ʻನಿಮ್ಮ ಬಾಕಿ ದಿನಗಳನ್ನು ಎಣಿಸಿʼ: ಮಾಧ್ಯಮಗಳ ವಿರುದ್ಧ ಮೊಹಮ್ಮದ್ ಶಮಿ ಕಿಡಿ!
ಮುಂಬರುವ ಇಂಗ್ಲೆಂಡ್ ಟೆಸ್ಟ್ ಸರಣಿಗೂ ಮುನ್ನ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ತಂಡದ ನಾಯಕತ್ವ ಸ್ಥಾನವನ್ನು ಯಾರು ವಹಿಸಲಿದ್ದಾರೆ ಎನ್ನುವ ಕುತೂಹಲದ ನಡುವೆಯೇ ಇದೀಗ ಭಾರತ ತಂಡದ ಹಿರಿಯ ವೇಗದ ಬೌಲರ್ ಮೊಹಮ್ಮದ್ ಶಮಿ ಕೂಡ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಹೇಳುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದರ ಬೆನ್ನಲ್ಲೆ ಮೊಹಮ್ಮದ್ ಶಮಿ ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮ ವರದಿ ವಿರುದ್ದ ಮೊಹಮ್ಮದ್ ಶಮಿ ಆಕ್ರೋಶ.

ನವದೆಹಲಿ: ಭಾರತ (Indian Cricket Team) ತಂಡದ ಹಿರಿಯ ವೇಗಿ ಮೊಹಮ್ಮದ್ ಶಮಿ (Mohammad Shami) ಪುನಃ ಲಯಕ್ಕೆ ಮರಳಲು ಪ್ರಯತ್ನಿಸುತ್ತಿದ್ದಾರೆ. ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ಪರ ಆಡುತ್ತಿರುವ ಶಮಿ, 9 ಪಂದ್ಯಗಳನ್ನು ಆಡಿ ಕೇವಲ ಆರು ವಿಕೆಟ್ ಕಬಳಿಸಿದ್ದಾರೆ. ಇದರೊಂದಿಗೆ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬಂದಿಲ್ಲ. ಇದರ ನಡುವೆ ಇಂಗ್ಲೆಂಡ್ ಪ್ರವಾಸದಲ್ಲಿ ಆಡಲಿರುವ ಟೆಸ್ಟ್ ತಂಡದಲ್ಲಿ ಶಮಿ ಸ್ಥಾನ ಪಡೆಯುತ್ತಾರಾ ಎಂಬುದು ಗೊಂದಲದ ವಿಷಯವಾಗಿದೆ. ಇದರ ನಡುವೆ ಮೊಹಮ್ಮದ್ ಶಮಿ ಕೂಡ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದರ ಬೆನ್ನಲ್ಲೆ ಶಮಿ ಇದಕ್ಕೆ ಸ್ಪಷ್ಟತೆ ನೀಡಿದ್ದಾರೆ.
ಜೂನ್ 20ರಂದು ಪ್ರಾರಂಭವಾಗುವ ಭಾರತ ತಂಡದ ಬಹುನಿರೀಕ್ಷಿತ ಇಂಗ್ಲೆಂಡ್ ಟೆಸ್ಟ್ ಸರಣಿಗೂ ಮುನ್ನ ಹಿರಿಯ ವೇಗದ ಬೌಲರ್ ಮೊಹಮ್ಮದ್ ಶಮಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಾರೆ ಎನ್ನುವ ಉಹಾಪೋಹಗಳು ಹರಿದಾಡುತ್ತಿವೆ. ಆದರೆ 34ರ ವಯಸ್ಸಿನ ಮೊಹಮ್ಮದ್ ಶಮಿ ರಾಷ್ಟ್ರಿಯ ತಂಡಕ್ಕೆ ಇನ್ನು ಮುಂದುವರಿದು ಆಡುತ್ತೇನೆಂದು ಹೇಳುವ ಮೂಲಕ ಟೆಸ್ಟ್ ನಿವೃತ್ತಿ ಬಗೆಗಿನ ಊಹಾಪೋಹಗಳನ್ನು ತಳ್ಳಿ ಹಾಕಿದ್ದಾರೆ.
ವಿರಾಟ್ ಕೊಹ್ಲಿಯ 4ನೇ ಕ್ರಮಾಂಕಕ್ಕೆ ಕನ್ನಡಿಗನನ್ನು ಸೂಚಿಸಿದ ಅನಿಲ್ ಕುಂಬ್ಳೆ!
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಗೆದ್ದು ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಕಾಣಲು ಟೀಮ್ ಇಂಡಿಯಾ ಎದುರು ನೋಡುತ್ತಿದೆ. ಆದರೆ ಈ ಸರಣಿಗೂ ಮುನ್ನ ಭಾರತ ತಂಡದ ಪ್ರಮುಖ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ದೀರ್ಘವಾಧಿ ಸ್ವರೂಪಕ್ಕೆ ಹಠಾತ್ ವಿದಾಯ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ತಂಡದಲ್ಲಿ ಎರಡು ನಿರ್ಣಾಯಕ ಸ್ಥಾನಗಳು ಖಾಲಿಯಾಗಿರುವುದರಿಂದ ತಂಡದ ಆಯ್ಕೆ ತೀವ್ರ ಕೂತೂಹಲವನ್ನು ಮೂಡಿಸಿದೆ.
ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ಹಿರಿಯ ವೇಗಿ ಮೊಹಮ್ಮದ್ ಶಮಿಯನ್ನು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲು ಯಾವುದೇ ಆಸಕ್ತಿ ತೋರಿಸುತ್ತಿಲ್ಲ. ಹಾಗಾಗಿ ವಿರಾಟ್ ಕೊಹ್ಲಿ ಬೆನ್ನಲ್ಲೇ ಶಮಿ ಕೂಡ ಟೆಸ್ಟ್ ಕ್ರಿಕೆಟ್‌ಗೆ ಗುಡ್‌ಬೈ ಹೇಳಲಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಇದರ ನಡುವೆ ಟೀಮ್ ಇಂಡಿಯಾ ವೇಗಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಟೆಸ್ಟ್ ನಿವೃತ್ತಿ ಬಗೆಗಿನ ಸುದ್ದಿಗಳನ್ನು ಕಡ್ಡಿ ಮುರಿದಂತೆ ತಳ್ಳಿ ಹಾಕಿದ್ದಾರೆ.
Instagram story of Mohammed Shami 😱 pic.twitter.com/QpCLcDg09c
— Daddyscore (@daddyscore) May 13, 2025
ತಾವು ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದೇನೆಂಬ ವರದಿಗಳ ಸ್ಕ್ರೀನ್ ಶಾಟ್ ಅನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡ ಮೊಹಮ್ಮದ್ ಶಮಿ, ಮಾಧ್ಯಮಗಳ ವಿರುದ್ದ ಹರಿಹಾಯ್ದಿದ್ದಾರೆ. ಆ ಮೂಲಕ ತಮ್ಮ ಟೆಸ್ಟ್ ವೃತ್ತಿ ಜೀವನಕ್ಕೆ ವಿದಾಯ ಹೇಳುತ್ತಿಲ್ಲ ಎಂಬ ಅಂಶವನ್ನು ಒತ್ತಿ ಹೇಳಿದ್ದಾರೆ.
ಮಾಧ್ಯಮ ವರದಿ ವಿರುದ್ದ ಶಮಿ ಆಕ್ರೋಶ
"ತುಂಬಾ ಒಳ್ಳೆಯದು, ಮಹಾರಾಜ್. ನಿಮ್ಮ ಕೆಲಸದ ದಿನಗಳನ್ನು ಲೆಕ್ಕ ಹಾಕಿ ಹಾಗೂ ನಿಮಗೆ ಇನ್ನೂ ಎಷ್ಟು ದಿನಗಳು ಬಾಕಿ ಇದೆ ಎಂಬುದನ್ನು ನೋಡಿ. ತಡವಾಗಿ ನೀವು ಇದನ್ನು ನೋಡುತ್ತೀರಿ. ನಿಮ್ಮಂಥ ಜನರು ಭವಿಷ್ಯವನ್ನು ಹಾಳು ಮಾಡಿದ್ದಾರೆ. ಕೆಲವೊಮ್ಮಯಾದರೂ ಒಳ್ಳೆಯದನ್ನು ಮಾತನಾಡಿ. ಈ ದಿನದ ಅತ್ಯಂತ ಕೆಟ್ಟ ಸ್ಟೋರಿ ಇದಾಗಿದೆ. ಕ್ಷಮಿಸಿ," ಎಂದು ಮೊಹಮ್ಮದ್ ಶಮಿ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
IND vs ENG: ನಾಲ್ಕನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಸ್ಥಾನ ತುಂಬಬಲ್ಲ ಟಾಪ್ 5 ಆಟಗಾರರು!
2023ರ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಬಳಿಕ ಮೊಹಮ್ಮದ್ ಶಮಿ ಯಾವುದೇ ಟೆಸ್ಟ್ ಪಂದ್ಯಗಳನ್ನಾಡಿಲ್ಲ. ಇದಾದ ನಂತರ ಒಂದು ವರ್ಷಕ್ಕೂ ಹೆಚ್ಚು ಕಾಲ ತಂಡದಿಂದ ಹೊರಗುಳಿದಿದ್ದರು. ಕಳೆದ ಟಿ20 ವಿಶ್ವಕಪ್ ಮತ್ತು ಬಾರ್ಡರ್ ಗವಾಸ್ಕಾರ್ ಟ್ರೋಫಿ ಎರಡರಲ್ಲಿಯೂ ಆಡಿರಲಿಲ್ಲ ಹಾಗೂ ಐಪಿಲ್‌ನಲ್ಲಿಯೂ ಕೂಡ ಅಷ್ಟೊಂದು ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ.
ಇಂಗ್ಲೆಂಡ್ ಪ್ರವಾಸದ ಟೆಸ್ಟ್ ಸರಣಿಯ ವೇಳಾಪಟ್ಟಿ
ಮೊದಲನೇ ಟೆಸ್ಟ್: ಜೂನ್ 20-24 - ಹೆಡಿಂಗ್ಲೆ, (ಲೀಡ್ಸ್)
ಎರಡನೇ ಟೆಸ್ಟ್: ಜುಲೈ 2-6 - ಎಜ್‌ಬಾಸ್ಟನ್ (ಬರ್ಮಿಂಗ್‌ಹ್ಯಾಮ್)
ಮೂರನೇ ಟೆಸ್ಟ್: ಜುಲೈ 10-14 - ದಿ ಲಾರ್ಡ್ಸ್, (ಲಂಡನ್)
ನಾಲ್ಕನೇ ಟೆಸ್ಟ್: ಜುಲೈ 23-27 - ಓಲ್ಡ್ ಟ್ರಾಫರ್ಡ್ (ಮ್ಯಾಂಚೆಸ್ಟರ್)
ಐದನೇ ಟೆಸ್ಟ್: ಜುಲೈ 31-ಆಗಸ್ಟ್ 4 - ದಿ ಓವಲ್, (ಲಂಡನ್)