Asian Games 2026: ಹೈಜಂಪ್‌ನಲ್ಲಿ ಪೂಜಾ ಸಿಂಗ್‌ಗೆ ಕಂಚು; 24 ವರ್ಷಗಳ ಬಳಿಕ ಭಾರತಕ್ಕೆ ಪದಕ!
2026ರ ಏಷ್ಯಾ ಕ್ರೀಡಾಕೂಟದ ಮಹಿಳೆಯರ ಹೈಜಂಪ್ ಸ್ಪರ್ಧೆಯಲ್ಲಿ ಭಾರತದ ಪೂಜಾ ಸಿಂಗ್ 1.84 ಮೀಟರ್ ಎತ್ತರ ಜಿಗಿದು ಕಂಚಿನ ಪದಕ ಗೆದ್ದಿದ್ದಾರೆ. 24 ವರ್ಷಗಳ ಬಳಿಕ ಈ ವಿಭಾಗದಲ್ಲಿ ಭಾರತಕ್ಕೆ ಪದಕ ಒಲಿದಿದ್ದು, ಪೂಜಾ ಅವರ ಸಾಧನೆ ಭಾರತೀಯ ಅಥ್ಲೆಟಿಕ್ಸ್‌ಗೆ ಮತ್ತಷ್ಟು ಹೆಮ್ಮೆ ತಂದಿದೆ.
ಏಷ್ಯಾ ಕ್ರೀಡಾಕೂಟದ ಹೈಜಂಪ್‌ನಲ್ಲಿ ಕಂಚು ಗೆದ್ದ ಪೂಜಾ ಸಿಂಗ್. -
ನವದೆಹಲಿ: ಜಪಾನ್ ಆತಿಥ್ಯದಲ್ಲಿ ನಡೆಯುತ್ತಿರುವ 2026ರ ಏಷ್ಯಾ ಕ್ರೀಡಾಕೂಟದ (Asian Games 2026) ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಭಾರತಕ್ಕೆ ಮತ್ತೊಂದು ಪದಕ ಸೇರ್ಪಡೆಯಾಗಿದೆ. ಮಹಿಳೆಯರ ಹೈಜಂಪ್ ವಿಭಾಗದಲ್ಲಿ ಭಾರತದ ಯುವ ಅಥ್ಲಿಟ್ ಪೂಜಾ ಸಿಂಗ್ (Pooja Singh) ಕಂಚಿನ ಪದಕ ಗೆದ್ದು ಗಮನಾರ್ಹ ಸಾಧನೆ ಮಾಡಿದ್ದಾರೆ. ಮಂಗಳವಾರ ನಡೆದಿದ್ದ ಫೈನಲ್‌ನಲ್ಲಿ ಪೂಜಾ 1.84 ಮೀಟರ್ ಎತ್ತರವನ್ನು ಯಶಸ್ವಿಯಾಗಿ ಜಿಗಿದು ಮೂರನೇ ಸ್ಥಾನ ಪಡೆದರು.
ಪೂಜಾ ತಮ್ಮ ಆರಂಭಿಕ ಪ್ರಯತ್ನಗಳಲ್ಲಿ ಉತ್ತಮ ಸ್ಥಿರತೆ ತೋರಿದರು. 1.84 ಮೀಟರ್‌ವರೆಗಿನ ಎಲ್ಲಾ ಎತ್ತರಗಳನ್ನು ಅವರು ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿ ದಾಟಿದರು. ಇದೇ ಕಾರಣದಿಂದ ಸಮಾನ ಎತ್ತರ ದಾಖಲಿಸಿದ ಇತರ ಸ್ಪರ್ಧಿಗಳಿಗಿಂತ ಕಡಿಮೆ ಪ್ರಯತ್ನಗಳಲ್ಲಿ ಗುರಿ ಸಾಧಿಸಿದ ಪೂಜಾ, ಕೌಂಟ್‌ಬ್ಯಾಕ್ ನಿಯಮದ ಆಧಾರದಲ್ಲಿ ಕಂಚಿನ ಪದಕಕ್ಕೆ ಅರ್ಹರಾದರು.
Asian Games 2026: 5000 ಮೀಟರ್ ಓಟದಲ್ಲಿ ಕಂಚು, ಗುಲ್ವೀರ್ ಸಿಂಗ್ ಹ್ಯಾಟ್ರಿಕ್ ಸಾಧನೆ!
ಉಜ್ಬೇಕಿಸ್ತಾನದ ಬಾರ್ನೊಖೋನ್ ಸೈಫುಲ್ಲಾಯೇವಾ 1.90 ಮೀಟರ್ ಜಿಗಿದು ಚಿನ್ನದ ಪದಕ ಗೆದ್ದರು. ಕಜಕಿಸ್ತಾನದ ಕ್ರಿಸ್ಟಿನಾ ಒವ್ಚಿನ್ನಿಕೋವಾ 1.87 ಮೀಟರ್ ಜಿಗಿದು ಬೆಳ್ಳಿ ಪದಕ ಪಡೆದರು. ಪೂಜಾ 1.87 ಮೀಟರ್ ಎತ್ತರವನ್ನು ಮೂರು ಪ್ರಯತ್ನಗಳಲ್ಲೂ ದಾಟಲು ಸಾಧ್ಯವಾಗಲಿಲ್ಲ. ಹೀಗಾಗಿ 1.84 ಮೀಟರ್ ಅವರ ಅತ್ಯುತ್ತಮ ಪ್ರಯತ್ನವಾಗಿ ಉಳಿಯಿತು.
ಈ ಪದಕ ಪೂಜಾ ಅವರ ಬೆಳೆಯುತ್ತಿರುವ ವೃತ್ತಿಜೀವನಕ್ಕೆ ಮತ್ತೊಂದು ಮಹತ್ವದ ಸೇರ್ಪಡೆಯಾಗಿದೆ. 19ರ ವಯಸ್ಸಿನ ಪೂಜಾ ಪ್ರಸ್ತುತ ಮಹಿಳೆಯರ ಹೈಜಂಪ್‌ನಲ್ಲಿ ಭಾರತದ ರಾಷ್ಟ್ರೀಯ ದಾಖಲೆ ಹೊಂದಿದ್ದಾರೆ. 2026ರ ಏಷ್ಯನ್ ಅಂಡರ್-20 ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಅವರು 1.93 ಮೀಟರ್ ಜಿಗಿದು ಸಹನಾ ಕುಮಾರಿ ಅವರ 14 ವರ್ಷಗಳ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದರು. ಇದೇ ವೇಳೆ, ಮತ್ತೊಬ್ಬ ಭಾರತೀಯ ಸ್ಪರ್ಧಿ ಸುಪ್ರಿಯಾ ಬಸವರಾಜು 1.75 ಮೀಟರ್ ಅತ್ಯುತ್ತಮ ಪ್ರಯತ್ನದೊಂದಿಗೆ 12ನೇ ಸ್ಥಾನ ಪಡೆದರು.
Rising to the Occasion!
— Kiren Rijiju (@KirenRijiju) September 29, 2026
Congratulations to Pooja on winning the Bronze Medal in the Women’s High Jump at the #AsianGames2026.
A proud podium finish for Indian athletics!#Cheer4Bharat pic.twitter.com/xx4r1bWtLO
ಪೂಜಾ ಅವರ ಕಂಚಿನ ಪದಕಕ್ಕೆ ಐತಿಹಾಸಿಕ ಮಹತ್ವವೂ ಇದೆ. 2002ರ ಏಷ್ಯನ್ ಗೇಮ್ಸ್‌ನಲ್ಲಿ ಬಾಬಿ ಅಲೋಸಿಯಸ್ ಬೆಳ್ಳಿ ಗೆದ್ದ ಬಳಿಕ, ಮಹಿಳೆಯರ ಹೈಜಂಪ್‌ನಲ್ಲಿ ಭಾರತಕ್ಕೆ ದೊರೆತ ಮೊದಲ ಏಷ್ಯನ್ ಗೇಮ್ಸ್ ಪದಕ ಇದಾಗಿದೆ. ಅಂದರೆ ಬರೋಬ್ಬರಿ 24 ವರ್ಷಗಳ ಬಳಿಕ ಈ ವಿಭಾಗದಲ್ಲಿ ಭಾರತ ಮತ್ತೊಮ್ಮೆ ಪೋಡಿಯಂ ಸ್ಥಾನ ಪಡೆದಿದೆ.
ಪೂಜಾ ಅವರ ಕಂಚಿನ ಪದಕದೊಂದಿಗೆ ಏಷ್ಯನ್ ಗೇಮ್ಸ್ 2026ರ ಅಥ್ಲೆಟಿಕ್ಸ್‌ನಲ್ಲಿ ಭಾರತದ ಪದಕದ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಇದೇ ದಿನ ಮಹಿಳೆಯರ 4x400 ಮೀಟರ್ ರಿಲೇಯಲ್ಲಿ ಭಾರತ ಚಿನ್ನ, ಪುರುಷರ 4x400 ಮೀಟರ್ ರಿಲೇಯಲ್ಲಿ ಕಂಚು ಗೆದ್ದಿದ್ದು, ಗುಲ್ವೀರ್ ಸಿಂಗ್ 5000 ಮೀಟರ್‌ನಲ್ಲಿ ಕಂಚು ಹಾಗೂ ಮಿಶ್ರ 4x100 ಮೀಟರ್ ರಿಲೇ ತಂಡವೂ ಕಂಚಿನ ಪದಕ ಗೆದ್ದಿದೆ.