ರೋಹಿತ್, ಕೊಹ್ಲಿ ಭವಿಷ್ಯದ ಬಗ್ಗೆ ಪ್ರಾಮಾಣಿಕ ಅಭಿಪ್ರಾಯ ವ್ಯಕ್ತಪಡಿಸಿದ ಶುಭಮನ್ ಗಿಲ್!
ಆಸ್ಟ್ರೇಲಿಯಾ ವಿರುದ್ಧ ಮೂರನೇ ಹಾಗೂ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಕ್ರಮವಾಗಿ ಶತಕ ಹಾಗೂ ಅರ್ಧಶತಕವನ್ನು ಬಾರಿಸಿದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರ ಭವಿಷ್ಯದ ಬಗ್ಗೆ ಭಾರತ ತಂಡದ ನಾಯಕ ಶುಭಮನ್ ಗಿಲ್ ಪ್ರಾಮಾಣಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಕೊಹ್ಲಿ-ರೋಹಿತ್ ಭವಿಷ್ಯದ ಬಗ್ಗೆ ಗಿಲ್ ಹೇಳಿಕೆ. -
ಸಿಡ್ನಿ: ಇಲ್ಲಿನ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಶನಿವಾರ ನಡೆದಿದ್ದ ಮೂರನೇ ಹಾಗೂ ಏಕದಿನ ಸರಣಿಯ (IND vs AUS) ಕೊನೆಯ ಪಂದ್ಯದಲ್ಲಿ ಕ್ರಮವಾಗಿ ಶತಕ ಹಾಗೂ ಅರ್ಧಶತಕಗಳನ್ನು ಬಾರಿಸಿದ್ದ ಹಿರಿಯ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಅವರ ಭವಿಷ್ಯದ ಬಗ್ಗೆ ಭಾರತ ತಂಡದ ನಾಯಕ ಶುಭಮನ್ ಗಿಲ್ ಪ್ರಾಮಾಣಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಪಂದ್ಯದಲ್ಲಿ ಭಾರತ ತಂಡ 9 ವಿಕೆಟ್‌ಗಳ ಗೆಲುವು ಪಡೆಯುವ ಮೂಲಕ ಏಕದಿನ ಸರಣಿಯನ್ನು ಮುಗಿಸಿತು. ಈ ಪಂದ್ಯವನ್ನು ಗೆದ್ದ ಹೊರತಾಗಿಯೂ ಟೀಮ್ ಇಂಡಿಯಾ ಏಕದಿನ ಸರಣಿಯನ್ನು 1-2 ಅಂತರದಲ್ಲಿ ಕಳೆದುಕೊಂಡಿತು.
ಆಸ್ಟ್ರೇಲಿಯಾ ನೀಡಿದ್ದ 237 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡದ ಪರ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅತ್ಯುತ್ತಮ ಪ್ರದರ್ಶನವನ್ನು ತೋರಿದರು. ಈ ಜೋಡಿ ಮುರಿಯದ ಎರಡನೇ ವಿಕೆಟ್‌ಗೆ 178 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಭಾರತದ ಗೆಲುವಿಗೆ ನೆರವು ನೀಡಿತ್ತು. ರೋಹಿತ್ ಶರ್ಮಾ 125 ಎಸೆತಗಳಲ್ಲಿ ಅಜೇಯ 121 ರನ್‌ಗಳನ್ನು ಗಳಿಸಿದ್ದರು. ಆ ಮೂಲಕ ತಮ್ಮ ಒಡಿಐ ವೃತ್ತಿ ಜೀವನದಲ್ಲಿ 33ನೇ ಶತಕವನ್ನು ಬಾರಿಸಿದರು. ಇನ್ನು ವಿರಾಟ್ ಕೊಹ್ಲಿ 81 ಎಸೆತಗಳಲ್ಲಿ ಅಜೇಯ 74 ರನ್‌ಗಳನ್ನು ಗಳಿಸಿದರು.
IND vs AUS: ಶ್ರೇಯಸ್ ಅಯ್ಯರ್ ಗಾಯದ ಬಗ್ಗೆ ಬಿಗ್ ಅಪ್‌ಡೇಟ್ ನೀಡಿದ ಬಿಸಿಸಿಐ!
ಈ ಸರಣಿಯ ಆರಂಭಿಕ ಪಂದ್ಯದಲ್ಲಿ ವಿಫಲರಾದ ಬಳಿಕ ರೋಹಿತ್ ಶರ್ಮಾ ಅವರ ಒಡಿಐ ಭವಿಷ್ಯ ಬಹುತೇಕ ಮುಗಿದಂತೆ ಎಂದು ಚರ್ಚೆಗಳು ನೆಡಯುತ್ತಿದ್ದವು. ಆದರೆ, ಎರಡನೇ ಪಂದ್ಯದಲ್ಲಿ ಅರ್ಧಶತಕ ಮತ್ತು ಮೂರನೇ ಪಂದ್ಯದಲ್ಲಿ ಶತಕದ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಅಲ್ಲದೆ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರು ಟಿ20ಐ ಹಾಗೂ ಟೆಸ್ಟ್ ಕ್ರಿಕೆಟ್‌ಗೆ ಈಗಾಗಲೇ ವಿದಾಯ ಹೇಳಿದ್ದಾರೆ. ಇದೀಗ ಅವರು ಕೇವಲ 50 ಓವರ್‌ಗಳ ಸ್ವರೂಪದಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. ಆ ಮೂಲಕ 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡಲು ಇವರು ಬಯಸುತ್ತಿದ್ದಾರೆ.
ಆದರೆ, ಈ ಇಬ್ಬರಿಗೂ ಗೇಮ್ ಟೈಮ್ ಕೊರತೆ ಎದುರಾಗಿದೆ. ಆಸ್ಟ್ರೇಲಿಯಾ ಸರಣಿಯ ಬಳಿಕ ಭಾರತ ತಂಡಕ್ಕೆ ನವೆಂಬರ್ ಅಂತ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಮೂರು ಪಂದ್ಯಗಳ ತವರಿನಲ್ಲಿ ಏಕದಿನ ಸರಣಿಯನ್ನು ಆಡಲಿದೆ. ಅಲ್ಲಿಯವರೆಗೂ ಈ ಆಟಗಾರರಿಗೆ ಅಂತರವಿದೆ. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಎ ವಿರುದ್ದ ಭಾರತ ಎ ಏಕದಿನ ಸರಣಿಯನ್ನು ಆಡಲಿದೆ. ನಂತರ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೂ ಮುನ್ನ ವಿಜಯ್ ಹಝಾರೆ ಟ್ರೋಫಿ ಟೂರ್ನಿ ಕೂಡ ಇದೆ. ಇದರಲ್ಲಿ ಇವರು ಆಡುವ ಬಗ್ಗೆ ಇನ್ನೂ ಯಾವುದೇ ಮಾಹಿತಿ ಇಲ್ಲ.
IND vs AUS: ಅರ್ಧಶತಕ ಬಾರಿಸಿ ಕುಮಾರ ಸಂಗಕ್ಕಾರ ದಾಖಲೆ ಮುರಿದ ವಿರಾಟ್ ಕೊಹ್ಲಿ!
ಮೂರನೇ ಏಕದಿನ ಪಂದ್ಯದ ಬಳಿಕ ಮಾತನಾಡಿದ ಶುಭಮನ್ ಗಿಲ್, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಭವಿಷ್ಯದ ಬಗ್ಗೆ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. "ಇಲ್ಲಿಯವರೆಗೂ ಇದರ ಬಗ್ಗೆ ಯಾವುದೇ ಸಂಭಾಷಣೆ ನಡೆದಿಲ್ಲ. ದಕ್ಷಿಣ ಆಫ್ರಿಕಾ ಸರಣಿಗೆ ಹೆಚ್ಚಿನ ಅಂತರವಿಲ್ಲ. ಆದರೆ, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ಸರಣಿಗಳಿಗೆ ಸ್ವಲ್ಪ ಜಾಸ್ತಿ ಅಂತರವಿದೆ. ದಕ್ಷಿಣ ಆಫ್ರಿಕಾ ಸರಣಿಯ ಬಳಿಕ ಇದರ ಬಗ್ಗೆ ನಾವು ಚರ್ಚೆ ನಡೆಸುತ್ತೇವೆ," ಎಂದು ಹೇಳಿದ್ದಾರೆ.