Shreyas Iyer: ಶ್ರೇಯಸ್ ಅಯ್ಯರ್ ಆರೋಗ್ಯ ಸ್ಥಿತಿ ಹೇಗಿದೆ?; ಬಿಸಿಸಿಐ ನೀಡಿದ ಅಪ್ಡೇಟ್ ಇಲ್ಲಿದೆ
Shreyas Iyer Injury Updates: "ಅಯ್ಯರ್ ಅವರ ಎಡ ಪಕ್ಕೆಲುಬಿನ ಬಳಿ ಗಾಯವಾಗಿತ್ತು. ಹೆಚ್ಚಿನ ಪರೀಕ್ಷೆಗಳಿಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಕ್ಯಾನಿಂಗ್ ಮಾಡಿದಾಗ ಅವರ ಗುಲ್ಮದಲ್ಲಿ ಗಾಯವಾಗಿರುವುದು ಪತ್ತೆಯಾಗಿದೆ. ಚಿಕಿತ್ಸೆ ಪಡೆಯುತ್ತಿರುವ ಶ್ರೇಯಸ್ ಅವರ ಆರೋಗ್ಯದಲ್ಲಿ ಈಗ ಸುಧಾರಣೆ ಕಂಡುಬಂದಿದ್ದು, ಆತಂಕಪಡುವ ಅಗತ್ಯವಿಲ್ಲ" ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.
-
Abhilash BC
Oct 28, 2025 8:42 AM
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಗಾಯಗೊಂಡಿದ್ದ ಶ್ರೇಯಸ್ ಅಯ್ಯರ್(Shreyas Iyer) ಅವರನ್ನು ತೀವ್ರ ನಿಗಾ ಘಟಕದಿಂದ (ಐಸಿಯು) ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ. ಶ್ರೇಯಸ್ ಅವರ ಆರೋಗ್ಯದ ಬಗ್ಗೆ ಚಿಂತಿಸುವ(Shreyas Iyer Injury Updates) ಅಗತ್ಯವಿಲ್ಲ ಎಂದು ಬಿಸಿಸಿಐ ಹೇಳಿದೆ. ವೈದ್ಯರ ನಿಗಾದಲ್ಲಿರುವ ಶ್ರೇಯಸ್, ಇನ್ನೂ ಒಂದು ವಾರ ಸಿಡ್ನಿಯ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ. ಈ ಮಧ್ಯೆ, ಶ್ರೇಯಸ್ ಅವರ ಪೋಷಕರು ಸಿಡ್ನಿಗೆ ಬರಲು ತುರ್ತು ವೀಸಾಗಾಗಿ ಬಿಸಿಸಿಐ ಸಂಪರ್ಕಿಸಿದ್ದಾರೆ.
ಶನಿವಾರ ಸಿಡ್ನಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬ್ಯಾಟರ್ ಅಲೆಕ್ಸ್ ಕ್ಯಾರಿ ಅವರನ್ನು ಔಟ್ ಮಾಡಲು ಹಿಂದಕ್ಕೆ ಓಡಿ ಕ್ಯಾಚ್ ತೆಗೆದುಕೊಳ್ಳುವಾಗ ಶ್ರೇಯಸ್‌ಗೆ ಗಾಯವಾಗಿತ್ತು. ಶ್ರೇಯಸ್ ಜಾರಿ ಬಿದ್ದು ಪಕ್ಕೆಲುಬಿಗೆ ಗಾಯ ಮಾಡಿಕೊಂಡರು. ಹೀಗಾಗಿ ಶ್ರೇಯಸ್ ಅಯ್ಯರ್ ತಕ್ಷಣವೇ ಮೈದಾನ ತೊರೆದಿದ್ದರು.
Medical update on Shreyas Iyer. Details 🔽 #TeamIndia | #AUSvIND https://t.co/8LTbv7G1xy
— BCCI (@BCCI) October 27, 2025
ಡ್ರೆಸ್ಸಿಂಗ್ ರೂಮ್‌ಗೆ ಬಂದ ನಂತರ ರಕ್ತದೊತ್ತಡ ಕಡಿಮೆಯಾದ ಕಾರಣ ಅವರನ್ನು ಹೆಚ್ಚಿನ ಪರೀಕ್ಷೆಗಳಿಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಆಂತರಿಕ ರಕ್ತಸ್ರಾವ ಪತ್ತೆಯಾಯಿತು. ಈ ಹಿನ್ನೆಲೆಯಲ್ಲಿ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಯಿತು. ಶ್ರೇಯಸ್ ಅವರ ಆರೋಗ್ಯದ ಬಗ್ಗೆ ವರದಿಗಳು ಪ್ರಕಟಗೊಳ್ಳುತ್ತಿದ್ದಂತೆ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ್ದವು. ಸದ್ಯ ಅವರು ಚೇತರಿಕೆ ಕಾಣುತ್ತಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
ಇದನ್ನೂ ಓದಿ ರೋಹಿತ್, ಕೊಹ್ಲಿ ಔಟ್! 2027ರ ಏಕದಿನ ವಿಶ್ವಕಪ್‌ಗೆ ಭಾರತದ ಪ್ಲೇಯಿಂಗ್ ಆರಿಸಿದ ChatGPT!
ಬಿಸಿಸಿಐ ಹೇಳಿದ್ದೇನು?
"ಅಯ್ಯರ್ ಅವರ ಎಡ ಪಕ್ಕೆಲುಬಿನ ಬಳಿ ಗಾಯವಾಗಿತ್ತು. ಹೆಚ್ಚಿನ ಪರೀಕ್ಷೆಗಳಿಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಕ್ಯಾನಿಂಗ್ ಮಾಡಿದಾಗ ಅವರ ಗುಲ್ಮದಲ್ಲಿ ಗಾಯವಾಗಿರುವುದು ಪತ್ತೆಯಾಗಿದೆ. ಚಿಕಿತ್ಸೆ ಪಡೆಯುತ್ತಿರುವ ಶ್ರೇಯಸ್ ಅವರ ಆರೋಗ್ಯದಲ್ಲಿ ಈಗ ಸುಧಾರಣೆ ಕಂಡುಬಂದಿದ್ದು, ಆತಂಕಪಡುವ ಅಗತ್ಯವಿಲ್ಲ" ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.