ವಿಶ್ವಕಪ್ ಗೆಲುವಿನ ಬಳಿಕ ರೈಲಿನಲ್ಲಿ ತವರಿಗೆ ಮರಳಿದ ಶಿವಂ ದುಬೆ
Shivam Dube: ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಮುಂಬೈ ಮೂಲದ ಆಲ್‌ರೌಂಡರ್ ದುಬೆ ತಮ್ಮ ಪತ್ನಿ ಮತ್ತು ಸ್ನೇಹಿತನ ಜತೆ ಅಹಮದಾಬಾದ್‌ನಿಂದ ಮುಂಬೈಗೆ ಹೋಗುವ ಎಲ್ಲಾ ವಿಮಾನಗಳು ಬುಕ್ ಆಗಿದ್ದರಿಂದ ರೈಲಿನ ಮೂಲಕ ಪ್ರಯಾಣಿಸಲು ನಿರ್ಧರಿಸಿದರು.
Shivam Dube -
ಮುಂಬಯಿ, ಮಾ.11: ಆಲ್‌ರೌಂಡರ್ ಶಿವಂ ದುಬೆ(Shivam Dube) 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ(T20 World Cup Final) ಭಾರತ ಪರ ಅತ್ಯುತ್ತಮ ಪ್ರದರ್ಶನ ನೀಡಿದವರಲ್ಲಿ ಒಬ್ಬರು. ಟೂರ್ನಿಯಲ್ಲಿ ಎಲ್ಲ ಪಂದ್ಯವನ್ನು ಆಡಿದ ಅವರು ಐದು ವಿಕೆಟ್‌ಗಳನ್ನು ಕಬಳಿಸುವುದರ ಜತೆಗೆ 235 ರನ್ ಗಳಿಸಿದರು. ಮಾರ್ಚ್ 8 ರ ಭಾನುವಾರ ಅಹಮದಾಬಾದ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಫೈನಲ್‌ನಲ್ಲಿ ಅವರು ಕೇವಲ 8 ಎಸೆತಗಳಲ್ಲಿ 26 ರನ್ ಗಳಿಸಿದರು. ಭಾರತದ ದಾಖಲೆಯ ಮೂರನೇ ಟಿ 20 ವಿಶ್ವಕಪ್ ಪ್ರಶಸ್ತಿ ಗೆಲುವಿನಲ್ಲಿ ದೊಡ್ಡ ಪಾತ್ರ ವಹಿಸಿದ ನಂತರ, ದುಬೆ ತಮ್ಮ ಪತ್ನಿ ಅಂಜುಮ್ ಖಾನ್ ಮತ್ತು ಸ್ನೇಹಿತನೊಂದಿಗೆ ಅಹಮದಾಬಾದ್‌ನಿಂದ ಮುಂಬೈಗೆ ರೈಲಿನ ಮೂಲಕ ಪ್ರಯಾಣ ಬೆಳೆಸಿದರು.
ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಮುಂಬೈ ಮೂಲದ ಆಲ್‌ರೌಂಡರ್ ಅಹಮದಾಬಾದ್‌ನಿಂದ ಮುಂಬೈಗೆ ಹೋಗುವ ಎಲ್ಲಾ ವಿಮಾನಗಳು ಬುಕ್ ಆಗಿದ್ದರಿಂದ ರೈಲಿನ ಮೂಲಕ ಪ್ರಯಾಣಿಸಲು ನಿರ್ಧರಿಸಿದರು. ಐಪಿಎಲ್ ಟೂರ್ನಿ ಸಿದ್ಧತೆಯೂ ಇರುವ ಕಾರಣ ದುಬೆ ತಮ್ಮ ನಾಲ್ಕು ವರ್ಷದ ಮಗ ಅಯಾನ್ ಮತ್ತು ಎರಡು ವರ್ಷದ ಮಗಳು ಮೆಹ್ವಿಶ್ ಅವರೊಂದಿಗೆ ಕೆಲ ದಿನಗಳನ್ನಾದರೂ ಕಳೆಯುವ ನಿಟ್ಟಿನಲ್ಲಿ ಅವರು ವಿಮಾನಯಾನಕ್ಕೆ ಕಾಯುವ ಬದಲು ರೈಲು ಪ್ರಯಾಣ ಆಯ್ಕೆ ಮಾಡಿಕೊಂಡರು.
"ವಿಮಾನ ಲಭ್ಯವಿರಲಿಲ್ಲ, ಆದ್ದರಿಂದ ಅಹಮದಾಬಾದ್‌ನಿಂದ ಮುಂಬೈಗೆ ರೈಲಿನಲ್ಲಿ ಹೋಗಲು ನಿರ್ಧರಿಸಿದೆ. ನಾವು ರಸ್ತೆಯ ಮೂಲಕ ಹೋಗಬಹುದಿತ್ತು, ಆದರೆ ರೈಲು ವೇಗವಾಗಿತ್ತು" ಎಂದು ದುಬೆ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.
"ನಾನು, ನನ್ನ ಹೆಂಡತಿ ಮತ್ತು ಸ್ನೇಹಿತ ರೈಲು ಪ್ರಯಾಣದ ಆಯ್ಕೆ ಮಾಡಿಕೊಂಡರು. 3 ನೇ ಎಸಿ ಟಿಕೆಟ್‌ಗಳು ಲಭ್ಯವಿದ್ದವು, ಆದ್ದರಿಂದ ನಾವು ಅವುಗಳನ್ನು ಬುಕ್ ಮಾಡಲು ನಿರ್ಧರಿಸಿದೆವು" ಎಂದು ದುಬೆ ಹೇಳಿದರು.
"ನಾನು ಕ್ಯಾಪ್, ಮಾಸ್ಕ್ ಮತ್ತು ಪೂರ್ಣ ತೋಳಿನ ಟಿ-ಶರ್ಟ್ ಧರಿಸಿದ್ದೆ. ಅದು ಬೆಳಿಗ್ಗೆ 5.10 ರ ರೈಲು, ಆದ್ದರಿಂದ ಪ್ಲಾಟ್‌ಫಾರ್ಮ್‌ನಲ್ಲಿ ಹೆಚ್ಚು ಜನರು ಇರುವುದಿಲ್ಲ ಎಂದು ನಾವು ಭಾವಿಸಿದ್ದೇವು. ಆದರೆ ಹೆಚ್ಚು ಜನರಿದ್ದರು. ಹೀಗಾಗಿ ರೈಲು ಹೊರಡುವ ಐದು ನಿಮಿಷಗಳ ಮೊದಲು ನಾನು ಕಾರಿನಿಂದ ಇಳಿತ್ತೇನೆ ಎಂದು ನನ್ನ ಹೆಂಡತಿಗೆ ಹೇಳಿದೆ. ಅದರ ನಂತರ, ನಾನು ರೈಲು ಹತ್ತಲು ಧಾವಿಸಿದೆ" ಎಂದು ದುಬೆ ಹೇಳಿದರು.