INDW vs ENGW: 82 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದ ಹರ್ಮನ್‌ಪ್ರೀತ್ ಕೌರ್!
ಭಾರತ ಮಹಿಳಾ ಕ್ರಿಕೆಟ್ ತಂಡ ಮತ್ತು ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ನಡುವೆ ಏಕದಿನ ಸರಣಿಯ ಮೂರನೇ ಹಾಗೂ ನಿರ್ಣಾಯಕ ಪಂದ್ಯ ನಡೆಯುತ್ತಿದೆ. ಪ್ರವಾಸಿ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದಾರೆ ಹಾಗೂ 80 ಎಸೆತಗಳಲ್ಲಿ ಶತಕ ಸಿಡಿಸಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ.

ಏಳನೇ ಏಕದಿನ ಶತಕ ಸಿಡಿಸಿದ ಹರ್ಮನ್‌ಪ್ರೀತ್ ಕೌರ್.

ಚೆಸ್ಟರ್ಲಿ ಸ್ಟ್ರೀಟ್: ಇಂಗ್ಲೆಂಡ್ ವಿರುದ್ಧ ಮಹಿಳಾ ಏಕದಿನ ಸರಣಿಯ ಮೂರನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ(INDW vs ENGW) ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಇತಿಹಾಸ ಬರೆದಿದ್ದಾರೆ. ಅವರು ಕೇವಲ 82 ಎಸೆತಗಳಲ್ಲಿ ಶತಕವನ್ನು ಬಾರಿಸುವ ಮೂಲಕ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ನೂತನ ಮಲುಗಲ್ಲು ತಲುಪಿದ್ದಾರೆ. ಇವರ ಭರ್ಜರಿ ಶತಕದ ಬಲದಿಂದ ಭಾರತ ಮಹಿಳಾ ತಂಡ ಪ್ರಥಮ ಇನಿಂಗ್ಸ್‌ನಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕಿತು. ಇವರು ತಮ್ಮ ಮಹಿಳಾ ಏಕದಿನ ವೃತ್ತಿ ಜೀವನದಲ್ಲಿ ಏಳನೇ ಶತಕವನ್ನು ಬಾರಿಸಿದ್ದಾರೆ.
ಮಂಗಳವಾರ ಇಲ್ಲಿ ರಿವರ್ ಸೈಡ್ ಗ್ರೌಂಡ್‌ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡದ ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ನಾಯಕ ಹರ್ಮನ್‌ಪ್ರೀತ್ ಕೌರ್ ಭರ್ಜರಿ ಪ್ರದರ್ಶನವನ್ನು ತೋರಿದರು. ಅವರು ಆಡಿದ 84 ಎಸೆತಗಳಲ್ಲಿ 14 ಮನಮೋಹಕ ಬೌಂಡರಿಗಳೊಂದಿಗೆ 102 ರನ್‌ಗಳನ್ನು ಕಲೆ ಹಾಕಿದರು. ಅವರು 82 ಎಸೆತಗಳಲ್ಲಿಯೇ ಶತಕವನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ ಶತಕ ಬಾರಿಸಿದ ಭಾರತದ ಎರಡನೇ ಆಟಗಾರ್ತಿ ಎಂಬ ದಾಖಲೆಯನ್ನು ಹರ್ಮನ್‌ಪ್ರೀತ್ ಕೌರ್ ಬರೆದಿದ್ದಾರೆ. ಇದು ಇವರ ಏಳನೇ ಶತಕವಾಗಿದೆ. ಆ ಮೂಲಕ ಇಷ್ಟೇ ಶತಕಗಳನ್ನು ಬಾರಿಸಿರುವ ಮಾಜಿ ನಾಯಕ ಮಿಥಾಲಿ ರಾಜ್ ಅವರನ್ನು ಕೌರ್ ಸರಿಗಟ್ಟಿದ್ದಾರೆ. 11 ಏಕದಿನ ಶತಕಗಳನ್ನು ಬಾರಿಸಿರುವ ಸ್ಮೃತಿ ಮಂಧಾನಾ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.
IND vs ENG: ನಾಲ್ಕನೇ ಟೆಸ್ಟ್‌ನಿಂದ ಆಕಾಶ್ ದೀಪ್ ಔಟ್, ಮ್ಯಾಂಚೆಸ್ಟರ್ ಟೆಸ್ಟ್‌ಗೆ ಯುವ ವೇಗಿ!
4000 ರನ್ ಪೂರ್ಣಗೊಳಿಸಿದ ಹರ್ಮನ್‌ಪ್ರೀತ್ ಕೌರ್
ಶತಕದ ಮೂಲಕ ಹರ್ಮನ್‌ಪ್ರೀತ್ ಕೌರ್ ಇನ್ನೂ ಹಲವು ದಾಖಲೆಗಳನ್ನು ಬರೆದಿದ್ದಾರೆ. ಅವರು ಈ ಪಂದ್ಯಕ್ಕೂ ಮುನ್ನ 3967 ರನ್‌ಗಳನ್ನು ಕಲೆ ಹಾಕಿದ್ದರು. ಇದೀಗ ಶತಕದ ಮೂಲಕ ಅವರು ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ 4000 ರನ್‌ಗಳನ್ನು ಪೂರ್ಣಗೊಳಿಸಿದ ಮೂರನೇ ಭಾರತೀಯ ಆಟಗಾರ್ತಿ ಎಂಬ ದಾಖಲೆಯನ್ನು ಬರೆದಿದ್ದಾರೆ. ಮಿಥಾಲಿ ರಾಜ್ (7,805 ರನ್) ಹಾಗೂ ಸ್ಮೃತಿ ಮಂಧಾನಾ (4588 ರನ್) ಅವರು ಇದಕ್ಕೂ ಮುನ್ನ ಈ ಸಾಧನೆಯನ್ನು ಮಾಡಿದ್ದರು. ಅಲ್ಲದೆ ಒಟ್ಟಾರೆಯಾಗಿ ಈ ಸಾಧನೆ ಮಾಡಿದ ವಿಶ್ವದ 17ನೇ ಆಟಗಾರ್ತಿ ಎಂಬ ದಾಖಲೆಯನ್ನು ಅವರು ಬರೆದಿದ್ದಾರೆ.
1⃣0⃣2⃣ runs
— BCCI Women (@BCCIWomen) July 22, 2025
8⃣4⃣ deliveries
1⃣4⃣ fours
A sensational knock by Captain Harmanpreet Kaur in the series decider 💯👏
Updates ▶️ https://t.co/8sa2H24aBL#TeamIndia | #ENGvIND | @ImHarmanpreet pic.twitter.com/jkv2aRLSLL
318 ರನ್‌ಗಳನ್ನು ಕಲೆ ಹಾಕಿದ ಭಾರತ
ಹರ್ಮನ್‌ಪ್ರೀತ್ ಕೌರ್ ಶತಕದ ಬಲದಿಂದ ಭಾರತ ತಂಡ ಮೂರನೇ ಏಕದಿನ ಪಂದ್ಯದಲ್ಲಿ ತನ್ನ ಪಾಲಿನ 50 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 318 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಇಂಗ್ಲೆಂಡ್ ತಂಡಕ್ಕೆ 319 ರನ್‌ಗಳ ಗುರಿಯನ್ನು ನೀಡಿದೆ. ಭಾರತದ ಪರ ಜೆಮಿಮಾ ರೊಡ್ರಿಗಸ್ 50 ರನ್ ಗಳಿಸಿದರೆ, ಸ್ಮೃತಿ ಮಂಧಾನಾ ಹಾಗೂ ಹರ್ಲೀನ್ ಡಿಯೋಲ್ ತಲಾ 45 ರನ್‌ಗಳನ್ನು ಕಲೆ ಹಾಕಿದ್ದರು. ಆರಂಭಿಕ ಎರಡು ಪಂದ್ಯಗಳಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆದ್ದುಕೊಂಡಿದ್ದವು. ಆ ಮೂಲಕ ಸರಣಿಯಲ್ಲಿ ಸದ್ಯ 1-1 ಸಮಬಲ ಕಾಯ್ದುಕೊಂಡಿವೆ. ಇದೀಗ ಮೂರನೇ ಪಂದ್ಯವನ್ನು ಗೆಲ್ಲುವ ತಂಡ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಮುಡಿಗೇರಿಸಿಕೊಳ್ಳಲಿವೆ.