Rishabh Pant: ಗಾಯದ ಹೊರತಾಗಿಯೂ ನೂತನ ದಾಖಲೆ ಬರೆದ ರಿಷಭ್ ಪಂತ್
England vs India 4th Test: ಮೊದಲ ದಿನದಂತ್ಯಕ್ಕೆ ಭಾರತ 4 ವಿಕೆಟ್ ನಷ್ಟಕ್ಕೆ 260 ರನ್ ಕಲೆಹಾಕಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ ದೊಡ್ಡ ಮೊತ್ತ ಕಲೆಹಾಕಲು ಎದುರು ನೋಡುತ್ತಿದೆ. ತಲಾ 19 ರನ್ ಗಳಿಸಿರುವ ರವೀಂದ್ರ ಜಡೇಜಾ ಮತ್ತು ಶಾರ್ದೂಲ್ ಠಾಕೂರ್ ಕ್ರೀಸ್ ಕಾಯ್ದುಕೊಂಡಿದಾರೆ.


ಮ್ಯಾಂಚೆಸ್ಟರ್: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್(England vs India 4th Test) ಪಂದ್ಯದ ಮೊದಲ ದಿನದಾಟದಲ್ಲಿ ಕಾಲಿಗೆ ಗಂಭೀರ ಗಾಯಗೊಂಡು ಅರ್ಧದಲ್ಲೇ ಬ್ಯಾಟಿಂಗ್ ಮೊಟಕುಗೊಳಿಸಿದ್ದರೂ ರಿಷಭ್ ಪಂತ್(Rishabh Pant) ನೂತನ ದಾಖಲೆಯತೊಂದನ್ನು ಬರೆದಿದ್ದಾರೆ. ಇಂಗ್ಲೆಂಡ್ ನೆಲದಲ್ಲಿ 1000 ಟೆಸ್ಟ್ ರನ್ ಪೂರೈಸಿದ ಮೊದಲ ಪ್ರವಾಸಿ ವಿಕೆಟ್ ಕೀಪರ್ ಎನ್ನುವ ದಾಖಲೆಯನ್ನು ರಿಷಭ್ ಪಂತ್ ಬರೆದಿದ್ದಾರೆ. ಇಂಗ್ಲೆಂಡ್‌ನಲ್ಲಿ ಧೋನಿ 778, ಆಸ್ಟ್ರೇಲಿಯಾದ ರಾಡ್ ಮಾರ್ಷ್ 773, ದ.ಆಫ್ರಿಕಾದ ಜಾನ್ ವೇಟ್ 684, ಆಸ್ಟ್ರೇಲಿಯಾದ ಇಯಾನ್ ಹೀಲಿ 624 ರನ್ ಗಳಿಸಿದ್ದಾರೆ.
ರೋಹಿತ್ ದಾಖಲೆ ಪತನ
ಪಂತ್ ಮೊದಲ ಇನಿಂಗ್ಸ್‌ನಲ್ಲಿ ಒಂದು ಸಿಕ್ಸರ್ ಬಾರಿಸುತ್ತಿದ್ದಂತೆ ಟೆಸ್ಟ್‌ನಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯರ ಪಟ್ಟಿಯಲ್ಲಿ ರೋಹಿತ್ ಶರ್ಮಾರನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ್ದಾರೆ. ಪಂತ್ 89 ಸಿಕ್ಸರ್ ಬಾರಿಸಿದ್ದು, 88 ಸಿಕ್ಸರ್ ಬಾರಿಸಿರುವ ರೋಹಿತ್‌ರನ್ನು ಹಿಂದಿಕ್ಕಿದ್ದಾರೆ. ವೀರೇಂದ್ರ ಸೆಹ್ವಾಗ್ 90 ಸಿಕ್ಸರ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.
Rishabh Pant is driven off the field of play after suffering some severe swelling on his right foot and Ravindra Jadeja walks out to the middle... 🩹 pic.twitter.com/vJlu5CABQ8
— Sky Sports Cricket (@SkyCricket) July 23, 2025
ಇನ್ನಿಂಗ್ಸ್‌ನ 68ನೇ ಓವರಲ್ಲಿ ವೋಕ್ಸ್ ಎಸೆತವನ್ನು ರಿವರ್ಸ್ ಸ್ವೀಪ್ ಮಾಡಲು ಯತ್ನಿಸಿದ ರಿಷಭ್ ಪಂತ್‌ರ ಕಾಲಿಗೆ ಚೆಂಡು ಬಡಿಯಿತು. ಕಾಲು ಊದಿಕೊಂಡು ನಿಲ್ಲಲು ಆಗದ ಸ್ಥಿತಿಯಲ್ಲಿದ್ದ ಪಂತ್‌ರನ್ನು ಮೈದಾನದಿಂದ ಹೊರಕ್ಕೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. 37 ರನ್ ಗಳಿಸಿರುವ ಪಂತ್ ಪಂದ್ಯದಲ್ಲಿ ಮತ್ತೆ ಬ್ಯಾಟ್ ಮಾಡಲಿದ್ದಾರೆಯೇ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ.
ಮೊದಲ ದಿನದಂತ್ಯಕ್ಕೆ ಭಾರತ 4 ವಿಕೆಟ್ ನಷ್ಟಕ್ಕೆ 260 ರನ್ ಕಲೆಹಾಕಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ ದೊಡ್ಡ ಮೊತ್ತ ಕಲೆಹಾಕಲು ಎದುರು ನೋಡುತ್ತಿದೆ. ತಲಾ 19 ರನ್ ಗಳಿಸಿರುವ ರವೀಂದ್ರ ಜಡೇಜಾ ಮತ್ತು ಶಾರ್ದೂಲ್ ಠಾಕೂರ್ ಕ್ರೀಸ್ ಕಾಯ್ದುಕೊಂಡಿದಾರೆ.