Arshad Nadeem: ಜಾವೆಲಿನ್ ತಾರೆ ಅರ್ಷದ್ ನದೀಮ್ ಇನ್‌ಸ್ಟಾಗ್ರಾಂ ಖಾತೆಗೆ ಭಾರತದಲ್ಲಿ ನಿರ್ಬಂಧ
ನದೀಮ್ ಉಗ್ರ ದಾಳಿಯ ಕುರಿತು ಯಾವುದೇ ಪೋಸ್ಟ್ ಅಥವಾ ಪ್ರತಿಕ್ರಿಯೆ ನೀಡದಿದ್ದರೂ ಅವರ ಇನ್‌ಸ್ಟಾಗ್ರಾಂ ಖಾತೆಯನ್ನು ತೆರೆದಾಗ 'ಕಾನೂನು ಸೂಚನೆಯ ಮೇರೆಗೆ ಖಾತೆ ತಡೆಹಿಡಿಯಲಾಗಿದೆ' ಎಂದು ತೋರಿಸುತ್ತಿದೆ. ಇದಕ್ಕೂ ಮುನ್ನ ಕ್ರಿಕೆಟಿಗ ಶೋಯೆಬ್ ಅಖ್ತರ್, ಶಾಹೀದ್ ಅಫ್ರಿದಿ ಅವರ ಯೂಟ್ಯೂಬ್ ಚಾನೆಲ್‌ಗಳನ್ನು ನಿಷೇಧಿಸಲಾಗಿತ್ತು.


ನವದೆಹಲಿ: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕ್ ಭಯೋತ್ಪಾದಕರ ದಾಳಿಯಲ್ಲಿ(Pahalgam terror attack) 26 ಪ್ರವಾಸಿಗರು ಸಾವನ್ನಪ್ಪಿದ ಘಟನೆಯ ನಂತರ ಭಾರತ ಮತ್ತು ಪಾಕ್ ನಡುವೆ ಯುದ್ಧಾರಂಭದ(india-pakistan war) ಸಂಘರ್ಷ ಹೆಚ್ಚಾಗತೊಡಗಿದೆ. ಭಾರತದ ಬಗ್ಗೆ 'ಸುಳ್ಳು, ಪ್ರಚೋದನಕಾರಿ ಮತ್ತು ಕೋಮು ಭಾವನೆ ಕೆರಳಿಸುವ' ಸುದ್ದಿಗಳನ್ನು ಪ್ರಸಾರ ಮಾಡಿದ ಆರೋಪದ ಮೇಲೆ ಪಾಕಿಸ್ತಾನದ 16 ಯೂಟ್ಯೂಬ್ ಚಾನೆಲ್‌ಗಳನ್ನು ಈಗಾಗಲೇ ಕೇಂದ್ರ ಸರ್ಕಾರ ನಿಷೇಧಿಸಿದೆ. ಇದೀಗ ಪ್ಯಾರಿಸ್ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಪಾಕಿಸ್ತಾನದ, ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್(Arshad Nadeem) ಅವರ ಇನ್‌ಸ್ಟಾಗ್ರಾಮ್ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ.
ನದೀಮ್ ದಾಳಿಯ ಕುರಿತು ಯಾವುದೇ ಪೋಸ್ಟ್ ಅಥವಾ ಪ್ರತಿಕ್ರಿಯೆ ನೀಡದಿದ್ದರೂ ಅವರ ಇನ್‌ಸ್ಟಾಗ್ರಾಂ ಖಾತೆಯನ್ನು ತೆರೆದಾಗ 'ಕಾನೂನು ಸೂಚನೆಯ ಮೇರೆಗೆ ಖಾತೆ ತಡೆಹಿಡಿಯಲಾಗಿದೆ' ಎಂದು ತೋರಿಸುತ್ತಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಮೇ 24ರಂದು ನಡೆಯಲಿರುವ ಚೊಚ್ಚಲ ಎನ್‌ಸಿ ಕ್ಲಾಸಿಕ್ ಜಾವೆಲಿನ್ ಕೂಟಕ್ಕೆ ಪಾಕಿಸ್ತಾನದ ಅಥ್ಲೀಟ್ ಅರ್ಷದ್ ನದೀಮ್ ಅವರನ್ನು ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ ಆಹ್ವಾನಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಆದರೆ ಆಹ್ವಾನವನ್ನು ನದೀಂ ತಿರಸ್ಕರಿಸಿದ್ದರು.
ಕ್ರಿಕೆಟಿಗ ಶೋಯೆಬ್ ಅಖ್ತರ್, ಶಾಹೀದ್ ಅಫ್ರಿದಿ ಅವರ ಯೂಟ್ಯೂಬ್ ಚಾನೆಲ್‌ಗಳು ಆರಂಭಿಕ ಹಂತದಲ್ಲಿ ನಿಷೇಧಿಸಲಾಗಿತ್ತು. ಇದೀಗ ನದೀಮ್ ಅವರ ಇನ್‌ಸ್ಟಾಗ್ರಾಮ್ ಖಾತೆಯನ್ನು ನಿರ್ಬಂಧಿಸಲಾಗಿದೆ.
ಯಾವುದೇ ಕ್ಷಣದಲ್ಲೂ ಭಾರತ ಪ್ರತಿ ದಾಳಿ ಸಾಧ್ಯತೆ!
ಏಪ್ರಿಲ್ 22ರ ದಾಳಿಗೆ ಪ್ರತೀಕಾರವಾಗಿ ಈಗಾಗಲೇ ಭಾರತ ಸಿಂಧು ನದಿ ಒಪ್ಪಂದವನ್ನು ಅಮಾನತು ಮಾಡಿದ್ದು, ಅಟ್ಟಾರಿ ಗಡಿ ಬಂದ್, ರಾಯಭಾರಿಗಳ ಸಂಖ್ಯೆ ಕಡಿತ ಸೇರಿದಂತೆ ಹಲವು ಕಠಿನ ನಿರ್ಧಾರಗಳನ್ನು ತೆಗೆದುಕೊಂಡಿದೆ. ಗಡಿಭಾಗದಲ್ಲಿ ತೀವ್ರ ಸೇನಾ ಚಟುವಟಿಕೆಗಳು ನಡೆಯುತ್ತಿದ್ದು, ಪಾಕಿಸ್ತಾನ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸುವ ಮೂಲಕ ಪ್ರಚೋದಿಸುತ್ತಿದ್ದು, ಭಾರತ ತಕ್ಕ ಉತ್ತರ ನೀಡುತ್ತಿದೆ. ಭಾರತ ಮತ್ತು ಪಾಕ್ ಸೇನೆ ಹೈಅಲರ್ಟ್ ಆಗಿದ್ದು, ಯಾವುದೇ ಸಂದರ್ಭದಲ್ಲೂ ಯುದ್ಧ ಆರಂಭಗೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.