IND vs WI: ಮೂರನೇ ಒಡಿಐ ಗೆದ್ದು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಳ್ಳಲು ಭಾರತ ಸಜ್ಜು!
India vs West Indies 3rd ODI Match Preview: ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಣ ಏಕದಿನ ಸರಣಿಯ ಕೊನೆಯ ಹಂತಕ್ಕೆ ತಲುಪಿದೆ. ಆರಂಭಿಕ ಎರಡೂ ಪಂದ್ಯಗಳನ್ನು ಗೆದ್ದಿರುವ ಭಾರತ ತಂಡ, ಇದೀಗ ಮೂರನೇ ಹಾಗೂ ಸರಣಿಯ ಕೊನೆಯ ಪಂದ್ಯವನ್ನು ಆಡಲು ಸಜ್ಜಾಗುತ್ತಿದೆ. ಈ ಪಂದ್ಯ ಮುಲ್ಲಾನ್‌ಪುರದಲ್ಲಿ ಅಕ್ಟೋಬರ್ 3 ರಂದು ನಡೆಯಲಿದೆ.
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುಣ ಮೂರನೇ ಏಕದಿನ ಪಂದ್ಯ. -
ಮುಲ್ಲಾನ್‌ಪುರ: ಆರಂಭಿಕ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಏಕದಿನ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿರುವ ಭಾರತ ತಂಡ, ಇದೀಗ ಮೂರನೇ ಪಂದ್ಯವನ್ನೂ (IND vs WI) ಗೆದ್ದು ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಳ್ಳಲು ಎದುರು ನೋಡುತ್ತಿದೆ. ಮೂರನೇ ಪಂದ್ಯ ಅಕ್ಟೋಬರ್ 3 ರಂದು ಇಲ್ಲಿನ ಮಹಾರಾಜ ಯದವೀಂದ್ರ ಸಿಂಗ್ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಮತ್ತೊಂದು ಕಡೆ ಸರಣಿಯನ್ನು ಈಗಾಗಲೇ ಕಳೆದುಕೊಂಡಿರುವ ಪ್ರವಾಸಿ ವಿಂಡೀಸ್, ಕನಿಷ್ಠ ಕೊನೆಯ ಪಂದ್ಯವನ್ನು ಗೆದ್ದು ವೈಟ್‌ವಾಷ್ ಆಘಾತದಿಂದ ತಪ್ಪಿಸಿಕೊಳ್ಳಲು ಬಯಸುತ್ತಿದೆ.
ತಿರುವನಂತಪುರಂ ಹಾಗೂ ಗುವಾಹಟಿ ಎರಡೂ ಸ್ಥಳಗಳಲ್ಲಿ ಪ್ರಾಬಲ್ಯ ಸಾಧಿಸಿದ್ದ ಟೀಮ್ ಇಂಡಿಯಾ, ಏಕದಿನ ಸರಣಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ನಾಯಕ ಶುಭಮನ್ ಗಿಲ್ ನಾಯಕತ್ವದ ಜೊತೆಗೆ ಬ್ಯಾಟಿಂಗ್‌ನಲ್ಲಿ ಅಸಾಧಾರಣ ಪ್ರದರ್ಶನವನ್ನು ತೋರುತ್ತಿದ್ದಾರೆ. ಮೊದಲನೇ ಪಂದ್ಯದಲ್ಲಿ ಶತಕ ಹಾಗೂ ಎರಡನೇ ಪಂದ್ಯದಲ್ಲಿ ದ್ವಿಶತಕವನ್ನು ಬಾರಿಸಿ ಭಾರತ ತಂಡ ಏಕದಿನ ಸರಣಿಯನ್ನು ವಶಪಡಿಸಿಕೊಳ್ಳುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿದ್ದರು.
IND vs WI: ದ್ವಿಶತಕ ಸಿಡಿಸಿದ ಶುಭಮನ್ ಗಿಲ್ ಇನಿಂಗ್ಸ್ ಬಗ್ಗೆ ದೊಡ್ಡ ಹೇಳಿಕೆ ನೀಡಿದ ರೋಹಿತ್ ಶರ್ಮಾ!
ಇನ್ನು ಎದುರಾಳಿ ವೆಸ್ಟ್ ಇಂಡೀಸ್ ತಂಡ 406 ರನ್‌ಗಳ ಕಠಿಣ ಗುರಿಯನ್ನು ನೀಡಿದ ಹೊರತಾಗಿಯೂ ಆತಿಥೇಯ ಭಾರತ ತಂಡವನ್ನು ಕಟ್ಟಿ ಹಾಕಲು ಸಾಧ್ಯವಾಗಲಿಲ್ಲ. ಕೆರಿಬಿಯನ್ ಬ್ಯಾಟ್ಸ್‌ಮನ್‌ಗಳು ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರುತ್ತಿದ್ದಾರೆ. ಆದರೆ, ಬೌಲರ್‌ಗಳು ಪಂದ್ಯದಲ್ಲಿ ಬ್ಯಾಟ್ಸ್‌ಮ್‌ಗಳಿಗೆ ಸಾಥ್ ನೀಡುವಲ್ಲಿ ವಿಫಲರಾಗುತ್ತಿದ್ದಾರೆ. ಈ ಕಾರಣದಿಂದಲೇ ವೆಸ್ಟ್ ಇಂಡೀಸ್ ತಂಡ ಇನ್ನೂ ಒಂದೂ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ.
ಪಂದ್ಯದ ವಿವರ
ಭಾರತ vs ವೆಸ್ಟ್ ಇಂಡೀಸ್
ಮೂರನೇ ಏಕದಿನ ಪಂದ್ಯ
ದಿನಾಂಕ: ಅಕ್ಟೋಬರ್ 3, 2026
ಸಮಯ: ಮಧ್ಯಾಹ್ನ 02:00 ಗಂಟೆಗೆ
ಸ್ಥಳ: ಮಹಾರಾಜ ಯದವೀಂದ್ರ ಸಿಂಗ್ ಇಂಟರ್‌ನ್ಯಾಷನಲ್ ಕ್ರೀಡಾಂಗಣ, ಮುಲ್ಲಾನ್‌ಪುರ
ನೇರ ಪ್ರಸಾರ: ಜಿಯೊಸ್ಟಾರ್ ನೆಟ್‌ವರ್ಕ್
ಲೈವ್ ಸ್ಟ್ರೀಮಿಂಗ್: ಜಿಯೊಹಾಟ್‌ಸ್ಟಾರ್
ಭಾರತದ ದಾಖಲೆಯ ರನ್ ಚೇಸ್ ಬಳಿಕ ಗುವಾಹಟಿ ಪಿಚ್ ವಿರುದ್ಧ ಗೌತಮ್ ಗಂಭೀರ್ ಕಿಡಿ
ಮುಲ್ಲಾನ್‌ಪುರ ಪಿಚ್ ರಿಪೋರ್ಟ್
ಪ್ರವಾಸದ ಮೂರನೇ ಪಂದ್ಯ ನ್ಯೂ ಚಂಡೀಗಢದ ಮಹಾರಾಜ ಯದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಐತಿಹಾಸಿಕ ಕ್ಷಣವಾಗಲಿದೆ. ಈ ಕ್ರೀಡಾಂಗಣದಲ್ಲಿ ಇದೇ ಮೊದಲ ಬಾರಿ ಪುರುಷರ ಏಕದಿನ ಅಂತಾರಾಷ್ಟ್ರೀಯ ಪಂದ್ಯ ನಡೆಯಲಿದೆ. ಪಿಚ್ ಬ್ಯಾಟರ್‌ಗಳಿಗೆ ಹೆಚ್ಚು ಅನುಕೂಲಕರವಾಗಿರುವ ನಿರೀಕ್ಷೆಯಿದೆ. ಆದರೆ ಇತ್ತೀಚೆಗೆ ಬರ್ಸಪರ ಕ್ರೀಡಾಂಗಣದಲ್ಲಿ ಕಂಡುಬಂದ ಅತ್ಯಂತ ಸಮತಟ್ಟಾದ ಬ್ಯಾಟಿಂಗ್ ಪಿಚ್‌ನಷ್ಟು ಸುಲಭವಾಗಿರುವ ಸಾಧ್ಯತೆ ಇಲ್ಲ. ಹೀಗಾಗಿ ಬ್ಯಾಟರ್‌ಗಳ ಜೊತೆಗೆ ಬೌಲರ್‌ಗಳಿಗೂ ತಮ್ಮ ಕೌಶಲ ಪ್ರದರ್ಶಿಸಲು ಅವಕಾಶ ಸಿಗಬಹುದು. ಹವಾಮಾನ ಪಂದ್ಯಕ್ಕೆ ಅಡ್ಡಿಯಾಗುವ ಸಾಧ್ಯತೆ ಕಡಿಮೆ. ಮಳೆಯ ಮುನ್ಸೂಚನೆ ಇಲ್ಲದಿರುವುದರಿಂದ ಪಂದ್ಯ ಸಂಪೂರ್ಣವಾಗಿ ನಡೆಯುವ ನಿರೀಕ್ಷೆಯಿದೆ.
ಭಾರತ vs ವೆಸ್ಟ್ ಇಂಡೀಸ್ ಮುಖಾಮುಖಿ ದಾಖಲೆ
ಒಟ್ಟು ಆಡಿದ ಪಂದ್ಯಗಳು: 144
ಭಾರತದ ಗೆಲುವು: 74
ವೆಸ್ಟ್ ಇಂಡೀಸ್ ಗೆಲುವು: 64
ಟೈ/ನೋ ರಿಸಲ್ಟ್: 06
ಶುಭಮನ್ ಗಿಲ್ ವೇಗದ ದ್ವಿಶತಕ; ವೆಸ್ಟ್ ಇಂಡೀಸ್ ವಿರುದ್ಧ ದಾಖಲೆಯ ರನ್ ಚೇಸ್ ಮಾಡಿ ಗೆದ್ದ ಭಾರತ!
ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI
ಭಾರತ: ರೋಹಿತ್ ಶರ್ಮಾ, ಶುಭಮನ್ ಗಿಲ್ (ನಾಯಕ), ವಿರಾಟ್ ಕೊಹ್ಲಿ, ಋತುರಾಜ್ ಗಾಯಕ್ವಾಡ್, ಕೆಎಲ್ ರಾಹುಲ್ ( ವಿಕೆಟ್ ಕೀಪರ್), ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ನಮನ್ ಧೀರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಅನ್ಷುಲ್ ಕಾಂಬೋಜ್
ವೆಸ್ಟ್ ಇಂಡೀಸ್: ಜಾನ್ ಕ್ಯಾಂಬೆಲ್, ಕೀಸೀ ಕಾರ್ಟಿ,ಶೇಯ್ ಹೋಪ್ (ನಾಯಕ, ವಿಕೆಟ್ ಕೀಪರ್) ಆಮಿರ್ ಜಂಗೋ, ಜೆವೆಲ್ ಆಂಡ್ರೆ, ರಾಸ್ಟನ್ ಚೇಸ್, ಮ್ಯಾಥ್ಯೂ ಫಾರ್ಡಿ, ಗುಡಕೇಶ್ ಮೋಟಿ, ಶಮರ್ ಜೋಸೆಫ್, ಆಲ್ಝಾರಿ ಜೋಸೆಫ್, ಜೇಡನ್ ಸೀಲ್ಸ್