PKL Season 2025: 12ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಹೊಸ ರೂಲ್ಸ್!
ಪಂದ್ಯ ಟೈ ಆದರೆ, 5 ನಿಮಿಷಗಳ ಟೈ ಬ್ರೇಕರ್ ಸುತ್ತು ಆಡಿಸಲಾಗುತ್ತದೆ. ಪ್ರತಿ ತಂಡ 7 ಆಟಗಾರರನ್ನಷ್ಟೇ ಬಳಸಬಹುದು. ಐವರು ರೈಡರ್‌ಗಳು ತಮ್ಮ ಹೆಸರನ್ನು ಮೊದಲೇ ತಿಳಿಸಬೇಕು. ಪ್ರತಿ ರೈಡ್ ಕೂಡ ಡು ಆರ್ ಡೈ ರೈಡ್ ಆಗಿರಲಿದೆ. ಟೈ ಬ್ರೇಕರ್‌ನಲ್ಲೂ ಅಂಕಗಳು ಸಮಗೊಂಡರೆ, ಆಗ 'ಗೋಲ್ಡನ್ ರೈಡ್' ಚಾಲ್ತಿಗೆ ಬರಲಿದೆ. ಇಲ್ಲಿ ಪ್ರತಿ ತಂಡಕ್ಕೂ ತಲಾ ಒಂದು ರೈಡ್ ನೀಡಲಾಗುತ್ತದೆ.


ಮುಂಬಯಿ: ಆಗಸ್ಟ್ 29 ರಿಂದ ಪ್ರಾರಂಭವಾಗುವ ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) ಸೀಸನ್ 12ರಲ್ಲಿ(PKL Season 2025) ಹಲವು ಬದಲಾವಣೆಗಳನ್ನು ಮಾಡಲಾಗಿದ್ದು, ಹೊಸ ನಿಯಮವನ್ನು ಜಾರಿಗೆ ತರಲಾಗಿದೆ. ಹೌದು, ಲೀಗ್ ಹಂತದ ಪಂದ್ಯಗಳ ಸಂಖ್ಯೆ, ಟೈಬ್ರೇಕರ್ ನಿಯಮ, ಪ್ಲೇ-ಇನ್ ಪಂದ್ಯಗಳು ಸೇರಿದಂತೆ ಹಲವು ಬದಲಾವಣೆಗಳನ್ನು ಈ ಬಾರಿ ಜಾರಿಗೆ ತರಲಾಗಿದೆ. ಈ ಬಾರಿಯ ಪಂದ್ಯಾವಳಿ ವಿಶಾಖಪಟ್ಟಣಂ, ಜೈಪುರ, ಚೆನ್ನೈ ಮತ್ತು ದೆಹಲಿಯಲ್ಲಿ ನಡೆಯಲಿದೆ.
ಮುಂಬರುವ ಋತುವಿನ ಲೀಗ್ ಹಂತವು 108 ಪಂದ್ಯಗಳನ್ನು ಒಳಗೊಂಡಿದ್ದು, ಪ್ರತಿ ತಂಡವು 18 ಪಂದ್ಯಗಳನ್ನು ಆಡಲಿದೆ. ಈ ಸ್ವರೂಪವು ಲೀಗ್ ಹಂತದಾದ್ಯಂತ ತಂಡಗಳು ಕಠಿಣ ಪರೀಕ್ಷೆಗಳನ್ನು ಎದುರಿಸುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಸ್ಪರ್ಧೆಯನ್ನು ಮತ್ತಷ್ಟು ಪೈಪೋಟಿಯಿಂ ಕೂಡಿರುವಂತೆ ಮಾಡಲಿದೆ. ಈ ಹಿಂದೆ ಲೀಗ್ ಹಂತದಲ್ಲಿ ಪ್ರತಿ ತಂಡ 22 ಪಂದ್ಯಗಳನ್ನು ಆಡುತ್ತಿತ್ತು.
ಈ ಹಿಂದೆ ಪ್ಲೇಆಫ್ ಪಂದ್ಯಗಳಿಗೆ ಮಾತ್ರ ಸೀಮಿತವಾಗಿದ್ದ ಗೋಲ್ಡನ್ ರೈಡ್ ಸ್ವರೂಪ ಸೇರಿದಂತೆ ಸಮಗ್ರ ಟೈ-ಬ್ರೇಕರ್ ನಿಯಮ ವ್ಯವಸ್ಥೆಯನ್ನು ಎಲ್ಲಾ ಲೀಗ್ ಹಂತದ ಪಂದ್ಯಗಳಿಗೂ ಬಳಕೆ ಮಾಡಲಾಗುವುದು.
ಗೆಲ್ಲುವ ತಂಡಕ್ಕೆ 2, ಸೋಲುವ ತಂಡಕ್ಕೆ 0 ಅಂಕ. ಈ ಹಿಂದಿನ ಆವೃತ್ತಿಗಳಲ್ಲಿ 7 ಅಥವಾ ಅದಕ್ಕಿಂತ ಕಡಿಮೆ ಅಂಕಗಳಿಂದ ಸೋಲುವ ತಂಡಕ್ಕೆ 1 ಅಂಕ ಸಿಗುತ್ತಿತ್ತು. ಈ ನಿಯಮ ರದ್ದುಗೊಳಿಸಲಾಗಿದೆ.
ಟೈ ಬ್ರೇಕರ್ ಹೇಗೆ?
ಪಂದ್ಯ ಟೈ ಆದರೆ, 5 ನಿಮಿಷಗಳ ಟೈ ಬ್ರೇಕರ್ ಸುತ್ತು ಆಡಿಸಲಾಗುತ್ತದೆ. ಪ್ರತಿ ತಂಡ 7 ಆಟಗಾರರನ್ನಷ್ಟೇ ಬಳಸಬಹುದು. ಐವರು ರೈಡರ್‌ಗಳು ತಮ್ಮ ಹೆಸರನ್ನು ಮೊದಲೇ ತಿಳಿಸಬೇಕು. ಪ್ರತಿ ರೈಡ್ ಕೂಡ ಡು ಆರ್ ಡೈ ರೈಡ್ ಆಗಿರಲಿದೆ. ಟೈ ಬ್ರೇಕರ್‌ನಲ್ಲೂ ಅಂಕಗಳು ಸಮಗೊಂಡರೆ, ಆಗ 'ಗೋಲ್ಡನ್ ರೈಡ್' ಚಾಲ್ತಿಗೆ ಬರಲಿದೆ. ಇಲ್ಲಿ ಪ್ರತಿ ತಂಡಕ್ಕೂ ತಲಾ ಒಂದು ರೈಡ್ ನೀಡಲಾಗುತ್ತದೆ. ಹೆಚ್ಚು ಅಂಕ ಗಳಿಸುವ ತಂಡಕ್ಕೆ ಜಯ. ಇಲ್ಲೂ ತಂಡಗಳು ಸಮಬಲ ಸಾಧಿಸಿದರೆ, ಟಾಸ್ ಮೂಲಕ ಫಲಿತಾಂಶ ನಿರ್ಧಾರವಾಗಲಿದೆ.
ಪ್ಲೇ-ಇನ್, ಪ್ಲೇ-ಆಫ್ ಎಂದರೇನು?
ಈ ನಿಮಯದ ಪ್ರಕಾರ 6 ತಂಡಗಳ ಬದಲು 8 ತಂಡಗಳಿಗೆ ಫೈನಲ್‌ಗೇರಲು ಅವಕಾಶವಿರಲಿದೆ. ಲೀಗ್ ಹಂತದ ಮುಕ್ತಾಯಕ್ಕೆ ಅಂಕಪಟ್ಟಿಯಲ್ಲಿ 5-8ನೇ ಸ್ಥಾನ ಪಡೆಯುವ ತಂಡಗಳು ಪ್ಲೇ-ಇನ್ ಪಂದ್ಯಗಳನ್ನು ಆಡಲಿವೆ. 5 ಹಾಗೂ 8ನೇ ಸ್ಥಾನ, 6 ಹಾಗೂ 7ನೇ ಸ್ಥಾನ ಪಡೆಯುವ ತಂಡಗಳು ಸೆಣಸಲಿವೆ. ಈ ಪಂದ್ಯಗಳಲ್ಲಿ ಗೆಲ್ಲುವ ತಂಡಗಳು ಪ್ಲೇ-ಆಫ್‌ಗೆ ಅರ್ಹತೆ ಪಡೆಯಲಿವೆ.
ಪ್ಲೇ-ಆಫ್‌ನಲ್ಲಿ ಎಲಿಮಿನೇಟರ್, 2ನೇ ಕ್ವಾಲಿಫೈಯರ್ ನಡೆಯಲಿವೆ. ಮೊದಲ ಎಲಿಮಿನೇಟರ್‌ನಲ್ಲಿ ಪ್ಲೇ-ಇನ್‌ನಲ್ಲಿ ಗೆದ್ದ ತಂಡಗಳು ಸೆಣಸಲಿವೆ. 3 ಹಾಗೂ 4ನೇ ಸ್ಥಾನಗಳನ್ನು ಪಡೆಯುವ ತಂಡಗಳು ಮಿನಿ ಕ್ವಾಲಿಫೈಯರ್‌ನಲ್ಲಿ ಆಡಲಿವೆ. ಈ ಪಂದ್ಯದಲ್ಲಿ ಸೋಲುವ ತಂಡ ಎಲಿಮಿನೇಟರ್-1ರಲ್ಲಿ ಗೆಲ್ಲುವ ತಂಡದ ವಿರುದ್ಧ ಎಲಿಮಿನೇಟರ್ -2ರಲ್ಲಿ ಆಡಲಿದೆ.
ಇದನ್ನೂ ಓದಿ PKL 12 schedule: 12ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ವೇಳಾಪಟ್ಟಿ ಪ್ರಕಟ
ಮಿನಿ ಕ್ವಾಲಿಫೈಯರ್‌ನಲ್ಲಿ ಗೆಲ್ಲುವ ತಂಡ, ಎಲಿಮಿನೇಟರ್-2ನಲ್ಲಿ ಗೆಲ್ಲುವ ತಂಡಗಳ ನಡುವೆ ಎಲಿಮಿನೇಟರ್ -3 ಪಂದ್ಯ ನಡೆಯಲಿದೆ. ಈ ನಡುವೆ 1-2ನೇ ಸ್ಥಾನ ಪಡೆಯುವ ತಂಡಗಳು ನೇರವಾಗಿ ಫೈನಲ್ ಸ್ಥಾನಕ್ಕಾಗಿ ಸೆಣಸಲಿವೆ. ಗೆಲ್ಲುವ ತಂಡ ಫೈನಲ್ ಪ್ರವೇಶಿಸಿದರೆ, ಸೋಲುವ ತಂಡ ಎಲಿಮಿನೇಟರ್-3ರಲ್ಲಿ ಗೆಲ್ಲುವ ತಂಡದ ವಿರುದ್ಧ ಕ್ವಾಲಿಫೈಯರ್ -2ರಲ್ಲಿ ಆಡಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡಕ್ಕೆ ಫೈನಲ್ ಪ್ರವೇಶ ಸಿಗಲಿದೆ.