಮ್ಮ ಕೊನೆಯ ವಿಶ್ವಕಪ್ ಆಡಲಿದ್ದಾರೆ. ಹೀಗಾಗಿ ಕೊಹ್ಲಿ ನಂತರ ಭಾರತ ತಂಡದ ಏಕದಿನ ಬ್ಯಾಟಿಂಗ್ ಕ್ರಮಾಂಕದಲ್ಲಿ ನಂ.3 ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ. ಈ ಸ್ಥಾನಕ್ಕೆ ಯುವ ಎಡಗೈ ಬ್ಯಾಟರ್ ತಿಲಕ್ ವರ್ಮಾ ಸೂಕ್ತ ಅಭ್ಯರ್ಥಿ ಎಂದು ಭಾರತದ ಮಾಜಿ ಆರಂಭಿಕ ಆಟಗಾರ ವಾಸೀಮ್‌ ಜಾಫರ್ (Wasim Jaffer) ಅಭಿಪ್ರಾಯಪಟ್ಟಿದ್ದಾರೆ.

ತಿಲಕ್ ವರ್ಮಾ ಅವರ ಬಹುಮುಖ ಬ್ಯಾಟಿಂಗ್ ಸಾಮರ್ಥ್ಯವನ್ನು ಜಾಫರ್ ಗುಣಗಾನ ಮಾಡಿದ್ದಾರೆ. ಭಾರತ ಪರ ಏಕದಿನ ಕ್ರಿಕೆಟ್‌ನಲ್ಲಿ ತಿಲಕ್ ಈಗಾಗಲೇ ನಂ.3, ನಂ.4 ಹಾಗೂ ನಂ.5 ಕ್ರಮಾಂಕಗಳಲ್ಲಿ ಬ್ಯಾಟ್‌ ಮಾಡಿದ್ದಾರೆ. ಟಿ20 ಕ್ರಿಕೆಟ್‌ನಲ್ಲೂ ತಂಡದ ಅಗತ್ಯಕ್ಕೆ ಅನುಗುಣವಾಗಿ ವಿಭಿನ್ನ ಕ್ರಮಾಂಕಗಳಲ್ಲಿ ಆಡುವ ಮೂಲಕ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ.

“ತಿಲಕ್ ಅವರ ಬಹುಮುಖತೆಯನ್ನು ನೋಡುವುದು ಉತ್ತಮವಾಗಿದೆ. ಅವರು ಹಿಂದೆ ನಂ.3ನೇ ಕ್ರಮಾಂಕದಲ್ಲಿ ಶತಕ ಗಳಿಸಿದ್ದರು. ಇದೀಗ ನಂ.5 ಮತ್ತು ನಂ.6 ಸ್ಥಾನಗಳಲ್ಲೂ ಅದ್ಭುತವಾಗಿ ಹೊಂದಿಕೊಂಡಿದ್ದಾರೆ. ಇದು ಅವರಲ್ಲಿರುವ ಅತ್ಯುತ್ತಮ ಗುಣ,” ಎಂದು ವಾಸೀಮ್‌ ಜಾಫರ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಶ್ಲಾಘಿಸಿದ್ದಾರೆ.

IND vs WI: ಮೂರನೇ ಪಂದ್ಯದಲ್ಲಿ 5 ವಿಕೆಟ್‌ ಸೋಲಿನ ಬಳಿಕ ಭಾರತ ತಂಡಕ್ಕೆ ಭಾರಿ ದಂಡ ವಿಧಿಸಿದ ಐಸಿಸಿ!

ತಿಲಕ್ ಅವರ ಪ್ರಥಮ ದರ್ಜೆ ಕ್ರಿಕೆಟ್ ದಾಖಲೆಯನ್ನೂ ಜಾಫರ್ ಉಲ್ಲೇಖಿಸಿದ್ದಾರೆ. ಇತ್ತೀಚಿನ ದುಲೀಪ್ ಟ್ರೋಫಿಯಲ್ಲಿನ ಅವರ ಪ್ರದರ್ಶನವನ್ನು ಗಮನಿಸಿದರೆ, ವಿಭಿನ್ನ ಮಾದರಿಯ ಕ್ರಿಕೆಟ್‌ನ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ತಿಲಕ್ ಅವರಲ್ಲಿದೆ ಎಂದು ಜಾಫರ್ ಹೇಳಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತಿಲಕ್ ಅವರ ಬ್ಯಾಟಿಂಗ್ ಸರಾಸರಿ ಸುಮಾರು 55ರಷ್ಟಿದೆ ಎಂಬುದನ್ನೂ ಅವರು ತಿಳಿಸಿದ್ದಾರೆ.

“ವಿರಾಟ್ ಮತ್ತು ರೋಹಿತ್ ತಂಡದಿಂದ ಹೊರನಡೆದ ನಂತರ, ರೋಹಿತ್ ಸ್ಥಾನಕ್ಕೆ ಯಶಸ್ವಿ ಜೈಸ್ವಾಲ್ ಬರುವ ಸಾಧ್ಯತೆಯಿದೆ. ಆದರೆ ವಿರಾಟ್ ಸ್ಥಾನದಲ್ಲಿ ಎಡಗೈ ಬ್ಯಾಟರ್ ಆಡಲಿದ್ದಾರೆ ಎಂದು ನಾನು ಭಾವಿಸುತ್ತೇನೆ. ತಿಲಕ್ ಆ ಸಾಮರ್ಥ್ಯ ಹೊಂದಿದ್ದಾರೆ. ದುಲೀಪ್ ಟ್ರೋಫಿಯಲ್ಲಿ ಅವರು ರನ್ ಗಳಿಸಿದ ರೀತಿಯನ್ನು ನಾವು ನೋಡಿದ್ದೇವೆ. ಅವರ ಪ್ರಥಮ ದರ್ಜೆ ಸರಾಸರಿ ಸುಮಾರು 55ರಷ್ಟಿದೆ. ಹೀಗಾಗಿ ಅವರು ಮೂರೂ ಮಾದರಿಗಳಲ್ಲೂ ಸುಲಭವಾಗಿ ಹೊಂದಿಕೊಳ್ಳಬಲ್ಲರು,” ಎಂದು ವಾಸೀಮ್‌ ಜಾಫರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತ ವಿರುದ್ಧ ಟಿ20 ಸರಣಿಗೂ ಮುನ್ನ ವೆಸ್ಟ್ ಇಂಡೀಸ್ ತಂಡಕ್ಕೆ ಆಮಿರ್‌ ಜಂಗೋ ಸೇರ್ಪಡೆ!

ಭಾರತ ಪರ ತಿಲಕ್ ವರ್ಮಾ ಇದುವರೆಗೆ ಕೇವಲ ನಾಲ್ಕು ಏಕದಿನ ಪಂದ್ಯಗಳನ್ನು ಆಡಿದ್ದು, 22.67ರ ಸರಾಸರಿಯಲ್ಲಿ 68 ರನ್ ಗಳಿಸಿದ್ದಾರೆ. ನಂ.3 ಕ್ರಮಾಂಕದಲ್ಲಿ ಎರಡು ಬಾರಿ, ನಂ.4 ಮತ್ತು ನಂ.5ರಲ್ಲಿ ತಲಾ ಒಂದು ಬಾರಿ ಬ್ಯಾಟ್‌ ಮಾಡಿದ್ದಾರೆ. 2025ರ ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅವರು ಕೊನೆಯ ಏಕದಿನ ಪಂದ್ಯ ಆಡಿದ್ದರು.

2027ರ ಏಕದಿನ ವಿಶ್ವಕಪ್‌ ನನ್ನ ಕೊನೆಯ ಪಂದ್ಯ: ವಿರಾಟ್‌ ಕೊಹ್ಲಿ

ಇದೇ ವೇಳೆ ವಿರಾಟ್ ಕೊಹ್ಲಿ 2027ರ ಏಕದಿನ ವಿಶ್ವಕಪ್ ತಮ್ಮ ಕೊನೆಯ ವಿಶ್ವಕಪ್ ಆಗಿರಲಿದೆ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. “ಭಾರತ ತಂಡದ ಪರ ನಾನು ಆಡುವ ಕೊನೆಯ ವಿಶ್ವಕಪ್ ಇದಾಗಿದೆ. ಎಲ್ಲವನ್ನೂ ಮೈದಾನದಲ್ಲಿ ನೀಡುವುದು ನನ್ನ ಪ್ರೇರಣೆ. ವಿಶ್ವಕಪ್ ಗೆಲ್ಲುವುದು ಗುರಿ. ಅದಕ್ಕಾಗಿ ಏನು ಬೇಕಾದರೂ ಮಾಡಲು ನಾನು ಸಿದ್ಧ,” ಎಂದು ಕೊಹ್ಲಿ ಹೇಳಿದ್ದಾರೆ.

ಮುಂಬೈಗಾಗಿ ರಣಜಿ ಟ್ರೋಫಿ ಆಡಲು ಸೂರ್ಯಕುಮಾರ್ ಯಾದವ್ ಸಜ್ಜು

2027ರ ವಿಶ್ವಕಪ್ ಕೊಹ್ಲಿ ಅವರ ಪಾಲಿಗೆ ಐದನೇ ಏಕದಿನ ವಿಶ್ವಕಪ್ ಆಗಿರಲಿದೆ. 50 ಓವರ್‌ಗಳ ವಿಶ್ವಕಪ್‌ನ ತೀವ್ರತೆಯೂ ಬೇರೆ ಯಾವುದೇ ಟೂರ್ನಿಗಿಂತ ಹೆಚ್ಚಾಗಿದೆ ಎಂದು ಕೊಹ್ಲಿ ಹೇಳಿದ್ದಾರೆ. ಟಿ20 ಮಟ್ಟದ ತೀವ್ರತೆಯೊಂದಿಗೆ ಸುಮಾರು 10 ಪಂದ್ಯಗಳನ್ನು ಆಡಬೇಕಾಗಿರುವುದರಿಂದ 50 ಓವರ್‌ಗಳ ವಿಶ್ವಕಪ್ ಅತ್ಯಂತ ಸವಾಲಿನದ್ದಾಗಿದೆ ಎಂಬುದು ಅವರ ಅಭಿಪ್ರಾಯ.