IND vs ENG: ನಿವೃತ್ತಿ ವದಂತಿಗಳ ನಡುವೆಯೂ ಗಂಭೀರ್ ಜೊತೆ ನಗುತ್ತಾ ಮಾತುಕತೆ ನಡೆಸಿದ ರೋಹಿತ್ ಶರ್ಮಾ!
ನಿವೃತ್ತಿ ಕುರಿತ ಊಹಾಪೋಹಗಳ ನಡುವೆಯೇ ಲಂಡನ್‌ನ ಲಾರ್ಡ್ಸ್ ಮೈದಾನದ ಬಾಲ್ಕನಿಯಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ನಗುತ್ತಾ ಮಾತುಕತೆ ನಡೆಸಿದ ದೃಶ್ಯ ಗಮನ ಸೆಳೆಯಿತು. ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯ ಭಾನುವಾರ (ಜುಲೈ 19) ನಡೆಯಲಿದೆ.
ಗೌತಮ್ ಗಂಭೀರ್-ರೋಹಿತ್ ಶರ್ಮಾ ನಡುವೆ ನಗು ಮುಖದ ಮಾತುಕತೆ. -
ಲಂಡನ್: ಭಾನುವಾರ (ಜುಲೈ 19) ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮೂರನೇ ಹಾಗೂ ಏಕದಿನ ಸರಣಿಯ ನಿರ್ಣಾಯಕ ಪಂದ್ಯಕ್ಕೂ (IND vs ENG) ಮುನ್ನ ಭಾರತ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ಐತಿಹಾಸಿಕ ಲಾರ್ಡ್ಸ್ ಬಾಲ್ಕನಿಯಲ್ಲಿ ನಗುತ್ತಾ ಮಾತುಕತೆ ನಡೆಸಿದ ಕ್ಷಣಗಳು ಎಲ್ಲರ ಗಮನ ಸೆಳೆದವು. ಇದಕ್ಕೆ ಸಂಬಂಧಿಸಿದ ವಿಡಿಯೊವನ್ನು ಸ್ಟಾರ್ ಸ್ಪೋರ್ಟ್ಸ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ಈ ಪಂದ್ಯವೇ ರೋಹಿತ್ ಶರ್ಮಾ ಅವರ ಕೊನೆಯ ಏಕದಿನ ಪಂದ್ಯವಾಗಬಹುದು ಎಂಬ ಊಹಾಪೋಹಗಳು ಇತ್ತೀಚೆಗೆ ಜೋರಾಗಿವೆ. ಟೀಮ್ ಮ್ಯಾನೇಜ್‌ಮೆಂಟ್ ಹಾಗೂ ಆಯ್ಕೆದಾರರು 2027ರ ಏಕದಿನ ವಿಶ್ವಕಪ್ ಟೂರ್ನಿಗೆ ರೋಹಿತ್ ಶರ್ಮಾ ಅವರನ್ನು ಪರಿಗಣಿಸುತ್ತಿಲ್ಲ ಎಂಬ ವರದಿಗಳು ಹರಿದಾಡುತ್ತಿವೆ. ಆದರೆ ಈ ಊಹಾಪೋಹಗಳ ಬಗ್ಗೆ ರೋಹಿತ್ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮತ್ತೊಂದೆಡೆ, ಲಾರ್ಡ್ಸ್ ಪಂದ್ಯವೇ ಅವರ ಕೊನೆಯ ಪಂದ್ಯ ಎಂಬ ವರದಿಗಳನ್ನು ಬಿಸಿಸಿಐ ತಳ್ಳಿಹಾಕಿದೆ.
IND vs ENG: ಲಾರ್ಡ್ಸ್‌ನಲ್ಲಿ ರೋಹಿತ್ ಶರ್ಮಾಗೆ ಕೊನೆಯ ಪಂದ್ಯವೇ? ಸ್ಪಷ್ಟನೆ ನೀಡಿದ ಬಿಸಿಸಿಐ ಸೆಕ್ರೆಟರಿ!
ರೋಹಿತ್ ಶರ್ಮಾ ಭವಿಷ್ಯದ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಸ್ಪಷ್ಟನೆ
"ರೋಹಿತ್ ಶರ್ಮಾ ಅವರ ಭವಿಷ್ಯದ ಬಗ್ಗೆ ಸಾಕಷ್ಟು ಊಹಾಪೋಹಗಳು ಮಾಧ್ಯಮಗಳ ಮೂಲಕ ಹರಿದಾಡುತ್ತಿವೆ. ಭಾನುವಾರ ಲಾರ್ಡ್ಸ್‌ನಲ್ಲಿ ರೋಹಿತ್ ಶರ್ಮಾ ಅವರು ಕೊನೆಯ ಏಕದಿನ ಪಂದ್ಯವನ್ನು ಆಡುತ್ತಾರೆಂಬ ಬಗ್ಗೆ ಎಲ್ಲಿಯೂ ಚರ್ಚೆ ನಡೆದಿಲ್ಲ. ರೋಹಿತ್ ಭಾರತ ತಂಡದ ಪರ ಹಲವು ವರ್ಷಗಳಿಂದ ಪ್ರಮುಖ ಆಟಗಾರನಾಗಿ ಆಡುತ್ತಿದ್ದಾರೆ ಹಾಗೂ ಅವರು ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವುದನ್ನು ಮುಂದುವರಿಸಲಿದ್ದಾರೆ. ಲಂಡನ್ ಲಾರ್ಡ್ಸ್‌ನಲ್ಲಿ ನಡಯುವ ಮೂರನೇ ಒಡಿಐ ಅವರ ಕೊನೆಯ ಪಂದ್ಯವಾಗುವುದಿಲ್ಲ," ಎಂದು ಬಿಸಿಸಿಐ ಕಾರ್ಯದರ್ಶಿ ದೇವಜೀತ್ ಸೈಕಿಯಾ ಪಿಟಿಐ ಸುದ್ದಿ ಸಂಸ್ಥೆಗೆ ಸ್ಪಷ್ಟಪಡಿಸಿದ್ದಾರೆ.
Locked in, but enjoying the moment 💙#RohitSharma and #GautamGambhir share a laugh on the Lord's balcony before India take the field for the series-deciding ODI. 👏#ENGvIND 3rd ODI 👉 SUN, 19th JULY, 2:30 PM on JioHotstar pic.twitter.com/FUCQX0HxTa
— Star Sports (@StarSportsIndia) July 18, 2026
ನಿವೃತ್ತಿ ಕುರಿತ ಊಹಾಪೋಹಗಳಿಗೆ ತೆರೆ ಎಳೆಯುವಂತೆಯೇ, ಮಾಜಿ ನಾಯಕ ಹಾಗೂ ಹಾಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮಹತ್ವದ 'ಮಾಡು ಇಲ್ಲವೇ ಮಡಿ' ಪಂದ್ಯಕ್ಕೂ ಮುನ್ನ ಹಗುರ ಕ್ಷಣಗಳನ್ನು ಹಂಚಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ.
ಆರಂಭಿಕ ಎರಡು ಪಂದ್ಯಗಳಲ್ಲಿ ಹಿಟ್‌ಮ್ಯಾನ್ ವಿಫಲ
ಈ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ, ತಮ್ಮ ಬ್ಯಾಟ್‌ನಿಂದ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. ಆರಂಭಿಕ ಎರಡು ಪಂದ್ಯಗಳಲ್ಲಿ ಅವರು ಒಟ್ಟು 37 ರನ್‌ಗಳನ್ನಷ್ಟೇ ಶಕ್ತರಾಗಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ 11 ರನ್‌ಗೆ ಔಟಾದ ರೋಹಿತ್, ಕಾರ್ಡಿಫ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ 47 ಎಸೆತಗಳಲ್ಲಿ 26 ರನ್ ಗಳಿಸಿ ನಿರಾಸೆ ಮೂಡಿಸಿದರು. 2026ರಲ್ಲಿ ಇದುವರೆಗೆ ಆಡಿರುವ ಎಂಟು ಏಕದಿನ ಪಂದ್ಯಗಳಲ್ಲಿ ಅವರು ಒಟ್ಟು 241 ರನ್‌ಗಳನ್ನು ಮಾತ್ರ ದಾಖಲಿಸಿದ್ದಾರೆ.
ಮೂರನೇ ಏಕದಿನ ಪಂದ್ಯ ಮುಗಿದ ಬಳಿಕ ಭಾರತ ಏಕದಿನ ತಂಡದ ಆಟಗಾರರಿಗೆ ದೀರ್ಘ ವಿರಾಮ ಸಿಗಲಿದೆ. ಭಾರತ ತನ್ನ ಮುಂದಿನ 50 ಓವರ್‌ಗಳ ಪಂದ್ಯವನ್ನು ಸೆಪ್ಟೆಂಬರ್ 27ರಂದು ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ.
IND vs ENG: ಕೆಎಲ್ ರಾಹುಲ್ ಇನ್? ಮೂರನೇ ಒಡಿಐಗೆ ಭಾರತ ತಂಡದಲ್ಲಿ 2 ಬದಲಾವಣೆ ಸಾಧ್ಯತೆ!
ಲಾರ್ಡ್ಸ್ ಪಂದ್ಯದಿಂದ ವಾಷಿಂಗ್ಟನ್ ಸುಂದರ್ ಔಟ್
ಇದೇ ವೇಳೆ ಎರಡನೇ ಏಕದಿನ ಪಂದ್ಯದ ವೇಳೆ ಹ್ಯಾಮ್‌ಸ್ಟ್ರಿಂಗ್ ಗಾಯಕ್ಕೆ ತುತ್ತಾಗಿದ್ದ ಸ್ಪಿನ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಿಂದ ಹೊರಬಿದ್ದಿದ್ದಾರೆ ಎಂದು ಬಿಸಿಸಿಐ ಅಧಿಕೃತವಾಗಿ ಪ್ರಕಟಿಸಿದೆ.
ಅವರ ಬದಲಿಗೆ ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ಹರ್ಷ ದುಬೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ದುಬೆ ಜೂನ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಎರಡು ಏಕದಿನ ಪಂದ್ಯಗಳನ್ನು ಆಡಿದ್ದರೂ, ಬಳಿಕ ಇಂಗ್ಲೆಂಡ್ ವಿರುದ್ಧದ ಸರಣಿಗೆ ಆಯ್ಕೆಯಾಗಿರಲಿಲ್ಲ. ಈಗ ಸುಂದರ್ ಅವರ ಗಾಯದ ಹಿನ್ನೆಲೆಯಲ್ಲಿ ಮತ್ತೊಮ್ಮೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಪಡೆದಿದ್ದಾರೆ.