IND vs WI: ರನ್‌ಔಟ್ ಆದ ಬೆನ್ನಲ್ಲೆ ಶುಭಮನ್ ಗಿಲ್ ವಿರುದ್ದ ಯಶಸ್ವಿ ಜೈಸ್ವಾಲ್ ಕಿಡಿ! ವಿಡಿಯೊ
Yashasvi Jaiswal Runout: ಯಶಸ್ವಿ ಜೈಸ್ವಾಲ್ ಅವರ ದ್ವಿಶತಕ ಸಿಡಿಸುವ ಕನಸು ಭಗ್ನ. ಎರಡನೇ ದಿನ 175 ರನ್ ಗಳಿಸಿದ ಬಳಿಕ ಅನಗತ್ಯವಾಗಿ ರನ್ ಕದಿಯಲು ಹೋಗಿ ರನ್‌ಔಟ್ ಆದರು. ಈ ವೇಳೆ ಮತ್ತೊಂದು ತುದಿಯಲ್ಲಿದ್ದ ನಾಯಕ ಶುಭಮನ್ ಗಿಲ್ ವಿರುದ್ದ ಜೈಸ್ವಾಲ್ ಅಸಮಾಧಾನವನ್ನು ವ್ಯಕ್ತಪಡಿಸಿದರು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಶುಭಮನ್ ಗಿಲ್ ವಿರುದ್ದ ಯಶಸ್ವಿ ಜೈಸ್ವಾಲ್ ಅಸಮಾಧಾನ. -

ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಟೆಸ್ಟ್ (IND vs WI) ಪಂದ್ಯದ ಎರಡನೇ ದಿನ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ (Yashasvi jaiswal) ಅವರ ದ್ವಿಶತಕ ಸಿಡಿಸುವ ಕನಸು ಭಗ್ನವಾಯಿತು. ಅವರು 175 ರನ್‌ಗಳನ್ನು ಗಳಿಸಿದ ಬಳಿಕ ಅನಗತ್ಯವಾಗಿ ರನ್ ಕದಿಯಲು ಮುಂದಾಗಿ ರನ್‌ಔಟ್ ಆದರು. ಈ ವೇಳೆ ಹತಾಶರಾದ ಅವರು ಮತ್ತೊಂದು ತುದಿಯಲ್ಲಿದ್ದ ನಾಯಕ ಶುಭಮನ್ ಗಿಲ್ (Shubman Gill) ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದರು. ನಂತರ ಬೇಸರದೊಂದಿಗೆ ಪೆವಿಲಿಯನ್‌ಗೆ ಹೆಜ್ಜೆ ಹಾಕಿದರು.
ಪಂದ್ಯದ ಮೊದಲನೇ ದಿನ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಪರ ಇನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಆರಂಭಿಕ ದಿನ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ವೆಸ್ಟ್ ಇಂಡೀಸ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಅವರು ಮೊದಲನೇ ದಿನದಾಟದ ಅಂತ್ಯಕ್ಕೆ ಅಜೇಯ 173 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಅನ್ನು ಕಾಯ್ದುಕೊಂಡಿದ್ದರು ಹಾಗೂ ಶನಿವಾರ ದ್ವಿಶತಕವನ್ನು ಸಿಡಿಸುವ ಯೋಜನೆಯಲ್ಲಿದ್ದರು.
IND vs WI: 13 ರನ್‌ಗಳಿಂದ ಶತಕ ಕಳೆದುಕೊಂಡ ಬಗ್ಗೆ ಸಾಯಿ ಸುದರ್ಶನ್ ಪ್ರತಿಕ್ರಿಯೆ!
92ನೇ ಓವರ್‌ನ ಎರಡನೇ ಎಸೆತದಲ್ಲಿ ಜೇಡನ್ ಸೀಲ್ಸ್‌ಗೆ ಜೈಸ್ವಾಲ್ ಮಿಡ್ ಆಫ್ ಕಡೆ ಚೆಂಡನ್ನು ಹೊಡೆದು ತ್ವರಿತವಾಗಿ ಒಂದು ಪಡೆಯಲು ಪ್ರಯತ್ನಿಸಿದರು. ಆದರೆ, ಚೆಂಡು ನೇರವಾಗಿ ಮಿಡ್ ಆಫ್ ಫೀಲ್ಡರ್ ಕೈಗೆ ಸೇರಿತ್ತು. ಇದನ್ನು ಅರಿತ ನಾಯಕ ಶುಭಮನ್ ಗಿಲ್ ನಾನ್‌ಸ್ಟ್ರೈಕ್ ತುದಿಯಲ್ಲಿಯೇ ನಿಂತರು. ಆದರೆ, ಜೈಸ್ವಾಲ್ ಆಗಲೇ ಅರ್ಧ ಪಿಚ್‌ಗೆ ಓಡಿ ಬಂದಿದ್ದರು. ಫೀಲ್ಡರ್ ತೆವಿನ್ ಇಮ್ಲಾಚ್ ಅವರು ಚೆಂಡನ್ನು ನೇರವಾಗಿ ವಿಕೆಟ್ ಕೀಪರ್‌ಗೆ ಹಾಕಿ ರನ್‌ಔಟ್ ಮಾಡಿಸಿದರು. ಈ ವೇಳೆ ಜೈಸ್ವಾಲ್ ಕ್ರೀಸ್‌ನಿಂದ ಹೊರಗಿದ್ದರು. ಅಂತಿಮವಾಗಿ ಅವರು ರನ್‌ಔಟ್ ಆದರು. ಮತ್ತೊಂದು ತುದಿಯಲ್ಲಿದ್ದ ನಾಯಕ ಶುಭಮನ್ ಗಿಲ್ ಅವರನ್ನು ನೋಡಿದ ಜೈಸ್ವಾಲ್, "ಇದು ನನ್ನ ಕರೆ," ಎಂದು ಹೇಳುವ ಮೂಲಕ ಅಸಮಾಧಾನವನ್ನು ವ್ಯಕ್ತಪಡಿಸಿದರು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
Mindless running from Jaiswal after hitting straight to fielder resulting in run out.
— Prateek (@prateek_295) October 11, 2025
He did the same thing in Melbourne too when he was batting with Virat Kohli.
Bottled an easy 100 there & now a 200 here#YashasviJaiswal #INDvWI #TeamIndia https://t.co/BvKygFeKUL
300 ರನ್ ಗಳಿಸುವ ಅವಕಾಶ ಕಳೆದುಕೊಂಡ ಜೈಸ್ವಾಲ್
ಮೊದಲನೇ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಅವರು ವಿಫಲರಾಗಿದ್ದರು. ಆದರೆ, ಎರಡನೇ ಟೆಸ್ಟ್ ಪಂದ್ಯದಲ್ಲಿ ಹಾಗೆ ಮಾಡಲಿಲ್ಲ. ಮೊದಲನೇ ದಿನ ಅದ್ಭುತವಾಗಿ ಬ್ಯಾಟ್ ಮಾಡಿ ತಮ್ಮ ಟೆಸ್ಟ್ ವೃತ್ತಿ ಜೀವನದ ಏಳನೇ ಶತಕವನ್ನು ಬಹುಬೇಗ ಸಿಡಿಸಿದರು. ನಂತರ ಅದೇ ಆಟವನ್ನು ಮುಂದುವರಿಸಿದ ಅವರು, ದ್ವಿಶತಕದ ಸನಿಹ ಬಂದಿದ್ದರು ಹಾಗೂ ಎರಡನೇ ದಿನ ತಮ್ಮ ವೃತ್ತಿ ಜೀವನದ ಚೊಚ್ಚಲ ತ್ರಿಶತಕವನ್ನು ಸಿಡಿಸುವ ಅವಕಾಶವನ್ನು ಕೂಡ ಹೊಂದಿದ್ದರು. ಆದರೆ, ಎರಡನೇ ದಿನ ಮೊದಲನೇ ಸೆಷನ್‌ನಲ್ಲಿಯೇ ಅವರು ರನ್‌ಔಟ್ ಆಗುವ ಮೂಲಕ ನಿರಾಶೆ ಮೂಡಿಸಿದರು.
IND vs WI: 7ನೇ ಟೆಸ್ಟ್ ಶತಕ ಬಾರಿಸಿ ದಿಗ್ಗಜರನ್ನೊಳಗೊಂಡ ಎಲೈಟ್ ಲಿಸ್ಟ್‌ಗೆ ಸೇರಿದ ಯಶಸ್ವಿ ಜೈಸ್ವಾಲ್!
ದೊಡ್ಡ ಮೊತ್ತದತ್ತ ಟೀಮ್ ಇಂಡಿಯಾ
ಎರಡನೇ ದಿನ ಬೆಳಿಗ್ಗೆ ನಾಯಕ ಶುಭಮನ್ ಗಿಲ್ ಹಾಗೂ ನಿತೀಶ್ ಕುಮಾರ್ ರೆಡ್ಡಿ ಜೋಡಿ 91 ರನ್‌ಗಳ ಜೊತೆಯಾಟವನ್ನು ಆಡಿದರು. ಆ ಮೂಲಕ ತಂಡದ ಮೊತ್ತವನ್ನು 400ರ ಗಡಿ ದಾಟಿಸಿದರು. ನಾಯಕ ಶುಭಮನ್ ಗಿಲ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿ 72 ರನ್ ಗಳಿಸಿ ಬ್ಯಾಟಿಂಗ್ ಮುಂದುವರಿಸಿದರು. ಮತ್ತೊಂದು ತುದಿಯಲ್ಲಿ ಧ್ರುವ್ ಜುರೆಲ್ (2) ಇದ್ದಾರೆ. 111 ಓವರ್‌ಗಳ ಮುಕ್ತಾಯಕ್ಕೆ 4 ವಿಕೆಟ್ ನಷ್ಟಕ್ಕೆ 419 ರನ್‌ಗಳನ್ನು ಕಲೆ ಹಾಕಿದೆ.