Asian Games 2026: ಐತಿಹಾಸಿಕ ಕಂಚಿನ ಪದಕ ಗೆದ್ದ ಬರನಿಕಾ ಎಳಂಗೋವನ್!
ಏಷ್ಯಾ ಕ್ರೀಡಾಕೂಟದ ಮಹಿಳಾ ಪೋಲ್ ವಾಲ್ಟ್ ಫೈನಲ್‌ನಲ್ಲಿ ಭಾರತದ ಬರನಿಕಾ ಎಳಂಗೋವನ್ ಐತಿಹಾಸಿಕ ಕಂಚಿನ ಪದಕ ಗೆದ್ದಿದ್ದಾರೆ. ಈ ಸಾಧನೆಯ ಮೂಲಕ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಸೇರ್ಪಡೆಯಾಗಿದೆ. ಬರನಿಕಾ ಅವರ ಈ ಪ್ರದರ್ಶನ ಭಾರತೀಯ ಕ್ರೀಡಾಭಿಮಾನಿಗಳ ಗಮನ ಸೆಳೆದಿದೆ.
ಭಾರತಕ್ಕೆ ಮೊಟ್ಟ ಮೊದಲ ಪೋಲ್ ವಾಲ್ಟ್ ಪದಕ ಗೆದ್ದುಕೊಟ್ಟ ಬರನಿಕಾ ಎಳಂಗೋವನ್. -
ನವದೆಹಲಿ: ಜಪಾನ್ ಆತಿಥ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ 2026ರ ಏಷ್ಯಾ ಕ್ರೀಡಾಕೂಟದಲ್ಲಿ (Asian Games) ಭಾರತಕ್ಕೆ ಅಥ್ಲೆಟಿಕ್ಸ್‌ನಲ್ಲಿ ಮತ್ತೊಂದು ಐತಿಹಾಸಿಕ ಪದಕ ಲಭಿಸಿದೆ. ತಮಿಳುನಾಡಿನ ಬರನಿಕಾ ಎಳಂಗೋವನ್ (Baranica Elangovan) ಶುಕ್ರವಾರ ಮಹಿಳೆಯರ ಪೋಲ್ ವಾಲ್ಟ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ದಾಖಲೆ ಬರೆದಿದ್ದಾರೆ. ಇದು ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಮಹಿಳೆಯರ ಪೋಲ್ ವಾಲ್ಟ್‌ನಲ್ಲಿ ಭಾರತ ಗೆದ್ದ ಮೊದಲ ಪದಕವಾಗಿದೆ.
29ರ ವಯಸ್ಸಿನ ಬರನಿಕಾ 4.15 ಮೀಟರ್‌ಗಳ ಅತ್ಯುತ್ತಮ ಕ್ಲಿಯರೆನ್ಸ್ ದಾಖಲಿಸಿದರು. ಕಜಕಿಸ್ತಾನದ ಪೊಲಿನಾ ಇವಾನೋವಾ ಕೂಡ 4.15 ಮೀಟರ್‌ಗಳನ್ನೇ ಕ್ರಮಿಸಿ, 4.25 ಮೀಟರ್‌ನಲ್ಲಿ ಇಬ್ಬರೂ ಸಮಾನ ಸಂಖ್ಯೆಯ ವೈಫಲ್ಯಗಳನ್ನು ದಾಖಲಿಸಿದ್ದರಿಂದ ಇಬ್ಬರಿಗೂ ಜಂಟಿಯಾಗಿ ಕಂಚಿನ ಪದಕ ನೀಡಲಾಯಿತು.
Asian Games 2026: 10,000 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಗೆದ್ದ ಗುಲ್ವೀರ್ ಸಿಂಗ್!
ಜಪಾನ್‌ಗೆ ಚಿನ್ನ, ಚೀನಾಗೆ ಬೆಳ್ಳಿ
ಮಹಿಳೆಯರ ಪೋಲ್ ವಾಲ್ಟ್‌ನಲ್ಲಿ ಜಪಾನ್‌ನ ಮಿಸಾಕಿ ಮೊರೊಟಾ 4.55 ಮೀಟರ್‌ಗಳ ವೈಯಕ್ತಿಕ ಶ್ರೇಷ್ಠ ಪ್ರದರ್ಶನದೊಂದಿಗೆ ಚಿನ್ನದ ಪದಕ ಗೆದ್ದರು. ಚೀನಾದ ಚುಂಗೆ ನಿಯು 4.50 ಮೀಟರ್‌ಗಳ ಸಾಧನೆಯೊಂದಿಗೆ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಬರನಿಕಾ ಅವರ 4.15 ಮೀಟರ್‌ಗಳ ಸಾಧನೆ ವೈಯಕ್ತಿಕ ಶ್ರೇಷ್ಠ ಪ್ರದರ್ಶನಕ್ಕಿಂತ ಕಡಿಮೆಯಾಗಿದ್ದರೂ, ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಐತಿಹಾಸಿಕ ಪದಕ ತಂದುಕೊಡಲು ಸಾಕಾಯಿತು.
ಪ್ರಸಕ್ತ ವರ್ಷವೇ ರಾಷ್ಟ್ರೀಯ ದಾಖಲೆ
2026ರಲ್ಲಿ ಬರನಿಕಾ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಮಾರ್ಚ್‌ನಲ್ಲಿ ಭುವನೇಶ್ವರದಲ್ಲಿ ನಡೆದಿದ್ದ ನ್ಯಾಷನಲ್ ಇಂಡೋರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 4.22 ಮೀಟರ್ ಎತ್ತರವನ್ನು ಕ್ರಮಿಸಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು. ನಂತರ ಮೇ ತಿಂಗಳಲ್ಲಿ ನಡೆದಿದ್ದ ಇಂಡಿಯನ್ ಇಂಡೋರ್ ಓಪನ್ ಕಾಂಬೈನ್ಡ್ ಈವೆಂಟ್ಸ್ ಮತ್ತು ಪೋಲ್ ವಾಲ್ಟ್ ಸ್ಪರ್ಧೆಯಲ್ಲಿ 4.23 ಮೀಟರ್ ಕ್ರಮಿಸುವ ಮೂಲಕ ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಮತ್ತಷ್ಟು ಉತ್ತಮಪಡಿಸಿಕೊಂಡರು. ಇದಲ್ಲದೆ, ಈ ವರ್ಷದ 65ನೇ ನ್ಯಾಷನಲ್ ಇಂಟರ್-ಸ್ಟೇಟ್ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 4.20 ಮೀಟರ್ ಸಾಧನೆಯೊಂದಿಗೆ ಚಿನ್ನದ ಪದಕ ಗೆದ್ದಿದ್ದರು.
History made in Pole Vault!
— Kiren Rijiju (@KirenRijiju) September 25, 2026
Heartiest congratulations to Baranica Elangovan on securing Bronze Medal at the #AsianGames2026.
She becomes India’s first-ever Asian Games medallist in Pole Vault.#Cheer4Bharat pic.twitter.com/4r9GB90Q2E
ಗಾಯದ ಬಳಿಕ ಭರ್ಜರಿ ಕಂಬ್ಯಾಕ್
ಬರನಿಕಾ ಅವರ ಈ ಪದಕದ ಹಿಂದೆ ಕಠಿಣ ಹೋರಾಟದ ಕಥೆ ಇದೆ. 2020ರಲ್ಲಿ ಅವರಿಗೆ ಎಸಿಎಲ್ ಗಾಯವಾಗಿತ್ತು. ಇದರ ಬಳಿಕ ಅವರು ದೀರ್ಘಕಾಲ ಪುರ್ನಶ್ಚೇತನ ಪ್ರಕ್ರಿಯೆಯನ್ನು ನಡೆಸಿದ್ದರು. 2023ರಲ್ಲಿ ಭುವನೇಶ್ವರದ ರಿಲಯನ್ಸ್ ಫೌಂಡೇಶನ್ ಹೈ ಪರ್ಫಾರ್ಮೆನ್ಸ್ ಸೆಂಟರ್‌ಗೆ ಸ್ಥಳಾಂತರಗೊಂಡು ತರಬೇತಿ ಮುಂದುವರಿಸಿದರು. ಗಾಯದಿಂದ ಚೇತರಿಸಿಕೊಂಡ ಬಳಿಕ ರಾಷ್ಟ್ರೀಯ ದಾಖಲೆಯನ್ನು ಮುರಿದು ಇದೀಗ ಏಷ್ಯನ್ ಗೇಮ್ಸ್‌ನಲ್ಲಿ ಐತಿಹಾಸಿಕ ಪದಕ ಗೆದ್ದಿರುವುದು ಅವರ ಕ್ರೀಡಾ ಜೀವನದ ಮಹತ್ವದ ಸಾಧನೆಯಾಗಿದೆ.
ಗುಲ್ವೀರ್ ಸಿಂಗ್‌ಗೆ ಬೆಳ್ಳಿ
ಬರನಿಕಾ ಅವರ ಕಂಚಿನ ಪದಕಕ್ಕೂ ಕೆಲವೇ ನಿಮಿಷಗಳ ಮೊದಲು ಭಾರತದ ಡಿಸ್ಟೆನ್ಸ್ ರನ್ನರ್ ಗುಲ್ವೀರ್ ಸಿಂಗ್ ಪುರುಷರ 10,000 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಗುಲ್ವೀರ್ 28:29.38 ನಿಮಿಷಗಳಲ್ಲಿ ಓಟ ಪೂರ್ಣಗೊಳಿಸಿ ಎರಡನೇ ಸ್ಥಾನ ಪಡೆದರು. ಈ ಮೂಲಕ ಕಳೆದ ಏಷ್ಯನ್ ಗೇಮ್ಸ್‌ನಲ್ಲಿ ಗೆದ್ದಿದ್ದ ಕಂಚಿನ ಪದಕವನ್ನು ಬೆಳ್ಳಿಗೆ ಮೇಲ್ದರ್ಜೆಗೇರಿಸಿದರು.
2026ರ ಬೆಂಗಳೂರು ಓಪನ್ ಗಾಲ್ಪ್ ಟೂರ್ನಿ ಗೆದ್ದ ಸ್ಥಳೀಯ ಖಲೀನ್ ಜೋಶಿ!
ಬಹ್ರೇನ್‌ನ ಬಿರ್ಹಾನು ಬಲೆವ್ 28:27.51 ನಿಮಿಷಗಳಲ್ಲಿ ಓಟ ಪೂರ್ಣಗೊಳಿಸಿ ಚಿನ್ನದ ಪದಕ ಗೆದ್ದರೆ, ಬಹ್ರೇನ್‌ನ ಮತ್ತೊಬ್ಬ ಅಥ್ಲೀಟ್ ಆಲ್ಬರ್ಟ್ ಕಿಪ್ಟೋ 28:34.18 ನಿಮಿಷಗಳಲ್ಲಿ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಗೆದ್ದರು. ಹೀಗಾಗಿ ಬರನಿಕಾ ಎಳಂಗೋವನ್ ಮತ್ತು ಗುಲ್ವೀರ್ ಸಿಂಗ್ ಅವರ ಪದಕಗಳೊಂದಿಗೆ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಅಥ್ಲೆಟಿಕ್ಸ್ ಪಡೆ ಮತ್ತಷ್ಟು ಬಲಿಷ್ಠ ಪ್ರದರ್ಶನ ನೀಡಿದೆ.